Inflation: ಹಣದುಬ್ಬರದಲ್ಲೂ ಕರ್ನಾಟಕ ನಂಬರ್ 1: ಸಿದ್ದರಾಮಯ್ಯ ರಾಜೀನಾಮೆ ಕೊಡಲಿ ಎಂದ ಅಶೋಕ್
ಹಣದುಬ್ಬರದಲ್ಲಿ ಇಡೀ ದೇಶದಲ್ಲೇ ಕರ್ನಾಟಕವು ಮೊದಲ ಸ್ಥಾನದಲ್ಲಿದೆ ಎಂದು ವರದಿಯೊಂದು ಬಹಿರಂಗಪಡಿಸಿದೆ. ಈ ವಿಚಾರವಾಗಿ ವಿಪಕ್ಷ ನಾಯಕ ಆರ್.ಅಶೋಕ್ ಅವರು ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬೆಲೆಯೇರಿಕೆಯ ಬೆತ್ತ ಹಿಡಿದು ಕನ್ನಡಿಗರ ಬೆನ್ನು ಮೂಳೆ ಮುರಿಯುತ್ತಿರುವ ಕಾಂಗ್ರೆಸ್ ಸರ್ಕಾರ ಹಣದುಬ್ಬರದಲ್ಲಿ ಕರ್ನಾಟಕವನ್ನು ನಂಬರ್ 1 ಮಾಡುತ್ತಿರುವುದೇ ಅದರ ದೊಡ್ಡ ಸಾಧನೆ ಎಂದು ಟೀಕಿಸಿದ್ದಾರೆ. ಸ್ವಾಮಿ ಸಿದ್ದರಾಮಯ್ಯನವರೇ ತಮ್ಮ ಘನ ನೇತೃತ್ವದಲ್ಲಿ ಕರ್ನಾಟಕ ರೈತರ ಆತ್ಮಹತ್ಯೆಯಲ್ಲಿ ನಂಬರ್ 1, ಭ್ರಷ್ಟಾಚಾರದಲ್ಲಿ ನಂಬರ್ 1, ಈಗ ಹಣದುಬ್ಬರದಲ್ಲಿಯೂ ನಂಬರ್ 1. ಇನ್ನೆಷ್ಟು ದಿನ ಮುಖ್ಯಮಂತ್ರಿಗಳೇ ಈ ಭಂಡ ಬಾಳು. ರಾಜೀನಾಮೆ ಕೊಟ್ಟು ನಿರ್ಗಮಿಸಿ ಎಂದು ಅಶೋಕ್ ಹೇಳಿದ್ದಾರೆ.
ಕರ್ನಾಟಕದಲ್ಲಿ ಹಣದುಬ್ಬರದ ದರವು ಗಣನೀಯವಾಗಿ ಏರಿಕೆಯಾಗಿದೆ. 2025ರ ಫೆಬ್ರವರಿಯಲ್ಲಿ ರಾಜ್ಯದ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಹಣದುಬ್ಬರದ ದರವು ಶೇ 4.49ರಷ್ಟಾಗಿದ್ದು, ಇದು ರಾಷ್ಟ್ರೀಯ ಸರಾಸರಿ ಶೇ 3.61ಕ್ಕಿಂತ ಅಧಿಕವಾಗಿದೆ. ಮಾರ್ಚ್ 2025ಕ್ಕೆ ಈ ದರವು ಶೇ 5.03ಕ್ಕೆ ತಲುಪಿದ್ದು, ಕರ್ನಾಟಕವನ್ನು ದೇಶದಲ್ಲಿ ಅತಿ ಹೆಚ್ಚು ಹಣದುಬ್ಬರ ಹೊಂದಿದ ರಾಜ್ಯವನ್ನಾಗಿ ಮಾಡಿದೆ ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಕೂಡ ವಾಗ್ದಾಳಿ ನಡೆಸಿದ್ದಾರೆ.

ಹಣದುಬ್ಬರದ ಏರಿಕೆಗೆ ಕಾಂಗ್ರೆಸ್ ಸರ್ಕಾರದ ನೀತಿಗಳು ಹಾಗು ರಾಜ್ಯ ಸರ್ಕಾರದ ದುರ್ಬಲ ಆರ್ಥಿಕ ನೀತಿ ಹಾಗು ನಿರ್ವಹಣೆಯೇ ಕಾರಣ. ಅವೈಜ್ಞಾನಿಕ ಗ್ಯಾರೆಂಟಿಗಳ ಹೆಸರಿನಲ್ಲಿ ಪ್ರತಿ ವಸ್ತುವಿನ ಬೆಲೆ ಏರಿಸಿದ ಪರಿಣಾಮ ರಾಜ್ಯದ ಜನತೆ ಹಣದುಬ್ಬರದ ಸಂಕಷ್ಟವನ್ನು ಅನುಭವಿಸಬೇಕಾಗಿದೆ ಎಂದು ಸಿಟಿ ರವಿ ದೂರಿದ್ದಾರೆ. ಹಣದುಬ್ಬರವು ಮಾರ್ಚ್ ತಿಂಗಳಲ್ಲಿ ಶೇ 2.05ರಷ್ಟಿದೆ. ಜನವರಿಯಲ್ಲಿ ಶೇ 2.51ರಷ್ಟು ಹಾಗೂ ಫೆಬ್ರವರಿಯಲ್ಲಿ ತಿಂಗಳಲ್ಲಿ ಹಣದುಬ್ಬರ ಶೇ 2.38ರಷ್ಟಿತ್ತು. ಹಿಂದಿನ ಎರಡು ತಿಂಗಳಿಗೆ ಹೋಲಿಸಿದರೆ ಮಾರ್ಚ್ ತಿಂಗಳಲ್ಲಿ ಹಣದುಬ್ಬರ ಕಡಿಮೆಯಾಗಿದೆ. ಏಪ್ರಿಲ್ 15ರಂದು ಸರ್ಕಾರ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ ಭಾರತದ ಸಗಟು ಹಣದುಬ್ಬರವು ಮಾರ್ಚ್‌ನಲ್ಲಿ ಶೇ 2.05ಕ್ಕೆ ಇಳಿದಿದೆ.
ಸೂಚ್ಯಂಕದ ಸುಮಾರು ಮೂರನೇ ಎರಡರಷ್ಟು ಪಾಲನ್ನು ಹೊಂದಿರುವ ಉತ್ಪಾದನಾ ವಸ್ತುಗಳ ಬೆಲೆಗಳು ಹಿಂದಿನ ತಿಂಗಳಲ್ಲಿ ಶೇ 2.9ಕ್ಕೆ ಹೋಲಿಸಿದರೆ ಶೇ. 3.1ರಷ್ಟು ಏರಿಕೆ ಕಂಡಿವೆ. ಆದರೆ ಆಹಾರ ಸೂಚ್ಯಂಕವು ಮತ್ತಷ್ಟು ಕುಸಿತ ಕಂಡಿದೆ ಎಂದು ಹೇಳಿದೆ. ಹಣದುಬ್ಬರ ಕುಸಿತ ಮತ್ತು ಬೆಳವಣಿಗೆಯು ಸಡಿಲಗೊಳ್ಳುವ ಸಾಧ್ಯತೆಗಳು ಕೇಂದ್ರ ಬ್ಯಾಂಕ್ ಏಪ್ರಿಲ್ ಸಭೆಯಲ್ಲಿ ಸತತ ಎರಡನೇ ಬಾರಿಗೆ 25 ಬೇಸಿಸ್ ಪಾಯಿಂಟ್ ದರ ಕಡಿತವನ್ನು ಮಾಡುವುದರ ಪ್ರಮುಖ ಕಾರಣವಾಗಿತ್ತು. ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿರುವಂತೆ ಭಾರತದ ಬೆಳವಣಿಗೆಯ ಮುನ್ಸೂಚನೆಯನ್ನು ಮುಂದಿನ ಆರ್ಥಿಕ ವರ್ಷಕ್ಕೆ ಈ ಹಿಂದೆ ಶೇ 6.7ರಿಂದ ಶೇ 6.5ಕ್ಕೆ ಇಳಿಸಿದೆ. ಫೆಬ್ರವರಿಯಲ್ಲಿ ಅಂದಾಜಿಸಲಾದ ಹಣದುಬ್ಬರ ಮುನ್ಸೂಚನೆಯನ್ನು ಶೇ 4.2ರಿಂದ ಶೇ 4ಕ್ಕೆ ಇಳಿಸಿದೆ.












Click it and Unblock the Notifications