ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಾಕ್ಷಿ ನೀಡುವಂತೆ ಪ್ರಿಯಾಂಕ ಖರ್ಗೆಗೆ ಸಿಐಡಿ ಬುಲಾವ್
ಬೆಂಗಳೂರು, ಏ. 24: ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಚಿತ್ತಾಪುರ ಶಾಸಕ ಪ್ರಿಯಾಂಕ ಖರ್ಗೆ ಅವರಿಗೆ ಸಿಐಡಿ ಪೊಲೀಸರು ನೋಟಿಸ್ ನೀಡಿದ್ದಾರೆ. ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಸಾಕ್ಷಿ ಒದಗಿಸುವಂತೆ ನೋಟಿಸ್‌ನಲ್ಲಿ ಸೂಚಿಸಿದ್ದು, ಏ. 25 ರಂದು ಬೆಳಗ್ಗೆ ಪ್ರಿಯಾಂಕ ಖರ್ಗೆ ಸಿಐಡಿ ಪೊಲೀಸರ ಮುಂದೆ ಹಾಜರಾಗಬೇಕಿದೆ.
545 ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ಕಲುಬುರಗಿಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದರು. ಈ ಅಕ್ರಮದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ನ ಇಬ್ಬರು ಜಿಲ್ಲಾ ಮಟ್ಟದ ನಾಯಕರು ಶಾಮೀಲಾಗಿರುವುದು ಸಿಐಡಿ ತನಿಖೆಯಿಂದಲೇ ಬೆಳಕಿಗೆ ಬಂದಿತ್ತು. ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಿಂತೆ ಸುದ್ದಿಗೋಷ್ಠಿ ಕರೆದಿದ್ದ ಶಾಸಕ ಪ್ರಿಯಾಂಕ ಖರ್ಗೆ, ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ನನ್ನ ಬಳಿ ಆಡಿಯೋ ಹಾಗೂ ಸಾಕ್ಷ್ಯಾಧಾರಗಳಿವೆ. ಪಿಎಸ್ಐ ನೇಮಕಾತಿಯಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಆರೋಪಿಸಿದ್ದರು.
ಪ್ರಿಯಾಂಕ ಖರ್ಗೆ ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಸಿಐಡಿ ಪೊಲೀಸರು, ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಆರ್‌ಪಿಸಿ ಕಲಂ 90/160 ಅಡಿ ಪೊಲೀಸ್ ನೋಟಿಸ್ ನೀಡಿದ್ದಾರೆ. ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ತಮ್ಮ ಬಳಿ ಸಾಕ್ಷ್ಯಾಧಾರಗಳು ಇರುವುದಾಗಿ ಮಾಧ್ಯಮಗಳಿಗೆ ಹೇಳಿಕೆ ನೀಡಿರುತ್ತೀರಿ. ಈ ಪ್ರಕರಣ ಸೂಕ್ಷ್ಮ ವಾಗಿರುವುದರಿಂದ ತಮ್ಮ ಬಳಿಯಿರುವ ಸಾಕ್ಷ್ಯಾಧಾರಗಳು ಹಾಗೂ ದಾಖಲೆಗಳನ್ನು ಪರಿಶೀಲಿಸಿ ತನಿಖೆ ಕೈಗೊಳ್ಳುವುದು ಅನಿವಾರ್ಯವಾಗಿದೆ.

ಹೀಗಾಗಿ ಸದರಿ ದಾಖಲೆಗಳನ್ನು ಸಂಗ್ರಹಿಸಲು ತನಿಖಾಧಿಕಾರಿಗಳು ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಬಳಿಯಿರುವ ಸಾಕ್ಷ್ಯಾಧಾರಗಳನ್ನು ಹಾಗೂ ದಾಖಲೆಗಳನ್ನು ಏ. 25 ರಂದು ಸಿಐಡಿ ಕಚೇರಿಯಲ್ಲಿರುವ ಸಹಾಯಕ ತನಿಖಾಧಿಕಾರಿಗಳ ಸಮಕ್ಷಮ ಸಲ್ಲಿಸುವಂತೆ ಸೂಚಿಸಿದೆ ಎಂದು ಸಹಾಯಕ ತನಿಖಾಧಿಕಾರಿ ಪಿ.ನರಸಿಂಹಮೂರ್ತಿ ನೋಟಿಸ್‌ನಲ್ಲಿ ಉಲ್ಲೇಖಿಸಿದ್ದಾರೆ.

ಸಿಐಡಿ ನೋಟಿಸ್ ನೀಡಿರುವ ಬಗ್ಗೆ ಶಾಸಕ ಪ್ರಿಯಾಂಕ ಖರ್ಗೆ ಕೂಡ ಪ್ರಸ್ತಾಪಿಸಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಸಿಐಡಿ ಪೊಲೀಸರು ನೋಟಿಸ್ ನೀಡಿದ್ದು, ನನ್ನ ಬಳಿಯಿರುವ ಸಾಕ್ಷ್ಯಾಧಾರಗಳನ್ನು ಒದಗಿಸುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.












Click it and Unblock the Notifications