ಗಂಗಾಧರ್‌ನನ್ನು ಮಾತೃ ಇಲಾಖೆಗೆ ವಾಪಸ್ ಕಳಿಸಿದ ಅಶೋಕ!
ಬೆಂಗಳೂರು, ಜನವರಿ 26: ಕಂದಾಯ ಸಚಿವ ಆರ್. ಅಶೋಕ ಪಿಎ ಗಂಗಾಧರ್‌ನನ್ನು ಮಾತೃ ಇಲಾಖೆಗೆ ವಾಪಸ್ ಕಳಿಸಿದ್ದಾರೆ. ಲಂಚ ಕೇಳಿದ ಆರೋಪದ ಹಿನ್ನಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಗಂಗಾಧರ್ ವಿರುದ್ಧ ದೂರು ದಾಖಲಾಗಿದೆ.
ಗಂಗಾಧರ್ ಶೃಂಗೇರಿ ಸಬ್ ರಿಜಿಸ್ಟ್ರಾರ್ ಚೆಲುವರಾಜ್ ಬಳಿ ಲಂಚ ಕೇಳಿದ್ದಾರೆ ಎಂಬ ಆರೋಪವಿದೆ. ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಗಂಗಾಧರ್ ವಿರುದ್ಧ ಸೂಕ್ತ ತನಿಖೆ ನಡೆಸಿ ಕ್ರಮಕೈಗೊಳ್ಳುವಂತೆ ಚೆಲುವರಾಜ್ ದೂರನ್ನು ಸಲ್ಲಿಸಿದ್ದಾರೆ.

ವಿಧಾನಸೌಧದ ಸಚಿವಾಲಯದಲ್ಲಿ ಕೆಲಸ ಮಾಡುತ್ತಿದ್ದ ಗಂಗಾಧರ್ ಕಂದಾಯ ಸಚಿವ ಆರ್. ಅಶೋಕ ಪಿಎ ಆಗಿ ನೇಮಕಗೊಂಡಿದ್ದರು. ಲಂಚದ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಸಚಿವ ಅಶೋಕ ಗಂಗಾಧರ್‌ನನ್ನು ಮಾತೃ ಇಲಾಖೆಗೆ ವಾಪಸ್ ಕಳಿಸಿದ್ದಾರೆ.
ಚೆಲುವರಾಜ್ ಅವರು ನೀಡಿರುವ ದೂರಿನ ಪ್ರಕಾರ ಜನವರಿ 24ರಂದು ಚಿಕ್ಕಮಗಳೂರು ಪ್ರವಾಸವನ್ನು ಸಚಿವ ಆರ್. ಅಶೋಕ ಕೈಗೊಂಡಿದ್ದರು. ಈ ವೇಳೆ ಅಶೋಕ್ ಪಿಎ ಗಂಗಾಧರ್ ಹಣ ಕೇಳಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.
ಪಿಎ ಗಂಗಾಧರ್ ಲಂಚ ಕೇಳಿರುವ ಕುರಿತು ಚೆಲುವರಾಜ್ ವಿಡಿಯೋನಲ್ಲಿ ಮಾತನಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಿ. ಟಿ. ರವಿ ಪ್ರತಿಕ್ರಿಯೆ; ಆರ್. ಅಶೋಕ ಪಿಎ ಲಂಚ ಕೇಳಿರುವ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಪ್ರತಿಕ್ರಿಯೆ ನೀಡಿದ್ದಾರೆ. "ಇದು ಸರ್ಕಾರಕ್ಕೆ ಮುಜುಗರ ಉಂಟು ಮಾಡಿರುವ ಸಂಗತಿ.
ಅಶೋಕ ಅವರನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಸಬ್ ರಿಜಿಸ್ಟ್ರಾರ್, ರೆವೆನ್ಯೂ ಇನ್ಸ್ಪೆಕ್ಟರ್ ಗಳಿಂದ ದುಡ್ಡು ಕೇಳೋ ದುಸ್ಥಿತಿ ಅಶೋಕ್‌ಗೆ ಬಂದಿಲ್ಲ, ಬರೋದಿಲ್ಲ" ಎಂದು ಹೇಳಿದ್ದಾರೆ.
"ಸಚಿವ ಆರ್. ಅಶೋಕ ಆ ಜಾಯಮಾನದವರಲ್ಲ. ಅವರ ಪಿಎ ಆ ರೀತಿ ಕೆಲಸ ಮಾಡಿದ್ದರೆ ಆತನನ್ನು ಇಟ್ಟುಕೊಳ್ಳುವುದಿಲ್ಲ. ನನಗಿರುವ ಮಾಹಿತಿ ಪ್ರಕಾರ ಆತನನ್ನು ಕೆಲಸದಿಂದ ಕಿತ್ತು ಹಾಕಿದ್ದಾರೆ" ಎಂದು ಹೇಳಿದ್ದರು.












Click it and Unblock the Notifications