ಕನ್ನಡಿಗರಿಗೆ ಗುಡ್ ನ್ಯೂಸ್ : "ಕನ್ನಡದಲ್ಲೇ ರೈಲ್ವೆ ಪರೀಕ್ಷೆ ಬರೆಯಲು ಮೋದಿ ಅವಕಾಶ"
ಕೋಲಾರ: ರೈಲ್ವೆ ನೇಮಕಾತಿ ಪರೀಕ್ಷೆ ಸೇರಿದಂತೆ ನೌಕರರ ಮುಂಬಡ್ತಿ ಪರೀಕ್ಷೆಯನ್ನು ಕನ್ನಡದಲ್ಲಿಯೇ ಬರೆಯಲು ಅವಕಾಶ ಕಲ್ಪಿಸಬೇಕು ಎಂದು ಹಲವು ದಿನಗಳಿಂದ ಆಗ್ರಹಗಳು ಕೇಳಿ ಬಂದಿದ್ದು, ಇದೀಗ ಕನ್ನಡಿಗರಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಬಹುದಿನಗಳ ಬೇಡಿಕೆಯಂತೆ ಕೇಂದ್ರ ಸರ್ಕಾರ ಕನ್ನಡಿಗರಿಗೆ ಸಿಹಿ ಸುದ್ದಿ ನೀಡಿದ್ದು, ರೈಲ್ವೆ ಇಲಾಖೆಗೆ ಸಂಬಂಧಿಸಿದ ಹುದ್ದೆಗಳ ಪರೀಕ್ಷೆಯನ್ನು ಕನ್ನಡದಲ್ಲೂ ಬರೆಯಲು ಅವಕಾಶ ಕಲ್ಪಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಸಮ್ಮತಿಸಿದ್ದಾರೆ ಎಂದು ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ಕೋಲಾರ ಜಿಲ್ಲೆಯಲ್ಲಿ ಸಂಸದರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಅವರು, ರೈಲ್ವೆ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಕನ್ನಡಿಗರಿಗೆ ಅವಕಾಶ ನೀಡುವಂತೆ ತಾವು ಮತ್ತು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿದ್ದಾಗಿ ತಿಳಿಸಿದರು. ಇದಕ್ಕೆ ಮೋದಿ ಅವರು ಸಮ್ಮತಿಸಿದರು ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಕನ್ನಡದಲ್ಲೇ ರೈಲ್ವೆ ಇಲಾಖೆ ಪರೀಕ್ಷೆ ಬರೆಯಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾನು ಹಾಗೂ ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ ಇಬ್ಬರೂ ಒತ್ತಡ ಹಾಕಿ ಒಪ್ಪಿಸಿದ್ದೇವೆ ಎಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು. ಕನ್ನಡದಲ್ಲೇ ರೈಲ್ವೆ ಪ್ರವೇಶ ಪರೀಕ್ಷೆ ಬರೆಯಬೇಕು ಎಂಬ ಕನ್ನಡಿಗರ ಬಹುದಿನಗಳ ಬೇಡಿಕೆ ಶೀಘ್ರ ಈಡೇರಲಿದೆ. ಇದರಿಂದ ಕನ್ನಡಿಗರು ರೈಲ್ವೆ ಹುದ್ದೆಗಳನ್ನು ಪಡೆದುಕೊಳ್ಳಲು ಸಹಕಾರಿಯಾಗಲಿದೆ ಎಂದು ಹೇಳಿದರು.
ದೇಶದಲ್ಲಿ 12 ಲಕ್ಷ ರೈಲ್ವೆ ನೌಕರರು ಇದ್ದಾರೆ. ಇದುವರೆಗೂ ಸಣ್ಣ ಪ್ರತಿಭಟನೆ ಸಹ ಆಗಿಲ್ಲ. ಇಡೀ ಭಾರತ ದೇಶ ಅಭಿವೃದ್ಧಿಗೆ ಮೋದಿ ಪ್ರಯತ್ನವನ್ನು ಮಾಡುತ್ತಿದ್ದಾರೆ. 10 ರೂಪಾಯಿ ಟಿಕೆಟ್ ದರ ಹೆಚ್ಚಳ ಮಾಡಿದ್ದಕ್ಕೆ ಕಾಂಗ್ರೆಸಿಗರು ಮಾತನಾಡುತ್ತಾರೆ. ಇದು ಸರಿಯಲ್ಲ ಎಂದು ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಅವರು ಬೇಸರ ವ್ಯಕ್ತಪಡಿಸಿದರು.
ಇನ್ನೂ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅರ್ಜಿ ಹಾಕಿಲ್ಲ. ಹೈಕಮಾಂಡ್ ಇದರ ಬಗ್ಗೆ ತೀರ್ಮಾನ ಮಾಡುತ್ತದೆ. ನಾನು ಯಾವುದೇ ಹುದ್ದೆಗೆ ಆಸೆ ಪಟ್ಟವನಲ್ಲ. ಪಕ್ಷದ ತೀರ್ಮಾನಕ್ಕೆ ತಲೆ ಬಾಗಬೇಕು. ರಾಜ್ಯದ ಬಿಜೆಪಿಯಲ್ಲಿ ಭಿನ್ನವೂ ಇಲ್ಲ, ಮತವೂ ಇಲ್ಲ. ನಾಯಕರು ಇದರ ಬಗ್ಗೆ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.
ದ್ವೇಷ ಭಾಷಣ ಕಾಯ್ದೆ ಕುರಿತು ಮಾತನಾಡಿ, ಸಂಸ್ಕಾರ, ಸಂಸ್ಕೃತಿ ಗೊತ್ತಿಲ್ಲದವರು ಹೀಗೆಲ್ಲ ಮಾಡ್ತಾರೆ. ಇದು ಮೊಂಡುತನದ ಪರಮಾವಧಿ. ಈ ವಿಚಾರದಲ್ಲಿ ಗೃಹ ಸಚಿವ ಪರಮೇಶ್ವರ್ ನಿಮಿತ್ತ ಅಷ್ಟೇ, ರಾಜ್ಯ ಸರ್ಕಾರ ಮಾಡಿಸುತ್ತಿದೆ. ಪಾಪದ ಕೊಡ ತುಂಬಿರೋದರಿಂದ ಪಾಪದ ಕೆಲಸ ಮಾಡುತ್ತಿದ್ದಾರೆ. ಕಾಯ್ದೆ ಜಾರಿಗೆ ತಂದಿರುವರೇ ಸಿಕ್ಕಿಹಾಕಿಕೊಳ್ಳುತ್ತಾರೆ. ರಾಜಕೀಯದಲ್ಲಿ ಸಿಎಂ ಬೇಳೆಕಾಳು ಬೇಯುತ್ತಿಲ್ಲ. ಹಳೇ ಸಿದ್ದರಾಮಯ್ಯ ಇವತ್ತಿಲ್ಲ, ಹೊಸ ಸಿದ್ದರಾಮಯ್ಯ ಅವರೂ ಇಲ್ಲ. ಪರಮೇಶ್ವರ್ ಸಿಎಂ ಆಗಲಿ ಅಂತ ನಾನು ಭಾಷಣ ಮಾಡಿಲ್ಲ. ಪರಮೇಶ್ವರ್ ಅವರು ತೊಟ್ಟಿಲು ತೂಗುತ್ತಾರೆ, ಮಗುವನ್ನೂ ಅಳಿಸುತ್ತಾರೆ ಎಂದು ಹೇಳಿದರು.












Click it and Unblock the Notifications