Breaking; ನೆಲಮಂಗಲದಲ್ಲಿ PWD ಇಲಾಖೆ ಅಧಿಕಾರಿ ಆತ್ಮಹತ್ಯೆ
ಲೋಕೋಪಯೋಗಿ ಇಲಾಖೆಯ ಅಧಿಕಾರಿಯೊಬ್ಬರು ನೆಲಮಂಗಲದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೆಂಗಳೂರು, ಜನವರಿ 27; ತುಮಕೂರು ಜಿಲ್ಲೆಯ ಮಧುಗಿರಿಯ ನಿವಾಸಿಯಾದ ಲೋಕೋಪಯೋಗಿ ಇಲಾಖೆ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ.
54 ವರ್ಷದ ಲಕ್ಷ್ಮೀ ನರಸಿಂಹಯ್ಯ ಮೃತಪಟ್ಟವರು. ಶುಕ್ರವಾರ ನೆಲಮಂಗಲದಲ್ಲಿರುವ ಶಿವಗಂಗೆಯ ಪ್ರವಾಸಿ ಮಂದಿರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.
ಲೋಕೋಪಯೋಗಿ ಇಲಾಖೆಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದ ಲಕ್ಷ್ಮೀ ನರಸಿಂಹಯ್ಯ ಪ್ರಮುಖವಾದ ಕಡತವೊಂದು ನಾಪತ್ತೆಯಾದ ಬಳಿಕ ಒತ್ತಡಕ್ಕೆ ಒಳಗಾಗಿದ್ದರು ಎಂಬ ಮಾಹಿತಿ ಇದೆ.

ಕಚೇರಿಗೆ ಸಂಬಂಧಪಟ್ಟ ಕಡತ ನಾಪತ್ತೆಯಾದ ಹಿನ್ನಲೆ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಶವವನ್ನು ನೋಡಿದ ಬಳಿಕ ಕುಟುಂಬದವರಿಗೆ ಘಟನೆ ಕುರಿತು ಮಾಹಿತಿ ನೀಡಲಾಗಿದೆ.
ಘಟನೆ ಬಗ್ಗೆ ಮಾಹಿತಿ ಪಡೆದ ಬಳಿಕ ದಾಬಾಸ್‌ಪೇಟೆ ಪೊಲೀಸರು ಸ್ಥಳಕ್ಕೆ ಧಾವಿಸಿ, ಪರೀಶಿಲನೆ ಕೈಗೊಂಡರು. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿ, ಮುಂದಿನ ತನಿಖೆ ಕೈಗೊಂಡಿದ್ದಾರೆ.
ಗುರುವಾರ ಆಗಮಿಸಿದ್ದರು; ಮೃತಪಟ್ಟಿರುವ ಲಕ್ಷ್ಮೀ ನರಸಿಂಹಯ್ಯ ಮಧುಗಿರಿ ಪಟ್ಟಣದ ಲೋಕೋಪಯೋಗಿ ಇಲಾಖೆ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಇಲಾಖೆಯಲ್ಲಿನ ಇಬ್ಬರು ಅಧಿಕಾರಿಗಳ ಸೇವಾ ದಾಖಲಾತಿ ಪುಸ್ತಕಗಳು ಕಳೆದು ಹೋಗಿದ್ದು, ನಾಲ್ಕು ದಿನಗಳಿಂದ ಹುಡುಕಾಟ ನಡೆಸಿದರೂ ಸಿಕ್ಕಿರಲಿಲ್ಲ. ಇದರಿಂದಾಗಿ ಲಕ್ಷ್ಮೀ ನರಸಿಂಹಯ್ಯ ಮನನೊಂದು ಒತ್ತಡಕ್ಕೆ ಒಳಗಾಗಿದ್ದರು. ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ? ಎಂದು ತನಿಖೆ ನಡೆಸಲಾಗುತ್ತಿದೆ.
ಗುರುವಾರ ರಾತ್ರಿ ಲಕ್ಷ್ಮೀ ನರಸಿಂಹಯ್ಯ ಶಿವಗಂಗೆ ಪ್ರವಾಸಿ ಮಂದಿರಕ್ಕೆ ಆಗಮಿಸಿದ್ದರು. ಶುಕ್ರವಾರ ಮುಂಜಾನೆ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಆತ್ಮಹತ್ಯೆ ತಡೆ ಸಹಾಯವಾಣಿ; ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ತೆರೆಯಲಾಗಿದೆ. ದೂರವಾಣಿ ಸಂಖ್ಯೆ 080 - 25497777.












Click it and Unblock the Notifications