ಮಾರುಕಟ್ಟೆ ದಲ್ಲಾಳಿಗಳಿಗೆ ಮಾತ್ರ ಲಾಭ: ಈರುಳ್ಳಿ ಬೆಳಗಾರರ ಅಳಲು
ಬೆಂಗಳೂರು, ನವೆಂಬರ್ 1: ಈರುಳ್ಳಿ ಬೆಲೆ ಗಗನಕ್ಕೇರಿದ್ದರೂ ಉತ್ತಮ ಆದಾಯ ಸಿಗುತ್ತಿಲ್ಲ ಎಂದು ಈರುಳ್ಳಿ ಬೆಳೆದ ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಬೆಂಗಳೂರಿನ ಯಶವಂತಪುರ ಎಪಿಎಂಸಿ ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳು ಮಾರುಕಟ್ಟೆಯ ಅರ್ಧದಷ್ಟು ಬೆಲೆಗೆ ಉತ್ಪನ್ನಗಳನ್ನು ಖರೀದಿಸುತ್ತಿದ್ದಾರೆ ಎಂದು ರೈತರು ಮಧ್ಯವರ್ತಿಗಳು ಮತ್ತು ಮಾರಾಟಗಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿ ಈರುಳ್ಳಿ 80 ರಿಂದ 90 ರೂ.ಗೆ ಮಾರಾಟವಾಗುತ್ತಿದೆ. ಆದರೆ, ರೈತರಿಗೆ ಕೇವಲ ಕೆ.ಜಿ.ಗೆ 40ರಿಂದ 50 ರೂ. ಮಾತ್ರ ಸಿಗುತ್ತಿದೆ.

ಕಳೆದ ನಾಲ್ಕು ವರ್ಷಗಳಿಂದ ಕಡಿಮೆ ಬೆಲೆಯಿಂದಾಗಿ ಈರುಳ್ಳಿಗೆ ಉತ್ತಮ ಬೆಲೆ ಸಿಕ್ಕಿಲ್ಲ. ಮಾರಾಟಗಾರರು ಮತ್ತು ಮಧ್ಯವರ್ತಿಗಳು ನಮ್ಮಿಂದ ಕೆಜಿಗೆ 40 ರೂ.ಗೆ ಈರುಳ್ಳಿ ಖರೀದಿಸುತ್ತಿದ್ದಾರೆ. ಆದರೆ ಮಾರುಕಟ್ಟೆಯಲ್ಲಿ 80 ರೂ.ಗೆ ಮಾರಾಟ ಮಾಡುತ್ತಿದ್ದಾರೆ. ಈರುಳ್ಳಿ ಬೆಲೆ ಗಗನಕ್ಕೇರಿದ್ದರೂ ನಾವು ಮಾಡಿದ ಸಾಲ ತೀರಿಸುವಷ್ಟು ಆದಾಯ ಬರುತ್ತಿಲ್ಲ ಎಂದು ಬೆಂಗಳೂರಿನ ಯಶವಂತಪುರ ಎಎಂಪಿಸಿ ಮಾರುಕಟ್ಟೆಯಲ್ಲಿ ರೈತರೊಬ್ಬರು ಹೇಳಿದರು.
ಈರುಳ್ಳಿ ಪೂರೈಕೆಯಲ್ಲಿ ಇಳಿಕೆಯಾದ ನಂತರ ಕಳೆದ ವಾರದಲ್ಲಿ ಈರುಳ್ಳಿ ಬೆಲೆ ದ್ವಿಗುಣಗೊಂಡಿದೆ. ವರದಿಗಳ ಪ್ರಕಾರ, ಚಿಕ್ಕೋಡಿ ಮತ್ತು ಬಾಗಲಕೋಟೆಯಂತಹ ಜಿಲ್ಲೆಗಳಲ್ಲಿ ಮಧ್ಯವರ್ತಿಗಳು ಈರುಳ್ಳಿ ಬೆಲೆಯನ್ನು ಮತ್ತಷ್ಟು ಹೆಚ್ಚಿಸಲು ಈರುಳ್ಳಿಯನ್ನು ದಾಸ್ತಾನು ಮಾಡಿದ್ದಾರೆ. ಮಳೆಯಿಂದಾಗಿ ಬಾಗಲಕೋಟೆ, ಗದಗ, ವಿಜಯಪುರ ಭಾಗದಲ್ಲಿ ಈರುಳ್ಳಿ ಉತ್ಪಾದನೆಗೆ ಧಕ್ಕೆಯಾಗಿದೆ. ದೇಶಾದ್ಯಂತ ಈರುಳ್ಳಿ ಬೆಲೆ ಏರಿಕೆಯಿಂದಾಗಿ ನಾಸಿಕ್, ಪುಣೆ ಮತ್ತು ಇತರ ರಾಜ್ಯಗಳಿಂದ ಈರುಳ್ಳಿ ಸರಬರಾಜಿನ ಮೇಲೆ ಪರಿಣಾಮ ಬೀರಿದೆ.
ಈರುಳ್ಳಿ ಬೆಲೆ ಏರಿಕೆಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರವು ಈರುಳ್ಳಿ ಮೇಲೆ ಎಂಇಪಿ ಅನ್ನು ಹೇರಿದೆ. ಗ್ರಾಹಕರ ವ್ಯವಹಾರಗಳ ಇಲಾಖೆಯು ದೇಶದಿಂದ ಈರುಳ್ಳಿ ರಫ್ತು ಕಡಿಮೆ ಮಾಡಲು ಅಕ್ಟೋಬರ್ 29 ರಿಂದ ಡಿಸೆಂಬರ್ 31 ರವರೆಗೆ ಪ್ರತಿ ಟನ್ ಈರುಳ್ಳಿಗೆ $ 800 ರ ಕನಿಷ್ಠ ರಫ್ತು ಬೆಲೆಯನ್ನು (MEP) ವಿಧಿಸಿದೆ. ದೆಹಲಿ, ಮುಂಬೈ ಮತ್ತು ದೇಶದ ಇತರ ಭಾಗಗಳಲ್ಲಿ ಈರುಳ್ಳಿ ಬೆಲೆ ಹಠಾತ್ ಏರಿಕೆಯಾದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈರುಳ್ಳಿ ರಫ್ತಿನ ಮೇಲೆ ಎಂಇಪಿ ಹೇರಿದ ನಂತರ ಈರುಳ್ಳಿ ಬೆಲೆ ಶೇ.5ರಿಂದ 9ರಷ್ಟು ಇಳಿಕೆಯಾಗಿದೆ ಎಂದು ಕೇಂದ್ರ ಹೇಳಿದೆ.












Click it and Unblock the Notifications