4 ನಿಗಮಗಳ ಬಸ್ ಸಿಸಿ ಚಾಲಕರಿಗೆ ಮೂಲಸೌಕರ್ಯ ನೀಡಿ: ಈ ಬಗ್ಗೆ ಆದೇಶಿಸುವಂತೆ ಸಿಎಸ್‌ಗೆ ಪತ್ರ
ಬೆಂಗಳೂರು, ಅಕ್ಟೋಬರ್ 18: ರಾಜಕೀಯ ಸಭೆ, ಸಮಾವೇಶ ಮುಂತಾದವುಗಳಿಗೆ ಒಪ್ಪಂದ ಮೇರೆಗೆ ನಿಯೋಜಿಸಿಸುವ ಸರ್ಕಾರಿ ಬಸ್‌ಗಳ ಸಿಬ್ಬಂದಿ ಬಗ್ಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿರುವುದು ಸರಿಯಲ್ಲ. ಕೂಡಲೇ ಈ ಸಾರಿಗೆ ಸಿಬ್ಬಂದಿಗೆ ಅನ್ವಯಿಸುವಂತೆ ಮೂಲಸೌಲಭ್ಯ ಕಲ್ಪಿಸುವ ಕುರಿತು ಆದೇಶಿಸಲು ಮನವಿ ಮಾಡಲಾಗಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಆರ್‌ಟಿಐ ಕಾರ್ಯಕರ್ತರಾದ ಶ್ರೀನಿವಾಸ್ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC), ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NEKRTC), ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ (NWKRTC) ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC)ಗಳಿಂದ ರಾಜಕೀಯ ಸಭೆ, ಸಮಾರಂಭ, ಸಮಾವೇಶ ಅಲ್ಲದೇ ಚುಣಾವಣೆ ಸಂದರ್ಭಗಳಲ್ಲಿ ಕ್ಯಾಸುವಲ್ ಕಾಂಟ್ರ್ಯಾಕ್ಟ್ (ಸಿಸಿ) ಮೂಲಕ 12ಗಂಟೆಯಿಂದ 24ಗಂಟೆ ಅವಧಿಗೆ ಹಣ ಪಡೆದು ಬಸ್‌ಗಳನ್ನು ಬಿಡಲಾಗುತ್ತಿದೆ. ಇದರಿಂದ ನಿಗಮಗಳಿಗೆ ಸಾಕಷ್ಟು ಹಣವು ಸಂಗ್ರಹವಾಗುತ್ತವೆ.
ಆದರೆ ಈ ವೇಳೆ ನಿಯೋಜನೆಗೊಳ್ಳುವ ಸರ್ಕಾರಿ ಬಸ್‌ಗಳ ಚಾಲಕರಿಗೆ ಮಾತ್ರ ಯಾವುದೇ ಭತ್ಯೆಗಳನ್ನು ಕೊಡದೇ ಸರ್ಕಾರ ಮತ್ತು ಸಂಬಂಧಿಸಿದ ನಿಗಮಗಳು ನಿರ್ಲಕ್ಷ್ಯ ವಹಿಸಿವೆ ಎಂದು ಆರ್‌ಟಿಐ ಕಾರ್ಯಕರ್ತರಾದ ಶ್ರೀನಿವಾಸ್ ಆರೋಪಿಸಿದ್ದಾರೆ. ಸರ್ಕಾರಿ ಬಸ್ ಸಿಬ್ಬಂದಿಗೆ ಆಹಾರ ಭತ್ಯೆ, ನೀರು, ಟೀ,ಕಾಫಿ, ತಿಂಡಿ ಮೂಲಸೌಕರ್ಯ ಒದಗಿಸುವಂತೆ ಸರ್ಕಾರ ಮುಖ್ಯ ಕಾರ್ಯದರ್ಶಿಗೆ ಅವರು ಮನವಿ ಮಾಡಿದ್ದಾರೆ.

ಲಕ್ಷಾಂತರ ಹಣ ಪಡೆಯುವ ನಿಗಮದಿಂದ ವಂಚನೆ
ಸಭೆ, ಸಮಾರಂಭ, ಸಮಾವೇಶಗಳು ಮುಗಿಯುವವರಿಗೆ ಒಂದು ದಿನ ಕೆಲವೊಮ್ಮೆ ಸಂಚಾರ ದಟ್ಟಣೆಯಿಂದ ಎರಡು ದಿನಗಳ ವರೆಗೆ ಬಸ್‌ನಲ್ಲೇ ಕಾಲ ಕಳೆಯಬೇಕಾಗುತ್ತದೆ. ಈ ವೇಳೆ ಅವರಿಗೆ ಕುಡಿಯು ಟೀ, ಕಾಫಿ, ಆಹಾರ ಪೊಟ್ಟಣ ಅಥವಾ ಆಹಾರ ಭತ್ಯೆ ನೀಡುತ್ತಿಲ್ಲ. ಇದರಿಂದ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತದೆ.
ಸಿಸಿ ಒಪ್ಪಂದದಂತೆ ಲಕ್ಷಾಂತರ ರೂ. ಹಣ ಪಡೆಯುವ ನಾಲ್ಕು ಸಾರಿಗೆ ನಿಗಮಗಳಿಗೆ ಬೆನ್ನೆಲುಬಾಗಿ ದುಡಿಯುವ ಚಾಲಕರಿಗೆ ದೈನಂದಿನಲ್ಲಿ ಹಣದ ಅವಶ್ಯಕತೆ ಇರುತ್ತದೆ. ಅವರು ಸಿಸಿ ಮೇಲೆ ಬಂದಾಗ ಕುಡಿಯುವ ನೀರು, ಆಹಾರಕ್ಕಾಗಿ ಕಾಫೀ/ಟೀ ಸೇವಿಸಲು ಮನೆಗೆ ಹೋಗಿ ಬರಲು ಸಾಧ್ಯವಿಲ್ಲ. ಇದನ್ನು ಸರ್ಕಾರ ಮನಗಾಣಬೇಕಿದೆ ಎಂದು ಹೇಳಿದರು.

ಪೊಲೀಸ್ ಇಲಾಖೆಯಿಂದ ಸಿಬ್ಬಂದಿಗೆ ಸೂಕ್ತ ವ್ಯವಸ್ಥೆ
ಇದೇ ರೀತಿ ರಾಜಕೀಯ ಸಮಾವೇಶ, ಖಾಸಗಿ ಸಮಾರಂಭಗಳು ಹಾಗೂ ಚುನಾವಣಾ ಕರ್ತವ್ಯದ ಮೇಲೆ ತೆರಳುವ ಕರ್ನಾಟಕ ರಾಜ್ಯದ ಪೊಲೀಸ್ ಇಲಾಖೆ ಪೊಲೀಸ್ ಸಿಬ್ಬಂದಿಗಳಿಗೆ ಮೂಲಸೌಲಭ್ಯ ಕಲ್ಪಿಸಲಾಗುತ್ತದೆ. ಪೇದೆಯಿಂದ ಹಿಡಿದು ಐಪಿಎಸ್ ಅಧಿಕಾರಿಗಳ ವರೆಗೂ ಅವರು ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳಗಳಿಗೆ ಕುಡಿಯುವ ನೀರು, ಆಹಾರದ ಪೊಟ್ಟಣ, ಕಾಫಿ/ಟೀಯನ್ನು ಇಲಾಖೆ ಸರಬರಾಜು ಮಾಡುತ್ತಿದೆ.
ಆದರೆ ರಾಜ್ಯದ 4 ರಸ್ತೆ ಸಾರಿಗೆ ನಿಗಮಗಳು ಮಾತ್ರ ಚಾಲಕರಿಗೆ ಯಾವುದೇ ಸೌಲಭ್ಯಗಳನ್ನು ನೀಡದೇ ಕನಿಷ್ಟ 12ರಿಂದ 24 ಗಂಟೆಗಳ ಕಾಲ ಬಸ್ಸುಗಳಲ್ಲೇ ಕಳೆಯುವಂತಹ ಚಾಲಕರಿಗೆ ಕುಡಿಯುವ ನೀರು, ಆಹಾರ ಭತ್ಯೆ ಸಹ ನೀಡದೆ ವಂಚಿಸುತ್ತಿವೆ.

ಸಿಎಸ್ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಿ
ಸದ್ಯ ಸಿಸಿ ಚಾಲಕರಿಗೆ ಆಗುತ್ತಿರುವ ಪ್ರಸ್ತತ ಸಮಸ್ಯೆ ಅರಿತು ರಾಜ್ಯ ಸರ್ಕಾರಿದ ಪ್ರಧಾನ ಕಾರ್ಯದರ್ಶಿಗಳು ಮಧ್ಯಪ್ರವೇಶಿಸಬೇಕು. ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳ ಚಾಲಕರಿಗೆ ಒಪ್ಪಂದದ ಮೇಲೆ ತೆರಳುವ ಚಾಲನಾ ಸಿಬ್ಬಂದಿಗಳಿಗೆ ಪೊಲೀಸ್ ಇಲಾಖೆಯ ರೀತಿ ಎಲ್ಲ ಮೂಲಸೌಲಭ್ಯ ಕಲ್ಪಿಸುವಂತೆ ಕ್ರಮ ಕೈಗೊಳ್ಳಬೇಕು. ಈ ಸಂಬಂಧ ಆದೇಶವಾಗಬೇಕು.
ಇದು ಸಾಧ್ಯವಾಗದಿದ್ದಲ್ಲಿ 12-24 ಬಸ್ಸುಗಳಲ್ಲಿ ಕಾಲ ಕಳೆಯುವ ಚಾಲಕರಿಗೆ ನೀರು, ಆಹಾರಕ್ಕೆ ತಗಲುವ ವೆಚ್ಚವನ್ನು ಸಂಸ್ಥೆಯು ಚಾಲಕರಿಗೆ ಒಪ್ಪಂದದ ಕರ್ತವ್ಯಕ್ಕೆ ತೆರಳುವ ಸಮಯದಲ್ಲೇ ನೀಡಲು ನಾಲ್ಕು ನಿಗಮಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಆದೇಶಿಬೇಕು ಎಂದು ಅವರು ಪತ್ರ ಮುಖೇನ ಕೋರಿದ್ದಾರೆ.

ಕೋವಿಡ್ ಮೊದಲಿದ್ದ 100ರೂ. ಭತ್ಯೆ ಸ್ಥಗಿತ
ಕೊರೊನಾ ವೈರಸ್ ಬರುವ ಪೂರ್ವ ಸಿಸಿ ಮೇಲೆ ತೆರಳುವ ಸರ್ಕಾರಿ ಬಸ್ ಚಾಲಕರಿಗೆ 100ರೂ. ನೀಡಲಾಗುತ್ತಿತ್ತು. ಅದನ್ನು ಸಹ ಅವರ ವೇತನದಲ್ಲಿ ಹಿಡಿಯಲಾಗುತ್ತಿತ್ತು. ಅಲ್ಲದೇ ಸಂಚಾರ ದಟ್ಟಣೆ ಇನ್ನಿತರ ಸಮಸ್ಯೆಗಳಿಂದಾದ 12-24ಗಂಟೆ ಮೀರಿದರೆ ಎರಡು ದಿನಕ್ಕೆ ಬದಲಾಗಿ ಒಂದೇ ದಿನ ಹಾಜರಾತಿ ಎಂದು ಪರಿಗಣಿಸಲಾಗುತ್ತಿತ್ತು. ಕೋವಿಡ್ ನಂತರ 100ರೂ. ಭತ್ಯೆ ಸೇರಿದಂತೆ ಎಲ್ಲ ವಿಧದ ಭತ್ಯೆಗಳನ್ನು ಸಾರಿಗೆ ನಿಗಮಗಳು ಸ್ಥಗಿತಗೊಳಿಸಿವೆ. ಸರ್ಕಾರ ಈ ಕ್ರಮ ಸರಿಯಲ್ಲ ಎಂದು ಅವರು ದೂರಿದರು.












Click it and Unblock the Notifications