ಪ್ರತಾಪ್ ಸಿಂಹ & ಪ್ರದೀಪ್ ಈಶ್ವರ್ "ನಿಮ್ಮ ಜಗಳದಲ್ಲಿ ನಿಮ್ಮ ತಂದೆ-ತಾಯಿಗಳನ್ನು ಎಳೆಯಬೇಡಿ" ಪತ್ರಕರ್ತ ವಿಶ್ವೇಶ್ವರ ಭಟ್
ಬಿಜೆಪಿ ಮಾಜಿ ಸಂಸದ ಪ್ರತಾಪ ಸಿಂಹ ಮತ್ತು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರು ಕಳೆದ ಕೆಲವು ದಿನಗಳಿಂದ ಪರಸ್ಪರ ಮಾಡಿಕೊಳ್ಳುತ್ತಿರುವ ವೈಯಕ್ತಿಕ ನಿಂದನೆ ಹಾಗೂ ರಾಜಕೀಯ ವಾಕ್ಸಮರವು ಇದೀಗ ಕರ್ನಾಟಕದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಇವರಿಬ್ಬರ ಬಗ್ಗೆ ಪತ್ರಕರ್ತ ವಿಶ್ವೇಶ್ವರ ಭಟ್ ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಬರಹವು ಇದೀಗ ವೈರಲ್ ಆಗುತ್ತಿದೆ.
ಪತ್ರಕರ್ತ ವಿಶ್ವೇಶ್ವರ ಭಟ್ ಅವರು, ಪ್ರತಾಪ ಸಿಂಹ ಮತ್ತು ಪ್ರದೀಪ ಈಶ್ವರ ನನಗೆ ಅತ್ಯಾಪ್ತರು. ಅವರಿಬ್ಬರೂ ರಾಜಕೀಯ ಮತ್ತು ಸಾರ್ವಜನಿಕ ಹಿತಾಸಕ್ತಿಯ ವಿಷಯ ಬಿಟ್ಟು ವೈಯಕ್ತಿಕವಾಗಿ ಪರಸ್ಪರ ನಿಂದಿಸಿಕೊಳ್ಳುವುದನ್ನು ನೋಡಿ, ನಾನು ಕುಬ್ಜನಾಗಿ ಹೋಗಿದ್ದೇನೆ. "ಭಟ್ರೇ, ನಿಮ್ಮ ಶಿಷ್ಯರು ಬೀದಿ ಜಗಳವಾಡುವುದನ್ನು ನೋಡಿ ಸುಮ್ಮನಿದ್ದೀರಲ್ಲ?" ಎಂದು ಬೀದಿಯಲ್ಲಿ ಹೋಗುವವರೂ ನನ್ನನ್ನು ಪ್ರಶ್ನಿಸುವಂತಾಗಿದೆ.

ಇಷ್ಟು ದಿನಗಳ ಕಾಲ ನಾನು ಅವರ ರಾಜಕೀಯ ನಿಲುವು-ಒಲವುಗಳ ಬಗ್ಗೆ ಏನನ್ನೂ ಹೇಳದೇ ಅಂತರ ಕಾಯ್ದುಕೊಂಡಿದ್ದೆ. ಅವರವರ ರಾಜಕೀಯ ಅವರವರಿಗೆ ಅಂತ ಸುಮ್ಮನೆ ಇದ್ದೆ. ಅದು ನನಗೆ ಸಂಬಂಧಪಡದ ವಿಷಯ ಕೂಡ. ಆದರೆ ಬರಬರುತ್ತಾ ಇಬ್ಬರು ವೈಯಕ್ತಿಕ ನಿಂದನೆಯಲ್ಲಿ ತೊಡಗಿ ಹಳಿ ತಪ್ಪುತ್ತಿದ್ದಾರೆ ಅನಿಸಲಾರಂಭಿಸಿತು.
ನನಗೆ ಇಬ್ಬರೂ ಬೇಕಾದವರೇ. ನಾನು ಇಬ್ಬರ ಶ್ರೇಯಸ್ಸನ್ನು ಬಯಸುವವನು. ಇಬ್ಬರೂ ಶರಂಪರ ಜಗಳವಾಡುವುದನ್ನು ನೋಡಿ ಸುಮ್ಮನಿದ್ದರೆ, ನಾನು ನೈತಿಕ ಹೊಣೆಗಾರಿಕೆಯಿಂದ ವಿಮುಖನಾಗುತ್ತಿದ್ದೇನೆ ಎಂದು ಎರಡು ದಿನಗಳಿಂದ ನನಗೆ ಬಲವಾಗಿ ಅನಿಸುತ್ತಿದೆ.
ಇಬ್ಬರಲ್ಲೂ ಕಳಕಳಿಯಿಂದ ವಿನಂತಿಸಿಕೊಳ್ಳುತ್ತೇನೆ - ಇಬ್ಬರೂ ರಾಜಕೀಯ ಮತ್ತು ಜನಪರ ವಿಷಯಗಳ ಬಗ್ಗೆ ಚರ್ಚೆ ಮಾಡಿ, ವಾದ-ಸಂವಾದ ಮಾಡಿ, ಒಳ್ಳೆಯದೇ. ದಯವಿಟ್ಟು ನಿಮ್ಮ ಜಗಳದಲ್ಲಿ ನಿಮ್ಮ ತಂದೆ-ತಾಯಿಗಳನ್ನು ಎಳೆಯಬೇಡಿ. ಅಂದರೆ ನಿಮ್ಮ ನಿಮ್ಮ ವೈಯಕ್ತಿಕ ಮತ್ತು ತೀರಾ ಕ್ಷುಲ್ಲಕ ವಿಷಯಗಳನ್ನು ಪ್ರಸ್ತಾಪಿಸಿ ಕಿತ್ತಾಡಬೇಡಿ.
ಇಬ್ಬರೂ ಯುವ ನಾಯಕರಾಗಿ ಈಗಾಗಲೇ ನಿಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಿದ್ದೀರಿ, ಭರವಸೆ ಮೂಡಿಸಿದ್ದೀರಿ. ಆ ಕುರಿತು ನನಗೆ ನಿಮ್ಮಿಬ್ಬರ ಬಗ್ಗೆ ಅತೀವ ಅಭಿಮಾನವಿದೆ. ನಿಮ್ಮಿಬ್ಬರಿಗೂ ಸುದೀರ್ಘವಾದ ರಾಜಕೀಯ ಜೀವನವಿದೆ, ಇನ್ನೂ ಉತ್ತಮ ಭವಿಷ್ಯವಿದೆ. ಜನರ ನಿರೀಕ್ಷೆಯೂ ನಿಮ್ಮಿಬ್ಬರ ಮೇಲೆ ಜಾಸ್ತಿಯಿದೆ. ಒಮ್ಮೆ ಸಮಾಧಾನದಿಂದ ನೀವು ನಡೆದು ಬಂದ ದಾರಿಯನ್ನು ಹಿಂತಿರುಗಿ ನೋಡಿ. ಈ ನಿಂದನೆಯನ್ನು ಇಲ್ಲಿಗೆ ನಿಲ್ಲಿಸಿ, ಸಾಕು. Enough ಎಂದಿದ್ದಾರೆ.












Click it and Unblock the Notifications