Breaking: ಪಿಎಸ್‌ಐ ನೇಮಕಾತಿ ಹಗರಣದ ಆರೋಪಿ ದಿವ್ಯಾ ಹಾಗರಗಿ ಬಂಧನ
ಬೆಂಗಳೂರು, ಏಪ್ರಿಲ್ 29: ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಪ್ರಮುಖ ಆರೋಪಿ ಆಗಿರುವ ದಿವ್ಯಾ ಹಾಗರಗಿ ಅನ್ನು ಮಹಾರಾಷ್ಟ್ರದ ಪುಣೆಯಲ್ಲಿ ಸಿಐಡಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಿಐಡಿ ಎಸ್ಪಿ ರಾಘವೇಂದ್ರ ಹೆಗಡೆ ನೇತೃತ್ವದ ತಂಡವು ದಿವ್ಯಾ ಹಾಗರಗಿ ಅನ್ನು ಬಂಧಿಸಿದ್ದು, ಶುಕ್ರವಾರ 10 ಗಂಟೆ ಸುಮಾರಿಗೆ ಪುಣೆಯಿಂದ ಕಲಬುರಗಿಗೆ ಅವರನ್ನು ಕರೆದುಕೊಂಡು ಬರಲಾಗುವುದು ಎಂದು ಸಿಐಡಿ ಪೊಲೀಸ್ ಮೂಲಗಳು ತಿಳಿಸಿವೆ.
ಕಲಬುರಗಿ ಬಿಜೆಪಿ ನಾಯಕರಿಗೆ ದಿವ್ಯಾ ಹಾಗರಗಿಯವರ ಜ್ಞಾನಜ್ಯೋತಿ ಶಾಲೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ತನಿಖೆ ವೇಳೆ ಗೊತ್ತಾಗಿತ್ತು. ಅಂದಿನಿಂದ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.

ಕಳೆದ 18 ದಿನಗಳಿಂದ ದಿವ್ಯಾ ಹಾಗರಗಿ ನಾಪತ್ತೆ
ಕಲಬುರಗಿ ಜ್ಞಾನಜ್ಯೋತಿ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ಪಿಎಸ್ಐ ಪರೀಕ್ಷೆ ವೇಳೆ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿತ್ತು. ಈ ಸಂಬಂಧ ಆರೋಪಿ ದಿವ್ಯಾ ಹಾಗರಗಿ ಮನೆ ಮೇಲೆ ಸಿಐಡಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದರು. ತನಿಖೆಗೆ ಅಸಹಕಾರ ತೋರಿದ ಹಿನ್ನೆಲೆ ರಾಜೇಶ್ ಹಾಗರಗಿ ಅನ್ನು ಬಂಧಿಸಿದ್ದರು. ಆದರೆ ಕಳೆದ 18 ದಿನಗಳಿಂದ ದಿವ್ಯಾ ಹಾಗರಗಿ ಮಾತ್ರ ಪೊಲೀಸರಿಂದ ತಪ್ಪಿಸಿಕೊಂಡಿದ್ದರು.
ಕಳೆದ 23ರಂದು ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಕಿಂಗ್ ಪಿನ್ ಆರ್ ಡಿ ಪಾಟೀಲ್ ಅನ್ನು ಸಿಐಡಿ ಪೊಲೀಸರು ಬಂಧಿಸಿದ್ದರು. ಸಹೋದರ ಮಹಾಂತೇಶ್ ಪಾಟೀಲ್ ಅನ್ನು ಪೊಲೀಸರು ಬಂಧಿಸಿದ್ದರು. ಈತನಿಗೆ ಕಾಲ್ ಮಾಡಿದ ಆರ್ ಡಿ ಪಾಟೀಲ್ ಮೊಬೈಲ್ ಲೋಕೇಶನ್ ಅನ್ನು ಸಿಐಡಿ ಅಧಿಕಾರಿಗಳು ಪತ್ತೆ ಮಾಡಿದ್ದರು. ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಆರ್ ಡಿ ಪಾಟೀಲ್ ಅನ್ನು ಬಂಧಿಸಲಾಗಿತ್ತು.

ಕಲಬುರಗಿಯಲ್ಲಿ ದಿವ್ಯಾ ಹಾಗರಗಿ ಪ್ರಭಾವಿ ರಾಜಕಾರಣಿ
ಕಲಬುರಗಿ ಜಿಲ್ಲೆಯಲ್ಲಿ ಪ್ರಭಾವಿ ರಾಜಕಾರಣಿಯಾಗಿ ಗುರುತಿಸಿಕೊಂಡಿರುವ ದಿವ್ಯಾ ಹಾಗರಗಿ, ದಿಶಾ ಕಮಿಟಿ ಸದಸ್ಯೆಯಾಗಿದ್ದು, ರಾಜ್ಯ ನರ್ಸಿಂಗ್ ಬೋರ್ಡ್ ಸದಸ್ಯರಾಗಿಯೂ ಇದ್ದಾರೆ. ಈ ಮೊದಲು ಕಲಬುರಗಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆರೂ ಆಗಿದ್ದರು. ಕಳೆದ ಫೆಬ್ರವರಿ ತಿಂಗಳಿನಲ್ಲಿ ಸ್ವತಃ ಗೃಹ ಸಚಿವ ಅರಗ ಜ್ಞಾನೇಂದ್ರರವರ ದಿವ್ಯಾ ಹಾಗರಗಿ ನಿವಾಸಕ್ಕೆ ಭೇಟಿ ನೀಡಿ, ಆತಿಥ್ಯ ಸ್ವೀಕರಿಸಿದ್ದರು.

ಏನಿದು ದಿವ್ಯಾ ಹಾಗರಗಿ ಮೇಲಿರುವ ಆರೋಪ?
ಪಿಎಸ್ಐ ನೇಮಕಾತಿ ಪರೀಕ್ಷೆ ಸಂದರ್ಭದಲ್ಲಿ ಶಾಲಾ ಸಿಬ್ಬಂದಿ ಮೇಲೆ ದಿವ್ಯಾ ಹಾಗರಗಿ ಒತ್ತಡ ಹೇರಿದ್ದರು ಎಂದು ಆರೋಪಿಸಲಾಗಿದೆ. ಪರೀಕ್ಷೆಗಳು ಮುಗಿದ ನಂತರ ಓಎಂಆರ್ ಶೀಟ್ ನಲ್ಲಿ ಖಾಲಿ ಬಿಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಸಿದ್ದಾರೆ ಎಂದು ದೂಷಿಸಲಾಗುತ್ತಿದೆ. ಇದೇ ಕೇಂದ್ರದಲ್ಲಿ ಪರೀಕ್ಷೆ ಬರೆದಿರುವ 10 ಮಂದಿ ಈಗಾಗಲೇ ಪಿಎಸ್ಐ ಆಗಿ ನೇಮಕಗೊಂಡಿದ್ದು, ಹತ್ತೂ ಮಂದಿ ಅಕ್ರಮವಾಗಿ ಪರೀಕ್ಷೆಯಲ್ಲಿ ಪಾಸ್ ಆಗಿರುವ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆ ಈಗಾಗಲೇ ನಾಲ್ವರು ಅಭ್ಯರ್ಥಿಗಳು ಹಾಗೂ ಮೂವರು ಕೊಠಡಿ ಮೇಲ್ವಿಚಾರಕರನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.

ಸಿಬಿಐಗೆ ಪ್ರಕರಣವನ್ನು ವಹಿಸಿದ ಗೃಹ ಇಲಾಖೆ
ಕಳೆದ 2021ರ ಆಗಸ್ಟ್ 3ರಂದು ರಾಜ್ಯಾದ್ಯಂತ ಪಿಎಸ್ಐ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲಾಗಿತ್ತು. 2022 ಜನವರಿ 19ರಂದು ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಬಿಡುಗಡೆ ಮಾಡಲಾಗಿತ್ತು. ಆದರೆ ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಆರೋಪ ಕೇಳಿ ಬಂದಿತ್ತು. ಅಭ್ಯರ್ಥಿಗಳು ದೂರು ಸಲ್ಲಿಸಿದ ಹಿನ್ನೆಲೆ ಗೃಹ ಇಲಾಖೆಯು ಪ್ರಕರಣವನ್ನು ಸಿಬಿಐಗೆ ವಹಿಸಿತ್ತು.












Click it and Unblock the Notifications