Public Exam : 5,8,9ನೇ ಕ್ಲಾಸ್ ಪಬ್ಲಿಕ್ ಪರೀಕ್ಷೆ ವೇಳಾಪಟ್ಟಿ ಪ್ರಕಟ; ಯಾವಾಗ ಪರೀಕ್ಷೆ?
ಬೆಂಗಳೂರು, ಮಾರ್ಚ್ 22: 5,8 ಮತ್ತು 9ನೇ ತರಗತಿ ಪಬ್ಲಿಕ್ ಪರೀಕ್ಷೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದ ಬೆನ್ನಲ್ಲೇ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ಪರಿಷ್ಕೃತ ಪರೀಕ್ಷಾ ವೇಳಾಪಟ್ಟಿ ಬಿಡುಗಡೆ ಮಾಡಿದೆ.
ಮಾರ್ಚ್ 25 ರಿಂದ ರಾಜ್ಯಾದ್ಯಂತ ಎಸ್ ಎಸ್ ಎಲ್ ಸಿ ಪರೀಕ್ಷೆ ಆರಂಭವಾಗಲಿದೆ. 5,8 ಮತ್ತು 9ನೇ ತರಗತಿ ಪಬ್ಲಿಕ್ ಪರೀಕ್ಷೆಗೆ ಕುರಿತು ಹಲವು ಸುತ್ತಿನ ಕಾನೂನು ಸಮರದ ಬಳಿಕ ಪಬ್ಲಿಕ್ ಪರೀಕ್ಷೆ ಮುಂದುವರಿಸಲು ರಾಜ್ಯ ಹೈಕೋರ್ಟ್ ಶುಕ್ರವಾರ ಬೆಳಗ್ಗೆ ಗ್ರೀನ್ ಸಿಗ್ನಲ್ ನೀಡಿತ್ತು. ಸೋಮವಾರದಿಂದ ಪರೀಕ್ಷೆ ಮುಂದುವರಿಸಲು ಸರ್ಕಾರದ ಶಿಕ್ಷಣ ಇಲಾಖೆ ನಿರ್ಧರಿಸಿ ವೇಳಾಪಟ್ಟಿ ಪ್ರಕಟಿಸಿದೆ.

ಮಾರ್ಚ್ 25 ರಿಂದ ಪರೀಕ್ಷೆ ನಡೆಯಲಿದ್ದು, 28ಕ್ಕೆ ಕೊನೆಯ ಪರೀಕ್ಷೆ ಇರುತ್ತದೆ ಎಮದು ಶಾಲಾ ಶಿಕ್ಷಣ ಇಲಾಖೆ ಆಯುಕ್ತರ ಆದೇಶ ತಿಳಿಸಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯುವ ದಿನ ಮಧ್ಯಾಹ್ನ 2.30ಕ್ಕೆ ಪರೀಕ್ಷೆ ನಡೆಯಲಿದ್ದು, ಎಸ್‌ಎಸ್‌ಎಲ್‌ಸಿ ಪರೀಕ್ಷೆ ಇಲ್ಲದ ದಿನ ಬೆಳ್ಳಗೆ 10ಗಂಟೆಗೆ ಪರೀಕ್ಷೆ ನಡೆಯಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಪರೀಕ್ಷೆ ಮುಂದುವರಿಸುವ ಆದೇಶದಲ್ಲಿ ಏನಿದೆ?
ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 5, 8 ಮತ್ತು 9ನೇ ತರಗತಿಗಳ ವಿದ್ಯಾರ್ಥಿಗಳಿಗೆ 2023-24ನೇ ಸಾಲಿನ ಸಂಕಲನಾತ್ಮಕ ಮೌಲ್ಯಮಾಪನ-2 (SA-2) ಮೌಲ್ಯಾಂಕನ ನಡೆಸುವ ಸಂಬಂಧ ಮಾನ್ಯ ಸರ್ವೋಚ್ಛ ನ್ಯಾಯಾಲಯದಲ್ಲಿ ಎಸ್.ಎಲ್.ಪಿ ಸಂಖ್ಯೆ: 6256/2024, ಎಸ್.ಎಲ್.ಪಿ ಸಂಖ್ಯೆ: 6257/2024 ಮತ್ತು ಡೈರಿ ಸಂಖ್ಯೆ: 11192/2024 ದಾವೆಗಳನ್ನು ಹೂಡಿದ್ದು, ಸದರಿ ದಾವೆಗಳನ್ನು ವಿಚಾರಣೆ ನಡೆಸಿ, ಈ ಹಿಂದೆ ರಾಜ್ಯ ಉಚ್ಛ ನ್ಯಾಯಾಲಯದ ದ್ವಿಸದಸ್ಯ ಪೀಠವು ಮೌಲ್ಯಾಂಕನವನ್ನು ಮುಂದುವರೆಸುವಂತೆ ನೀಡಿದ್ದ ಮಧ್ಯಂತರ ತೀರ್ಪನ್ನು ರದ್ದುಪಡಿಸಿರುತ್ತದೆ ಮತ್ತು ಪ್ರಕರಣವನ್ನು ರಾಜ್ಯ ಉಚ್ಛ ನ್ಯಾಯಾಲಯ ವಿಭಾಗೀಯ ಪೀಠಕ್ಕೆ ರವಾನಿಸಿತ್ತು. ಈ ಹಿನ್ನೆಲೆಯಲ್ಲಿ ದಿನಾಂಕ: 13-3-2024ರಿಂದ ನಡೆಯಬೇಕಾಗಿದ್ದ 5.8 ಮತ್ತು 9ನೇ ತರಗತಿಗಳ SA-2 ಮೌಲ್ಯಾಂಕನವನ್ನು ಮುಂದಿನ ಆದೇಶದವರೆಗೆ ಮುಂದೂಡುವಂತೆ ಶಾಲೆಗಳಿಗೆ ಸೂಚಿಸಲಾಗಿತ್ತು.
ಮುಂದುವರೆದು, ರಾಜ್ಯ ಘನ ಉಚ್ಛ ನ್ಯಾಯಾಲಯದ ವಿಭಾಗೀಯ ಪೀಠವು ಸದರಿ ದಾವೆಯ ಪ್ರಕರಣವನ್ನು ವಿಚಾರಣೆ ನಡೆಸಿ ದಿನಾಂಕ: 22-3-2024ರಂದು ಅಂತಿಮ ತೀರ್ಪು ನೀಡಿದ್ದು, 5, 8 ಮತ್ತು 9ನೇ ತರಗತಿಗಳು 2023-24ನೇ ಸಾಲಿನ ಸಂಕಲನಾತ್ಮಕ ಮೌಲ್ಯಮಾಪನ-2 (SA-2) ಮೌಲ್ಯಾಂಕನ ಕಾರ್ಯವನ್ನು ಉಳಿದ ವಿಷಯಗಳಿಗೆ ಮುಂದುವರೆಸಲು ಸೂಚಿಸಿ ಆದೇಶಿಸಿರುತ್ತದೆ. ಅದರಂತೆ ಸದರಿ ಮೌಲ್ಯಾಂಕನ ಕಾರ್ಯವನ್ನು ವಿದ್ಯಾರ್ಥಿಗಳ ಅಭ್ಯಾಸದ ಹಿತದೃಷ್ಟಿಯಿಂದ ದಿನಾಂಕ: 25-3-2024ರಿಂದ ಪ್ರಾರಂಭಿಸಲು ಕ್ರಮವಹಿಸಲಾಗಿದೆ ಎಂದು ಪತ್ರಿಕಾ ಪ್ರಕಟಣೆಗೆ ಕೋರಿದೆ ಎಂದು ಪ್ರಕಟಣೆ ತಿಳಿಸಿದೆ.












Click it and Unblock the Notifications