PSI ನೇಮಕಾತಿ ಪರೀಕ್ಷಾ ಅಕ್ರಮ: ಕಲಬುರಗಿ ಜಿಲ್ಲಾ ಬಿಜೆಪಿ ನಾಯಕಿಯ ಪತಿ ಅರೆಸ್ಟ್
ಬೆಂಗಳೂರು, ಏ. 18: ಪಿಎಸ್ಐ 545 ಹುದ್ದೆಗಳ ನೇಮಕಾತಿ ಪರೀಕ್ಷಾ ಅಕ್ರಮಕ್ಕೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ಪಿಎಸ್ಐ ಆಕಾಂಕ್ಷಿಗಳಿಂದ ಲಕ್ಷಾಂತರ ಹಣ ಪಡೆದು ಪರೀಕ್ಷೆಯಲ್ಲಿ ಅಕ್ರಮಕ್ಕೆ ಅವಕಾಶ ಕೊಟ್ಟಿದ್ದಲ್ಲದೇ ಸಾಕ್ಷಿ ನಾಶಕ್ಕೆ ಯತ್ನಿಸಿದ ಪ್ರಮುಖ ಆರೋಪಿಯನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.
ಬಿಜೆಪಿ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ದಿವ್ಯಾ ಹಾಗರಗಿ ಅವರ ಪತಿ ರಾಜೇಶ್ ಬಂಧಿತ ಆರೋಪಿ. ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷರಾಗಿರುವ ದಿವ್ಯಾ ಹಾಗರಗಿ ಅವರ ಪತಿ ರಾಜೇಶ್ ಅಕ್ರಮಕ್ಕೆ ಸಂಬಂಧಿಸಿದಂತೆ ಸಾಕ್ಷಿಗಳನ್ನು ನಾಶ ಮಾಡಲು ಯತ್ನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜೇಶ್ ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಶಾಲೆಯ ಮುಖ್ಯ ಶಿಕ್ಷಕ ಸೇರಿದಂತೆ ಇಬ್ಬರು ಶಿಕ್ಷಕರು ತಲೆ ಮರೆಸಿಕೊಳ್ಳಲು ರಾಜೇಶ್ ಸಹಾಯ ಮಾಡಿದ್ದ. ಅಕ್ರಮ ನೇಮಕಾತಿಗೆ ಸಂಬಂಧಿಸಿದಂತೆ ಸಕ್ಷಿ ನಾಶ ಪಡಿಸಿದ್ದಲ್ಲದೇ ಸಿಐಡಿ ತನಿಖೆಗೆ ಸಹಕರಿಸದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ. ಇನ್ನು ಪ್ರಮುಖ ಆರೋಪಿಯಾಗಿರುವ ದಿವ್ಯಾ ಹಾಗರಗಿ ತಲೆ ಮರೆಸಿಕೊಂಡಿದ್ದಾರೆ.

ನಾಲ್ಕು ದಿನದಿಂದ ದಿವ್ಯಾ ಸ್ವಿಚ್‌ಆಫ್ :
ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಜ್ಞಾನ ಜ್ಯೋತಿ ಇಂಗ್ಲಿಷ್ ಮೀಡಿಯಮ್ ಶಾಲೆಯಲ್ಲಿ ನಡೆದಿದೆ ಎಂದು ಗೊತ್ತಾಗುತ್ತಿದ್ದಂತೆ ದಿವ್ಯಾ ಹಾಗರಗಿ ತಲೆ ಮರೆಸಿಕೊಂಡಿದ್ದಳು. ಕಳೆದ ನಾಲ್ಕು ದಿನದಿಂದ ಮೊಬೈಲ್ ಸ್ವಿಚ್ಆಫ್ ಮಾಡಿಕೊಂಡಿದ್ದಾರೆ. ಈ ಬಗ್ಗೆ ಪತಿಯನ್ನು ವಿಚಾರಣೆ ನಡೆಸಿದರೂ ತನ್ನ ಪತ್ನಿಯ ಬಗ್ಗೆ ಸುಳಿವು ನೀಡಿಲ್ಲ. ಇದರ ನಡುವೆಯೂ ದಿವ್ಯಾ ಅವರ ಮನೆ ಮೇಲೆ ದಾಳಿ ನಡೆಸಿದ್ದು, ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಮಹತ್ವದ ದಾಖಲೆ ವಶಪಡಿಸಿಕೊಂಡಿದ್ದಾರೆ.

80 ಲಕ್ಷ ರೂ. ಗೆ ಡೀಲ್ :
ಪಿಎಸ್ಐ ಅಭ್ಯರ್ಥಿಗಳಿಂದ ತಲಾ 80 ಲಕ್ಷ ರೂ. ಪಡೆದು ಪರೀಕ್ಷೆಯಲ್ಲಿ ಅಕ್ರಮಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ. ದಿವ್ಯಾ ಹಾಗರಗಿ ಮಾಡಿದ ಪ್ಲಾನ್ ನಂತೆ ಅಕ್ರಮ ನಡೆದಿದೆ. ಪಿಎಸ್ಐ ನೇಮಕಾತಿ ಪರೀಕ್ಷೆಗೆ ಜ್ಞಾನ ಜ್ಯೋತಿ ಇಂಗ್ಲಿಷ್ ಮೀಡಿಯಮ್ ಶಾಲೆ ಪಿಎಸ್‌ಐ ಲಿಖಿತ ಪರೀಕ್ಷೆಯ ಪರೀಕ್ಷಾ ಕೇಂದ್ರ ಈ ಬಾರಿಯೂ ಪರೀಕ್ಷಾ ಕೇಂದ್ರ ಆಗಲಿರುವ ಬಗ್ಗೆ ತಿಳಿದಿದ್ದ ದಿವ್ಯಾ ಹಾಗರಗಿ ತನ್ನ ಪರಮಾಪ್ತ ಅಭ್ಯರ್ಥಿಗಳನ್ನು ಸಂಪರ್ಕಿಸಿ ಪರೀಕ್ಷೆಯಲ್ಲಿ ಅಕ್ರಮಕ್ಕೆ ಅವಕಾಶ ಮಾಡಿಕೊಟ್ಟಿದ್ದರು. ಅದರಂತೆ ಪಿಎಸ್ಐ ನೇಮಕಾತಿ ಪರೀಕ್ಷೆಯ ಉತ್ತರ ಪತ್ರಿಕೆಯನ್ನು ಬರೆಸುವ ಮೂಲಕ ಅಕ್ರಮಕ್ಕೆ ನಾಂದಿ ಹಾಡಿದ್ದರು. ಇದೀಗ ದಿವ್ಯಾ ಪತಿ ಬಂಧನಕ್ಕೆ ಒಳಗಾಗಿದ್ದು, ದಿವ್ಯಾ ಅವರ ಪತಿ ಜೈಲು ಸೇರಿದ್ದಾನೆ.












Click it and Unblock the Notifications