BJP vs Congress: ಕಾಂಗ್ರೆಸ್‌ನಿಂದಲೇ ಕಲಬುರಗಿ ರೈತರಿಗೆ ಅಧಿಕ ₹1,417 ಬೆಳೆ ಪರಿಹಾರ: ಬಿಜೆಪಿ ತಿರುಗೇಟು
Uttara Karnataka Flood: ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಭೀರಕ ಮಳೆ ಹಾಗೂ ಭೀಮಾ ನದಿ ನೀರು ಬಿಡುಗಡೆ ಕಾರಣದಿಂದಾಗಿ ಪ್ರವಾಹ ಸ್ಥಿತಿ ಉಂಟಾಗಿದೆ. ಹತ್ತಾರು ಗ್ರಾಮಗಳು ಮುಳುಗಿದ್ದು, ಲಕ್ಷಾಂತರ ಹೆಕ್ಟೇರ್ ಜಮೀನು ಬೆಳೆ ಹಾನಿ ಆಗಿದೆ. ಈ ಸಂಬಂಧ ವೈಮಾನಿಕ ಸಮೀಕ್ಷೆ ನಡೆಸಿದ ಸಿಎಂ ಸಿದ್ದರಾಮಯ್ಯ ಅವರು ಪರಿಹಾರ ಘೋಷಿಸಿದ್ದಾರೆ. ಹೀಗಿದ್ದರು ಬಿಜೆಪಿ ಆರೋಪ ಮಾಡುತ್ತಿದೆ ಎಂದು ದೂರಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿ ಅವಧಿಯಲ್ಲಿನ ಪರಿಹಾರದ ಅಂಕಿ ಸಂಖ್ಯೆ ಸಮೇತ ಲೆಕ್ಕ ನೀಡಿದ್ದಾರೆ.
ಭಾರೀ ಮಳೆಗೆ ಕಲಬುರಗಿ, ಬೀದರ್, ವಿಜಯಪುರ, ಕೊಪ್ಪಳ, ಬೆಳಗಾವಿ ಭಾಗದಲ್ಲಿ ಪ್ರವಾಹ ಉಂಟಾಗಿದೆ. ಇದರಲ್ಲಿ ಕಲಬುರಗಿ ಭಾಗದಲ್ಲಿ ಅಪಾರ ಹಾನಿ ಉಂಟಾಗಿದೆ ಎಂದು ತಿಳಿದು ಬಂದಿದೆ. ಸಿಎಂ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಮತ್ತೊಂದೆಡೆ ಬಿಜೆಪಿ ನಾಯಕರು ಸಹ ಪ್ರವಾಹ ಸ್ಥಳಕ್ಕೆ ಭೇಟಿ ನೀಡಿ ಜನರಿಗೆ ಧೈರ್ಯ ಹೇಳುತ್ತಿದ್ದಾರೆ. ಪರಿಹಾರ ಕ್ರಮಕ್ಕೆ ಸರ್ಕಾರವನ್ನು ಆಗ್ರಹಿಸಿದ್ದಾರೆ. ಜೊತೆಗೆ ಸರ್ಕಾರ ವಿರುದ್ಧ ಕಿರಿ ಕಾರಿದ್ದರು. ಇದಕ್ಕೆ ಪ್ರಿಯಾಂಕ್ ಖರ್ಗೆ ಅವರು ತಿರುಗೇಟು ನೀಡಿ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಅಧಿಕಾರದಲ್ಲಿದ್ದಾಗ ಕಲಬುರಗಿ ಜಿಲ್ಲೆಯ ರೈತರಿಗೆ ದ್ರೋಹವೆಸಗಿದ್ದ ಬಿಜೆಪಿ ಈಗ ಪ್ರತಿಭಟನೆಯ ನಾಟಕ ನಡೆಸುವುದು ಹಾಸ್ಯಾಸ್ಪದವಾಗಿದೆ. ಬಿಜೆಪಿ ಆಡಳಿತಾವಧಿ ಕಲಬುರಗಿ ಜಿಲ್ಲೆಗೆ ಒಂದು ಮಂತ್ರಿ ಸ್ಥಾನವನ್ನು ಕೊಡಲಿಲ್ಲ. ಆಗ ಇದ್ದಂತಹ ಉಸ್ತುವಾರಿ ಮಂತ್ರಿಗಳು ಜಿಲ್ಲೆಯ ಕಡೆ ತಲೆ ಹಾಕಲಿಲ್ಲ. ಇಂತಹ ಬಿಜೆಪಿಗೆ ಇಂದು ನಮ್ಮ ಕಡೆ ಬೆರಳು ತೋರಿಸುವುದಕ್ಕೆ ಕನಿಷ್ಠ ನೈತಿಕತೆ ಇಲ್ಲ ಎಂದು ಅವರು ಜರಿದರು.
ಕಲಬುರಗಿಯ ಜನರ ಸಂಕಷ್ಟಕ್ಕೆ ಬಿಜೆಪಿ ಸರ್ಕಾರ ಹೇಗೆ ನಡೆದುಕೊಂಡಿತ್ತು ಎಂಬುದರ ಬಗ್ಗೆ ಅಂಕಿ ಅಂಶಗಳೇ ಮಾತನಾಡುತ್ತವೆ. ರೈತರಿಗೆ ಯಾವ ಸರ್ಕಾರ ಎಷ್ಟು ಅನುಕೂಲ ಮಾಡಿಕೊಟ್ಟಿದೆ ಎನ್ನುವುದನ್ನು ನಾವು ಹೇಳುವುದು ಬೇಕಿಲ್ಲ. ಇಲ್ಲಿರುವ ಅಂಕಿ ಅಂಶಗಳೇ ಹೇಳುತ್ತವೆ. ಬಿಜೆಪಿ ಅವಧಿಯ ನಾಲ್ಕು ವರ್ಷಗಳಲ್ಲಿ ನೆರೆ, ಬರದ ವಿಷಯದಲ್ಲಿ ಬಿಜೆಪಿ ಪರಿಹಾರ ಒದಗಿಸಿಕೊಟ್ಟಿದ್ದು ನಗಣ್ಯ ಎಂದು ವಿವರಿಸಿದರು.
ಬಿಜೆಪಿಯಿಂದ ರೈತರಿಗೆ ದೊರಕಿದ ಬೆಳೆ ವಿಮೆ ಪರಿಹಾರ
* 2019 -20ನೇ ಸಾಲಿನಲ್ಲಿ 38,248 ರೈತರಿಗೆ ₹16.65 ಕೋಟಿ ಪರಿಹಾರ ಮಾತ್ರ.
* 2020 - 21ನೇ ಸಾಲಿನಲ್ಲಿ 37,145 ರೈತರಿಗೆ ಕೇವಲ ₹22.97 ಕೋಟಿ ಪರಿಹಾರ ಮಾತ್ರ.
* 2021 - 22ನೇ ಸಾಲಿನಲ್ಲಿ 66,234 ರೈತರಿಗೆ ₹57.95 ಕೋಟಿ ಪರಿಹಾರ ಮಾತ್ರ.
* 2022 - 23ನೇ ಸಾಲಿನಲ್ಲಿ 1,88,600 ರೈತರಿಗೆ ಒದಗಿಸಿದ್ದು ₹108.6 ಕೋಟಿ ಮಾತ್ರ ಪರಿಹಾರ.
* ನಾಲ್ಕು ವರ್ಷದ ಒಟ್ಟು ₹206.17 ಕೋಟಿ ಪರಿಹಾರ ಮಾತ್ರ ನೀಡಲಾಗುತ್ತದೆ.
ನಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಎರಡೇ ವರ್ಷದ ಅತಿ ಹೆಚ್ಚು ಬೆಳೆ ವಿಮೆ ಪರಿಹಾರ ಒದಗಿಸುವಲ್ಲಿ ಯಶಸ್ವಿಯಾಗಿದೆ ಎಂದಿರುವ ಅವರು, ಕಾಂಗ್ರೆಸ್ ನೀಡಿದ ಪರಿಹಾರದ ಅಂಕಿ ಸಂಖ್ಯೆ ನೀಡಿದ್ದಾರೆ.

ಕಾಂಗ್ರೆಸ್ ನೀಡಿದ ಬೆಳೆ ಪರಿಹಾರದ ಮಾಹಿತಿ
* 2023 - 24ನೇ ಸಾಲಿನಲ್ಲಿ 1,59,622 ರೈತರಿಗೆ ₹189.40 ಕೋಟಿ ಪರಿಹಾರ ನೀಡಿದ್ದೇವೆ.
* 2024-25 ನೇ ಸಾಲಿನಲ್ಲಿ 2,03,746 ರೈತರಿಗೆ ₹656.63 ಕೋಟಿ ಪರಿಹಾರ ನೀಡಲಾಗಿದೆ.
* ಒಟ್ಟು 3,63,368 ರೈತರಿಗೆ ₹846.03 ಕೋಟಿ ಪರಿಹಾರವನ್ನು ಎರಡೇ ವಿತರಿಸಲಾಗಿದೆ.
* ತೊಗರಿಯ ನೆಟೆ ರೋಗದ ಬಗ್ಗೆ ಬಿಜೆಪಿ ತಲೆ ಕೆಡಿಸಿಕೊಂಡಿಲ್ಲ, ನಮ್ಮ ಸರ್ಕಾರವು 2023-24ನೇ ಸಾಲಿನಲ್ಲಿ 1,78,354 ರೈತರಿಗೆ ₹181.86 ಕೋಟಿ ನೆಟೆ ರೋಗ ಪರಿಹಾರ ಒದಗಿಸಿದೆ ಎಂದು ತಿಳಿಸಿದರು.
ಜೊತೆಗೆ, ಹೆಚ್ಚು ಇನ್ಪುಟ್ ಸಬ್ಸಿಡಿಯನ್ನು ಒದಗಿಸಿಕೊಡುವ ಮೂಲಕ ರೈತರ ನೆರವಿಗೆ ನಿಂತಿದೆ ನಮ್ಮ ಸರ್ಕಾರ,
ಎರಡು ವರ್ಷಗಳಲ್ಲಿ 3,49,555 ರೈತರಿಗೆ ₹389.14 ಕೋಟಿ ಸಬ್ಸಿಡಿ ಒದಗಿಸಲಾಗಿದೆ. ಎರಡೇ ವರ್ಷದ ಒಟ್ಟು 8,91,277 ರೈತರು ಫಲಾನುಭವಿಗಳಾಗಿದ್ದಾರೆ, ₹1,417.02 ಕೋಟಿ ಹಣ ರೈತರ ಕೈ ಸೇರಿದೆ. ಬಿಜೆಪಿ ಸರ್ಕಾರ ಕಲಬುರಗಿ ರೈತರಿಗೆ ನಾಲ್ಕು ವರ್ಷಗಳಲ್ಲಿ ಕೊಟ್ಟಿರುವ ಮೊತ್ತದ ಏಳು ಪಟ್ಟು ಹೆಚ್ಚು ಹಣವನ್ನು ನಮ್ಮ ಸರ್ಕಾರ ಎರಡೇ ನೀಡಿದೆ.
ಕಲಬುರಗಿಯಲ್ಲಿ ನೆರೆ ಪರಿಸ್ಥಿತಿ ಇದೆ, ಬಿಜೆಪಿಯವರ ನಕಲಿ ಮೊಸಳೆ ಕಣ್ಣೀರಿನಿಂದ ಪ್ರವಾಹ ಹೆಚ್ಚಾಗಬಹುದು, ಅವರ ನಕಲಿ ಕಣ್ಣೀರು, ಆತ್ಮವಂಚಕತನದ ಪ್ರತಿಭಟನೆಗಳು ಕಲಬುರಗಿಗೆ ಅಗತ್ಯವಿಲ್ಲ! ಎಂದು ಬಿಜೆಪಿ ನಾಯಕರ ವಿರುದ್ಧ ಕಿರಿ ಕಾರಿದರು.












Click it and Unblock the Notifications