ಪಿಎಸ್ಐ ನೇಮಕಾತಿ ಅಕ್ರಮ: ಉಪ್ಪು ತಿಂದವರ ಹೆಸರು 'ಪೌಲ್' ಡೈರಿಯಲ್ಲಿ ಉಲ್ಲೇಖ!
ಬೆಂಗಳೂರು, ಜು. 10: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಹಿರಿಯ ಐಪಿಎಸ್ ಅಧಿಕಾರಿ ಅಮೃತ್ ಪೌಲ್ ಅವರ ಡೈರಿ ಅಕ್ರಮದಲ್ಲಿ ಶಾಮೀಲಾಗಿದ್ದಾರೆ ಎನ್ನಲಾದ ಪ್ರಭಾವಿಗಳ ಎದೆಯಲ್ಲಿ ನಡುಕ ಹುಟ್ಟಿಸಿದೆ.
ಅಮೃತ್ ಪೌಲ್ ಅವರಿಗೆ ಸೇರಿದ ಮನೆ ಹಾಗೂ ಚಿಕ್ಕಬಳ್ಳಾಪುರದಲ್ಲಿರುವ ಹೊಸ ಹುಡ್ಯ ಫಾರ್ಮ್ ಹೌಸ್ ಮೇಲೆ ದಾಳಿ ಮಾಡಿದ್ದ ಸಿಐಡಿ ಪೊಲೀಸರು ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಈ ವೇಳೆ ಸಿಕ್ಕಿರುವ ಪೌಲ್ ಡೈರಿ ಪಿಎಸ್ಐ ಅಕ್ರಮಕ್ಕೆ ಹೊಸ ತಿರುವು ನೀಡಲಿದೆ ಎಂದು ಹೇಳಲಾಗುತ್ತಿದೆ.
ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿಯಾಗಿದ್ದ ಅಮೃತ್ ಪೌಲ್, ಪಿಎಸ್ಐ ನೇಮಕಾತಿ ಪ್ರಕ್ರಿಯೆ ಅಂಶ, ಪಿಎಸ್ಐ ನೇಮಕಾತಿ ವಿಚಾರವಾಗಿ ಸಂಪರ್ಕಿಸಿರುವ ರಾಜಕೀಯ ಪಕ್ಷಗಳ ಮುಖಂಡರು, ಐಪಿಎಸ್ ಅಧಿಕಾರಿಗಳು, ಡಿವೈಎಸ್ಪಿಗಳು ಸೇರಿದಂತೆ ಪ್ರಮುಖರ ಹೆಸರನ್ನು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಈ ಪ್ರಭಾವಿಗಳ ಹೆಸರು ಅವರು ಸೂಚಿಸಿರುವ ಅಭ್ಯರ್ಥಿಗಳ ಹೆಸರನ್ನು ಪೌಲ್ ಡೈರಿಯಲ್ಲಿ ಬರೆದಿಟ್ಟಿದ್ದು, ಇದೀಗ ಪ್ರಭಾವಿ ಡೀಲ್ ಕೋರರಿಗೆ ಸಂಕಷ್ಟ ಎದುರಾಗಿದೆ.

ಪಿಎಸ್ಐ ನೇಮಕಾತಿ ಅಕ್ರಮ ಬಯಲಾಗುತ್ತಿದ್ದಂತೆ, ಅಮೃತ್ ಪೌಲ್ ಅವರನ್ನು ಆಂತರಿಕ ಭದ್ರತಾ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿತ್ತು. ಇದಕ್ಕೂ ಮೊದಲೇ ಪೌಲ್ ದಾಖಲೆಗಳನ್ನು ಚಿಕ್ಕಬಳ್ಳಾಪುರದಲ್ಲಿರುವ ಫಾರ್ಮ್ ಹೌಸ್‌ಗೆ ವರ್ಗಾವಣೆ ಮಾಡಿದ್ದರು. ಇದೀಗ ಸಿಐಡಿ ಪೊಲೀಸರು ಅದೇ ಫಾರ್ಮ್ ಹೌಸ್ ಮೇಲೆ ದಾಳಿ ಮಾಡಿದಾಗ, ಕೆಲವು ದಾಖೆಲಗಳು ಹಾಗೂ ಡೈರಿ ಸಿಕ್ಕಿದ್ದು, ಅದರ ಸತ್ಯಾಸತ್ಯತೆ ಪರಿಶೀಲನೆಗೆ ಸಿಐಡಿ ಅಧಿಕಾರಿಗಳು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ.
ಪಿಎಸ್ಐ ಹುದ್ದೆ ಡೀಲಿಂಗ್, ಹಣಕಾಸಿನ ವಹಿವಾಟು ಸಂಬಂಧ ಪೌಲ್, ಪ್ರಭಾವಿಗಳ ಹೆಸರು, ಅಭ್ಯರ್ಥಿಗಳ ಹೆಸರುಗಳನ್ನು ಡೈರಿಯಲ್ಲಿ ಬರೆದಿಟ್ಟಿದ್ದಾರೆ. ಯಾರು ಯಾರನ್ನು ಶಿಫಾರಸು ಮಾಡಿದ್ದರು ಎಂಬುದರ ಬಗ್ಗೆ ಪೌಲ್ ಸಮಗ್ರ ವಿವರಗಳನ್ನು ಡೈರಿಯಲ್ಲಿ ಉಲ್ಲೇಖಿಸಿದ್ದಾರೆ ಎಂದು ಹೇಳಲಾಗುತ್ತಿದ್ದು, ಪಿಎಸ್ಐ ಅಕ್ರಮ ಬಿಜೆಪಿ ಸರ್ಕಾರದ ಪಾಲಿಗೆ ಬಿಸಿ ತುಪ್ಪವಾಗುವ ಲಕ್ಷಣ ಗೋಚರಿಸುತ್ತಿದೆ.

ಪೌಲ್ ಬಂಧನ: ಪಿಎಸ್ಐ ನೇಮಕಾತಿ ಪರೀಕ್ಷಾ ಅಕ್ರಮದಲ್ಲಿ ಮೂರು ಬಾರಿ ವಿಚಾರಣೆ ಎದುರಿಸಿದ್ದ ಹಿರಿಯ ಐಪಿಎಸ್ ಅಧಿಕಾರಿ ಅಮೃತ್ ಪೌಲ್‌ರನ್ನು ಸಿಐಡಿ ಪೊಲೀಸರು ಬಂಧಿಸಿದ್ದರು. ಸ್ಟ್ರಾಂಗ್ ರೂಮ್ ವಿದ್ಯುತ್ ದೀಪ ಆರಿಸಿ ಪರೀಕ್ಷಾ ಅಕ್ರಮಕ್ಕೆ ನಾಂದಿ ಹಾಡಿದ್ದ ಪೌಲ್, ಡೀಲ್ ಕೋರ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದರು. ಇದು ಸಿಐಡಿ ತನಿಖೆಯಲ್ಲಿ ಬಹಿರಂಗವಾಗುತ್ತಿದ್ದಂತೆ, ಪೌಲ್ ಅವರನ್ನು ಸಿಐಡಿ ಪೊಲೀಸರು ಬಂಧಿಸಿ ಕಸ್ಟಡಿಗೆ ಪಡೆದು ವಿಚಾರಣೆಗೆ ಒಳಪಡಿಸಿದ್ದರು. ಇದರ ಬೆನ್ನಲ್ಲೇ ಪೌಲ್ ಮನೆ ಹಾಗೂ ಫಾರ್ಮ್ ಹೌಸ್ ಮೇಲೆ ದಾಳಿ ನಡೆದಿತ್ತು. ಇದೀಗ ಪೌಲ್ ಅವರ ಡೈರಿ ಹಲವರ ಪಾಲಿಗೆ ಕಂಟಕವಾಗಲಿದೆ ಎಂದು ಹೇಳಲಾಗುತ್ತಿದೆ.












Click it and Unblock the Notifications