ಮಳೆ; ಶಾಲೆಯಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು
ಬೆಂಗಳೂರು, ಆಗಸ್ಟ್ 01; ಜುಲೈ ತಿಂಗಳಿನಿಂದ ಕರ್ನಾಟಕದಲ್ಲಿ ನೈಋತ್ಯ ಮುಂಗಾರು ಚುರುಕುಗೊಂಡಿದೆ. ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. 2023-24ನೇ ಶೈಕ್ಷಣಿಕ ಸಾಲಿನ ಶಾಲೆಗಳು ಪ್ರಾರಂಭಗೊಂಡು ನಡೆಯುತ್ತಿರುತ್ತದೆ. ಆದ್ದರಿಂದ ಶಾಲೆಗಳಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಸುತ್ತೋಲೆ ಹೊರಡಿಸಲಾಗಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಾದ ಬಿ. ಕಾವೇರಿ ಈ ಸುತ್ತೋಲೆಯನ್ನು ಹೊರಡಿಸಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ ಸತತವಾಗಿ ಮಳೆಯಾಗುತ್ತಿದೆ. ನೆರೆ, ಪ್ರವಾಹ ಉಂಟಾಗಿರುತ್ತದೆ. ಇದರಿಂದಾಗಿ ರಾಜ್ಯದ ಸುಮಾರು ಜಿಲ್ಲೆಗಳಲ್ಲಿ ಕಳೆದ ಕೆಲವು ದಿನಗಳಿಂದ ಶಾಲೆಗಳಿಗೆ ರಜೆಯನ್ನು ನೀಡಲಾಗುತ್ತಿರುವುದನ್ನು ಗಮನಿಸಲಾಗಿದೆ ಎಂದು ಹೇಳಿದ್ದಾರೆ.

ಮಳೆಗಾಲದ ಸಮಯದಲ್ಲಿ ಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಈ ಕೆಳಕಂಡ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲು ತಿಳಿಸಲಾಗಿದೆ ಎಂದು ಸುತ್ತೋಲೆಯಲ್ಲಿ ವಿವರಣೆಯನ್ನು ನೀಡಿದ್ದಾರೆ.
ಯಾವ-ಯಾವ ಕ್ರಮಗಳು
* ತೀವ್ರ ಮಳೆಯಿಂದಾಗಿ ಶಿಥಿಲಾವಸ್ಥೆಯಲ್ಲಿರುವ ಕೆಲವು ಶಾಲಾ ಕಟ್ಟಡಗಳು ಯಾವುದೇ ಸ೦ದರ್ಭದಲ್ಲಿ ಹಾನಿಗೊಳಗಾಗುವ/ ಬಿದ್ದು ಹೋಗುವ ಸಂಭವವಿರುತ್ತದೆ. ಪ್ರಯುಕ್ತ, ಅಂತಹ ಶಾಲಾ ಕಟ್ಟಡಗಳನ್ನು/ ತರಗತಿಯ ಕೊಠಡಿ/ ಶೌಚಾಲಯಗಳನ್ನು ಬಳಸದೇ, ಸಮೀಪದ ಸುಸ್ಥಿತಿಯಲ್ಲಿರುವ ಕಟ್ಟಡ/ ಕೊಠಡಿಗಳನ್ನು/ ಶೌಚಾಲಯಗಳನ್ನು ಗುರುತಿಸಿ ಪರ್ಯಾಯ ವ್ಯವಸ್ಥೆ ಮಾಡಿ ಕೊಳ್ಳುವುದು ಹಾಗೂ ಮಕ್ಕಳು ಇಂತಹ ಕಟ್ಟಡ, ಕೊಠಡಿಗಳ ಮತ್ತು ಶೌಚಾಲಯಗಳ ಸಮೀಪದಲ್ಲಿ ಸುತ್ತಾಡದಂತೆ ಎಚ್ಚರಿಕೆ ಕ್ರಮ ವಹಿಸುವುದು.
* ಶಿಥಿಲಾವಸ್ಥೆಯಲ್ಲಿರುವ ಇಂತಹ ಕಟ್ಟಡಗಳ ತೀವ್ರತೆಯನ್ನು ಪರಿಗಣಿಸಿ ತೆರವುಗೊಳಿಸಲು ಅಥವಾ ನೆಲಸಮಗೊಳಿಸಲು ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳತಕ್ಕದ್ದು.
* ಕೆಲವಡ ಶೀಘ್ರ ಮಳೆಯಿಂದಾಗಿ ಪ್ರವಾಹ ಅಥವಾ ನೆರೆ ಬಂದು ವಿದ್ಯಾರ್ಥಿಗಳು ಶಾಲೆಗಳಿಗೆ ಬಂದು ಹೋಗಲು ತೊಂದರೆಯುಂಟಾಗುವ ಅಥವಾ ಕೆಲವು ಸಂದರ್ಭಗಳಲ್ಲಿ ಮಳೆಯಿಂದಾಗಿ ಶಾಲೆಗಳ ಕೊಠಡಿಗಳಲ್ಲಿ/ ಆವರಣದೊಳಗೆ ನೀರು ಸಂಗ್ರಹವಾಗುವ ಸಂಭವವಿರುತ್ತದೆ. ಇಂತಹ ಸಂದರ್ಭಗಳಲ್ಲಿ ಸ್ಥಳೀಯ ಗ್ರಾಮ ಪಂಚಾಯತಿ/ ಪುರಸಭೆ/ ನಗರಸಭೆ/ ಮಹಾನಗರ ಪಾಲಿಕೆಗಳ (ಸ್ಥಳೀಯ ಸಂಸ್ಥೆಗಳ) ಸಹಕಾರದಿಂದ ಶಾಲಾ ಕಟ್ಟಡದಲ್ಲಿ ಸಂಗ್ರಹವಾಗಿರುವ ನೀರನ್ನು ತೆರವುಗೊಳಿಸುವುದು ಹಾಗೂ ಅಗತ್ಯಾನುಸಾರ/ ಸಂದರ್ಭಾನುಸಾರ ಶಾಲಾ ಮುಖ್ಯೋಪಾಧ್ಯಾಯರು ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಜಿಲ್ಲಾ ಉಪನಿರ್ದೇಶರು (ಆಡಳಿತ)ರವರ ಪೂರ್ವಾನುಮತಿ ಪಡೆದು ಶಾಲೆಗಳಿಗೆ ರಜೆಯನ್ನು ಘೋಷಿಸುವುದು.
* ರಜಾ ಘೋಷಣೆಯಾದ ದಿನಗಳಲ್ಲಿನ ಪಾಠ, ಪ್ರವಚನಗಳನ್ನು ಮುಂದಿನ ಸರ್ಕಾರಿ ರಜಾ
ದಿನಗಳಲ್ಲಿ ಸರಿದೂಗಿಸಿಕೊಳ್ಳುವುದು.
* ಸಾಧ್ಯವಾದಷ್ಟು ಮಕ್ಕಳನ್ನು ಮೈದಾನ/ ಕಾರಿಡಾರ್‌ಗಳಲ್ಲಿ ಮಳೆ ಬೀಳುವ ಸಂದರ್ಭದಲ್ಲಿ ಅಲೆದಾಡದಂತೆ ಎಚ್ಚರಿಕೆ ವಹಿಸುವುದು.
ಈ ಮೇಲ್ಕಂಡ ಎಲ್ಲಾ ಅಂಶಗಳನ್ನು ಹಾಗೂ ಈ ಸಂಬಂಧ ಈಗಾಗಲೇ ತಿಳಿಸಿರುವ ಎಲ್ಲಾ ಅಂಶಗಳನ್ನು ಕಟ್ಟನಿಟ್ಟಾಗಿ ಪಾಲಿಸುವುದು ಹಾಗೂ ಸ್ಥಳೀಯ ಆರೋಗ್ಯ ಇಲಾಖೆ, ಸ್ಥಳೀಯ ಕಂದಾಯ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳ ಮತ್ತು ತಾಲ್ಲೂಕು/ ಜಿಲ್ಲಾಡಳಿತಗಳ ಸಹಕಾರದೊಂದಿಗೆ/ ಮಾರ್ಗದರ್ಶನದೊಂದಿಗೆ ಅಗತ್ಯ ಕ್ರಮಗಳನ್ನು ಸಕಾಲದಲ್ಲಿ ಕೈಗೊಳ್ಳುವುದು ಎಂದು ತಿಳಿಸಿದೆ.
ಮಳೆಯಿಂದ ಯಾವುದೇ ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ/ ಶಾಲೆಯ ಸುತ್ತ- ಮುತ್ತ ಯಾವುದೇ ರೀತಿಯ ತೊಂದರೆ ಅಥವಾ ಜೀವ ಹಾನಿ ಆಗದಂತೆ ಅಗತ್ಯ ಮುನ್ನೆಚ್ಚರಿಕಾ ಹಾಗೂ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡು ಶಾಲೆಗಳನ್ನು ಹೆಚ್ಚು ಸುರಕ್ಷತೆಯಿಂದ ನಡೆಸಿಕೊಂಡು ಹೋಗುವಂತೆ ಸೂಚಿಸಲಾಗಿದೆ.












Click it and Unblock the Notifications