'ವಚನ ಮಂಟಪ' ಹಾಗೂ 'ವಚನ ವಿಶ್ವವಿದ್ಯಾಲಯ' ಸ್ಥಾಪಿಸಿ: ಸಿದ್ದರಾಮಯ್ಯ ಗೆ ಪತ್ರ ಬರೆದ ಪ್ರಿಯಾಂಕ್ ಖರ್ಗೆ
ಬೆಂಗಳೂರು, ಫೆಬ್ರವರಿ 16: ಬೆಂಗಳೂರು ಅಥವಾ ಕಲಬುರಗಿಯಲ್ಲಿ 'ವಚನ ಮಂಟಪ' ಹಾಗೂ 'ವಚನ ವಿಶ್ವವಿದ್ಯಾಲಯ' ಸ್ಥಾಪಿಸುವಂತೆ ಮತ್ತು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರದ ಮೂಲಕ ಸಚಿವ ಪ್ರಿಯಾಂಕ್ ಖರ್ಗೆ ಮನವಿ ಮಾಡಿದ್ದಾರೆ.
ಕನ್ನಡ ನಾಡು ಇಂದು ಇಡೀ ವಿಶ್ವದಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನಗಳಿಸಿ, ಭಾರತ ದೇಶದ ಆರ್ಥಿಕ ಯಂತ್ರವಾಗಿ ಕಾರ್ಯ ನಿರ್ವಹಿಸುತ್ತಾ ಒಂದು ಅಮೋಘ ರಾಜ್ಯವಾಗಿ ರೂಪುಗೊಳ್ಳಲು ನಮ್ಮ ನಾಡಿನ ತಾತ್ವಿಕ ಅಡಿಪಾಯವೇ ಕಾರಣ.

ಕನ್ನಡ ನಾಡು ರೂಪಿಸಿದ ಅನೇಕ ದಾರ್ಶನಿಕ ತತ್ತ್ವಗಳ ಪೈಕಿ ಜಗಜ್ಯೋತಿ ಗುರು ಬಸವಣ್ಣನವರು ತಮ್ಮ ಅನುಭವ ಮಂಟಪದಲ್ಲಿ ಅನೇಕ ಮೇರು ಶರಣ ಸಾಹಿತಿಗಳ ವಚನ ಸಾಹಿತ್ಯದ ಮೂಲಕ ಅಂದು ಸಾಮಾಜಿಕ ಹಾಗೂ ಆರ್ಥಿಕ ಸಮಾನತೆಯ ತತ್ವಗಳನ್ನು ಈ ಮಣ್ಣಿನಲ್ಲಿ ಬಿತ್ತಿದ್ದರಿಂದಲೇ ನಮ್ಮ ಈ ರಾಜ್ಯದ ಉದಾರ, ಪ್ರಗತಿಪರ ಮನೋಭಾವ, ಬೌದ್ಧಿಕ ಶಕ್ತಿ ಹಾಗೂ ಅನಾಚಾರಗಳ ವಿರುದ್ಧ ಧ್ವನಿಯೆತ್ತುವ ಬಂಡಾಯಕ್ಕೆ ಸ್ವಾತಂತ್ರ್ಯ ಹಾಗೂ ಇಂದಿನ ಅಭಿವೃದ್ಧಿಪರ ಆಲೋಚನೆಗಳಿಗೆ ಶಕ್ತಿಯಾಗಿ ವಿಕಸನಗೊಂಡಿದೆ.
ಕನ್ನಡ ನಾಡಲ್ಲಿ ಪ್ರಬುದ್ಧ ಹಾಗೂ ಪ್ರಜ್ಞಾವಂತ ಸಮಾಜ ರೂಪಿಸಲು ಇಂಧನವಾಗಿ ಕಾರ್ಯನಿರ್ವಹಿಸಿದ ವಚನ ಸಾಹಿತ್ಯವನ್ನು ಮುಂದಿನ ಪೀಳಿಗೆಗೂ ಮನದಟ್ಟು ಮಾಡುವ ಅನಿವಾರ್ಯತೆಯನ್ನು ಪೂರೈಸುವ ಜವಾಬ್ದಾರಿ ನಮ್ಮ ಮೇಲಿದೆ.
ಭವ್ಯ ಕರ್ನಾಟಕದ ಅಡಿಪಾಯವಾಗಿರುವ ವಚನ ಸಾಹಿತ್ಯ, ದಾಸ ಸಾಹಿತ್ಯ ಶರಣರ ಚಿಂತನೆಗಳು ಸೇರಿದಂತೆ ಕನ್ನಡ ನಾಡಿನಿಂದ ಹೊರಹೊಮ್ಮಿದ ಎಲ್ಲಾ ಮೇರು ತತ್ತ್ವಗಳನ್ನು ಜಗತ್ತಿಗೂ ತಿಳಿಸುವಂತೆ, ಈ ತತ್ವಗಳ ಆಶಯವನ್ನು ಜಗತ್ತಿಗೆ ತಿಳಿಸಲು ಇರುವ ಭಾಷೆಯ ಅಂತರಕ್ಕೆ ಸೇತುವೆ ಕಟ್ಟುವ ಮಹತ್ತರವಾದ ಕೆಲಸ ಮಾಡುವ ನಿಟ್ಟಿನಲ್ಲಿ ಈ ಕೆಳಗಿನ ಎರಡು ಮನವಿಗಳನ್ನು ಪುರಸ್ಕರಿಸಿ ಕಾರ್ಯಸಾಧಿಸುವಂತೆ ಈ ಪತ್ರದ ಮೂಲಕ ತಮ್ಮಲ್ಲಿ ಕೋರಿಕೊಳ್ಳುತ್ತಿದ್ದೇನೆ. ಈ ತತ್ವಗಳ ಆಶಯವನ್ನು ಜಗತ್ತಿಗೆ ತಿಳಿಸಲು ಇರುವ ಭಾಷೆಯ ಅಂತರಕ್ಕೆ ಸೇತುವೆ ಕಟ್ಟುವ ಮಹತ್ತರವಾದ ಕೆಲಸ ಮಾಡುವ ನಿಟ್ಟಿನಲ್ಲಿ ಈ ಕೆಳಗಿನ ಎರಡು ಮನವಿಗಳನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿದ್ದೇನೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ವಚನ ಮಂಟಪ
ನಾಡಿನ ರಾಜಧಾನಿಯಾದ ಬೆಂಗಳೂರಿನಲ್ಲಿ ಅಥವಾ ಶರಣ ಸಾಹಿತ್ಯದ ಕೇಂದ್ರ ಬಿಂದುವಾಗಿದ್ದ ಕಲಬುರಗಿಯಲ್ಲಿ ಜಗಜ್ಯೋತಿ ಗುರು ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಮಡಿವಾಳ ಮಾಚಿದೇವ, ದೇವರ ದಾಸಿಮ್ಮಯ್ಯ, ಅಂಬಿಗರ ಚೌಡಯ್ಯ, ಡೋಹರ ಕಕ್ಕಯ್ಯ, ಸರ್ವಜ್ಞರಂತಹ ನಾಡಿನ ಮೇರು ಶರಣ ಸಾಹಿತಿಗಳ ಬದುಕು ಹಾಗೂ ಅವರಿಂದ ರಚಿತವಾದ ವಚನಗಳನ್ನು ಇಡೀ ವಿಶ್ವಕ್ಕೆ ಪರಿಚಯಿಸಿ ಅರಿವು ಮೂಡಿಸುವ ಕೇಂದ್ರವಾಗಿ, ವಚನ ಸಂಗ್ರಹಾಲಯವಾಗಿ "ವಚನ ಮಂಟಪ"ವನ್ನು ಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಹಾಗೂ ಇದಕ್ಕಾಗಿ 20 ಎಕರೆ ಜಾಗವನ್ನು ಮೀಸಲಿಡಬೇಕೆಂದು ಕೋರಿಕೆ.
ವಚನ ವಿಶ್ವವಿದ್ಯಾಲಯ
ನಾಡಿನಲ್ಲಿ ಸಮಾನತೆಯ ಯೋಚನಾ ಲಹರಿಯನ್ನು ಬಲವಾಗಿ ಪ್ರತಿಪಾದಿಸಿದ, ಕನ್ನಡ ನಾಡಿನಲ್ಲಿ ಸಾಮಾಜಿಕ ನ್ಯಾಯ ಹಾಗೂ ಜನರಲ್ಲಿ ಪ್ರಜ್ಞಾವಂತ ಮನೋಭಾವವನ್ನು ಮೂಡಿಸಿದ ನೆಲಮೂಲದ ಬಸವವಾದಿ ಶರಣರ ತತ್ವಗಳನ್ನು ಸೇರಿದಂತೆ ಪ್ರಗತಿಪರ ಕರ್ನಾಟಕಕ್ಕೆ ರಹದಾರಿಯಾಗಿರುವ ಎಲ್ಲಾ ತತ್ವಗಳ ಅಧ್ಯಯನಕ್ಕಾಗಿ ಹಾಗೂ ಜಗತ್ತಿನ ಅತೀದೊಡ್ಡ ಪ್ರಜಾಪ್ರಭುತ್ವ ದೇಶದ ಸಂವಿಧಾನದಲ್ಲಿ ಅಡಗಿರುವ ಈ ತತ್ವಗಳ ಬಗ್ಗೆ ಸಾರ್ವಕಾಲಿಕವಾಗಿ ಅರಿವು ಮೂಡಿಸುವ ಮೂಲಕ ಗುರು ಬಸವಣ್ಣನವರ ಜ್ಞಾನದ ಜ್ಯೋತಿಯ ಪ್ರಕಾಶವನ್ನು ಇಡೀ ಜಗತ್ತಿಗೆ ಪ್ರಜ್ವಲಿಸುವಂತೆ ಮೂಡುವ ಸಲುವಾಗಿ ರಾಜ್ಯದಲ್ಲಿ ಒಂದು ಕೇಂದ್ರೀಕೃತ 'ವಚನ ವಿಶ್ವವಿದ್ಯಾಲಯ'ವನ್ನು ಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕೋರಿಕೆ.
ಈ ಎರಡೂ ಕೋರಿಕೆಗಳು ಕೇವಲ ನನ್ನದಲ್ಲ ಬಸವಣ್ಣನವರನ್ನು ಪ್ರತಿಪಾದಿಸುವ, ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ವಾಸಿಸುವ ಪ್ರತಿಯೊಬ್ಬರ ಬಯಕೆಯೂ ಆಗಿದೆ ಎಂದು ನಾನು ಭಾವಿಸುತ್ತೇನೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.












Click it and Unblock the Notifications