ಅಧಿಕಾರಿಗೆ ಬೆದರಿಕೆ ಹಾಕಿದ ವರ್ತೂರು ವಿರುದ್ಧ ದೂರು
ಬೆಂಗಳೂರು, ಮಾ. 24 : ಸರ್ಕಾರಿ ಅಧಿಕಾರಿಗೆ ಬೆದರಿಕೆ ಹಾಕಿದ ಆರೋಪ ಎದುರಿಸುತ್ತಿರುವ ಕೋಲಾರ ಶಾಸಕ ವರ್ತೂರು ಪ್ರಕಾಶ್ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿದೆ. ಶಾಸಕರ ವಿರುದ್ಧ ಮೊಕದ್ದಮೆ ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಕರ್ನಾಟಕ ರಣಧೀರ ಪಡೆ ದೂರಿನಲ್ಲಿ ಮನವಿ ಮಾಡಿದೆ.
ಕೋಲಾರ ಶಾಸಕ ವರ್ತೂರ್ ಪ್ರಕಾಶ್ ಸರ್ಕಾರಿ ಅಧಿಕಾರಿಗೆ ಮರಳು ಲಾರಿಗಳನ್ನು ಬಿಡಿಸುವಂತೆ ಬೆದರಿಕೆ ಹಾಕಿದ ಆಡಿಯೋ ಸಿಡಿಯನ್ನು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಶನಿವಾರ ಬಿಡುಗಡೆ ಮಾಡಿದ್ದರು. ಇದನ್ನು ಆಧಾರವಾಗಿಟ್ಟುಕೊಂಡು ಸೋಮವಾರ ಲೋಕಾಯುಕ್ತರಿಗೆ ದೂರು ನೀಡಲಾಗಿದೆ.

ಶಾಸಕ ವರ್ತೂರು ಪ್ರಕಾಶ್ ವಿರುದ್ಧ ಮೊಕದ್ದಮೆ ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಕರ್ನಾಟಕ ರಣಧೀರ ಪಡೆ ಮನವಿ ಮಾಡಿದೆ. ವರ್ತೂರು ಪ್ರಕಾಶ್ ಅವರು ಬೆದರಿಕೆ ಹಾಕುವ ಆಡಿಯೋ ಸಿಡಿಯನ್ನು ದೂರಿನೊಂದಿಗೆ ಸಲ್ಲಿಕೆ ಮಾಡಿದೆ.[ವರ್ತೂರು ಆಡಿಯೋ ಸಿಡಿ ವಿವರ]
ಲೋಕಾಯುಕ್ತರಿಗೆ ದೂರು ಮತ್ತು 10 ನಿಮಿಷಗಳ ಆಡಿಯೋ ಸಿಡಿಯನ್ನು ನೀಡಲಾಗಿದ್ದು, ದೂರನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ಭರವಸೆ ನೀಡಿದ್ದಾರೆ ಎಂದು ರಣಧೀರ ಪಡೆ ಅಧ್ಯಕ್ಷ ಬಿ.ಹರೀಶ್ ಕುಮಾರ್ ಹೇಳಿದ್ದಾರೆ.

ಮಾ. 16ರಂದು ಅಸಹಜವಾಗಿ ಸಾವನ್ನಪ್ಪಿದ ಐಎಎಸ್ ಅಧಿಕಾರಿ ಡಿ.ಕೆ. ರವಿಯವರ ಸಾವಿಗೂ ಮರಳು ಮಾಫಿಯಾಗೂ ಸಂಬಂಧವಿರಬಹುದು. ಆದ್ದರಿಂದ ಈ ಕುರಿತು ತನಿಖೆ ನಡೆಸುವಂತೆ ದೂರಿನಲ್ಲಿ ಮನವಿ ಮಾಡಲಾಗಿದೆ.












Click it and Unblock the Notifications