ಎಸ್‌ಸಿ/ಎಸ್‌ಟಿ ಸಮುದಾಯಕ್ಕೆ ಉದ್ಯೋಗ ನೀಡಲು ಸಮೃದ್ಧಿ ಯೋಜನೆ
Recommended Video

ಬೆಂಗಳೂರು, ಅಕ್ಟೋಬರ್ 31 : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗವಕಾಶ ಕಲ್ಪಿಸುವ 'ಸಮೃದ್ಧಿ ಯೋಜನೆ'ಗೆ ಚಾಲನೆ ಸಿಕ್ಕಿದೆ. ಸಮಾಜ ಕಲ್ಯಾಣ ಇಲಾಖೆ ಈ ಯೋಜನೆ ಜಾರಿಗೆ ತಂದಿದೆ.
ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಂಗಳವಾರ 31ಕ್ಕೂ ಹೆಚ್ಚು ಕಂಪನಿಗಳ ಜೊತೆ 'ಸಮೃದ್ಧಿ ಯೋಜನೆ'ಯಡಿ ಒಪ್ಪಂದ ಮಾಡಿಕೊಂಡರು. ಸಾಮಾಜಿಕ ಉದ್ಯಮಶೀಲತಾ ಕಾರ್ಯಕ್ರಮದಡಿ ಉದ್ಯೋಗವಕಾಶ ನೀಡಲಾಗುತ್ತದೆ.
ಸುಮಾರು 800 ಕೋಟಿ ವೆಚ್ಚದಲ್ಲಿ 'ಸಮೃದ್ಧಿ ಯೋಜನೆ' ಜಾರಿಗೆ ತರಲಾಗಿದೆ. ಖಾಸಗಿ ಸಂಸ್ಥೆಗಳು ಮತ್ತು ಕಾರ್ಪೋರೇಟ್ ಉದ್ದಿಮೆಗಳ ಸಹಭಾಗಿತ್ವದಲ್ಲಿ ನಿರುದ್ಯೋಗಿ ಯುವಕ/ಯುವತಿಯರಿಗೆ ಉದ್ಯೋಗವಕಾಶ ನೀಡುವ ಯೋಜನೆ ಇದಾಗಿದೆ.
ಈ ವರ್ಷದಲ್ಲಿ ಸುಮಾರು 10 ಸಾವಿರ ಮಂದಿಗೆ ಈ ಯೋಜನೆಯಡಿ ಸ್ವಯಂ ಉದ್ಯೋಗ ಮಾಡಲು ಸಹಾಯ ಮಾಡುವ ಗುರಿಯನ್ನು ಯೋಜನೆ ಹೊಂದಿದೆ. ನವೆಂಬರ್ 7ರಿಂದ ಯೋಜನೆಯ ಲಾಭ ಪಡೆಯಲು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.....

ಪ್ರಿಯಾಂಕ್ ಖರ್ಗೆ ಮಾಹಿತಿ
ಸಮೃದ್ಧಿ ಯೋಜನೆ ಬಗ್ಗೆ ಮಾಹಿತಿ ನೀಡಿದ ಸಚಿವ ಪ್ರಿಯಾಂಕ್ ಖರ್ಗೆ ಅವರು, 'ಯೋಜನೆಯಡಿ ಆರ್ಥಿಕ ಚಟುವಟಿಕೆ ಕೈಗೊಳ್ಳಲು ಬಯಸುವ ಫಲಾನುಭವಿಗಳಿಗೆ ಮಾರುಕಟ್ಟೆ ಹಾಗೂ ತಾಂತ್ರಿಕ ನೆರವು ಒದಗಿಸಲು ವಿವಿಧ ಸಂಸ್ಥೆಗಳ ಜೊತೆ ಪರಸ್ಪರ ಒಡಂಬಡಿಕೆ ಮಾಡಿಕೊಳ್ಳಲಾಗುತ್ತದೆ. ವಿವಿಧ ಬ್ರಾಡೆಂಟ್ ಸಂಸ್ಥೆಗಳ ಸಹಯೋಗದಲ್ಲಿ ಸಮೃದ್ಧಿ ಯೋಜನೆ ಜಾರಿಗೆ ತರಲಾಗುತ್ತಿದೆ' ಎಂದರು.

ಯಾವ-ಯಾವ ಕಂಪನಿಗಳು?
ಬಿಗ್ ಬಾಸ್ಕೆಟ್, ಜಿಇ ಹೆಲ್ತ್ ಕೇರ್, ಕಾಫಿ ಬೋರ್ಡ್, ಕೆಎಂಎಫ್, ಓಲಾ, ಹಟ್ಟಿಕಾಫಿ, ಚಾಯ್ ಪಾಯಿಂಟ್, ಜ್ಯೋತಿ ಲ್ಯಾಬೊರೇಟರಿ, ಮೇರು ಕ್ಯಾಬ್, ಐಸಿಐಸಿಐ ಫೌಂಡೇಷನ್, ಕ್ಲಾಸಿಕ್ ಪೋಲೋ, ಮಹಿಂದ್ರಾ ಎಲೆಕ್ಟ್ರಿಕ್, ಕುರ್ಲಾನ್, ಬಾಟಾ, ಪಾರಾಗಾನ್, ಖಾದಿಮ್ಸ್, ಟಿಟಿಕೆ ಪ್ರೆಸ್ಟೀಜ್ ಸೇರಿ 31 ಕಂಪನಿಗಳ ಜೊತೆ ಸರ್ಕಾರ ಒಪ್ಪಂದ ಮಾಡಿಕೊಂಡಿದೆ.

ನೆರವು ಮತ್ತು ತರಬೇತಿ
ಮೊಬೈಲ್ ಮಾರಾಟ ಮತ್ತು ದುರಸ್ಥಿ, ಬ್ರಾಂಡೆಡ್ ಮೆಡಿಕಲ್ ಸ್ಟೋರ್, ಬ್ರಾಡೆಂಡ್ ಪಾದರಕ್ಷೆ ಮಳಿಗೆ ಮುಂತಾದ ವ್ಯಾಪಾರ ಆರಂಭಿಸಲು ಸಂಬಂಧಿಸಿದ ಸಂಸ್ಥೆಗಳು ತರಬೇತಿ, ಮಾರುಕಟ್ಟೆ ಹಾಗೂ ತಾಂತ್ರಿಕ ನೆರವು ನೀಡಲಿವೆ. ಚಿಲ್ಲರೆ ಮಾರಾಟಕ್ಕೆ ಅವಕಾಶ ಇರುವ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಆರಂಭಿಸಲು ಅಗತ್ಯ ಆರ್ಥಿಕ ನೆರವು ನೀಡಲಾಗುತ್ತದೆ.

ನವೆಂಬರ್ 7ರಿಂದ ಅರ್ಜಿ
ಸಮೃದ್ಧಿ ಯೋಜನೆಯಡಿ ಆರ್ಥಿಕ ಸಹಾಯ ಧನ ಪಡೆಯಲು ನವೆಂಬರ್ 7 ರಿಂದ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಕೆಲವು ಷರತ್ತುಗಳನ್ನು ವಿಧಿಸಲಾಗಿದೆ.
* ಎಸ್‌ಸಿ/ಎಸ್‌ಟಿ ನಿರುದ್ಯೋಗಿಗಳಿಗೆ ಸೀಮಿತ
* ಕರ್ನಾಟಕದ ಕಾಯಂ ನಿವಾಸಿಯಾಗಿರಬೇಕು
* ಕನಿಷ್ಠ ವಿದ್ಯಾರ್ಹತೆ ಎಸ್ಎಸ್ಎಲ್‌ಸಿ
* ವಯೋಮಿತಿ 21 ರಿಂದ 50 ವರ್ಷ
* ಕುಟುಂಬದ ವಾರ್ಷಿಕ ವರಮಾನ 5 ಲಕ್ಷ ಮೀರಿರಬಾರದು
* ಮೆರಿಟ್, ವಯಸ್ಸು ಆಧರಿಸಿ ಆಯ್ಕೆ
* ಸ್ವಂತ, ಬಾಡಿಗೆ ಮಳಿಗೆ ಹೊಂದಿರಬೇಕು












Click it and Unblock the Notifications