ಸಚಿವ ಸ್ಥಾನಕ್ಕೆ ಆರ್.ಶಂಕರ್ ರಾಜೀನಾಮೆ, ಬಿಜೆಪಿಗೆ ಸೇರ್ತಾರಾ?
ಬೆಂಗಳೂರು, ಜುಲೈ 08 : ಪೌರಾಡಳಿತ ಸಚಿವ, ರಾಣೆಬೆನ್ನೂರು ಶಾಸಕ ಆರ್.ಶಂಕರ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆರ್.ಶಂಕರ್ ಅವರು ಮುಂಬೈಗೆ ಪ್ರಯಾಣ ಬೆಳೆಸಲಿದ್ದು, ಅತೃಪ್ತ ಶಾಸಕರ ಗುಂಪು ಸೇರಿಕೊಳ್ಳಲಿದ್ದಾರೆ ಎಂಬ ಸುದ್ದಿ ಹಬ್ಬಿದೆ.
ಸೋಮವಾರ ರಾಜಭವನಕ್ಕೆ ಭೇಟಿ ನೀಡಿದ ಆರ್.ಶಂಕರ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಜೂನ್ 14ರಂದು ಎರಡನೇ ಬಾರಿಗೆ ಅವರು ಎಚ್.ಡಿ.ಕುಮಾರಸ್ವಾಮಿ ಸಂಪುಟ ಸೇರುವ ಮೂಲಕ ಸಚಿವರಾಗಿದ್ದರು.
ಇಂದು ಬೆಳಗ್ಗೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರ ಮನೆಯಲ್ಲಿ ನಡೆದ ಉಪಹಾರ ಕೂಟದಲ್ಲಿ ಆರ್.ಶಂಕರ್ ಪಾಲ್ಗೊಂಡಿದ್ದರು. 'ಮೈತ್ರಿ ಸರ್ಕಾರದ ಜೊತೆ ಇರುತ್ತೇನೆ' ಎಂದು ಅವರು ಭರವಸೆ ಕೊಟ್ಟಿದ್ದರು. ಆದರೆ, ಮಧ್ಯಾಹ್ನ ರಾಜಭವನಕ್ಕೆ ತೆರಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮೈತ್ರಿ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದಿದ್ದಾರೆ.
2ನೇ ಬಾರಿಗೆ ಕುಮಾರಸ್ವಾಮಿ ಸಂಪುಟ ಸೇರುವ ಮೊದಲು ಆರ್.ಶಂಕರ್ ಅವರು ತಮ್ಮ ಕೆಪಿಜೆಪಿ ಪಕ್ಷವನ್ನು ಕಾಂಗ್ರೆಸ್‌ನಲ್ಲಿ ವಿಲೀನ ಮಾಡಿದ್ದರು. ಬಳಿಕ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದರು.

ಹಲವು ಬಾರಿ ಪಕ್ಷ ನಿಷ್ಠೆ ಬದಲು
ರಾಣೆಬೆನ್ನೂರು ಶಾಸಕ ಆರ್.ಶಂಕರ್ ಅವರು ಹಲವು ಬಾರಿ ಪಕ್ಷ ನಿಷ್ಠೆಯನ್ನು ಬದಲಾಯಿಸಿದ್ದಾರೆ. 2018ರ ಚುನಾವಣೆ ಫಲಿತಾಂಶ ಬಂದಾಗ ಕೆ.ಎಸ್.ಈಶ್ವರಪ್ಪ ಜೊತೆ ಗುರುತಿಸಿಕೊಂಡಿದ್ದರು. ಕಾಂಗ್ರೆಸ್ ಸಚಿವ ಸ್ಥಾನದ ಭರವಸೆ ನೀಡಿದ ಬಳಿಕ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ಘೋಷಣೆ ಮಾಡಿದ್ದರು.

ಅರಣ್ಯ ಖಾತೆ ಸಚಿವರಾಗಿದ್ದರು
ಆರ್.ಶಂಕರ್ ಅವರು ಮೈತ್ರಿ ಸರ್ಕಾರ ರಚನೆಗೆ ಬೆಂಬಲ ನೀಡಿದ್ದರಿಂದ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡು ಅರಣ್ಯ ಖಾತೆಯ ಹೊಣೆ ನೀಡಲಾಗಿತ್ತು. 2018ರ ಡಿಸೆಂಬರ್‌ನಲ್ಲಿ ಸಂಪುಟ ವಿಸ್ತರಣೆ ಮಾಡುವಾಗ ಅವರನ್ನು ಸಂಪುಟದಿಂದ ಕೈ ಬಿಡಲಾಗಿತ್ತು.

ಕಾಂಗ್ರೆಸ್‌ನ ಷರತ್ತು ಒಪ್ಪಿದ್ದರು
2019ರ ಜೂನ್ 14ರಂದು ಸಂಪುಟ ವಿಸ್ತರಣೆಯ ವೇಳೆ ಆರ್.ಶಂಕರ್ ಪುನಃ ಎಚ್.ಡಿ.ಕುಮಾರಸ್ವಾಮಿ ಸಂಪುಟ ಸೇರಿದ್ದರು. ಆದರೆ, ಸಂಪುಟ ಸೇರುವ ಮೊದಲು ಕೆಪಿಜೆಪಿಯನ್ನು ಕಾಂಗ್ರೆಸ್ ಜೊತೆ ವಿಲೀನ ಮಾಡಬೇಕು ಎಂದು ಷರತ್ತು ಹಾಕಲಾಗಿತ್ತು. ಅದರಂತೆ ಅವರು ಪಕ್ಷವನ್ನು ವಿಲೀನ ಮಾಡಿದ್ದರು.

ಅತೃಪ್ತ ಬಣದಲ್ಲಿ ಗುರುತಿಸಿಕೊಂಡರು
ಆರ್.ಶಂಕರ್ ಹಲವು ಬಾರಿ ಪಕ್ಷ ನಿಷ್ಠೆ ಬದಲಿಸಿದ್ದಾರೆ. 2018ರಲ್ಲಿ ಸಚಿವ ಸ್ಥಾನ ಕಳೆದುಕೊಂಡ ಬಳಿಕ ಅತೃಪ್ತ ಶಾಸಕರ ಬಣದಲ್ಲಿ ಗುರುತಿಸಿಕೊಂಡು ಮುಂಬೈಗೆ ಹೋಗಿದ್ದರು. ಆದರೆ, ಪುನಃ ಸರ್ಕಾರಕ್ಕೆ ಬೆಂಬಲ ಕೊಟ್ಟು ಕುಮಾರಸ್ವಾಮಿ ಸಂಪುಟ ಸೇರಿದ್ದರು.












Click it and Unblock the Notifications