ಬೆಂಗಳೂರಿನ ಜನತೆಗೆ ಬಾಂಬು..ಮತಾಂಧರಿಗೆ ಕೊಂಬು: ಚೊಂಬು ಜಾಹೀರಾತಿಗೆ ಆರ್.ಅಶೋಕ್ ಗುಡುಗು
ಬೆಂಗಳೂರು, ಏಪ್ರಿಲ್ 19: ಲೋಕಸಭಾ ಚುನಾವಣೆ ಹೊತ್ತಲ್ಲೇ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಚೊಂಬು ಫೈಟ್ ಆರಂಭವಾಗಿದೆ. ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರ್ಕಾರದ ವಿರುದ್ಧ ರಾಜ್ಯ ಸರ್ಕಾರ ನೀಡಿರುವ ಚೆಂಬು ಜಾಹೀರಾತು ವಿರುದ್ಧ ಬಿಜೆಪಿ ನಾಯಕರು ಆಕ್ರೋಶಗೊಂಡಿದ್ದಾರೆ.
ಕರ್ನಾಟಕಕ್ಕೆ ಮೋದಿ ಸರ್ಕಾರ ಕೊಟ್ಟ ಕೊಡುಗೆ ಚೊಂಬು ಎಂಬ ಜಾಹೀರಾತಿನ ವಿರುದ್ಧ ರಾಜ್ಯ ಬಿಜೆಪಿ ನಾಯಕರು ಕಿಡಿಕಾರುತ್ತಿದ್ದು, ಕಾಂಗ್ರೆಸ್ ಜಾಹೀರಾತಿಗೆ ಪ್ರತಿಯಾಗಿ ಬಿಜೆಪಿಗರು ಸಾಮಾಜಿಕ ಜಾಲತಾಣಗಳಲ್ಲಿ ಕಾವೇರಿ ವಿವಾದದ ಮೂಲಕ ತಿರುಗೇಟು ಕೊಟ್ಟಿದ್ದಾರೆ. ವಿಪಕ್ಷ ನಾಯಕ ಆರ್.ಅಶೋಕ್ ಕೂಡ ರಾಜ್ಯ ಕಾಂಗ್ರೆಸ್ ವಿರುದ್ಧ ಗುಡುಗಿದ್ದಾರೆ.

ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಶೇರ್ ಮಾಡಿಕೊಂಡಿರುವ ಆರ್.ಅಶೋಕ್, 'ಬೆಂಗಳೂರಿನ ಜನತೆಗೆ ನಿಮ್ಮ ಕಾಂಗ್ರೆಸ್ ಸರ್ಕಾರದಿಂದ ಸಿಕ್ಕಿದ್ದು ಬರೀ ಬಾಂಬು..ಮತಾಂಧರು ರಾಜ್ಯದೆಲ್ಲೆಡೆ ಹಿಂದೂಗಳ ಮೇಲೆ ಅಟ್ಟಹಾಸ ಮೆರೆಯಿತ್ತಿರುವುದಕ್ಕೆ ಕಾರಣ ನಿಮ್ಮ ಕಾಂಗ್ರೆಸ್ ಸರ್ಕಾರದ ಒಲೈಕೆಯಿಂದ ಅವರಿಗೆ ಬಂದಿರುವ ಕೊಂಬು.
ಕಾವೇರಿಯ ನೀರನ್ನು ಬೇಕಾಬಿಟ್ಟಿ ತಮಿಳುನಾಡಿಗೆ ಹರಿಸಿ ನಿಮ್ಮ ಕಾಂಗ್ರೆಸ್ ಸರ್ಕಾರ ಕನ್ನಡಿಗರಿಗೆ ಕೊಟ್ಟಿದ್ದು ಖಾಲಿ ಚೊಂಬು. ಗರೀಬಿ ಹಠಾವೋ ಎಂದು 60 ವರ್ಷಗಳಿಂದ ಮೊಸಳೆ ಕಣ್ಣೀರು ಸುರಿಸಿ ಕಡೆಗೆ ನಿಮ್ಮ ಕಾಂಗ್ರೆಸ್ ಸರ್ಕಾರ ಬಡವರಿಗೆ ಕೊಟ್ಟಿದ್ದು ಖಾಲಿ ಜೇಬು. ಜೂನ್ 4ರ ನಂತರ ನಿಮ್ಮ ಇಂಡಿ ಮೈತ್ರಿ ಕೂಟದ ಭ್ರಷ್ಟ ನಾಯಕರ ಗತಿ ಜೈಲಿನಲ್ಲಿ ಚಾಪೆ ದಿಂಬು' ಎಂದು ತೀವ್ರ ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಬಿ.ವೈ ವಿಜಯೇಂದ್ರ
ಮೋದಿ ಸರ್ಕಾರದ ವಿರುದ್ಧ ಚೊಂಬು ಜಾಹೀರಾತಿನ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆಕ್ರೋಶ ಹೊರಹಾಕಿದ್ದಾರೆ.
ಕಾಂಗ್ರೆಸ್ಸಿಗರೇ, ತಮಿಳುನಾಡಿಗೆ ನೀರು ಬಿಟ್ಟು, ಕಾವೇರಿ ಮಾತೆಯ 'ತುಂಬಿದ ಕೊಡ' ಬರಿದು ಮಾಡಿ ಕನ್ನಡಿಗರಿಗೆ ಖಾಲಿ ಚೊಂಬು ಕೊಟ್ಟವರು ನೀವು. ಬೆಳೆ ಒಣಗಿಸಿ ರೈತರಿಗೆ ಚೊಂಬು ಕೊಟ್ಟವರು ನೀವು. ಇದ್ದ ಬದ್ದ ಹಣವನ್ನೆಲ್ಲ ಖಾಲಿಮಾಡಿಕೊಂಡು ಪರಿಶಿಷ್ಟರ/ ಹಿಂದುಳಿದವರ ಕಲ್ಯಾಣಕ್ಕೆ ಮೀಸಲಾದ ಹಣವನ್ನೂ ವರ್ಗಾಯಿಸಿಕೊಂಡು ಶೋಷಿತರಿಗೆ ಚೊಂಬು ಕೊಟ್ಟವರು ನೀವು.
ಕುಡಿಯುವ ನೀರೂ ಒದಗಿಸಲಾರದೇ ಮಹಿಳೆಯರು ಖಾಲಿ ಬಿಂದಿಗೆ ಹಿಡಿದು ಅಲೆದಾಡುವ ಸ್ಥಿತಿ ತಂದವರು ನೀವು. ನಿರುದ್ಯೋಗಿಗಳಿಗೆ ಯುವನಿಧಿ ಹೆಸರಲ್ಲಿ ಖಾಲಿ ಚೊಂಬು ಕೊಟ್ಟವರು ನೀವು. ದೇಶದಲ್ಲಿ ಕಾಣದ 'ಕೈ' ಸ್ಥಿತಿ ತಲುಪುತ್ತಿರುವ ನಿಮಗೆ ಕೆಲವೇ ದಿನಗಳಲ್ಲಿ ಜನರೇ ನೀಡಲಿದ್ದಾರೆ. 'ಖಾಲಿ ಚೊಂಬು' ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.












Click it and Unblock the Notifications