ಲೋಕಾಯುಕ್ತ 'ಬಿ' ವರದಿ ತಿರಸ್ಕಾರ: ಸೋಮಣ್ಣಗೆ ಸಮನ್ಸ್ ಜಾರಿ ಮಾಡಿದ ಕೋರ್ಟ್
ಬೆಂಗಳೂರು, ಮಾ. 22: ಆದಾಯ ಮೀರಿ ಅಕ್ರಮ ಆಸ್ತಿಗಳಿಕೆ ಮಾಡಿದ ಆರೋಪ ಸಂಬಂಧ ವಸತಿ ಸಚಿವ ವಿ. ಸೋಮಣ್ಣ ಅವರಿಗೆ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ. ಏಪ್ರಿಲ್ 16 ರಂದು ಖುದ್ದು ಹಾಜರಾಗಬೇಕು ಎಂದು ನ್ಯಾಯಾಲಯ ಸೂಚಿಸಿದೆ.
ವಸತಿ ಸಚಿವ ವಿ. ಸೋಮಣ್ಣ ಅವರು ಶಾಸಕರಾಗಿದ್ದ ವೇಳೆ ಆದಾಯ ಮೀರಿ ಆಸ್ತಿ ಗಳಿಸಿದ್ದಾರೆ ಎಂದು ಆರೋಪಿಸಿ ರಾಮಕೃಷ್ಣ ಎಂಬುವರು 2013 ರಲ್ಲಿ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು. ಈ ಕುರಿತು ತನಿಖೆ ನಡೆಸುವಂತೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಆದೇಶ ಮಾಡಿತ್ತು.
ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ತನಿಖೆ ನಡೆಸಿದ್ದರು. ಸೋಮಣ್ಣ ಯಾವುದೇ ರೀತಿಯಲ್ಲಿ ಅಕ್ರಮ ಆಸ್ತಿ ಗಳಿಸಿಲ್ಲ ಎಂದು ಲೋಕಾಯುಕ್ತ ಪೊಲೀಸರು ನ್ಯಾಯಾಲಯಕ್ಕೆ 'ಬಿ' ವರದಿ ಸಲ್ಲಿಸಿದ್ದರು. ಲೋಕಾಯುಕ್ತ ಪೊಲೀಸರ ಈ ವರದಿಯನ್ನು ತಿರಸ್ಕರಿಸಿರುವ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇದೀಗ ಸಮನ್ಸ್ ಜಾರಿ ಮಾಡಿದೆ.

ವಿ. ಸೋಮಣ್ಣ ಶಾಸಕರಾಗುವ ಮೊದಲಿನ ಆದಾಯ, ನಂತರದ ಆದಾಯ, ಗಳಿಸಿದ ಆಸ್ತಿಯ ಸೂಕ್ತ ವಿವರಗಳನ್ನು ಲೋಕಾಯುಕ್ತ ಪೊಲೀಸರು ತನಿಖಾ ವರದಿಯಲ್ಲಿ ಉಲ್ಲೇಖಿಸಿಲ್ಲ. ಲೋಕಾಯುಕ್ತ ಪೊಲೀಸರು ಅಸಮರ್ಥ ತನಿಖೆ ನಡೆಸಿದ್ದಾರೆ ಎಂದು ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.

ಶಾಸಕರಾಗಿದ್ದ ವಿ. ಸೋಮಣ್ಣ ವಿರುದ್ಧ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರನ್ನು ಸಲ್ಲಿಸಿದ್ದ ದೂರುದಾರ ವಿಚಾರಣೆಗೆ ಹಾಜರಾಗಿರಲಿಲ್ಲ. ದೂರುದಾರನ ನಡೆ ನೋಡಿ ಅನುಮಾನ ವ್ಯಕ್ತಪಡಿಸಿದ್ದ ನ್ಯಾಯಾಲಯ, ದೂರುದಾರನಿಗೆ ಎಚ್ಚರಿಕೆ ನೀಡಿತ್ತು. ಆ ಬಳಿಕ ರಾಮಕೃಷ್ಣ ಎಂಬುವರು ಖಾಸಗಿ ದೂರನ್ನು ಸಲ್ಲಿಸಿದ್ದರು. ತನಿಖೆ ನಡೆಸಿದ್ದ ಲೋಕಾಯುಕ್ತ ಪೊಲೀಸರು ಬಿ ವರದಿ ಸಲ್ಲಿಸಿ ಕೈ ತೊಳೆದುಕೊಂಡಿದ್ದರು. ಆದರೆ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಲೋಕಾಯುಕ್ತ ಪೊಲೀಸರ ತನಿಖೆಯನ್ನು ತಿರಸ್ಕರಿಸಿ ಸಮನ್ಸ್ ಜಾರಿಗೊಳಿಸಿದೆ.












Click it and Unblock the Notifications