ಈ ಶತಮಾನದ ನಿಜವಾದ ಕಟ್ಟಪ್ಪ ಮಲ್ಲಿಕಾರ್ಜುನ್ ಖರ್ಗೆ: ಅಶೋಕ್ ಹೀಗಂದಿದ್ದೇಕೆ?
ಬಹುಭಾಷೆಗಳಲ್ಲಿ ತೆರೆಕಂಡಿದ್ದ ಬಾಹುಬಲಿ ಸಿನಿಮಾದಲ್ಲಿ ಕಟ್ಟಪ್ಪನ ಪಾತ್ರ ಸಖತ್ ಫೇಮಸ್ ಆಗಿತ್ತು. ನಿಷ್ಠೆಗೆ ಮತ್ತೊಂದು ಹೆಸರಾಗಿದ್ದ ಕಟ್ಟಪ್ಪ ಪಾತ್ರಧಾರಿಯು ಕೊನೆಗೆ ಬಾಹುಬಲಿಯ ಅಂತ್ಯಕ್ಕೂ ಕಾರಣವಾಗಿದ್ದು, ಹಲವು ಘಟನೆಗಳಿಗೆ ಉದಾಹರಣೆಯಾಗಿಯೂ ಬಳಕೆಯಾಗುತ್ತಿದೆ. ಸದ್ಯ ವಿಪಕ್ಷ ನಾಯಕ ಆರ್.ಅಶೋಕ್ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಕಟ್ಟಪ್ಪನಿಗೆ ಹೋಲಿಸಿದ್ದಾರೆ.
ಗುತ್ತಿಗೆದಾರನ ಆತ್ಮಹತ್ಯೆ ಕೇಸ್‌ನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೆಸರು ಮುನ್ನಲೆಯಲ್ಲಿರುವುದರಿಂದ ಬಿಜೆಪಿಯು ಪ್ರಿಯಾಂಕ್ ರಾಜೀನಾಮೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಿದೆ. ಆದರೆ, ನಿನ್ನೆ ನಡೆದ ಪ್ರತಿಭಟನೆಯಲ್ಲಿ ಬಿಜೆಪಿ ಬಣ ರಾಜಕೀಯದ ಬಗ್ಗೆ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದರು. ಅದಕ್ಕೆ ಅಶೋಕ್ ಈ ರೀತಿ ತಿರುಗೇಟು ನೀಡಿದ್ದಾರೆ.

ಸ್ವಾಮಿ ಪ್ರಿಯಾಂಕ್ ಖರ್ಗೆ ಅವರೇ, ಭಾರತೀಯತೆಯೂ ಇಲ್ಲದ, ರಾಷ್ಟ್ರೀಯತೆಯೂ ಇಲ್ಲದ ನಿಮ್ಮ ನಕಲಿ ಗಾಂಧಿ ಕಾಂಗ್ರೆಸ್ ಪಕ್ಷ ಕಳೆದ ಹತ್ತು ವರ್ಷಗಳಿಂದ ಈ ದೇಶದ ಅತೀ ದೊಡ್ಡ ಕಾಮಿಡಿ ಸಿನಿಮಾ ಆಗಿದೆ. ಈ ಸೂಪರ್ ಹಿಟ್ ಕಾಮಿಡಿ ಸಿನಿಮಾದ ಸ್ಟಾರ್ ಕಾಮಿಡಿಯನ್ ಯಾರು ಎಂದು ನಾನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ ಎಂದು ಟಾಂಗ್ ನೀಡಿದ್ದಾರೆ.
ಪಾಪ ನಿಮ್ಮ ತಂದೆಯವರು ಈ ಇಳಿ ವಯಸ್ಸಿನಲ್ಲೂ ಆ ಕಾಮಿಡಿ ಪೀಸ್‌ನ ಮಾನ ಉಳಿಸಲು ರಾಜ್ಯದಲ್ಲಿ ಸಿಗಬಹುದಾದ ಅಧಿಕಾರವನ್ನು ತ್ಯಾಗ ಮಾಡಿ, ಅಲ್ಲಿ ಆ ಕಾಮಿಡಿ ಪೀಸ್‌ಗೆ ರಕ್ಷಣೆ ಕೊಡುತ್ತಿದ್ದಾರಲ್ಲ, ಈ ಶತಮಾನದ ನಿಜವಾದ ಕಟ್ಟಪ್ಪ ಅಂದರೆ ಅದು ನಿಮ್ಮ ತಂದೆಯವರೇ ಎಂದು ಲೇವಡಿ ಮಾಡಿದ್ದಾರೆ.
ಅಂದ ಹಾಗೆ ಮೊನ್ನೆ ಸಚಿವ ಸತೀಶ್ ಜಾರಕಿಹೊಳಿ ಅವರ ಮನೆಯಲ್ಲಿ 35 ಶಾಸಕರು ಸಭೆ ಸೇರಿದ್ದರಂತಲ್ಲ? ಅಲ್ಲಿ ತಾವು ಇದ್ದರೋ? ಅಥವಾ ಆತ್ಮಹತ್ಯೆಗೆ ಕಾರಣವಾದರೂ ಸರಿ, ಕೊಲೆ ಮಾಡಿದರೂ ಸರಿ, ಎಐಸಿಸಿ ಅಧ್ಯಕ್ಷರ ಕೋಟಾದಲ್ಲಿ ತಮ್ಮ ಕುರ್ಚಿ ಮಾತ್ರ ಸುಭದ್ರ ಎಂದು ಯಾವ ಬಣಕ್ಕೂ ಸೇರದೆ ತಟಸ್ಥರಾಗಿರುವ ನಿರ್ಧಾರ ಮಾಡಿದ್ದೀರೋ? ಎಂದು ಪ್ರಿಯಾಂಕ್ ಖರ್ಗೆ ಕಾಲೆಳೆದಿದ್ದಾರೆ.

ಪ್ರಿಯಾಂಕ್ ಏನು ಹೇಳಿದ್ರು?: ನಿನ್ನೆ ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ನಡೆಸಿದ ಪ್ರತಿಭಟನೆ ಬಗ್ಗೆ ವ್ಯಂಗ್ಯ ಮಾಡಿದ್ದ ಪ್ರಿಯಾಂಕ್, ಇಂದು ನಡೆದದ್ದು ಬಿಜೆಪಿಯವರ ಕುರ್ಚಿ ಕಾಳಗದ ಹೋರಾಟ, ವಿಜಯೇಂದ್ರ ಬಣದ VJP ಶಿವಮೊಗ್ಗದಲ್ಲಿ ಕುರ್ಚಿ ಉಳಿಸಿಕೊಳ್ಳುವ ಹೋರಾಟದಲ್ಲಿದ್ದರೆ, ಯತ್ನಾಳ್ ಬಣದ YJP ವಕ್ಫ್ ಹೆಸರು ಹೇಳಿಕೊಂಡು ಕುರ್ಚಿ ಕಿತ್ತುಕೊಳ್ಳುವ ಹೋರಾಟದಲ್ಲಿತ್ತು, ಮತ್ತೊಂದೆಡೆ AJP ಎತ್ತ ಸೇರುವುದು ಎಂದು ತಿಳಿಯದೆ ಕಲಬುರಗಿಯಲ್ಲಿ ಹೋರಾಟದ ನಾಟಕ ನಡೆಸಿತ್ತು ಎಂದು ಹೇಳಿದ್ದರು.
ಬಿಜೆಪಿಯಲ್ಲಿ ಸಹಮತ, ಸಹಬಾಳ್ವೆ, ಸಮಾಧಾನ ಯಾವುದೂ ಇಲ್ಲದೆ ತಮ್ಮ ಹುಳುಕು ಮುಚ್ಚಿಕೊಳ್ಳಲು "ಪ್ರಿಯಾಂಕ್ ಖರ್ಗೆ" ಹೆಸರಿಗೆ ಜೋತು ಬಿದ್ದಿದೆ. ನನ್ನ ವಿರುದ್ಧ ಬಿಜೆಪಿ ನಡೆಸಿದ ಪ್ರತಿಭಟನೆಗೆ ಬಿಜೆಪಿಯಲ್ಲೇ ಸಹಮತ ಇಲ್ಲದಿರುವುದು ಇಂದು ಬಟಾಬಯಲಾಗಿದೆ. ಬಿಜೆಪಿಯ ರಾಜ್ಯಾಧ್ಯಕ್ಷರು, ವಿರೋಧ ಪಕ್ಷದ ನಾಯಕರ ಮಾತಿಗೆ, ಪ್ರತಿಭಟನೆಯ ಕರೆಗೆ ಬಿಜೆಪಿಯಲ್ಲೇ ನಯಾಪೈಸೆ ಕಿಮ್ಮತ್ತು ಸಿಗದಿರುವಾಗ, ಇವರು ನನ್ನ ರಾಜೀನಾಮೆ ಕೇಳುವುದು ಕಾಮಿಡಿ ಸಿನಿಮಾ ನೋಡಿದಂತೆ ಭಾಸವಾಗುತ್ತದೆ ಎಂದು ಹಾಸ್ಯ ಮಾಡಿದ್ದರು.












Click it and Unblock the Notifications