ಯತ್ನಾಳ್ ವಿರುದ್ಧ ಕ್ರಮಕೈಗೊಳ್ಳುವಂತೆ ಬಿಜೆಪಿ ಮೇಲೆ ಒತ್ತಡ : ಪದಾಧಿಕರಿಗಳ ಸಭೆಯಲ್ಲಿ ಆಗಿದ್ದೇನು?
ಬೆಂಗಳೂರು, ಡಿಸೆಂಬರ್27: ಬಿಜೆಪಿ ರಾಜ್ಯಾಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ಬಿ.ವೈ.ವಿಜಯೇಂದ್ರ ರಾಜ್ಯ ಪದಾಧಿಕಾರಿಗಳ ತಂಡದ ಸಭೆ ಕರೆದಿದ್ದು, ಸಭೆಯಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಹಾಗೂ ಕೇಂದ್ರ ಬಿಜೆಪಿ ನಾಯಕರ ಮೇಲೆ ಒತ್ತಡ ಕೇಳಿ ಬಂದಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬುಧವಾರ ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ಪಕ್ಷದ ಪದಾಧಿಕಾರಿಗಳೊಂದಿಗೆ ಮೊದಲ ಸಭೆ ನಡೆಸಿದರು. ಸಭೆಯಲ್ಲಿ ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಹಾಗೂ ಕೇಂದ್ರ ಬಿಜೆಪಿ ನಾಯಕರ ಮೇಲೆ ಒತ್ತಡ ಕೇಳಿ ಬಂದಿದೆ.

ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಕೋವಿಡ್-19 ನಿರ್ವಹಣೆಯಲ್ಲಿ 40,000 ಕೋಟಿ ರೂಪಾಯಿ ಹಗರಣದ ಕುರಿತು ಯತ್ನಾಳ್ ಆರೋಪಿಸಿದ್ದಾರೆ. ಈ ರೀತಿ ಪಕ್ಷಕ್ಕೆ ಮುಜುಗರ ತರುವಂತೆ ಬಹಿರಂಗ ಹೇಳಿಕೆಗಳನ್ನು ಕೊಡದಂತೆ ಪದಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸಭೆಯಲ್ಲಿ ಮಾಜಿ ಸಚಿವ ಹಾಗೂ ರಾಜ್ಯ ಪಕ್ಷದ ಉಪಾಧ್ಯಕ್ಷ ಮುರುಗೇಶ್ ನಿರಾಣಿ ಸೇರಿದಂತೆ ಹಲವು ಮುಖಂಡರು ಯತ್ನಾಳ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕೇಂದ್ರ ನಾಯಕರಿಗೆ ಪತ್ರ ಬರೆಯುವಂತೆ ವಿಜಯೇಂದ್ರ ಅವರನ್ನು ಒತ್ತಾಯಿಸಿದರು.
ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಮಾತನಾಡಿ, ಯತ್ನಾಳ್ ಅವರ ಬಗ್ಗೆ ಚರ್ಚೆ ನಡೆದಿದ್ದು, ಶೀಘ್ರವೇ ಯತ್ನಾಳ್ ಬಗ್ಗೆ ಪಕ್ಷ ತೀರ್ಮಾನ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ. ಇದೇ ವೇಳೆ ರಾಜ್ಯದಲ್ಲಿ ಪಕ್ಷದ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಮಾಜಿ ಸಿಎಂ ಡಿವಿ ಸದಾನಂದಗೌಡ, ಪಕ್ಷಕ್ಕೆ ಮುಜುಗರ ಉಂಟು ಮಾಡುತ್ತಿರುವ ನಾಯಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಕಳೆದ ಎರಡು ದಿನಗಳಲ್ಲಿ, ಯತ್ನಾಳ್ ಅವರು ಯಡಿಯೂರಪ್ಪ ಅವರನ್ನು 'ಶಕುನಿ' ಎಂದು ಕರೆದರು ಮತ್ತು ರಾಜ್ಯದಲ್ಲಿ ಕೋವಿಡ್ -19 ಉತ್ತುಂಗದಲ್ಲಿದ್ದಾಗ 40,000 ಕೋಟಿ ರೂಪಾಯಿಗಳ ಹಗರಣವನ್ನು ಆರೋಪಿಸಿದ್ದಾರೆ.
ಬಿಜೆಪಿ ಹೈಕಮಾಂಡ್ ವಿರುದ್ಧ ಯತ್ನಾಳ್ ಅಸಮಾಧಾನ
ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಬಿಜೆಪಿ ಸೋಲು ಕಂಡ ಬಳಿಕ ರಾಜ್ಯ ಬಿಜೆಪಿ ನಾಯಕರು ಹಾಗೂ ಕೇಂದ್ರ ನಾಯಕರ ವಿರುದ್ಧ ಹಲವು ನಾಯಕರು ಅಸಮಾಧಾನ ಹೊರಹಾಕಿದ್ರು. ಅಲ್ಲದೇ ಯಡಿಯೂರಪ್ಪ ವಿರುದ್ಧ ಬಸವನಗೌಡ ಪಾಟೀಲ್ ಯತ್ನಾಳ್ ತೀವ್ರವಾಗಿ ವಾಗ್ದಾಳಿ ನಡೆಸಿದ್ದರು
ಇನ್ನೂ ನವೆಂಬರ್‌ನಲ್ಲಿ ಬಿಜೆಪಿ ವಿಜಯೇಂದ್ರ ರಾಜ್ಯಾಧ್ಯಕ್ಷ ಮತ್ತು ಆರ್ ಅಶೋಕ ಅವರನ್ನು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರನ್ನಾಗಿ ನೇಮಿಸಿದ ನಂತರ ಅವರು ಮೌನ ಮುರಿದು ಯಡಿಯೂರಪ್ಪ ಮತ್ತು ಇತರ ನಾಯಕರ ಮೇಲೆ ತಮ್ಮ ಮಾತಿನ ದಾಳಿಯನ್ನು ಪುನರಾರಂಭಿಸಿದರು. ಯತ್ನಾಳ್ ಎರಡೂ ಹುದ್ದೆಗಳ ಆಕಾಂಕ್ಷಿಯಾಗಿದ್ದು, ಅವರನ್ನು ಪರಿಗಣಿಸಿರಲಿಲ್ಲ. ಯಡಿಯೂರಪ್ಪ ಅವರು ಬಿಜೆಪಿ ಹೈಕಮಾಂಡ್‌ಗೆ ಬ್ಲ್ಯಾಕ್‌ಮೇಲ್ ಮಾಡಿ ತಮ್ಮ ಮಗನನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಿಸಿದ್ದಾರೆ ಎಂದು ಯತ್ನಾಳ್ ಈ ಹಿಂದೆ ಕಿಡಿಕಾರಿದ್ದರು.












Click it and Unblock the Notifications