ಪಿಎಸ್ಐ ನೇಮಕಾತಿ ಅಕ್ರಮ: ಪರೀಕ್ಷಾ ಅಕ್ರಮದಲ್ಲಿ ಪೊಲೀಸ್ ಅಧಿಕಾರಿಗಳ ಶಾಮೀಲು
ಬೆಂಗಳೂರು, ಮೇ.04: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣ ಕೆಲ ಪೊಲೀಸ್ ಅಧಿಕಾರಿಗಳಿಗೂ ಬಂಧನದ ಭೀತಿ ಸೃಷ್ಟಿಸಿದೆ. ಪಿಎಸ್ಐ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯ ನೇಮಕಾತಿ ವಿಭಾಗದದಲ್ಲಿ ಜೀವಮಾನ ಕಳೆದಿದ್ದ ಎಸಿಪಿಯನ್ನು ಎತ್ತಂಗಡಿ ಮಾಡಲಾಗಿದೆ.
ಇನ್ನು ಕಲಬುರಗಿ ಜ್ಞಾನ ಜ್ಯೋತಿ ಶಾಲೆಯಲ್ಲಿ ನಡೆದಿರುವ ಪರೀಕ್ಷಾ ಅಕ್ರಮಕ್ಕೆ ಸಾಥ್ ನೀಡಿದ ಆರೋಪದಡಿ ಇಬ್ಬರು ಡಿವೈಎಸ್ಪಿ ಹಾಗೂ ಪೊಲೀಸ್ ಇನ್ ಸ್ಪೆಕ್ಟರ್ ಗೆ ಸಿಐಡಿ ಪೊಲೀಸರು ನೋಟಿಸ್ ನೀಡಿದ್ದಾರೆ.
ಪೊಲೀಸ್ ಇಲಾಖೆಯ ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತಕುಮಾರ್ ಪೊಲೀಸ್ ಪೇದೆಯಾಗಿ ಇಲಾಖೆಗೆ ಸೇರಿದ್ದರು. ಪ್ರಭಾವ ಭೀರಿ ನೇಮಕಾತಿ ವಿಭಾಗದಲ್ಲಿ ಕೆಲಸ ಮಾಡುತ್ತಲೇ ಪಿಎಸ್ಐ ಆಗಿ ಆಯ್ಕೆಯಾಗಿದ್ದರು. ಆ ಬಳಿಕ ಇನ್‌ಸ್ಪೆಕ್ಟರ್ ಆಗಿ ಬಡ್ತಿ ಪಡೆದಿದ್ದು, ಆಂತರಿಕ ಭದ್ರತಾ ವಿಭಾಗದಲ್ಲಿ ಕೆಲ ವರ್ಷ ಸೇವೆ ಸಲ್ಲಿಸಿದ್ದಾರೆ. ಇದಾದ ಬಳಿಕ ಡಿವೈಎಸ್ಪಿಯಾಗಿ ಬಡ್ತಿ ಪಡೆದಿದ್ದು, ಪುನಃ ನೇಮಕಾತಿ ವಿಭಾಗದಲ್ಲಿಯೇ ಕಾರ್ಯ ನಿರ್ವಹಿಸಿದ್ದಾರೆ. ಇವರನ್ನು ಇದೀಗ ಎತ್ತಂಗಡಿ ಮಾಡಲಾಗಿದ್ದು, ಪ್ರಾಥಮಿಕ ಹಂತದಲ್ಲಿ ಸಿಐಡಿ ಕಚೇರಿಯಿಂದ ಹೊರ ಹಾಕಲಾಗಿದೆ. ಪಿಎಸ್ಐ ನೇಮಕಾತಿ ಅಕ್ರಮ ಸಂಬಂಧ ಇವರನ್ನು ಸಿಐಡಿ ಪೊಲೀಸರು ವಿಚಾರಣೆಗೆ ಒಳಪಡಿಸಲು ಮುಂದಾಗಿದ್ದಾರೆ.

ಕಲಬುರಗಿಯಲ್ಲಿ ಮೂವರಿಗೆ ನೋಟಿಸ್:
ಕಲಬುರಗಿಯ ಜ್ಞಾನ ಜ್ಯೋತಿ ಇಂಗ್ಲಿಷ್ ಶಾಲೆಯಲ್ಲಿ ನಡೆದ ಪರೀಕ್ಷೆಗೆ ಸಂಬಂಧಸಿದಂತೆ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸ್ ಅಧಿಕಾರಿಗಳ ನಾಟಕೀಯ ನಡೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಪಿಎಸ್ಐ ಪರೀಕ್ಷೆಯಲ್ಲಿ ಭಾರೀ ಆಕ್ರಮ ನಡೆದಿರುವ ಜ್ಞಾನ ಜ್ಯೋತಿ ಶಾಲೆಯ ಉಸ್ತುವಾರಿಗೆ ನಿಯೋಜನೆಗೊಂಡಿದ್ದ ಡಿವೈಎಸ್ಪಿ ಪರೀಕ್ಷೆ ದಿನ ಸಂಬಂಧಿಕರು ತೀರಿಕೊಂಡ ನೆಪದಲ್ಲಿ ವಾಪಸು ತೆರಳಿದ್ದಾರೆ.
ನಿವೃತ್ತ ಡಿವೈಎಸ್ಪಿಯೊಬ್ಬರು ನಿಯೋಜನೆಗೊಂಡಿದ್ದು, ಅವರು ಯಾವುದೇ ಭದ್ರತಾ ಕ್ರಮಗಳು ಕೈಗೊಂಡಿಲ್ಲ. ಇದಲ್ಲದೇ ಪೊಲೀಸ್ ಇನ್‌ಸ್ಪೆಕ್ಟರ್ ಸಹ ಪರೀಕ್ಷೆ ಪಾರದರ್ಶಕವಾಗಿ ನಡೆಯುವಂತೆ ಕ್ರಮ ಜರುಗಿಸದೇ ಇರುವುದು ಸಿಐಡಿ ತನಿಖೆಯಲ್ಲಿ ಗೊತ್ತಾಗಿದೆ.

ಜ್ಞಾನಜ್ಯೋತಿ ಇಂಗ್ಲಿಷ್ ಶಾಲೆಯಲ್ಲಿ ಪಿಎಸ್ಐ ನೇಮಕಾತಿ ಪರೀಕ್ಷೆ ಸಂಬಂಧ ಉತ್ತರ ಪತ್ರಿಕೆಗಳನ್ನು ಅರ್ಧ ತಾಸು ತಡವಾಗಿ ತಲುಪಿಸಲಾಗಿದೆ. ಪರೀಕ್ಷೆ ಮುಗಿದ ಅರ್ಧ ತಾಸಿನಲ್ಲಿ ಉತ್ತರ ಪತ್ರಿಕೆಗಳನ್ನು ಸಂಬಂಧಪಟ್ಟ ಅಧಿಕಾರಿಗೆ ತಲುಪಿಸಬೇಕಿತ್ತು. ಆದರೆ, ಜ್ಞಾನ ಜ್ಯೋತಿ ಇಂಗ್ಲಿಷ್ ಶಾಲೆಯಲ್ಲಿ ನಡೆದ ಪರೀಕ್ಷೆ ಸಂಬಂಧ ಅರ್ಧ ತಾಸು ತಡವಾಗಿ ಉತ್ತರ ಪತ್ರಿಕೆಗಳನ್ನು ನೀಡಲಾಗಿದೆ. ಈ ಅವಧಿಯಲ್ಲಿಯೇ ಹಣ ಕೊಟ್ಟ ಅಭ್ಯರ್ಥಿಗಳ ಉತ್ತರ ಪತ್ರಿಕೆಗಳಲ್ಲಿ ಖಾಲಿ ಬಿಟ್ಟಿದ್ದ ಪ್ರಶ್ನೆಗಳಿಗೆ ಉತ್ತರಗಳನ್ನು ಪರೀಕ್ಷಾ ಮೇಲ್ವಿಚಾರಕರೇ ತಿದ್ದಿದ್ದಾರೆ.
ಈ ಪರೀಕ್ಷಾ ಅಕ್ರಮಕ್ಕೆ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರು ಶಾಮೀಲಾಗಿದ್ದಾರೆ ಎಂಬ ಆರೋಪ ಇದೀಗ ಕೇಳಿ ಬರುತ್ತಿದೆ. ಈ ಕುರಿತು ಸಿಐಡಿ ಪೊಲೀಸರು ಕಲಬುರಗಿಯಲ್ಲಿ ಮೂವರು ಪೊಲೀಸ್ ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿದೆ. ಮೂವರು ಪೊಲೀಸ್ ಅಧಿಕಾರಿಗಳಿಗೆ ಸಿಐಡಿ ಅಧಿಕಾರಿಗಳು ನೋಟಿಸ್ ನೀಡಿದ್ದು, ಇವರ ಪಾತ್ರದ ಬಗ್ಗೆ ತನಿಖೆ ನಡೆಸಲಿದ್ದಾರೆ.

ಹಣದ ಮೂಲದ ವಹಿವಾಟು ತಲಾಷೆ:
ಪಿಎಸ್ಐ ನೇಮಕಾತಿ ಅಕ್ರಮದ ಬಹುತೇಕ ವಹಿವಾಟು ನಗದು ರೂಪದಲ್ಲಿ ನಡೆದಿದೆ. ಸುಮಾರು ವಿದ್ಯಾರ್ಥಿಗಳು ಆಸ್ತಿ ಮಾರಾಟ ಮಾಡಿ ಹಣ ಪಾವತಿ ಮಾಡಿದ್ದಾರೆ. ಇನ್ನೂ ಕೆಲವರು ಬಡ್ಡಿಗೆ ಹಣ ಪಡೆದು ನೀಡಿದ್ದಾರೆ. ಇದೀಗ ಅಕ್ರಮದಲ್ಲಿ ಸಿಲುಕಿ ಒಂದೆಡೆ ಜೈಲು ವಾಸ ಅನುಭವಿಸುತ್ತಿದ್ದರೆ, ಮತ್ತೊಂದೆಡೆ ಸಾಲಗಾರರ ಕಾಟ ಶುರುವಾಗಿದೆ. ಬಹುತೇಕರು ಮನೆ, ಮಠ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಇದರ ನಡುವೆ ಹಣದ ವಹಿವಾಟು ಕುರಿತು ದಾಖಲೆಗಳ ತಲಾಷೆ ಕಾರ್ಯದಲ್ಲಿ ಸಿಐಡಿ ಪೊಲೀಸರು ತೊಡಗಿಸಿಕೊಂಡಿದ್ದಾರೆ.












Click it and Unblock the Notifications