ಕಾಂಗ್ರೆಸ್ ಗ್ಯಾರಂಟಿಗಳಿಗೆ ವಾರಂಟಿ ಇಲ್ಲ: ಪ್ರಲ್ಹಾದ್ ಜೋಶಿ ಅಸಮಾಧಾನ
ಚುನಾವಣೆ ಸಂದರ್ಭದಲ್ಲಿ 5 ಗ್ಯಾರಂಟಿಗಳನ್ನು ಘೋಷಣೆ ಮಾಡಿ ಜನರಿಂದ ಮತ ಪಡೆದು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್, ಈಗ ರಾಜ್ಯದ ಜನತೆಗೆ ಮೋಸ ಮಾಡಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಕಿಡಿ ಕಾರಿದ್ದಾರೆ.
ಚುನಾವಣೆಯಲ್ಲಿ ಅವರು ಹೇಳಿದ್ದೊಂದು ಈಗ ಮಾಡುತ್ತಿರುವುದು ಒಂದು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈಗ ಕಾಂಗ್ರೆಸ್‌ನವರು ಹಾಕುತ್ತಿರುವ ಷರತ್ತುಗಳನ್ನು ನೋಡಿದರೆ ಘೋಷಣೆ ಮಾಡಿರುವ ಗ್ಯಾರಂಟಿಗಳಿಗೆ ವಾರಂಟಿ ಇಲ್ಲ ಬಿಡಿ ಎಂದು ವ್ಯಂಗ್ಯವಾಡಿದ್ದಾರೆ.

ಮೊದಲೇ ಘೋಷಣೆ ಮಾಡಿದಂತೆ 200 ಯುನಿಟ್ ವಿದ್ಯುತ್ ಅನ್ನು ಯಾಕೆ ಉಚಿತವಾಗಿ ಕೊಡ್ತಿಲ್ಲ ಎಂದು ಅವರು ಪ್ರಶ್ನೆ ಮಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಬಗ್ಗೆ ರಾಜ್ಯದ ಜನತೆಗೆ ಉತ್ತರ ಕೊಡಬೇಕು, ಅಹಂಕಾರ ಉಡಾಫೆಯ ಮಾತುಗಳನ್ನಾಡಿದರೆ ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ಅವರು ಹೇಳಿದರು.
ದೇಶದಲ್ಲಿ ಇವತ್ತು ಕಾಂಗ್ರೆಸ್‌ಗೆ ಎಂತಹ ಸ್ಥಿತಿ ಬಂದಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ರಾಜ್ಯದಲ್ಲಿ ಅವರು ಉಚಿತ ಕೊಡುಗೆಗಳನ್ನು ಘೋಷಿಸಿ ಅಧಿಕಾರಕ್ಕೆ ಬಂದಿರಬಹುದು. ಬೊಮ್ಮಾಯಿ ಅವರೇ ನಿಮಗೂ ಫ್ರೀ ಕೊಡ್ತೇನೆ ಎನ್ನುವಂತಹ ಅಹಂಕಾರದ ಮಾತುಗಳನ್ನಾಡಿದ್ದಾರೆ. ಮಹಾರಾಷ್ಟ್ರದಂತಹ ರಾಜ್ಯದಿಂದ ಕಾಂಗ್ರೆಸ್ ಒಂದು ಸಂಸದ ಸ್ಥಾನದಲ್ಲಿ ಗೆಲುವು ಸಾಧಿಸಿಲ್ಲ, ಇಂತಹ ಪರಿಸ್ಥಿತಿಯಲ್ಲಿರುವ ಕಾಂಗ್ರೆಸ್ ಅಹಂನಿಂದ ಮಾತನಾಡುವುದನ್ನು ಬಿಡಲಿ, ಜನರಿಗೆ ಮಾತು ಕೊಟ್ಟಿದ್ದನ್ನು ಈಡೇರಿಸಲಿ ಎಂದು ಹೇಳಿದರು.
ಉಚಿತ ಘೋಷಣೆಗಳ ಬಗ್ಗೆ ಸ್ಪಷ್ಟನೆ ಕೊಡಲಿ
ಅನ್ನಭಾಗ್ಯ ಯೋಜನೆಯಲ್ಲಿ 10 ಕೆ.ಜಿ. ಅಕ್ಕಿ ಕೊಡ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಈಗಾಗಲೇ ಕೇಂದ್ರ ಸರ್ಕಾರ 5 ಕೆ.ಜಿ. ಅಕ್ಕಿಯನ್ನು ಬಿಪಿಎಲ್ ಕಾರ್ಡ್ ಇರುವವರಿಗೆ ಕೊಡುತ್ತಿದೆ. ಕೇಂದ್ರ ನೀಡುತ್ತಿರುವ 5 ಕೆಜಿಯನ್ನು ಹೊರತುಪಡಿಸಿ ರಾಜ್ಯ ಸರ್ಕಾರ 10 ಕೆ.ಜಿ ಅಕ್ಕಿ ಕೊಡುತ್ತಾ? ಇದಕ್ಕೆ ಸಿಎಂ ಉತ್ತರ ಕೊಡಬೇಕು ಎಂದರು. ಕೇಂದ್ರ ನೀಡುವ 5 ಕೆ.ಜಿ. ಅಕ್ಕಿ ಸೇರಿ 10 ಕೆ.ಜಿ. ಅಕ್ಕಿ ಕೊಡುವುದಾದರೆ ಕಾಂಗ್ರೆಸ್ ಹೇಗೆ 10 ಕೆ.ಜಿ ಅಕ್ಕಿ ಕೊಟ್ಟಂತಾಗುತ್ತದೆ ಎಂದು ಪ್ರಶ್ನೆ ಮಾಡಿದರು.
ಗೃಹಲಕ್ಷ್ಮೀ ಯೋಜನೆಯಲ್ಲಿ 2000 ರುಪಾಯಿ ಕೊಡುವುದಕ್ಕೆ ಅರ್ಜಿ ಹಾಕಿ ಎಂದು ಕಾಂಗ್ರೆಸ್ ಈಗ ಹೇಳುತ್ತಿದೆ. ಮೊದಲೇ ಇದನ್ನು ಏಕೆ ಹೇಳಲಿಲ್ಲ ಎಂದು ಪ್ರಶ್ನೆ ಮಾಡಿದರು. ಮೊದಲ ಕ್ಯಾಬಿನೆಟ್‌ನಲ್ಲೇ ಜಾರಿ ಮಾಡ್ತೇವೆ ಎಂದವರು ಈಗ ಆಗಸ್ಟ್‌ನಿಂದ ಎಂದು ಹೇಳುತ್ತಿದ್ದಾರೆ, ಕಾರಣಗಳನ್ನು ಹೇಳಿಕೊಂಡು ಕಾಲ ತಳ್ಳುವುದು ಅವರ ಉದ್ದೇಶ. ಅಧಿಕಾರಕ್ಕೆ ಬಂದ ನಂತರ ಜನರಿಗೆ ತಲುಪಿಸಲು ಕೆಲಸ ಮಾಡಬೇಕು ಎಂದರು.
ಯುವನಿಧಿ 2022 - 23 ನೇ ಸಾಲಿನಿ ಪದವಿಧರರಿಗೆ ಎಂದು ಹೇಳಿದ್ದಾರೆ. ಹಿಂದೆ ಪದವಿ ಪಡೆದವರು ಯಾರು ನಿರುದ್ಯೋಗಿಗಳಿಲ್ಲವೇನು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರಶ್ನಿಸಿದ್ದಾರೆ. ಅದರಲ್ಲೂ 6 ತಿಂಗಳ ವರೆಗೆ ಯಾವುದೇ ಉದ್ಯೋಗ ಸಿಗದಿದ್ದವರಿಗೆ ಮಾತ್ರ ಯುವನಿಧಿ ಕೊಡಲಾಗುವುದು ಎಂದಿದ್ದಾರೆ. ಅಂದರೆ ಡಿಗ್ರೀ ಮುಗಿಸಿದ ಬಳಿಕ ಯುವಕರು ಯುವನಿಧಿಗಾಗಿ 6 ತಿಂಗಳು ಕಾಯಬೇಕು. ಈ ವರ್ಷ ಈ ಯುವನಿಧಿ ಯೋಜನೆ ಜಾರಿಗೆ ಬರಲ್ಲ ಅನ್ನೋ ರೀತಿಯಲ್ಲಿ ಇವರ ಕಂಡಿಷನ್ ಗಳಿದೆ. ಈ ಎಲ್ಲ ಗೊಂದಲಗಳಿಗೆ ಸಿಎಂ ಉತ್ತರಿಸಬೇಕು ಎಂದು ಜೋಶಿ ಆಗ್ರಹಿಸಿದ್ದಾರೆ.












Click it and Unblock the Notifications