ಪ್ರತಾಪ್ ಸಿಂಹಗೆ ಕೈ ತಪ್ಪುತಾ ಮೈಸೂರು ಕ್ಷೇತ್ರ: ಹೆಚ್ ಡಿ ಕುಮಾರಸ್ವಾಮಿ ಭೇಟಿಯ ಹಿಂದಿನ ರಹಸ್ಯವೇನು?
ಬೆಂಗಳೂರು, ಜನವರಿ 12: ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಕಂಡ ಬಿಜೆಪಿ ಹಾಗೂ ಜೆಡಿಎಸ್ ಲೋಕಸಭಾ ಚುನಾವಣೆ ಹಿನ್ನೆಲೆ ಮೈತ್ರಿ ಮಾಡಿಕೊಂಡಿವೆ. ಇತ್ತ ಹೆಚ್ಚು ಸ್ಥಾನಗಳನ್ನ ಗೆಲ್ಲುವ ಗುರಿ ಹಾಕಿಕೊಂಡಿರುವ ಬಿಜೆಪಿಯಲ್ಲಿ ಈ ಬಾರೀ ಹಲವು ಹಾಲಿ ಸಂಸದರಿಗೆ ಟಿಕೆಟ್ ಕೈ ತಪ್ಪುವ ಕುರಿತು ವರದಿಗಳಾಗಿವೆ.
ಕಷ್ಟಕಾಲದಲ್ಲಿ ಸತ್ಯಸಂಗತಿಯನ್ನು ಜನರ ಮುಂದಿಟ್ಟು ಬೆನ್ನಿಗೆ ನಿಂತ ಕುಮಾರಣ್ಣನಿಗೆ @hd_kumaraswamy ಧನ್ಯವಾದಗಳನ್ನು ಖುದ್ದು ತಿಳಿಸಿದ ಸಂದರ್ಭ. pic.twitter.com/u5P0t3GlKq
— Pratap Simha (@mepratap) January 12, 2024
ಹೌದು, ಸತತ ಎರಡು ಬಾರಿ ಮೈಸೂರು ಲೋಕಸಭಾ ಕ್ಷೇತ್ರದಿಂದ ಗೆದ್ದು ಸಂಸದರಾಗಿರುವ ಪ್ರತಾಪ್ ಸಿಂಹ ಅವರಿಗೆ ಈ ಬಾರಿ ಟಿಕೆಟ್ ಸಿಗುವುದು ಅನುಮಾನ ಎನ್ನುವ ಮಾತುಗಳು ಹರಿದಾಡುತ್ತಿವೆ. ಇನ್ನೂ ಗುರುವಾರ ಲೋಕಸಭಾ ಚುನಾವಣೆ ಕುರಿತು ಹಲವು ಹಿರಿಯ ನಾಯಕರು ಸಭೆ ನಡೆಸಿದ್ದು, ಈ ಸಭೆಯಲ್ಲಿ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ನೀಡುವ ಕುರಿತು ಪರ ವಿರೋಧ ಚರ್ಚೆಗಳು ನಡೆದಿವೆ. ಈ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರಾಗಿರುವ ಹೆಚ್ ಡಿ ಕುಮಾರಸ್ವಾಮಿ ಅವರನ್ನ ಬಿಡದಿ ತೋಟದ ಮನೆಯಲ್ಲಿ ಪ್ರತಾಪ್ ಸಿಂಹ ಭೇಟಿಯಾಗಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ.

ಈಗಾಗಲೇ ಲೋಕಸಭಾ ಚುನಾವಣಾ ಟಿಕೆಟ್ ಗಾಗಿ ವಿ ಸೋಮಣ್ಣ, ಸಿ ಟಿ ರವಿ ಸೇರಿದಂತೆ ಹಲವು ನಾಯಕರು ಭೇಟಿ ಮಾಡಿದ್ದು, ಇದೀಗ ಟಿಕೆಟ್ ಕೈ ತಪ್ಪುವ ಆತಂಕದಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರನ್ನ ಪ್ರತಾಪ್ ಸಿಂಹ ಭೇಟಿ ಮಾಡಿ ನೂತನ ಸಂಸತ್ ಭವನದಲ್ಲಿ ದುಷ್ಕರ್ಮಿಗಳು ಸ್ಮೋಕ್ ಬಾಂಬ್ ಎಸೆದ ಪ್ರಕರಣ ಹಾಗೂ ಮೈಸೂರು ಕೊಡಗು ಲೋಕಸಭಾ ಟಿಕೆಟ್ ಕುರಿತು ಕುಮಾರಸ್ವಾಮಿ ಜೊತೆಗೆ ಸಮಾಲೋಚನೆ ನಡೆಸಿದ್ದಾರೆ ಎನ್ನಲಾಗಿದೆ.
ಇತ್ತ ಮೈಸೂರು ಕ್ಷೇತ್ರದಿಂದ ಪ್ರತಾಪ್ ಸಿಂಹಗೆ ಈ ಬಾರೀ ಟಿಕೆಟ್ ಕೊಡುವ ಬಗ್ಗೆ ಮಿಶ್ರ ಪ್ರತಿಕ್ರಿಯೇ ವ್ಯಕ್ತವಾಗಿದ್ದು, ಮೈತ್ರಿ ಅಭ್ಯರ್ಥಿಯಾಗಿ ನನ್ನನ್ನೇ ಬೆಂಬಲಿಸಿ, ಹೈಕಮಾಂಡ್ ಮಟ್ಟದಲ್ಲೂ ನನ್ನ ಹೆಸರನ್ನೇ ಶಿಫಾರಸ್ಸು ಮಾಡುವಂತೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಬಳಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಮೈಸೂರು ಭಾಗದ ಒಕ್ಕಲಿಗ ನಾಯಕ ಹಾಗೂ ಹಿಂದುತ್ವದ ಮೂಲಕ ಗುರುತಿಸಿಕೊಂಡಿರುವ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ವಿಚಾರದಲ್ಲಿ ಹೈಕಮಾಂಡ್ ನಾಯಕರ ಜೊತೆ ಮಾತನಾಡುವಂತೆ ಕುಮಾರಸ್ವಾಮಿ ಜೊತೆಗೆ ಪ್ರತಾಪ್ ಸಿಂಹ ಚರ್ಚಿಸಿದ್ದಾರೆ ಎಂದು ಹೇಳಲಾಗಿದೆ.
ಇನ್ನೂ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರ ಭೇಟಿಯ ಕುರಿತು ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಪೋಸ್ಟ್ ಮಾಡಿದ್ದಾರೆ. ಸಂಸದ ಪ್ರತಾಪ್ ಸಿಂಹ ಅವರು ಕುಮಾರಸ್ವಾಮಿ ಅವರನ್ನು ಭೇಟಿಯಾದ ವೇಳೆ ಎಚ್‌ಡಿಕೆ ಕಾಲಿಗೆ ಬಿದ್ದು ನಮಸ್ಕಾರ ಮಾಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕೆಲ ದಿನಗಳ ಹಿಂದೆ ಸಂಸತ್ ಅಧಿವೇಶನದ ಸಂದರ್ಭದಲ್ಲು ನೂತನ ಸಂಸತ್ ಭವನದಲ್ಲಿ ದುಷ್ಕರ್ಮಿಗಳು ಸ್ಮೋಕ್ ಬಾಂಬ್ ಎಸೆದ ಪ್ರಕರಣದ ನಂತರ ಮೈಸೂರು ಕೊಡಗು ಲೋಕಸಭಾ ಸಂಸದ ಪ್ರತಾಪ್ ಸಿಂಹ್ ವಿರುದ್ಧ ನಡೆದ ರಾಜಕೀಯ ದಾಳಿಗಳು ಕಡಿಮೆಯದೇನಲ್ಲ. ಈ ಘಟನೆಯಿಂದ ಹಲವುಗಳ ಕಾಲ ಪ್ರತಾಪ್ ಸಿಂಹ ಮೌನವಾಗಿಯೇ ಇದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ನಾಯಕರು ಈ ಪ್ರಕರಣದಲ್ಲಿ ಪ್ರತಾಪ್ ಸಿಂಹ ಸೇರಿದಂತೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿತ್ತು. ಅಲ್ಲದೇ ಹಾಸನ ಬಳಿ ಮರಗಳ ಮಾರಣಹೋಮ ವಿಚಾರದಲ್ಲಿ ಪ್ರತಾಪ್ ಸಿಂಹ ಸಹೋದರನ ಬಂಧನ ವಿಚಾರದಲ್ಲಿ ವಿಪಕ್ಷ ವಾಗ್ದಾಳಿ ನಡೆಸಿತ್ತು.
ಈ ಸಂದರ್ಭಲ್ಲಿ ಸಂಸದ ಪ್ರತಾಪ್ ಸಿಂಹ ಪರ ನಿಂತಿದ್ದು ಬಿಜೆಪಿ ನಾಯಕರಿಗಿಂತಲೂ ಹೆಚ್ಚಾಗಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಕುಮಾರಸ್ವಾಮಿ. ಪ್ರತಾಪ್ ಸಿಂಹ ಅವರ ಪರವಾಗಿ ಹಲವು ಪ್ರಕರಣಗಳ ಕುರಿತು ಕುಮಾರಸ್ವಾಮಿ ಮಾತನಾಡಿ, ಸರ್ಕಾರದ ವಿರುದ್ಧ ಕಿಡಿಕಾರಿದ್ರು. ಇದೀಗ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರನ್ನು ಪ್ರತಾಪ್ ಸಿಂಹ ಭೇಟಿಯಾಗಿ ಧನ್ಯವಾದ ತಿಳಿಸಿದ್ದಾರೆ. ಕಷ್ಟಕಾಲದಲ್ಲಿ ಸತ್ಯಸಂಗತಿಯನ್ನು ಜನರ ಮುಂದಿಟ್ಟು ಬೆನ್ನಿಗೆ ನಿಂತ ಕುಮಾರಣ್ಣನಿಗೆ ಧನ್ಯವಾದಗಳನ್ನು ಖುದ್ದು ತಿಳಿಸಿದ ಸಂದರ್ಭ ಎಂದು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಾಕಿ ಬರೆದಿರುವ ಸಾಲುಗಳು ಭಾರೀ ವೈರಲ್ ಆಗಿದೆ. ಇತ್ತ ಹಲವು ಬಿಜೆಪಿಯ ಟಿಕೆಟ್ ಆಕಾಂಕ್ಷಿಗಳು ಕುಮಾರಸ್ವಾಮಿ ಅವರನ್ನ ಭೇಟಿಯಾಗುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.












Click it and Unblock the Notifications