ಪಿಎಸ್‌ಐ ನೇಮಕಾತಿ ಹಗರಣ: ಆರಗ ಜ್ಞಾನೇಂದ್ರ ರಾಜೀನಾಮೆಗೆ ಸಿದ್ದರಾಮಯ್ಯ ಸದನದಲ್ಲಿ ಪಟ್ಟು
ಬೆಂಗಳೂರು, ಸೆ.21: ಪಿಎಸ್‌ಐ ನೇಮಕಾತಿಯಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸದನದಲ್ಲಿ ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಪಿಎಸ್‌ಐ ನೇಮಕಾತಿಯಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ವಿಧಾನಸಭೆ ಅಧಿವೇಶನದಲ್ಲಿ ಸುದೀರ್ಘವಾಗಿ ಮಾತನಾಡಿದ ಸಿದ್ದರಾಮಯ್ಯ ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.
ರಾಜ್ಯದಲ್ಲಿ 2021ರಲ್ಲಿ 545 ಜನ ಪಿಎಸ್‌ಐ ನೇಮಕಾತಿ ನಡೆದಿತ್ತು, ಕಳೆದ 7 ತಿಂಗಳುಗಳಿಂದ ಈ ನೇಮಕಾತಿ ರಾಜ್ಯದ ಗಮನ ಸೆಳೆದಿದೆ ಜೊತೆಗೆ ಬೇರೆ ರಾಜ್ಯದವರೂ ಈ ಬಗ್ಗೆ ಚರ್ಚೆ ಮಾಡುವುದನ್ನು ನಾವು ನೋಡಿದ್ದೇವೆ. ಇದನ್ನು ಅನೇಕ ದಿನ ಪತ್ರಿಕೆಗಳು ಹಾಗೂ ಸುದ್ದಿ ವಾಹಿನಿಗಳು ಸರಣಿ ವರದಿಯನ್ನು ಪ್ರಕಟ ಮಾಡಿವೆ.
ಪಿಎಸ್‌ಐ ನೇಮಕಾತಿಗೆ 2020ರಲ್ಲಿ ಅಧಿಸೂಚನೆ ಹೊರಡಿಸಲಾಯಿತು. ಇದರಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ 127 ಹುದ್ದೆಗಳನ್ನು ನಿಗದಿ ಮಾಡಲಾಗಿತ್ತು, ನಂತರ ಈ ಅಧಿಸೂಚನೆಯನ್ನು ವಾಪಾಸು ಪಡೆದು 2021ರ ಜನವರಿಯಲ್ಲಿ ಹೊಸ ಅಧಿಸೂಚನೆ ಹೊರಡಿಸಲಾಯಿತು. ಇದರಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ 107 ಹುದ್ದೆಗಳನ್ನು ಮೀಸಲಿಡಲಾಯಿತು, ರಾಜ್ಯದ ಇತರೆ ಭಾಗಕ್ಕೆ 438 ಹುದ್ದೆಗಳನ್ನು ಮೀಸಲಿಡಲಾಯಿತು.
ನಾನು ಫ್ರೀಡಂ ಪಾರ್ಕ್ ಗೆ ಹೋಗಿದ್ದೆ. ಅಲ್ಲಿ ಎಸ್‌ಡಿಎ, ಎಫ್‌ಡಿಎ, ಇಂಜಿನಿಯರ್‌ಗಳು, ಪೊಲೀಸ್ ಕಾನ್ಸ್‌ಟೆಬಲ್, ಕೆಪಿಟಿಸಿಎಲ್ ಪರೀಕ್ಷೆ ಬರೆದವರು ಹಾಗೂ ಪಿಎಸ್‌ಐ ನೇಮಕಾತಿಯಲ್ಲಿ ಪರೀಕ್ಷೆ ಬರೆದು, ಆಯ್ಕೆಯಾಗಿ ಆ ನಂತರ ಪ್ರಕ್ರಿಯೆಯನ್ನು ರದ್ದುಗೊಳಿಸಿದ ಹಿನ್ನೆಲೆಯಲ್ಲಿ ಕೆಲಸ ಕಳೆದುಕೊಂಡುವರು ಇದ್ದರು. ಅವರು ತಮ್ಮಿಂದ ಲಂಚ ನೀಡಿ ಕೆಲಸ ತೆಗೆದುಕೊಳ್ಳಲು ಆಗಲ್ಲ, ಹಾಗಾಗಿ ನಮ್ಮ ತಂದೆ ತಾಯಂದಿರು ಬೆಳೆದಿರುವ ಹೆಸರು, ಉದ್ದು, ಕಡ್ಲೆ, ಗೋಧಿ, ಅಕ್ಕಿ ಮುಂತಾದವುಗಳನ್ನು ಚೀಲದಲ್ಲಿ ಕಟ್ಟಿ ನನಗೆ ಕೊಟ್ಟು ಕಳಿಸಿದ್ರು, ಅದನ್ನು ಸಭಾಧ್ಯಕ್ಷರ ಮೂಲಕ ಸರ್ಕಾರಕ್ಕೆ ತಲುಪಿಸುವುದು ನನ್ನ ಜವಾಬ್ದಾರಿ ಎಂದು ಹೇಳಿದರು.

ಎಡಿಜಿಪಿ ಅಮೃತ್ ಪೌಲ್ ಗೆ ಮಾಹಿತಿ ಇತ್ತು
ಅಕ್ಟೋಬರ್ 3, 2021ರಂದು ಲಿಖಿತ ಪರೀಕ್ಷೆ ನಡೆದಿತ್ತು, ತರ್ಜುಮೆ ಮಾಡುವುದು 50 ಅಂಕಗಳ ಪರೀಕ್ಷೆ ಹಾಗೂ 'S or NO' ಮಾದರಿ ಪತ್ರಿಕೆಗೆ 150 ಅಂಕಗಳು. ಒಟ್ಟು 200 ಅಂಕಗಳು. ಲಿಖಿತ ಪರೀಕ್ಷೆಯಲ್ಲಿ 56,000 ಮಂದಿ ತೇರ್ಗಡೆಯಾಗಿ ಅರ್ಹತೆ ಗಳಿಸಿದ್ದರು. ಈ ಲಿಖಿತ ಪರೀಕ್ಷೆ ನಡೆಯುವ ಮುಂಚಿತವಾಗಿಯೇ ಆಗಸ್ಟ್ 25,2021ರಂದು ಎಡಿಜಿಪಿ ಅಮೃತ್ ಪೌಲ್ ಅವರನ್ನು ಭೇಟಿ ಮಾಡಿ ಬ್ಲೂಟೂಥ್ ಬಳಕೆ ಮಾಡಲಾಗುತ್ತಿದೆ, ಓಎಮ್‌ಆರ್ ಬದಲಾವಣೆ ಮಾಡುವ ಅಕ್ರಮ ನಡೆಯುತ್ತಿದೆ ಎಂದು ಅಭ್ಯರ್ಥಿಗಳು ಹೇಳಿದ್ದಾರೆ, ಆದರೂ ಎಚ್ಚರ ವಹಿಸಿಲ್ಲ.
ಜನವರಿ 10, 2022 ಪೊಲೀಸ್ ಇಲಾಖೆಯ ಜಾಲತಾಣದಲ್ಲಿ 545 ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಗೊಂಡಿತ್ತು. ಈ ಆಯ್ಕೆಪಟ್ಟಿ ಪ್ರಕಟಗೊಳ್ಳುವ ನಾಲ್ಕೈದು ದಿನ ಮುಂಚಿತವಾಗಿ ಮೊದಲ ರ್ಯಾಂಕ್ ಹಾಗೂ ಇತರೆ ಆಯ್ಕೆಯಾದ ಅಭ್ಯರ್ಥಿಗಳ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ಸೋರಿಕೆಯಾಗಿತ್ತು. ಇದನ್ನು ಪ್ರತಿಭಟಿಸಿ ಅಭ್ಯರ್ಥಿಗಳು ಟ್ವಿಟ್ಟರ್ ಮೂಲಕ ಎಡಿಜಿಪಿಗೆ ಮನವಿ ಸಲ್ಲಿಸಿದ್ದರು, ಆ ನಂತರ ಕಲ್ಯಾಣ ಕರ್ನಾಟಕ ಭಾಗಕ್ಕೆ ಅನ್ಯಾಯವಾಗಿದೆ ಎಂದು ದೂರು ಬಂದಿದ್ದವು ಎಂದು ಹೇಳಿದರು.

ಅಕ್ರಮದ ತನಿಖೆ ಮಾಡಿದ ಅಧಿಕಾರಿಗಳ ಹೆಸರು ಬಹಿರಂಗವಾಗಲಿ
ಜನವರಿ 27 ರಂದು ಕಲಬುರ್ಗಿಯಲ್ಲಿ ನಮ್ಮ ಪಕ್ಷದ ಪ್ರಿಯಾಂಕ್ ಖರ್ಗೆ ಅವರು ಪತ್ರಿಕಾಗೋಷ್ಠಿ ನಡೆಸಿ, ಸುಮಾರು 70 ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ, ಇದನ್ನು ಸರಿಪಡಿಸಿ ಎಂದು ಹೇಳಿದ್ದರು. ಫೆಬ್ರವರಿ 5 ರಂದು ಪ್ರಭು ಚೌಹಾಣ್ ಅವರು ಸರ್ಕಾರಕ್ಕೆ ಪತ್ರ ಬರೆದು ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದಿದ್ದರು. ಇದನ್ನು ಸರ್ಕಾರ ಅಲ್ಲಗಳೆಯಲಿ ನೋಡೋಣ. ನಂತರ ಫೆಬ್ರವರಿ 17 ರಂದು ನಮ್ಮ ಪಕ್ಷದ ಪರಿಷತ್ ಸದಸ್ಯರು ಪ್ರಶ್ನೆ ಕೇಳಿದ್ದರು, ಅದಕ್ಕೆ ಗೃಹ ಸಚಿವರು ʼರಾಜ್ಯದಲ್ಲಿ ನಡೆದಿರುವ ಪಿಎಸ್‌ಐ ಪರೀಕ್ಷೆಯಲ್ಲಿ ಯಾವುದೇ ಅಕ್ರಮದ ಆರೋಪ ಬಂದಿರುವುದಿಲ್ಲ ಎಂಬ ಉತ್ತರ ನೀಡಿದ್ದರು.
ನಂತರ ಯು.ಬಿ ವೆಂಕಟೇಶ್ ಅವರು ಮಾರ್ಚ್ 24 ರಂದು ನೇಮಕಾತಿ ಅಕ್ರಮ ಸಂಬಂಧ ಸರ್ಕಾರಕ್ಕೆ ಪ್ರಶ್ನೆ ಕೇಳಿದ್ದರು, ಅದಕ್ಕೆ ಗೃಹ ಸಚಿವರು ನೀಡಿದ ಉತ್ತರವೆಂದರೆ ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಕೆಲವು ಅಭ್ಯರ್ಥಿಗಳು ದೂರು ಸಲ್ಲಿಸಿರುತ್ತಾರೆ, ಆದರೆ ಸದರಿ ದೂರುಗಳನ್ನು ಹಿರಿಯ ಅಧಿಕಾರಿಗಳಿಂದ ಪರಿಶೀಲನೆ ನಡೆಸಿದ್ದು, ಅವರು ದೂರಿದಂತೆ ಯಾವ ಅಕ್ರಮಗಳು ನಡೆದಿರುವುದಿಲ್ಲ ಎಂದಿದ್ದಾರೆ. ಹಾಗಾದರೆ ದೂರುಗಳನ್ನು ಆಧರಿಸಿ ಪರಿಶೀಲನೆ ನಡೆಸಿರುವ ಅಧಿಕಾರಿಗಳು ಯಾರು ಎಂಬುದನ್ನು ಸರ್ಕಾರ ಬಹಿರಂಗವಾಗಿ ಹೇಳಲಿ.
ಈ ಎಲ್ಲಾ ಘಟನೆಗಳು ನಡೆದ ಮೇಲೆ ಜನರು, ಸಂಘಸಂಸ್ಥೆಗಳು, ಮಾಧ್ಯಮಗಳಲ್ಲಿ ಎಲ್ಲ ಕಡೆಯಿಂದ ಅನ್ಯಾಯ ನಡೆದಿರುವ ಬಗ್ಗೆ ಪ್ರತಿಭಟನೆ ನಡೆದು ಒತ್ತಡ ಜಾಸ್ತಿಯಾದ ಮೇಲೆ ಸಿಐಡಿ ಗೆ ತನಿಖೆ ಮಾಡಲು ನೀಡಲಾಯಿತು. ನಾವು ಸಿಐಡಿ ತನಿಖೆಗೆ ನೀಡಿ, ಎಡಿಜಿಪಿ ಯನ್ನೇ ಬಂಧಿಸಿದ್ದೀವಿ ಎಂದು ಹೇಳುವ ಸರ್ಕಾರ ಸಿಐಡಿ ತನಿಖೆಗೆ ವಹಿಸುವ ಮೊದಲು ಇಷ್ಟೆಲ್ಲ ನಡೆದಿತ್ತು ಎಂಬುದನ್ನು ಮರೆಯಬಾರದು.

ದಿವ್ಯಾ ಹಾಗರಗಿ ಈ ಹಗರಣದ ಕಿಂಗ್ ಪಿನ್
92 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. ದಿವ್ಯಾ ಹಾಗರಗಿ ಅವರ ಮಾಲೀಕತ್ವದ ಜ್ಞಾನ ಜ್ಯೋತಿ ವಿದ್ಯಾಸಂಸ್ಥೆಯು ಈ ಪರೀಕ್ಷಾ ಕೇಂದ್ರಗಳಲ್ಲಿ ಒಂದು. ಇಲ್ಲಿ ಏನೇನು ನಡೆದಿದೆ ಎಂದು ಎಲ್ಲರಿಗೂ ಗೊತ್ತಿದೆ, ಆದರೆ ಉಳಿದ ಕೇಂದ್ರಗಳಲ್ಲಿ ಏನೇನು ನಡೆದಿದೆ ಎಂದು ನಮಗೂ ಹೇಳಿ. ಈ ದಿವ್ಯಾ ಹಾಗರಗಿ ಅವರು ಕಲಬುರಗಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷರಾಗಿದ್ದವರು. ಅವರ ಮನೆಗೆ ಗೃಹ ಸಚಿವರು ಸಹ ಹೋಗಿದ್ದ ಫೋಟೋವನ್ನು ನಾವು, ನೀವೆಲ್ಲ ನೋಡಿದ್ದೇವೆ.
ಆ ನಂತರ ಆರ್,ಡಿ ಪಾಟೀಲ್ ಅವರ ಬಂಧನವೂ ಆಯಿತು. ಇವರ ಸಹೋದರ ಮಹಾಂತೇಶ್ ಪಾಟೀಲ್ ಅವರು ನಮ್ಮ ಪಕ್ಷದ ಬ್ಲಾಕ್ ಕಮಿಟಿ ಅಧ್ಯಕ್ಷನಾಗಿದ್ದದ್ದು ನಿಜ. 2019ರ ಚುನಾವಣೆಯಲ್ಲಿ ನಮ್ಮ ಪಕ್ಷ ಸೋತ ಮೇಲೆ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು, ಆದರೆ ಪಕ್ಷ ತೊರೆದು ಹೋಗಿಲ್ಲ. ಹೀಗೆ ಅಕ್ರಮ ಎಸಗಿದವರು ಯಾವ ಪಕ್ಷದವರೇ ಆಗಿರಲಿ ಅವರಿಗೆ ಸರಿಯಾದ ಶಿಕ್ಷೆ ಆಗಬೇಕು. ದಿವ್ಯಾ ಹಾಗರಗಿ ಅವರು ಈ ಹಗರಣದ ಕಿಂಗ್ ಪಿನ್.
ಗೃಹ ಇಲಾಖೆಯ ಜವಾಬ್ದಾರಿ ವಹಿಸಿಕೊಂಡಿರುವ ಮಂತ್ರಿಗಳು, ತಮ್ಮ ಇಲಾಖೆಗೆ ಬಗ್ಗೆ ದೂರುಗಳು ಬಂದಾಗ ಅದನ್ನು ಪರಿಶೀಲನೆ ಮಾಡಿದ್ದೇವೆ, ಅಂಥಾ ಯಾವ ಅಕ್ರಮಗಳು ನಡೆದಿಲ್ಲ ಎಂಬ ಹೇಳಿಕೆಯನ್ನು ಮಾರ್ಚ್ 24 ರಂದು ನೀಡಿದ್ದರು. ಅದಕ್ಕೂ ಮೊದಲು ಜನವರಿಯಿಂದ ಎಲ್ಲಾ ಪತ್ರಿಕೆಗಳಲ್ಲಿ ವರದಿ ಪ್ರಕಟವಾಗಿದೆ, ಫೆಬ್ರವರಿಯಲ್ಲಿ ಮುಖ್ಯಮಂತ್ರಿಗಳಿಗೆ ಪ್ರಭು ಚೌಹಾಣ್ ಅವರು ಪತ್ರ ಬರೆದಿದ್ದರು, ಇವುಗಳ ಜೊತೆಗೆ ನಿತ್ಯ ಸುದ್ದಿ ಮಾದ್ಯಮಗಳಲ್ಲಿ ಪ್ರಸಾರ ಆಗಿತ್ತು. ಆ ನಂತರ ನಮೋಶಿ, ರವಿ, ಮರಿತಿಬ್ಬೇಗೌಡ ಈ ಎಲ್ಲರಿಗೂ ಇದೇ ರೀತಿಯ ಗೊಂದಲಮಯವಾದ ಉತ್ತರ ನೀಡಿದ್ದಾರೆ. ಇದೆಲ್ಲವನ್ನು ನೋಡಿದರೆ ಸರ್ಕಾರ ಈ ಹಗರಣವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡಿತ್ತು ಎಂದು ಕಂಡುಬರುತ್ತಿದೆ.

ಈ ಹಗರಣ ಅತ್ಯಂತ ದೊಡ್ಡದಾಗಿದೆ
ಈ ತಿಂಗಳ 5ರಂದು ಕನಕಗಿರಿ ಶಾಸಕ ಬಸವರಾಜ ದಡೆಸೂಗೂರು ಅವರ ಆಡಿಯೋ ಮತ್ತು ವಿಡಿಯೋ ಲೀಕ್ ಆಗಿದೆ. ಅದರಲ್ಲಿ ಪರಸಪ್ಪ ಎಂಬ ನಿವೃತ್ತ ಕಾನ್ಸ್ ಟೆಬಲ್ ಅವರು ತನ್ನ ಮಗನ ಉದ್ಯೋಗಕ್ಕಾಗಿ ಈ ಶಾಸಕರಿಗೆ 15 ಲಕ್ಷ ನೀಡಿದ್ದೇನೆ ಎಂದಿದ್ದಾರೆ, ಅದನ್ನು ಶಾಸಕರು ಒಪ್ಪಿಕೊಂಡು, ತಾವು ಪಡೆದ ಹಣವನ್ನು ನಾನು ಸರ್ಕಾರಕ್ಕೆ ಕೊಟ್ಟಿದ್ದೇನೆ, ಸ್ವಲ್ಪ ಸಮಯ ಕೊಡು ಮತ್ತೆ ನಿಮ್ಮ ಹಣವನ್ನು ವಾಪಾಸು ಕೊಡುತ್ತೇನೆ ಎಂದಿದ್ದಾರೆ. ಪರಸಪ್ಪ ಅವರನ್ನು ಕರೆದು ಪೊಲೀಸರು ವಿಚಾರಣೆ ಮಾಡಲಿ. ಆಡಿಯೋದಲ್ಲಿರುವ ಧ್ವನಿ ನನ್ನದೇ ಎಂದು ಶಾಸಕರು ಒಪ್ಪಿಕೊಂಡಿದ್ದಾರೆ. ಇದಕ್ಕಿಂತ ಬೇರೆ ಸಾಕ್ಷಿ ಬೇಕಾ?
ಯತ್ನಾಳ್ ಅವರು ಮಾಜಿ ಮುಖ್ಯಮಂತ್ರಿಗಳ ಮಗ ಈ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿದ್ದಾರೆ, ಅವರನ್ನು ಕರೆದು ವಿಚಾರಣೆ ಮಾಡಿದ್ದಾರಾ? ನಮ್ಮ ಶಾಸಕ ಪ್ರಿಯಾಂಕ್ ಖರ್ಗೆ ಅವರು ಪತ್ರಿಕಾಗೋಷ್ಠಿ ಮಾಡಿದ ನಂತರ ಮೂರು ಬಾರಿ ಅವರಿಗೆ ವಿಚಾರಣೆಗೆ ಬರುವಂತೆ ನೋಟಿಸ್ ನೀಡಿದ್ದಾರೆ. ಈ ಮೂಲಕ ಪೊಲೀಸರು ನಮ್ಮ ಶಾಸಕ ಪ್ರಿಯಾಂಕ್ ಖರ್ಗೆ ಅವರನ್ನು ಹೆದರಿಸಿ, ಮತ್ತೆ ಈ ಹಗರಣದ ಬಗ್ಗೆ ಮಾತನಾಡದಂತೆ ತಡೆಯುವ ಪ್ರಯತ್ನ ಮಾಡಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಪ್ರಭು ಚೌಹಾಣ್ ಅವರು ಬರೆದಿರುವ ಪತ್ರದಲ್ಲಿ 371ಜೆ ನಿಯಮಗಳನ್ನು ಪಾಲನೆ ಮಾಡಿಲ್ಲ ಎಂದು ಹೇಳಿದ್ದಾರಲ್ವಾ, ಇದು ಕಾನೂನಿನ ಉಲ್ಲಂಘನೆ ಅಲ್ವಾ? ಅವರನ್ನು ಕರೆದು ವಿಚಾರಣೆ ನಡೆಸಿದ್ರಾ?
ಪ್ರಕರಣದಲ್ಲಿ ಭಾಗಿಯಾದ ಸುಮಾರು 22 ಜನ ಅಧಿಕಾರಿಗಳು ಸೇರಿದಂತೆ ಒಟ್ಟು 97 ಜನರ ಬಂಧನವಾಗಿದೆ. ಇಷ್ಟೊಂದು ದೊಡ್ಡ ಮಟ್ಟದ ಹಗರಣ ಆಗಬೇಕಾದರೆ ರಾಜಕಾರಣಿಗಳ ಕೈವಾಡ ಇಲ್ಲದೆ ಇರುತ್ತದೆಯೋ? ಲಾಯರ್ ಅಸೋಷಿಯೇಷನ್ ನ ರಂಗನಾಥ್ ಎಂಬುವವರು ಇದರಲ್ಲಿ ನಾಲ್ಕು ಜನ ಮಂತ್ರಿಗಳು ಷಾಮಿಲಾಗಿದ್ದಾರೆ ಎಂಬ ಹೇಳಿಕೆ ನೀಡಿದ್ದಾರೆ. ಆದರೆ ಈ ಪ್ರಕರಣದ ತನಿಖೆ ಕೇವಲ ಅಧಿಕಾರಿಗಳನ್ನು ಕೇಂದ್ರವಾಗಿರಿಸಿಕೊಂಡು ನಡೆಸಲಾಗಿದೆ, ರಾಜಕಾರಣಿಗಳನ್ನು ತನಿಖೆಯಿಂದ ಹೊರಗಿಡಲಾಗಿದೆ.
ಹೀಗಾಗಿ ಈ ಹಗರಣದ ಪೂರ್ಣ ಸತ್ಯ ಹೊರಬರಬೇಕೆಂದರೆ ಪ್ರಕರಣದ ನ್ಯಾಯಾಂಗ ತನಿಖೆಯಾಗಬೇಕು. ಈ ಹಗರಣ ಅತ್ಯಂತ ದೊಡ್ಡದಾಗಿದ್ದು ಇದರ ಹೊಣೆ ಹೊತ್ತು ಆರಗ ಜ್ಞಾನೇಂದ್ರ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡುವುದು ಒಳಿತು. ಇನ್ನುಮುಂದೆ ಇಂಥಾ ಹಗರಣಗಳು ನಡೆಯದೆ, ನ್ಯಾಯಯುತವಾದ ನೇಮಕಾತಿ ನಡೆದು, ಪ್ರಾಮಾಣಿಕರಿಗೆ ಉದ್ಯೋಗ ಸಿಗಲಿ ಎಂದು ಆಶಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು












Click it and Unblock the Notifications