ಕರ್ನಾಟಕ ಜುಜುಬಿಯಾಗಿದ್ರೆ ಇಲ್ಲಿ ಯಾಕಿದ್ದೀರಿ? ಪ್ರಿಯಾಂಕ್ ಖರ್ಗೆ ಗರಂ ಆಗಿದ್ದೇಕೆ?
ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್ ಸಚಿವ ಪ್ರಿಯಾಂಕ್ ಖರ್ಗೆ ಗರಂ ಆಗಿದ್ದಾರೆ. ಬಿಜೆಪಿ ನಾಯಕರೊಬ್ಬರು ಕರ್ನಾಟಕವನ್ನು ಜುಜುಬಿ ಎಂದು ಕರೆದಿದ್ದು, ಇದಕ್ಕೆ ಪ್ರಿಯಾಂಕ್ ಕೆಂಡವಾಗಿದ್ದಾರೆ. ಬಿಜೆಪಿಯವರಿಗೆ ಕರ್ನಾಟಕವು "ಜುಜುಬಿ"ಯಂತೆ. ಕರ್ನಾಟಕ ಮತ್ತು ಕನ್ನಡಿಗರ ಕುರಿತಾಗಿ ಬಿಜೆಪಿಯಲ್ಲಿ ಯಾವ ಭಾವನೆ ಇದೆ ಎಂಬುದಕ್ಕೆ ಬಿಜೆಪಿ ವಕ್ತಾರನ ಈ ಮಾತುಗಳೇ ನಿದರ್ಶನ. ಕರ್ನಾಟಕವು ಬಿಜೆಪಿಗೆ "ಜುಜುಬಿ"ಯಾಗಿದ್ದರೆ ಇಲ್ಲಿ ನಿಮಗೆ ಇಲ್ಲಿ ವಾಸವೇಕೆ? ನಮ್ಮ ಭಾಷೆ ಏಕೆ? ರಾಜಕಾರಣವೇಕೆ? ಕನ್ನಡಿಗರ ಮತಗಳು ಏಕೆ? ಎಂದು ಆಕ್ರೋಶ ಹೊರಹಾಕಿದ್ದಾರೆ.
ಬಿಜೆಪಿ ಕರ್ನಾಟಕವು ಏಕಕಾಲಕ್ಕೆ ಪ್ರಜಾಪ್ರಭುತ್ವವನ್ನು ಮತ್ತು ಕರ್ನಾಟಕದ ಅಸ್ಮಿತೆಯನ್ನು ಅವಮಾನಿಸಿದೆ. ಕರ್ನಾಟಕದಲ್ಲಿ ರಾಜಕೀಯ ಮಾಡುತ್ತಾ, ಕರ್ನಾಟಕದ ಅನ್ನ ತಿನ್ನುತ್ತಾ, ಕರ್ನಾಟಕದ ನೀರು ಕುಡಿಯುತ್ತಾ, ಕನ್ನಡಿಗರ ಋಣದಲ್ಲಿ ಬದುಕುತ್ತಿರುವ ಬಿಜೆಪಿಯವರು ಕರ್ನಾಟಕವನ್ನೇ ಜುಜುಬಿ ಎನ್ನುತ್ತಿರುವುದು ಉಂಡ ಮನೆಯ ಗಳ ಹಿರಿದಂತೆಯೇ ಸರಿ ಎಂದು ಕಿಡಿಕಾರಿದ್ದಾರೆ.
ಬಿಜೆಪಿ ಕರ್ನಾಟಕವನ್ನು ಜುಜುಬಿ ಎಂದು ತಿಳಿದಿರುವುದರಿಂದಲೇ ತೆರಿಗೆ ಅನ್ಯಾಯ ಮಾಡುತ್ತಿರುವುದೇ? ನೆರೆ, ಬರ ಪರಿಹಾರಗಳಲ್ಲಿ ವಂಚಿಸುತ್ತಿರುವುದೇ? ಕನ್ನಡಿಗರ ಹಿತವನ್ನು ಕಡೆಗಣಿಸಿಸುತ್ತಿರುವುದೇ? ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡುತ್ತಿರುವುದೇ? ಎಂದು ಪ್ರಶ್ನಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರೇ ನಿಮಗೆ ನಮ್ಮ ಶ್ರಮ ಬೇಕು, ಬೆವರು ಬೇಕು, ತೆರಿಗೆ ಬೇಕು, ಸಾಮರ್ಥ್ಯ ಬೇಕು, ಹೀಗಿದ್ದರೂ ಕರ್ನಾಟಕ ಮತ್ತು ಕನ್ನಡಿಗರು ನಿಮಗೆ ಜುಜುಬಿಯೇ? ಎಂದು ಆಕ್ರೋಶ ಹೊರಹಾಕಿದ್ದಾರೆ.

ಬಿಜೆಪಿ ವಕ್ತಾರನ ಈ ಮಾತು ಬಿಜೆಪಿ ಪಕ್ಷದ ಮಾತು ಎನಿಸಿಕೊಳ್ಳುತ್ತದೆ. ಈ ನಾಡ ದ್ರೋಹದ ಮಾತಿನ ಕುರಿತು ಬಿಜೆಪಿ ನಾಯಕರಾದ ಬಿವೈ ವಿಜಯೇಂದ್ರ ಹಾಗೂ ಆರ್.ಅಶೋಕ್ ಮತ್ತು ಇತರ ಬಿಜೆಪಿ ನಾಯಕರು ಕನ್ನಡಿಗರ ಕ್ಷಮೆ ಕೇಳಬೇಕು. ಇಲ್ಲವೇ ಕರ್ನಾಟಕದಲ್ಲಿ ತಮ್ಮ ರಾಜಕೀಯದ ಅಂಗಡಿ ಬಂದ್ ಮಾಡಿಕೊಂಡು ಹೋಗಬೇಕು ಎಂದು ಸವಾಲ್ ಹಾಕಿದ್ದಾರೆ.
ಬಿಜೆಪಿ ಹೈಕಮಾಂಡ್‌ನಿಂದ ಹುದ್ದೆಗಳ ಮಾರಾಟ
ಬಿಜೆಪಿ ಹೈಕಮಾಂಡ್‌ಗೆ ₹1800 ಕೋಟಿ ಕಪ್ಪ ನೀಡಿದ್ದನ್ನು ಯಡಿಯೂರಪ್ಪನವರು ಹಾಗೂ ಅನಂತ್ ಕುಮಾರ್ ಅವರ ಸಂಭಾಷಣೆಯಲ್ಲಿ ಬಹಿರಂಗವಾಗಿದ್ದನ್ನು ಬಿಜೆಪಿ ನಾಯಕರು ಮರೆತಿದ್ದಾರೆಯೇ? ಮರೆತಿದ್ದರೆ, ನಾವು ಮತ್ತೊಮ್ಮೆ ನೆನಪಿಸುತ್ತಿದ್ದೇವೆ ಎಂದು ಪ್ರಿಯಾಂಕ್ ಹಳೆಯ ವಿಡಿಯೋ ಹಂಚಿಕೊಂಡಿದ್ದಾರೆ.
ಸಂಸದ ಬಿ.ವೈ ರಾಘವೇಂದ್ರರವರು ತಮ್ಮ ಪೂಜ್ಯ ತಂದೆಯವರ ಮಾತುಗಳನ್ನು ಒಮ್ಮೆ ಕಿವಿಗೊಟ್ಟು ಕೇಳಿಸಿಕೊಂಡು ನಂತರ ಮಾತನಾಡಿದರೆ ಉತ್ತಮ. ಬಿಜೆಪಿಯಲ್ಲಿ ಮುಖ್ಯಮಂತ್ರಿ ಹುದ್ದೆಗೆ ₹2,500 ಕೊಡಬೇಕು ಎಂದಿದ್ದವರೂ ಬಿಜೆಪಿಯವರೇ, ಮಂತ್ರಿಗಿರಿಗೆ 60, 70 ಕೋಟಿ ಕೊಡಬೇಕು ಎಂದಿದ್ದವರೂ ಬಿಜೆಪಿಯವರೇ. ಬಿಜೆಪಿ ಹೈಕಮಾಂಡ್ ಹುದ್ದೆಗಳನ್ನು ಮಾರಾಟಕ್ಕಿಟ್ಟು ವ್ಯಾಪಾರಕ್ಕೆ ಕುಳಿತಿತ್ತು ಎನ್ನುವುದನ್ನು ಬಿಜೆಪಿಯವರೇ ಬಹಿರಂಗಪಡಿಸಿದ್ದರು. ಕರ್ನಾಟಕದ ಸಂಪನ್ಮೂಲವನ್ನು ಹೈಕಮಾಂಡ್ ಸಮರ್ಪಣಾಮಸ್ತು ಮಾಡಿದ ಕೀರ್ತಿ ಬಿಜೆಪಿಯದ್ದೇ ಹೊರತು ಕಾಂಗ್ರೆಸ್ಸಿನದ್ದಲ್ಲ ಎಂದು ತಿರುಗೇಟು ನೀಡಿದ್ದಾರೆ.












Click it and Unblock the Notifications