ಬಿಜೆಪಿ ಸಿಎಂ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪರ ಅಬ್ಬರದ ಪ್ರಚಾರ ನಡೆಸಿದ ಸಚಿವ ಪ್ರಲ್ಹಾದ್ ಜೋಶಿ
ಹಾವೇರಿ, ಮೇ. 04: ರಾಜ್ಯದಲ್ಲಿ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರಯತ್ನಿಸುತ್ತಿರುವ ಬಿಜೆಪಿ ನಾಯಕರು ಸತತ ಪ್ರಯತ್ನ ನಡೆಸುತ್ತಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಅವರ ಬೆನ್ನಿಗೆ ನಿಂತಿರುವ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಇಂದು ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರ ರೋಡ್ ಶೋ ನಡೆಸಿ ಜನರಲ್ಲಿ ಮತ ಯಾಚಿಸಿದ್ದಾರೆ. ಪ್ರತಿ ಚುನಾವಣೆಗಳಲ್ಲೂ ಪ್ರಲ್ಹಾದ್ ಜೋಶಿ ಶಿಗ್ಗಾಂವಿ ಕ್ಷೇತ್ರಕ್ಕೆ ತೆರಳಿ ಸಿಎಂ ಬಸವರಾಜ ಬೊಮ್ಮಾಯಿ ಪರ ಚುನಾವಣಾ ಪ್ರಚಾರ ನಡೆಸುತ್ತಿದ್ದರು. ಈ ಬಾರಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದರೂ, ಕೂಡ ಪ್ರಲ್ಹಾದ್ ಜೋಶಿ ಶಿಗ್ಗಾಂವಿಗೆ ತೆರಳಿ ಅವರ ಪರ ರೋಡ್ ಶೋ ನಡೆಸಿ, ಮತ ಯಾಚಿಸಿದ್ದಾರೆ.

ಗುರುವಾರ ದಿನ ಪೂರ್ತಿ ಶಿಗ್ಗಾಂವಿ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರದಲ್ಲಿ ತೊಡಗಿಸಿಕೊಂಡ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಸವಣೂರು ಹಾಗೂ ಶಿಗ್ಗಾಂವಿಯ ಪ್ರಮುಖ ಹಳ್ಳಿಗಳಿಗೆ ತೆರಳಿದ ಬಸವರಾಜ ಬೊಮ್ಮಾಯಿ ಅವರನ್ನ ಈ ಬಾರಿ ಅತಿ ಹೆಚ್ವು ಮತಗಳ ಅಂತರದ ಬಹುಮತದಲ್ಲಿ ಗೆಲ್ಲಿಸುವಂತೆ ಜನರಲ್ಲಿ ಮನವಿ ಮಾಡಿದ್ದಾರೆ.
ಒಂದಡೆ ಸವಣೂರಿನಲ್ಲಿ ಖುದ್ದು ಸಿಎಂ ಬಸವರಾಜ ಬೊಮ್ಮಾಯಿ ಮತಯಾಚನೆಯಲ್ಲಿ ತೊಡಗಿದ್ದರೆ, ಇನ್ನೊಂದಡೆ ಶಿಗ್ಗಾಂವಿನ ಹಿರೇಮಲ್ಲೂರು, ಮಂತ್ರೋಡಿ, ಮಂಡ್ಲಿ, ವನಹಳ್ಳಿ ಹನುಮರಹಳ್ಳಿ ಗ್ರಾಮಗಳಿಗೆ ತೆರಳಿ ಬಸವರಾಜ ಬೊಮ್ಮಾಯಿ ಪರ ಪ್ರಲ್ಹಾದ್ ಜೋಶಿ ಪ್ರಚಾರ ನಡೆಸಿದರು. ಸಿಎಂ ಬೇರೆ ಕ್ಷೇತ್ರಗಳತ್ತ ಗಮನಹರಿಸಬೇಕಾಗಿರುವ ಹಿನ್ನೆಲೆಯಲ್ಲಿ ಶಿಗ್ಗಾಂವಿ ಕ್ಷೇತ್ರದ ಮೇಲೆ ಗಮನ ಹರಿಸಿರುವ ಅವರು, ಸಿಎಂ ಹೋಗದಿರುವ ಹಳ್ಳಿಗಳಲ್ಲಿ ಸಚಿವ ಪ್ರಲ್ಹಾದ್ ಜೋಶಿ ಭೇಟಿ ನೀಡಿ ಮತ ಯಾಚನೆ ನಡೆಸುತ್ತಿದ್ದಾರೆ.

ಪ್ರಚಾರದ ವೇಳೆ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಸಚಿವ ಪ್ರಲ್ಹಾದ್ ಜೋಶಿ, ಈ ಬಾರಿ ರಾಜ್ಯದಲ್ಲಿ ಬಿಜೆಪಿ 113 ಪ್ಲಸ್ 15 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಸವರಾಜ ಬೊಮ್ಮಾಯಿ ಅವರು ಸಿಎಂ ಆದ ಬಳಿಕ ಬಡವರಿಗೆ ವಿಶೇಷ ಆದ್ಯತೆ ನೀಡಿದ್ದಾರೆ. ರೈತರ ಮಕ್ಕಳಿಗೆ ವಿದ್ಯಾಸಿರಿ ಯೋಜನೆ ಕೊಡುವ ಮೂಲಕ ರೈತರ ಮಕ್ಕಳು ವಿದ್ಯಾಭ್ಯಾಸದಲ್ಲಿ ಮುಂದೆ ಬರಬೇಕು ಎಂಬ ಮನೋಭಾವವನ್ನ ಮೊದಲು ವ್ಯಕ್ಯಪಡಿಸಿದವರು ಅವರು ಎಂದು ಹೇಳಿದ್ದಾರೆ.
ಬಸವರಾಜ ಬೊಮ್ಮಾಯಿ ಅವರು ಶಿಗ್ಗಾಂವಿ ಕ್ಷೇತ್ರವನ್ನು ಹಿಂದೆಂದೂ ನೋಡಿರದ ರೀತಿಯಲ್ಲಿ ಅಭಿವೃದ್ದಿಪಡಿಸಿದ್ದಾರೆ. ಈ ಬಾರಿ ಅತಿ ಹೆಚ್ಚು ಅಂತರದಲ್ಲಿ ಬಸವರಾಜ ಬೊಮ್ಮಾಯಿ ಅವರನ್ನ ಶಿಗ್ಗಾಂವಿ ಕ್ಷೇತ್ರದ ಜನತೆ ಗೆಲ್ಲಿಸಬೇಕು ಎಂದು ಪ್ರಲ್ಹಾದ್ ಜೋಶಿ ಮತದಾರರಲ್ಲಿ ಮನವಿ ಮಾಡಿದ್ದಾರೆ.












Click it and Unblock the Notifications