PSI Recruitment Scam : ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಕಲಬುರಗಿ ಬಿಜೆಪಿ ಮುಖಂಡೆ ಶಾಮೀಲು?
ಬೆಂಗಳೂರು, ಏ. 17: 545 ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಕಲಬುರಗಿಯ ಜಿಲ್ಲಾ ಬಿಜೆಪಿ ಮುಖಂಡರು, ಜ್ಞಾನ ಜ್ಯೋತಿ ಇಂಗ್ಲೀಷ್ ಮೀಡಿಯಂ ಶಾಲೆಯ ಮಾಲಕಿ ದಿವ್ಯಾ ಹಾಗರಗಿ ಮನೆ ಮೇಲೆ ಸಿಐಡಿ ಪೊಲೀಸರು ದಾಳಿ ನಡೆಸಿದ್ದಾರೆ.
ಪರೀಕ್ಷಾ ಅಕ್ರಮದಲ್ಲಿ ದಿವ್ಯಾ ಹಾಗರಗಿ ಶಾಮೀಲಾಗಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ. ಜೇವರ್ಗಿ ರಸ್ತೆಯಲ್ಲಿರುವ ದಿವ್ಯಾ ಹಾಗರಗಿ ಅವರ ಮನೆ ಮೇಲೆ ಸಿಐಡಿ ಡಿವೈಎಸ್ಪಿ ಶಂಕರೇಗೌಡ ನೇತೃತ್ವದ ತಂಡ ದಾಳಿ ಮಾಡಿ ದಾಖಲೆಗಳನ್ನು ವಶಕ್ಕೆ ಪಡೆದಿದೆ. ಪಿಎಸ್ಐ ನೇಮಕಾತಿ ಅಕ್ರಮ ಸಂಬಂಧ ಮೊದಲ ಆರೋಪಿ ಬಂಧನಕ್ಕೆ ಒಳಗಾದ ದಿನದಿಂದಲೂ ದಿವ್ಯಾ ಅವರು ನಾಪತ್ತೆಯಾಗಿದ್ದಾರೆ. ದಿವ್ಯಾ ಹಾಗರಗಿ ಅವರ ಪತಿ ರಾಜೇಶ್ ಅವರನ್ನು ಸಿಐಡಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಊರಿಗೆ ಹೋಗಿದ್ದು ಕೆಲವೇ ದಿನದಲ್ಲಿ ಬರುವುದಾಗಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.
ವಿಚಾರಣೆ ವೇಳೆ ಸ್ಫೋಟಕ ಮಾಹಿತಿ:
ಕಲಬುರ್ಗಿಯ ಜ್ಞಾನ ಜ್ಯೋತಿ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ನಡೆದ ಪಿಎಸ್ಐ ನೇಮಕಾತಿ ಪರೀಕ್ಷೆ ವೇಳೆ ಕೆಲವು ಅಭ್ಯರ್ಥಿಗಳು ಉತ್ತರ ಪತ್ರಿಕೆಯನ್ನು ಕೊಠಡಿ ಪರಿವೀಕ್ಷಕರಿಗೆ ನೀಡಿ ಅಕ್ರಮ ಎಸಗಿರುವುದು ಸಿಐಡಿ ಪೊಲೀಸರು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿತ್ತು.

ಕಳೆದ ಶನಿವಾರ ಜ್ಞಾನ ಜ್ಯೋತಿ ಇಂಗ್ಲೀಷ್ ಮೀಡಿಯಂ ಶಾಲೆಯ ಸಿಬ್ಬಂದಿ ಸುಮಾ, ಸುಮಿತ್ರಾ, ಸಿದ್ದಮ್ಮ ಅವರನ್ನು ಬಂಧಿಸಲಾಗಿದೆ. ಬಂಧಿತರು ವಿಚಾರಣೆ ವೇಳೆ ನೀಡಿದ ಮಾಹಿತಿಯಲ್ಲಿ ಶಾಲಾ ಮಾಲಕಿ ಆಗಿರುವ ದಿವ್ಯಾ ಹಾಗರಗಿ ಅವರ ಮನೆ ಮೇಲೆ ದಾಳಿ ನಡೆದಿದೆ.

ಶಾಲಾ ಮಾಲಕಿ ದಿವ್ಯಾ ಹಾಗರಗಿ ಅವರ ಗಮನಕ್ಕೆ ತಿಳಿದು ಶಾಲೆಯಲ್ಲಿ ಅಕ್ರಮಕ್ಕೆ ನಾಂದಿ ಹಾಡಲಾಗಿತ್ತೇ? ಈ ವಿಚಾರವನ್ನು ಬಂಧಿತ ಸಿಬ್ಬಂದಿ ವಿಚಾರಣೆ ವೇಳೆ ತಿಳಿಸಿದ ಹಿನ್ನೆಲೆಯಲ್ಲಿ ಸಿಐಡಿ ಪೊಲೀಸರು ಸಾಕ್ಷಿ ಸಂಗ್ರಹ ಮಾಡುವ ಸಲುವಾಗಿ ದಾಳಿ ಮಾಡಿದರೆ? ಅಥವಾ ಬಿಜೆಪಿ ಪಕ್ಷದ ಮುಖಂಡೆಯಾಗಿ ಗುರುತಿಸಿಕೊಂಡಿರುವ ದಿವ್ಯಾ ಅವರು ಬಂಧಿತ ಅಭ್ಯರ್ಥಿಗಳ ಜತೆ ಮೊಬೈಲ್ ಸಂಪರ್ಕ ಹೊಂದಿದ್ದರೇ ಎಂಬ ಅನುಮಾನಗಳು ಕಾಡಿವೆ.

Recommended Video
ಆದರೆ, ದಿವ್ಯಾ ಹಾಗರಗಿ ಪಾತ್ರದ ಬಗ್ಗೆ ಸದ್ಯಕ್ಕೆ ಸಿಐಡಿ ಪೊಲೀಸರು ಯಾವುದೇ ಬಾಯಿ ಬಿಟ್ಟಿಲ್ಲ. ಆದ್ರೆ, ಅವರ ಮನೆ ಮೇಲೆ ದಾಳಿ ನಡೆಸಿರುವುದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದ್ದು, ಆಕ್ರಮದ ಜಾಲ ದೊಟ್ಟ ಮಟ್ಟದಲ್ಲಿ ವಿಸ್ತಾರಗೊಂಡಿದೆ ಎಂಬುದಕ್ಕೆ ಸಿಐಡಿ ಬಂಧಿಸಿರುವ ಆರೋಪಿಗಳೇ ಸಾಕ್ಷಿ.












Click it and Unblock the Notifications