ಖಾಸಗಿ ಡೈರಿಗಳ ಕಮೀಷನ್ ಕಾರ್ಯತಂತ್ರಕ್ಕೆ ನಂದಿನಿ ಹಾಲಿಗೆ ಹೊಡೆತ !
ಬೆಂಗಳೂರು, ಜ. 05: ಕಮೀಷನ್ ಸಮರ ಸಾರುವ ಮೂಲಕ ಖಾಸಗಿ ಡೈರಿಗಳು ಕರ್ನಾಟಕ ಹಾಲು ಉತ್ಪಾದಕರ ಮಹಾ ಮಂಡಳಿ (KMF) "ನಂದಿನಿ ಬ್ರಾಂಡ್' ಹಾಲು ಉತ್ಪನ್ನಗಳಿಗೆ ಪ್ರತಿಸ್ಪರ್ಧೆ ಒಡ್ಡಿವೆ. ನಂದಿನಿ ಹಾಲು ಮಾರಾಟದ ಜಾಗಗಳನ್ನು ಖಾಸಗಿ ಡೈರಿಗಳು ಸದ್ದಿಲ್ಲದೇ ಅಕ್ರಮಿಸಿಕೊಳ್ಳುತ್ತಿವೆ. ಹಾಲು ಮಾರಾಟ ಮಾಡುವ ಏಜೆಂಟರು ಕಮೀಷನ್ ಆಸೆಗೆ ಬಿದ್ದು ನಂದಿನಿ ಹಾಲು ಉತ್ಪನ್ನಗಳ ಬದಲಿಗೆ ಖಾಸಗಿ ಡೈರಿಗಳ ಹಾಲು ಉತ್ಪನ್ನ ಮಾರಾಟಕ್ಕೆ ಒತ್ತು ನೀಡುತ್ತಿದ್ದು, ಭವಿಷ್ಯದಲ್ಲಿ ನಂದಿನಿ ಹಾಲು ಉತ್ಪನ್ನಗಳಿಗೆ ದೊಡ್ಡ ಮಾರಕವಾಗುವ ವಾತಾವರಣ ಸೃಷ್ಟಿ ಮಾಡುತ್ತಿವೆ.
ನಂದಿನಿ ಹಾಲಿನ ಕಮೀಷನ್ ವಿವರ:
ಕೆಎಂಎಫ್ ನಂದಿನಿ ಹಾಲು ಮತ್ತು ಮೊಸರು ಒಂದು ಲೀಟರ್ ಗೆ ( ವಿವಿಧ ಶ್ರೇಣಿ- ವಿವಿಧ ದರ) ಕನಿಷ್ಠ 38 ರೂ. ನಿಗದಿ ಮಾಡಿದೆ. ಆದರೆ ಒಂದು ಲೀಟರ್ ನಂದಿನಿ ಹಾಲು ಮಾರಿದರೆ ಕೆಎಂಎಫ್ ಕೊಡುವ ಕಮೀಷನ್ ಕೇವಲ 1 ರೂಪಾಯಿ, 75 ಪೈಸೆ. ಇನ್ನೂ ಖರೀದಿ ಮಾಡಿದ ಹಾಲಿನಲ್ಲಿ ಯಾವುದಾದರೂ ಲೀಕೇಜ್ ಬಂದರೂ ಅದು ಡೀಲರ್ ಜವಾಬ್ದಾರಿ. ಆದರೆ, ನಂದಿನಿ ಹಾಲಿಗೆ ಪ್ರತಿಸ್ಪರ್ಧೆ ಒಡ್ಡಿರುವ ಹೆರಿಟೇಜ್ ಹಾಲು ಒಂದು ಲೀಟರ್ ಮಾರಾಟ ಮಾಡಿದರೆ, 3.80 ರೂ. ನೀಡುತ್ತವೆ. ಇನ್ನು ಡೊಡ್ಲಾ ಲೀಟರ್ ಮಾರಾಟ ಮಾಡಿದರೆ ಮಾರಾಟ ದರದಲ್ಲಿ 8 ರೂ. ಕಮೀಷನ್ ನೀಡುತ್ತದೆ. ಅದೇ ರೀತಿ ಆರೋಗ್ಯ ಹಾಲು ಮಾರಿದರೆ, ಒಂದು ಲೀಟರ್ ಗೆ ನಾಲ್ಕು ರೂ. ಕಮೀಷನ್ ಏಜೆಂಟರಿಗೆ ಹೋಗುತ್ತದೆ. ಹೀಗಾಗಿ ನಂದಿನಿ ಹಾಲು ಮಾರಾಟ ಮಾಡುವ ಏಜೆಂಟರಿಗೆ ಕೊಡುವ ಕಮೀಷನ್ ಸಾಕಾಗುತ್ತಿಲ್ಲ. ಹೀಗಾಗಿ ಚಿಲ್ಲರೆ ಮಾರಾಟಗಾರರಿಗೆ ಐದು ಪೈಸೆ ಕೂಡ ಕಮೀಷನ್ ಸಿಗುತ್ತಿಲ್ಲ. ಹೀಗಾಗಿ ನಂದಿನಿ ಹಾಲನ್ನ ಚಿಲ್ಲರೆ ವ್ಯಾಪಾರಿಗಳು ಹೆಚ್ಚುವರಿ ಹಣಕ್ಕೆ ಮಾರಾಟ ಮಾಡುತ್ತಿದ್ದಾರೆ.

ಖಾಸಗಿ ಡೈರಿಗಳ ಕಮೀಷನ್ ಪ್ಲಾನ್ :
ಖಾಸಗಿ ಡೈರಿಗಳು ನಂದಿನಿ ಹಾಲಿಗೆ ಪ್ರತಿಸ್ಪರ್ಧೆ ಸಾರಲು ಹೆಚ್ಚು ಕಮೀಷನ್ ಆಸೆ ತೋರಿಸಿವೆ. ಹೀಗಾಗಿ ಏಜೆಂಟರು ಲಾಭದ ಉದ್ದೇಶದಿಂದ ಅರೋಗ್ಯ, ಡೊಡ್ಲಾ ಹೆರಿಟೇಜ್ ಖಾಸಗಿ ಡೈರಿಗಳ ಹಾಲು ಪಾಕೆಟ್ ಗಳನ್ನು ಮಾರಾಟ ಮಾಡಲು ಪುಸಲಾಯಿಸುತ್ತಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲಿ ದಿನೇ ದಿನೇ ನಂದಿನಿ ಗ್ರಾಹಕರನ್ನು ಖಾಸಗಿ ಡೈರಿಗಳು ಅಕ್ರಮಿಸಿಕೊಳ್ಳುತ್ತಿವೆ.
ವಿಪರ್ಯಾಸವೆಂದರೆ ನಂದಿನಿ ಹಾಲಿನ ಉತ್ಪನ್ನಗಳಿಗೆ ಹೋಲಿಸಿದರೆ, ಖಾಸಗಿ ಡೈರಿಗಳ ದರ ಹೆಚ್ಚು. ನಂದಿನಿ ಒಂದು ಲೀಟರ್ ಹಾಲು 38 ರೂ.ಗೆ ಮಾರಾಟವಾದರೆ, ಡೊಡ್ಲಾ ಹಾಲು ಲೀಟರ್ 56 ರೂ. ನಿಗದಿ ಮಾಡಲಾಗಿದೆ. ಇಲ್ಲಿ ಗ್ರಾಹಕರಿಂದ ಸುಲಿದು ಕಮೀಷನ್ ರೂಪದಲ್ಲಿ ಏಜೆಂಟರಿಗೆ ನೀಡಲಾಗುತ್ತದೆ. ಎಲ್ಲಾ ಖಾಸಗಿ ಡೈರಿಗಳು ತಮ್ಮ ಉತ್ಪನ್ನ ಮಾರಾಟಕ್ಕೆ ಈ ಮಾರ್ಗ ಅನುಸರಿಸಿವೆ. ಆದರೆ ನಂದಿನಿ ಹಾಲಿನ ಉತ್ಪನ್ನ ಕಡಿಮೆ ದರವಿದ್ದರೂ, ಅವು ಲಭ್ಯವಾಗದಂತೆ ಏಜೆಂಟರೇ ಕಮೀಷನ್ ಆಸೆಗಾಗಿ ಖಾಸಗಿ ಡೈರಿನ ಹಾಲಿನ ಉತ್ಪನ್ನ ಮಾರಾಟ ಮಾಡುತ್ತಿದ್ದಾರೆ. ಕಮೀಷನ್ ದರ ಸಮರಕ್ಕೆ ಇಳಿಯದೇ ನಂದಿನಿ ಹಾಲಿನ ಉತ್ಪನ್ನಗಳನ್ನು ಮಾರಾಟಕ್ಕೆ ಏಜೆಂಟರು ಹೆಚ್ಚು ಆಸಕ್ತಿ ತೋರುತ್ತಿಲ್ಲ. ಕಮೀಷನ್ ಆಸೆಗೆ ಬಿದ್ದು ಖಾಸಗಿ ಡೈರಿಗಳ ಉತ್ಪನ್ನಗಳನ್ನೇ ಹೆಚ್ಚು ಮಾರಾಟ ಮಾಡುತ್ತಿದ್ದಾರೆ.
ಏಜೆಂಟ್ ಮನದಾಳದ ಮಾತು:
ರಾಜ್ಯದಲ್ಲಿ 14 ಸಾವಿರ ನಂದಿನಿ ಹಾಲಿನ ಮಾರಾಟ ಏಜೆಂಟರು ಇದ್ದಾರೆ. ಒಂದು ಲೀಟರ್ ಹಾಲು ಮಾರಾಟ ಮಾಡಿದರೆ, ಎರಡು ರೂಪಾಯಿ ಕೂಡ ಸಿಗಲ್ಲ. 200 ಲೀಟರ್ ಹಾಲು ತರಿಸಿದರೆ ಕನಿಷ್ಠ ಮೂರು ಲೀಟರ್ ನಷ್ಟ. ಇನ್ನು ಹಾಲನ್ನು ಚಿಲ್ಲರೆ ಅಂಗಡಿಗಳಿಗೆ ಸರಬರಾಜು, ಕೆಲಸಗಾರರ ವೇತನ, ಬಾಡಿಗೆ ಎಲ್ಲ ಸೇರಿದರೆ ಐದು ನೂರು ರೂಪಾಯಿ ಉಳಿಸೋದು ಕಷ್ಟ. ಹೀಗಾಗಿ ಬಹುತೇಕ ಏಜೆಂಟರು ಪರ್ಯಾಯವಾಗಿ ಖಾಸಗಿ ಡೈರಿನ ಹಾಲಿನ ಉತ್ಪನ್ನಗಳನ್ನೇ ಮಾರಾಟ ಮಾಡುತ್ತಾರೆ. ಚಿಲ್ಲರೆ ವ್ಯಾಪಾರಸ್ಥರು ನಂದಿನಿ ಹಾಲಿಗಿಂತಲೂ ಲಾಭದ ಉದ್ದೇಶದಿಂದ ಖಾಸಗಿ ಡೈರಿಗಳ ಹಾಲನ್ನು ಹಾಕಿಸಿಕೊಳ್ಳುತ್ತಿದ್ದಾರೆ. ಕೆಎಂಎಫ್ ಸೂಕ್ತ ಕಮೀಷನ್ ನೀಡಿದರೆ, ನಮಗೆ ಬರುವ ಕಮೀಷನ್ ನಲ್ಲಿ ಸ್ವಲ್ಪ ಭಾಗ ಚಿಲ್ಲರೆ ಮಾರಾಟಗಾರರಿಗೆ ನೀಡಲು ಅನುಕೂಲವಾಗುತ್ತದೆ. ಆದರೆ, ಇದರ ಬಗ್ಗೆ ಕೆಎಂಎಫ್ ಗೆ ಅನೇಕ ಮನವಿ ಮಾಡಿದರೂ ಪ್ರಯೋಜನ ಆಗಿಲ್ಲ ಎನ್ನುತ್ತಾರೆ ನಂದಿನಿ ಹಾಲಿನ ಡೀಲರ್.

ಕೆಎಂಎಫ್ ಸಹಕಾರ ಒಕ್ಕೂಟ. ಇಲ್ಲಿ ರೈತರ ಹಿತ ರಕ್ಷಣೆ ಜತೆಗೆ ಗ್ರಾಹಕರ ಹಿತ ರಕ್ಷಣೆ ಮುಖ್ಯ. ಖಾಸಗಿ ಡೈರಿಗಳು ಹೆಚ್ಚು ದರಕ್ಕೆ ಮಾರಾಟ ಮಾಡಿ, ಅದನ್ನು ಕಮೀಷನ್ ರೂಪದಲ್ಲಿ ಡೀಲರ್ ಗಳಿಗೆ ನೀಡುತ್ತಿದೆ. ಆದರೆ, ನಾವು ಬೆಲೆ ಜಾಸ್ತಿ ಮಾಡಿ ಗ್ರಾಹಕರ ಹಿತಕ್ಕೆ ಧಕ್ಕೆ ತರಲು ಅಸಾಧ್ಯ. ಹೀಗಾಗಿ ಬೇರೆ ಡೈರಿಗಳ ಹಾಲಿನ ದರಕ್ಕೆ ಹೋಲಿಸಿದರೆ ನಂದಿನಿ ಹಾಲಿನ ದರ ಕಡಿಮೆ. ಹೀಗಾಗಿ ನಂದಿನಿ ಡೀಲರ್ ಗಳು ನಷ್ಟವಾಗದಂತೆ ಹೊಸ ಪ್ರಯೋಗ ಮಾಡುತ್ತಿದ್ದೇವೆ. ರಾಜ್ಯದಲ್ಲಿ 2027 ರೊಳಗೆ ಐದು ಸಾವಿರ ನಂದಿನಿ ಪಾರ್ಲರ್ ಆರಂಭಿಸುತ್ತಿದ್ದೇವೆ. ನಂದಿನಿ ಹಾಲಿನ ಜತೆಗೆ ತುಪ್ಪ ಚಾಕಲೆಟ್ ಐಸ್ ಕ್ರೀಮ್ , ಪನ್ನೀರ್ ಮತ್ತಿತರ ಉತ್ಪನ್ನಗಳನ್ನು ಒಂದು ಸೂರಿನಡಿ ಮಾರಾಟ ಮಾಡಲು ಚಿಂತನೆ ನಡೆಸಿದ್ದೇವೆ ಎಂದು ಕೆಎಂಎಫ್ ನ ಮಾರಾಟ ವಿಭಾಗದ ನಿರ್ದೇಶಕ ಎಂ.ಟಿ. ಕುಲಕರ್ಣಿ ಒನ್ ಇಂಡಿಯಾ ಕನ್ನಡಕ್ಕೆ ತಿಳಿಸಿದರು.

ಇದರಿಂದ ಹಾಲಿನಿಂದ ಕಮೀಷನ್ ಕಡಿಮೆ ಸಿಕ್ಕರೂ ಇತರೆ ಉತ್ಪನ್ನಗಳಿಂದ ಹೆಚ್ಚು ಲಾಭವಾಗಲಿದೆ. ಈ ಮೂಲಕ ಡೀಲರ್‌ಗಳ ಹಿತ ಕಾಯಲಿಕ್ಕೆ ಮುಂದಾಗಿದ್ದೇವೆ. ದರ ಏರಿಕೆ ಮಾಡಿ ಗ್ರಾಹಕರಿಗೆ ಹೊರ ಹಾಕುತ್ತಾ ಹೋದರೆ ಈ ಸಮರ ಕೊನೆಗೊಳ್ಳುವುದಿಲ್ಲ. ಖಾಸಗಿ ಡೈರಿಗಳು ಮತ್ತಷ್ಟು ಕಮೀಷನ್ ಹೆಚ್ಚಿಸುತ್ತವೆ. ಹೀಗಾಗಿ ನಂದಿನಿ ಉತ್ಪನ್ನಗಳಿಗೆ ಸೀಮಿತಗೊಳಿಸಿ ನಂದಿನಿ ಪಾರ್ಲರ್ ಮತ್ತು ನಂದಿನಿ ಕೆಫೆಗಳನ್ನು ರಾಜ್ಯದಾದ್ಯಂತ ಪ್ರಾರಂಭಿಸುತ್ತಿದ್ದೇವೆ. ಈ ಮೂಲಕ ಕೆಎಂಎಫ್ ತನ್ನ ಗ್ರಾಹಕರಿಗೆ ಗುಣಮಟ್ಟದ ಹಾಲಿನ ಜತೆಗೆ ಇತರೆ ಉತ್ಪನ್ನ ಒಂದೇ ಸೂರಿನಡಿ ಮಾರಾಟ ಮಾಡಲು ವಿವಿಧ ಯೋಜನೆ ರೂಪಿಸಿ ಕಾರ್ಯಗತ ಮಾಡುತ್ತಿದ್ದೇವೆ ಎಂದು ಕುಲಕರ್ಣಿ ಹೇಳಿದರು.

ಕರ್ನಾಟಕದಲ್ಲಿ ಈಗಾಗಲೇ 1800 ಪಾರ್ಲರ್ ಆರಂಭಿಸಿದ್ದೇವೆ. ಕೆಲವೇ ವರ್ಷಗಳಲ್ಲಿ ಐದು ಸಾವಿರಕ್ಕೆ ಹೆಚ್ಚಿಸುತ್ತಿದ್ದೇವೆ. ಇದರ ಜತೆಗೆ 14 ಸಾವಿರ ಏಜೆಂಟರು ಇದ್ದಾರೆ. ಒಟ್ಟು 20 ಸಾವಿರ ಮಾರಾಟ ಕೇಂದ್ರಗಳು ಆಗುವುದರಿಂದ ನಂದಿನಿ ಹಾಲಿನ ಉತ್ಪನ್ನ ಜತೆಗೆ ಇತರೆ ಉತ್ಪನ್ನ ಕೂಡ ಗ್ರಾಹಕರಿಗೆ ಲಭ್ಯವಾಗಲಿದೆ. ಯಾವ ಕಾರಣಕ್ಕೂ ನಂದಿನಿ ಹಾಲಿನ ದರ ಹೆಚ್ಚು ಮಾಡಿ ಅದರ ಲಾಭವನ್ನು ಏಜೆಂಟರಿಗೆ ಕೊಡುವ ಪ್ರಸ್ತಾವನೆ ಇಲ್ಲ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಕೆಎಂಎಫ್ ನ ಹಾಲು ಮತ್ತು ಉತ್ಪನ್ನಗಳ ಮಾರಾಟ ಕೇಂದ್ರಗಳನ್ನು ಹೆಚ್ಚು ಮಾಡಲಾಗುವುದು ಎಂದು ಕುಲಕರ್ಣಿ ಸ್ಪಷ್ಟನೆ ನೀಡಿದ್ದಾರೆ.












Click it and Unblock the Notifications