ಗುಡ್ ನ್ಯೂಸ್; ಭಾರೀ ಮಳೆಯಿಂದ ರೈತರ ಬೆಳೆ ಹಾನಿ: 846.03 ಕೋಟಿ ಪರಿಹಾರ ಬಿಡುಗಡೆ: ಸಂಪೂರ್ಣ ವಿವರ ತಿಳಿಯಿರಿ
ಕಲಬುರಗಿ, ಸೆಪ್ಟೆಂಬರ್ 27: ಮುಂಗಾರು ಹಂಗಾಮಿನಲ್ಲಿ ಸುರಿದ ನಿರಂತರ ಮಳೆ ಹಾಗೂ ಮುಂಗಾರು ನಂತರ ಸುರಿದ ಮಳೆಯಿಂದಾಗಿ ರೈತರು ಬೆಳೆದ ಬೆಳೆಗಳು ಹಾಳಾಗಿದೆ. ಬೆಳೆ ಪರಿಹಾರಕ್ಕಾಗಿ ರೈತರು ಸರಕಾರಕ್ಕೆ ಮನವಿ ಸಲ್ಲಿಸಿದರು. ಇದೀಗ ಭಾರೀ ಮಳೆಯಿಂದ ರೈತರ ಬೆಳೆ ಹಾನಿಯಾಗಿದ್ದು, ಬೆಳೆವಿಮೆ ಪರಿಹಾರ ಬಿಡುಗಡೆ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಅವರು ಮಾಹಿತಿ ನೀಡಿದ್ದಾರೆ.
ಕಲಬುರಗಿ ಜಿಲ್ಲೆ ಸೇರಿದಂತೆ ಮಹಾರಾಷ್ಟ್ರ ದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜಿಲ್ಲೆಯ ಭೀಮಾ ನದಿ ತೀರದ ಗ್ರಾಮಗಳಲ್ಲಿ ಪ್ರವಾಹವಾಗಿದೆ. ಮಹಾರಾಷ್ಟ್ರ ದಲ್ಲಿ ರೆಡ್ ಅಲರ್ಟ್ ಹಾಗೂ ಜಿಲ್ಲೆಯಲ್ಲಿ ಆರೆಂಜ್ ಅಲೆರ್ಟ್ ಘೋಷಿಸಲಾಗಿದೆ. ಪ್ರವಾಹ ಪರಿಹಾರ ಸಮೋರಾಪದಿಯಲ್ಲಿ ನಡೆಯುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಪ್ರವಾಹ ಪೀಡಿತ ಅಫಜಲ್‌ಪುರ ತಾಲೂಕಿನ ವಿವಿಧ ಭಾಗಗಳಿಗೆ ಭೇಟಿ ನೀಡಿ ಹಾನಿಗೊಳಗಾದ ಪ್ರದೇಶ ಹಾಗೂ ಬೆಳೆ ಹಾನಿ ಜಮೀನುಗಳ ಪರಿಶೀಲನೆ ನಡೆಸಿದ ನಂತರ ಕಲಬುರಗಿ ಯ ಜಿಲ್ಲಾಧಿಕಾರಿ ಕಚೇರಿಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಜನವರಿ 2025 ರಿಂದ ಸೆಪ್ಟೆಂಬರ್ 25.ರವೆಗಿನ ವಾಡಿಕೆ ಮಳೆ 614 ಮಿಮಿ ಇದ್ದು, 901 ಮಿಮಿ (ಶೇ 47%) ಹೆಚ್ಚುವರಿ ಮಳೆಯಾಗಿದೆ. ಆಗಷ್ಟ ತಿಂಗಳ ವಾಡಿಕೆ 156 ಮಿಮಿ ಇದ್ದು ,263 ಮಿಮಿ ( ಶೇ 69%) ಹೆಚ್ಚುವರಿಯಾಗಿದೆ.
ಸೆಪ್ಟೆಂಬರ್ 1 ರಿಂದ 25 ರವರೆಗೆ ವಾಡಿಕೆ ಮಳೆ 145 ಮಿಮಿ ಇದ್ದು 202 ಮಿಮಿ (39% ) ಹೆಚ್ಚುವರಿ ಯಾಗಿದೆ. ಕಳೆದ ಒಂದು ವಾರದಿಂದ ವಾಡಿಕೆ ಮಳೆ 47 ಮಿಮಿ ಇದ್ದು 88 ಮಿಮಿ ಮಳೆಯಾಗಿದ್ದು, 85% ಹೆಚ್ಚುವರಿಯಾಗಿದೆ. ಇದರಿಂದಾಗಿ ತೊಗರಿ, ಉದ್ದು, ಹತ್ತಿ, ಹೆಸರು ಸೇರಿದಂತೆ ಪ್ರಮುಖ ಬೆಳೆಗಳು ಹಾನಿಯಾಗಿವೆ ಎಂದರು. ಇನ್ನು ಮುಂದಿನ ಮೂರು ದಿನಗಳ ಕಾಲ ಜಿಲ್ಲೆಯಲ್ಲಿ ಮಳೆ ಮುಂದುವರೆಯಲಿದ್ದು, ನದಿ ಪಾತ್ರದ ಜನರು ಯಾವುದೇ ಕಾರಣಕ್ಕೂ ನದಿಗೆ ಇಳಿಯಬಾರದು ಎಂದು ಮನವಿ ಮಾಡಿದರು.
ಇನ್ನೂ ನದಿ ಪಾತ್ರದ ಕೆಲವು ಕಡೆ ಜನರು ಪುನರ್ ವಸತಿಗಾಗಿ ಆಗ್ರಹಿಸಿದ್ದಾರೆ. ಯಾವ ಗ್ರಾಮದ ಜನರು ಪುನರ್ ವಸತಿ ಬಯಸಿದ್ದಾರೆ ಅವರು ಜಿಲ್ಲಾಡಳಿತಕ್ಕೆ ವಿವರ ಒದಗಿಸಿದರೆ ಆ ಬಗ್ಗೆಯೂ ಕೂಡಾ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಸಚಿವರು ಭರವಸೆ ನೀಡಿದರು. 2025-26 ನೇ ಸಾಲಿನ 3,00,952 ರೈತರು ಬೆಳೆ ವಿಮೆ ನೋಂದಣಿ ಮಾಡಿಸಿದ್ದು, ಶೇ 59 ರೈತರು ಬೆಳೆ ಹಾನಿ ಬಗ್ಗೆ ದೂರು ಸಲ್ಲಿಸಿರುತ್ತಾರೆ. ದೂರು ನೀಡಿದ ರೈತರ ಬೆಳೆ ಹಾನಿ ಸಮೀಕ್ಷೆ ಶೇ 75 ಮುಗಿದಿದೆ. ಈಗಾಗಲೇ 2024-25 ನೇ ಸಾಲಿನ ಎರಡನೆಯ ಕಂತಿನ ಬೆಳೆವಿಮೆ ಪರಿಹಾರವಾಗಿ ರೂ 315.64 ಕೋಟಿ ಬಿಡುಗಡೆಯಾಗಿದ್ದು, ಸಧ್ಯದಲ್ಲೇ ರೈತರ ಅಕೌಂಟ್ ಗೆ ಜಮೆ ಮಾಡಲಾಗುವುದು ಎಂದು ಸಚಿವರು ಹೇಳಿದರು.
ಬೆಳೆ ಪರಿಹಾರ ಸೇರಿದಂತೆ ರೈತರಿಗೆ ಸೇರಬೇಕಾಗಿರುವ ಪರಿಹಾರ ಒದಗಿಸಿಕೊಡುವಲ್ಲಿ ಕಾಂಗ್ರೆಸ್ ಸರ್ಕಾರ ಬಿಜೆಪಿಗಿಂತಲೂ ಮುಂದಿದೆ ಆದರೂ ಬಿಜೆಪಿ ನಾಯಕರು ರಾಜಕೀಯ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಸಚಿವರು, 2023-24 ರ ಸಾಲಿನಲ್ಲಿ ಇನ್ ಪುಟ್ ಸಬ್ಸಿಡಿ ಹಾಗೂ ಬೆಳೆ ವಿಮೆ ಸೇರಿದಂತೆ 8,91,277 ರೈತರಿಗೆ ರೂ 1417 ಕೋಟಿ ಪರಿಹಾರ ಒದಗಿಸಲಾಗಿದೆ. 2023-24 ಹಾಗೂ 2024-25 ರ ಸಾಲಿನ ಬೆಳೆ ವಿಮೆಯಾಗಿ 3,63,368 ರೈತರಿಗೆ ರೂ 846.03 ಕೋಟಿ ಪರಿಹಾರ ಒದಗಿಸಲಾಗಿದೆ.
ಕಲಬುರಗಿ ಜಿಲ್ಲೆಯಲ್ಲಿ ನೆಟೆರೋಗದಿಂದ ತೊಗರಿ ಬೆಳೆ ಹಾನಿಯಾದಾಗ 1,78,354 ರೈತರಿಗೆ ರೂ 182 ಕೋಟಿ ಪರಿಹಾರ ನೀಡಲಾಗಿದೆ. ಬರ/ ನೆರೆಪರಿಹಾರವಾಗಿ ರೂ 389.14 ಕೋಟಿ ಪರಿಹಾರ ನೀಡಲಾಗಿದೆ. ಬಿಜೆಪಿಯ ಅಧಿಕಾರವಾಧಿಯಲ್ಲಿ ರೂ 206 ಕೋಟಿ ಮಾತ್ರ ಬಿಡುಗಡೆ ಮಾಡಲಾಗಿತ್ತು. ಬಿಜೆಪಿ ನಾಯಕರು ಎನ್ ಡಿ ಆರ್ ಎಫ್ ನಿಯಮಾವಳಿಗಳ ಸರಳೀಕರಣಕ್ಕಾಗಿ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಲಿ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಮಹಾರಾಷ್ಟ್ರದ ಉಜ್ಜನಿ ಜಲಾಶಯದಿಂದ 45,000 ಕ್ಯೂಸೆಕ್ಸ್, ಸಿನಾ ಜಲಾಶಯದಿಂದ 2,70,000 ಕ್ಯೂಸೆಕ್ಸ್, ವಿರಾ ಜಲಾಶಯದಿಂದ 30,000 ಕ್ಯೂಸೆಕ್ಸ್ ಹಾಗೂ ಭೋರಿ ಹಳ್ಳದಿಂದ 5,000 ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಿದ್ದರಿಂದ ಭೀಮಾ ನದಿಗೆ 3,50,000 ಕ್ಯೂಸೆಕ್ಸ್ ನೀರು ಹರಿದು ಬಂದಿದೆ. ಅಫಜಲ್ ಪುರ ತಾಲೂಕಿನ ಸೊನ್ನ ಬ್ಯಾರೇಜ್‌ನಿಂದ 3.45 ಲಕ್ಷ ಕ್ಯೂಸೆಕ್ಸ್ ನೀರು ಭೀಮಾ ನದಿಗೆ ಬಿಡಲಾಗಿದೆ ಹಾಗಾಗಿ ನದಿ ಪಾತ್ರದಲ್ಲಿ ಪ್ರವಾಹ ಸ್ಥಿತಿ ಉಂಟಾಗಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಮಳೆಯಿಂದ ಜಿಲ್ಲೆಯಲ್ಲಿ ಮೇಲ್ಮೋಟದ ಅಂದಾಜಿನಂತೆ 1.05 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಬೆಳೆ ಹಾನಿಯಾಗಿದೆ. ಕೃಷಿ, ಕಂದಾಯ, ತೋಟಗಾರಿಕೆ ಸೇರಿದಂತೆ ಇತರೆ ಇಲಾಖೆಗಳ ಜಂಟಿ ಸಮೀಕ್ಷೆ ನಡೆಸಲಾಗುತ್ತಿದ್ದು ಶೇ 90 ರಷ್ಟು ಸಮೀಕ್ಷೆ ಮುಗಿದಿದೆ. ಪೂರ್ಣ ಸಮೀಕ್ಷೆ ಮುಗಿದ ನಂತರ ಬೆಳೆ ಹಾನಿ ಗೊತ್ತಾಗಲಿದೆ. ಈ ನಡುವೆ ಸೆಪ್ಟೆಂಬರ್ 17 ರಂದು ಜಿಲ್ಲೆಗೆ ಭೇಟಿ ನೀಡಿದ್ದ ಸಿಎಂ ಸಿದ್ದರಾಮಯ್ಯ ನವರಿಗೆ ಬೆಳೆ ಹಾನಿ ಬಗ್ಗೆ ವಿವರಿಸಲಾಗಿದೆ ಎಂದರು.












Click it and Unblock the Notifications