ʼರಾಜ್ಯದ ವಿವಿಧ ಇಲಾಖೆಯಲ್ಲಿ ಸುಮಾರು 2.40 ಲಕ್ಷ ಹುದ್ದೆಗಳು ಹಂತ ಹಂತವಾಗಿ ಭರ್ತಿʼ
ಬೆಂಗಳೂರು, ಜನವರಿ 06: ರಾಜ್ಯದ ಗೃಹ, ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸೇರಿದಂತೆ ಸುಮಾರು 2.40 ಲಕ್ಷ ಹುದ್ದೆಗಳು ಖಾಲಿ ಇದ್ದು, ಈ ಎಲ್ಲ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲಾಗುವುದು. ಈ ವಿಚಾರದಲ್ಲಿ ಸರ್ಕಾರ ತನ್ನ ಬದ್ಧತೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಸ್ಪಷ್ಟಪಡಿಸಿದರು.
ಈ ಕುರಿತು ಮಾತನಾಡಿದ ಅವರು, ರಾಜ್ಯ ಸರ್ಕಾರ ಕೇವಲ ನಿರುದ್ಯೋಗ ಭತ್ಯೆ ನೀಡುವುದಿಲ್ಲ ಅದರ ಜೊತೆಗೆ ಕೌಶಲ್ಯ ಅಭಿವೃದ್ದಿಗೆ ಒತ್ತು ನೀಡಲಿದ್ದು ಉತ್ಜೃಷ್ಟ ಮಟ್ಟದ ಮಾನವ ಸಂಪನ್ಮೂಲ ಉತ್ಪನ್ನ ಮಾಡುವ ನಿಟ್ಟಿನಲ್ಲಿ ಕೌಶಲ್ಯ ಸಲಹಾ ಸಮಿತಿ ರಚನೆ ಮಾಡಿದ್ದು ತಾವು ಅಲ್ಲದೇ ಸಚಿವ ಶರಣಪ್ರಕಾಶ ಪಾಟೀಲ್ ಅವರು ಆ ಸಮಿತಿಯಲ್ಲಿದ್ದು ಕರ್ನಾಟಕ ಕೌಶಲ್ಯ ಪೋರ್ಟಲ್‌ನಲ್ಲಿ ಹೆಸರು ನೋಂದಾಯಿಸುವ ಅಭ್ಯರ್ಥಿಗಳಿಗೆ ಖಾಸಗಿ ಅಥವಾ ಸರ್ಕಾರದ ಸಹಯೋಗದೊಂದಿಗಿನ ಸಂಸ್ಥೆಗಳ ಮೂಲಕ ಸೂಕ್ತ ಕೌಶಲ್ಯ ತರಬೇತಿ ನೀಡಲಾಗುವುದು. ಆ ಮೂಲಕ ಅಂತಹ ಅಭ್ಯರ್ಥಿಗಳು ಕೆಲಸ ಪಡೆದುಕೊಳ್ಳುವಲ್ಲಿ ಅನುಕೂಲವಾಗುವಂತ ವಾತಾವರಣ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.

ಕಲಬುರಗಿ ಜಿಲ್ಲೆಯಲ್ಲಿ 5 ವಿಶ್ವವಿದ್ಯಾಲಯಗಳು, 6 ಇಂಜಿನಿಯರಿಂಗ್ ಕಾಲೇಜು, 12 ಪಾಲಿಕೆಟ್ನಿಕ್ ಕಾಲೇಜು ಹಾಗೂ 80 ಕ್ಕೂ ಅಧಿಕ ಪದವಿ ಕಾಲೇಜುಗಳಿವೆ. 2022-23 ನೇ ಸಾಲಿನಲ್ಲಿ 9000 ಕ್ಕೂ ಅಧಿಕ ಪದವಿ ಹಾಗೂ ಡಿಪ್ಲೋಮಾ ಪಾಸಾದ ಅಭ್ಯರ್ಥಿಗಳಿದ್ದು ಅವರಲ್ಲಿ ಇದುವರೆಗೆ 1575 ಅಭ್ಯರ್ಥಿಗಳು ತಮ್ಮ ಹೆಸರು ನೋಂದಾಯಿಸಿದ್ದಾರೆ.
ಪದವಿ ಹಾಗೂ ಡಿಪ್ಲೋಮಾ ಮುಗಿದು ಕನಿಷ್ಠ 6 ತಿಂಗಳ ಅವಧಿಯವರೆಗೆ ಸರ್ಕಾರಿ ಹಾಗೂ ಖಾಸಗಿ ಉದ್ಯೋಗ ಹೊಂದಿಲ್ಲದವರು, ಸ್ವಯಂ ಉದ್ಯೋಗವಿಲ್ಲದವರು, ಉನ್ನತ ವಿದ್ಯಾಭ್ಯಾಸ ಮುಂದುವರೆಸದವರು ಈ ಯೋಜನೆಗೆ ಅರ್ಹತರಿದ್ದು ನೋಂದಾವಣೆಗೆ ಯಾವುದೇ ಕಾಲಮಿತಿಯಿಲ್ಲ ಹಾಗಾಗಿ ಇನ್ನುಳಿದ ಅಭ್ಯರ್ಥಿಗಳು ತಮ್ಮ ಹೆಸರು ನೋಂದಾಯಿಸುವ ಮೂಲಕ ಈ ಯೋಜನೆಯ ಲಾಭ ಪಡೆದುಕೊಳ್ಳಬೇಕು ಎಂದು ಸಚಿವರು ಕರೆ ನೀಡಿದರು.
ಜನವರಿ ಅಂತ್ಯ ಅಥವಾ ಫೆಬ್ರುಬರಿ ಮೊದಲ ವಾರದಲ್ಲಿ ಬೆಂಗಳೂರಿನಲ್ಲಿ ಮಟ್ಟದಲ್ಲಿ ಉದ್ಯೋಗ ಮೇಳ ಆಯೋಜಿಸಲು ಕ್ರಮ ಕೈಗೊಳ್ಳಲಾಗಿದ್ದು, ನಂತರ ಪ್ರಾದೇಶಿಕ, ಜಿಲ್ಲಾ ಮಟ್ಟದಲ್ಲಿಯೂ ಕೂಡಾ ಉದ್ಯೋಗ ಮೇಳ ಆಯೋಜಿಸಲಾಗುವುದು. ಕರ್ನಾಟಕ ಕೌಶಲ್ಯ ಪೋರ್ಟಲ್ ನಲ್ಲಿ ಹೆಸರು ನೋಂದಾಯಿಸಿದ ಅಭ್ಯರ್ಥಿಗಳು ಕೂಡಾ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದು ಎಂದು ಹೇಳಿದರು.

ಇದೇ ಜನೇವರಿ 9 ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಲಬುರಗಿ ಉತ್ತರ ಹಾಗೂ ದಕ್ಷಿಣ ಮತಕ್ಷೇತ್ರದ ವ್ಯಾಪ್ತಿಯ ಸಾರ್ವಜನಿಕರ ಕುಂದುಕೊರತೆ ಆಲಿಸಲು ಜನಸ್ಪಂದನೆ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಹಿಂದೆ ಚಿಂಚೋಳಿಯಲ್ಲಿ ಜರುಗಿದ ಜನಸ್ಪಂದನ ಕಾರ್ಯಕ್ರಮದಲ್ಲಿ 612 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು ಅವುಗಳಲ್ಲಿ 606 ಅರ್ಜಿಗಳ ವಿಲೇವಾರಿ ಮಾಡಲಾಗಿದ್ದು, 6 ಅರ್ಜಿಗಳು ಬಾಕಿ ಇವೆ ಎಂದರು.
ನಕಲಿ ಅಂಕಪಟ್ಟಿ ವಿಚಾರದ ಕುರಿತಂತೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಆ ಬಗ್ಗೆ ನನಗೆ ಹೆಚ್ಚಿನಮಾಹಿತಿ ಇಲ್ಲ ಮಾಧ್ಯಮಗಳಲ್ಲಿ ಬಂದ ಸುದ್ದಿ ಓದಿದ್ದೇನೆ. ವಿಚಾರ ತಿಳಿದುಕೊಂಡು ಆ ಬಗ್ಗೆ ಸಮಗ್ರ ತನಿಖೆ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಇನ್ನೂ ಜಾತಿಗೊಬ್ಬ ಡಿಸಿಎಂ ನೇಮಿಸುವ ಕುರಿತಂತೆ ಕೂಗೆದ್ದಿದೆ ಎನ್ನುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕ್ ಈ ವಿಚಾರದಲ್ಲಿ ತಮ್ಮ ಅಭಿಪ್ರಾಯ ಹೇಳಲು ಪಕ್ಷದಲ್ಲಿ ಆಂತರಿಕ ಸ್ವಾತಂತ್ರ್ಯ ವಿದೆ. ಆದರೆ,ಹೈಕಮಾಂಡ್ ಈ ವಿಷಯದಲ್ಲಿ ನಿರ್ಧಾರ ಕೈಗೊಳ್ಳಲಿದೆ ಎಂದರು.












Click it and Unblock the Notifications