Karnataka election: 'ಮತ ಚಲಾಯಿಸುವಾಗ ಜೈ ಬಜರಂಗ ಬಲಿ ಹೇಳುವ ಮೂಲಕ ಶಿಕ್ಷಿಸಿ': ಕಾಂಗ್ರೆಸ್ ವಿರುದ್ಧ ಮೋದಿ ಕಿಡಿ
ಅಂಕೋಲಾ, ಮೇ. 03: 'ಕಾಂಗ್ರೆಸ್‌ದು ನಿಂದನೆ ಸಂಸ್ಕೃತಿ' ಎಂದು ಆರೋಪಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮೇ 10 ರಂದು ಮತಗಟ್ಟೆಗಳಲ್ಲಿ ಮತ ಚಲಾಯಿಸುವ ಸಂದರ್ಭದಲ್ಲಿ ಜೈ ಬಜರಂಗ ಬಲಿ ಎಂದು ಹೇಳುವ ಮೂಲಕ ಅವರನ್ನು ಶಿಕ್ಷಿಸುವಂತೆ ಕರ್ನಾಟಕದ ಜನತೆಗೆ ಮನವಿ ಮಾಡಿದ್ದಾರೆ.
ತಾವು "ಭ್ರಷ್ಟ ವ್ಯವಸ್ಥೆಯನ್ನು" ಹಾಳು ಮಾಡಿರುವ ಕಾರಣ ಕಾಂಗ್ರೆಸ್ ಮತ್ತು ಅದರ ನಾಯಕರು ತನ್ನನ್ನು ದ್ವೇಷಿಸುತ್ತಾರೆ ಮತ್ತು ಬಾಯಿಗೆ ಬಂದಂತೆ ನಿಂದಿಸುತ್ತಾರೆ ಎಂದು ಪ್ರಧಾನಿ ಮೋದಿ ಆರೋಪಿಸಿದ್ದಾರೆ. "ಈ ಚುನಾವಣೆಯಲ್ಲಿ ಕಾಂಗ್ರೆಸ್, ನಿವೃತ್ತಿಯಾಗುತ್ತಿರುವ ತನ್ನ ನಾಯಕನ ಹೆಸರಿನಲ್ಲಿ ಮತ ಕೇಳುತ್ತಿದೆ. ಅವರು ಮತ ಕೇಳುವ ಇನ್ನೊಂದು ಮಾರ್ಗವೆಂದರೆ ಮೋದಿಯನ್ನು ನಿಂದಿಸುವುದು" ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, "ಕರ್ನಾಟಕದಲ್ಲಿ ಯಾರಾದರೂ ಈ ನಿಂದನೆ ಸಂಸ್ಕೃತಿಯನ್ನು ಒಪ್ಪಿಕೊಳ್ಳುತ್ತಾರೆಯೇ..? ಯಾರನ್ನಾದರೂ ನಿಂದಿಸಲು ಯಾರು ಇಷ್ಟಪಡುತ್ತಾರೆಯೇ..? ಯಾರಾದರೂ ಸಣ್ಣ ಮನುಷ್ಯನನ್ನೂ ನಿಂದಿಸುವುದನ್ನು ಇಷ್ಟಪಡುತ್ತಾರೆಯೇ..? ನಿಂದಿಸುವವರನ್ನು ಕರ್ನಾಟಕ ಕ್ಷಮಿಸುತ್ತದೆಯೇ?" ಎಂದು ಪ್ರಶ್ನಿಸುತ್ತಾರೆ.
ಮುಂದುವರಿದು, "ಈ ಬಾರಿ ನೀವು ಏನು ಮಾಡುತ್ತೀರಿ..? ನೀವು ಅವರನ್ನು ಶಿಕ್ಷಿಸುತ್ತೀರಾ..? ನೀವು ಮತಗಟ್ಟೆಯಲ್ಲಿನ ಮತದಾನ ಮಾಡುವ ಗುಂಡಿಯನ್ನು ಒತ್ತಿದಾಗ 'ಜೈ ಬಜರಂಗ ಬಲಿ' ಎಂದು ಹೇಳುವ ಮೂಲಕ ಅವರನ್ನು ಶಿಕ್ಷಿಸಿ" ಎಂದು ಜನರಿಗೆ ಆಗ್ರಹಿಸಿದ್ದಾರೆ.

ಕರ್ನಾಟಕವನ್ನು ದೇಶದಲ್ಲೇ ನಂಬರ್ ಒನ್ ರಾಜ್ಯವನ್ನಾಗಿ ಮಾಡುವುದೇ ಬಿಜೆಪಿಯ ಏಕೈಕ ಗುರಿಯಾಗಿದ್ದು, ಅದಕ್ಕಾಗಿ ಪಕ್ಷವು ಮಾರ್ಗಸೂಚಿಯನ್ನು ಹೊಂದಿದೆ. ಎಲ್ಲಾ ಪ್ರಯತ್ನಗಳನ್ನು ಮಾಡಲು ಸಿದ್ಧವಾಗಿದೆ ಎಂದು ತಿಳಿಸಿದ ಪ್ರಧಾನಿ, ಕಾಂಗ್ರೆಸ್ ತನ್ನ ದಶಕಗಳ ದುರಾಡಳಿತದಿಂದ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ ಎಂದು ಹೇಳಿದ್ದಾರೆ.
'ಸುಳ್ಳು ಆಪಾದನೆ, ಸುಳ್ಳು ಭರವಸೆಗಳೇ ಕಾಂಗ್ರೆಸ್‌ಗೆ ಬೆಂಬಲ' ಎಂದ ಅವರು, ದಶಕಗಳ ಕಾಲ ದೇಶವನ್ನು ಆಳಿದ ಕಾಂಗ್ರೆಸ್ ದೇಶ ಬಿಟ್ಟು ತನ್ನ ಅಭಿವೃದ್ಧಿಯತ್ತಲೇ ಗಮನಹರಿಸಿ ನಾಯಕರ ಖಜಾನೆಯನ್ನು ತುಂಬಿಸಿದೆ. ಕಾಂಗ್ರೆಸ್ ತನ್ನ ಆಡಳಿತದ ಅವಧಿಯಲ್ಲಿ ಸರ್ಕಾರಿ ಫಲಾನುಭವಿಗಳ ಪಟ್ಟಿಯಲ್ಲಿ ನಕಲಿ ಹೆಸರುಗಳನ್ನು ಸೇರಿಸಿದೆ ಎಂದು ಆರೋಪಿಸಿದ ಪ್ರಧಾನಿ ಮೋದಿ, "ಕರ್ನಾಟಕದ ಜನಸಂಖ್ಯೆಗಿಂತ ನಕಲಿ ಹೆಸರುಗಳು ಹೆಚ್ಚಿವೆ. ಅವರ ಹೆಸರಿನಲ್ಲಿ ಹಣವನ್ನು ಖರ್ಚು ಮಾಡಲಾಗಿದೆ. ಅದೆಲ್ಲಾ, ಕಾಂಗ್ರೆಸ್‌ನ ಭ್ರಷ್ಟ ಜನರ ಖಾತೆಗೆ ಹೋಗುತ್ತಿತ್ತು' ಎಂದಿದ್ದಾರೆ.












Click it and Unblock the Notifications