ನನ್ನನ್ನೂ ಮಂತ್ರಿ ಮಾಡಿ; ಸದನದಲ್ಲೇ ಸಚಿವ ಸ್ಥಾನಕ್ಕೆ ಬಹಿರಂಗವಾಗಿ ಬೇಡಿಕೆ ಇಟ್ಟ ಶಾಸಕ
ಬೆಳಗಾವಿ, ಡಿಸೆಂಬರ್ 15: ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆ ಹಲವು ನಾಯಕರು ಅಸಮಾಧಾನ ಹೊರಹಾಕಿದ್ದರು. ಸಚಿಕ್ಕಾಗಿ ಈಗಾಗಲೇ ಹಲವು ನಾಯಕರು ಬೇಡಿಕೆ ಇಟ್ಟಿದ್ದು, ಸದನದಲ್ಲಿಯೇ ಕಾಂಗ್ರೆಸ್ ಶಾಸಕ ಬಹಿರಂಗವಾಗಿ ಮಂತ್ರಿ ಪಟ್ಟಕ್ಕೆ ಬೇಡಿಕೆ ಇಟ್ಟಿದ್ದಾರೆ.
ಹೌದು, ನನ್ನನ್ನೂ ಮಂತ್ರಿ ಮಾಡಿ, ಮಂತ್ರಿಯಾದರೆ ಜನರಿಗೆ ಎಲ್ಲ ಅನುಕೂಲ ಮಾಡಿಕೊಡಬಹುದು ಎಂದು ಸದನದಲ್ಲಿ ಸರ್ಕಾರಕ್ಕೆ ಆಗ್ರಹಿಸಿದ ಕಾಂಗ್ರೆಸ್ ನ ರಾಣೆಬೆನ್ನೂರು ಶಾಸಕ ಪ್ರಕಾಶ್ ಕೋಳಿವಾಡ ಮಂತ್ರಿ ಪಟ್ಟಕ್ಕೆ ಬೇಡಿಕೆ ಇಟ್ಟಿದ್ದಾರೆ. ನಮ್ಮ ಮುಖ್ಯಮಂತ್ರಿಗಳಿಗೆ ದಯವಿಟ್ಟು ಕೇಳ್ತೀನಿ ನನಗೂ ಮಿನಿಸ್ಟರ್ ಮಾಡಿ. ನಮ್ಮ ಭಾಗದ ರೈತರಿಗೆ ಅನ್ಯಾಯ ಆಗುತ್ತಿದೆ, ಮಂತ್ರಿ ಆದರೆ ಮಾತ್ರ ಕೆಲಸ ಮಾಡಬಹುದು ಎಂದು ಹೇಳಿದರು. ಈ ವೇಳೆ ಸ್ಪೀಕರ್ ಯು ಟಿ ಖಾದರ್ ಅವರು, ಹಾಗಾದರೆ ನಾಲ್ಕು ಸಲ ಗೆದ್ದು ಬನ್ನಿ ಎಂದು ಹೇಳಿದರು.

ಬಯಲು ಸೀಮೆ ಅಡಿಕೆ ಬೆಳೆಗೆ ಪ್ರೋತ್ಸಾಹ ನೀಡಲು ಸದನಲ್ಲಿ ಒತ್ತಾಯ
ಮಲೆನಾಡಿನ ಪ್ರದೇಶದಲ್ಲಿ ಅಡಿಕೆ ಬೆಳೆಗೆ ನೀಡುತ್ತಿರುವ ಪ್ರೋತ್ಸಾಹ ಹಾಗೂ ವಿಮೆ ಸೌಲಭ್ಯಗಳನ್ನು ಬಯಲು ಸೀಮೆ ಅಡಿಕೆ ಬೆಳೆಗಾರರಿಗೂ ನೀಡಬೇಕು ಎಂದು ಶಾಸಕ ಪ್ರಕಾಶ್ ಕೋಳಿವಾಡ ಒತ್ತಾಯಿಸಿದರು.
ಬೆಳಗಾವಿ ಚಳಿಗಾಲದ ಅಧಿವೇಶನಲ್ಲಿ ಶುಕ್ರವಾರ ಪ್ರಶ್ನೋತ್ತರ ಕಲಾಪದಲ್ಲಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಸರ್ಕಾರ ಉತ್ತರಿಸುವ ವೇಳೆ ಮಾತನಾಡಿದ ಅವರು ರಾಣೆಬೆನ್ನೂರು ತಾಲ್ಲೂಕಿನಲ್ಲಿ ಸುಮಾರು 7000 ಎಕೆರೆ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ.
ಈ ಬೆಳೆಗೆ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ, ಡ್ರಿಪ್ ಅಳವಡಿಕೆ ಸೇರಿದಂತೆ ಬೆಳೆ ವಿಮೆ ಸೌಲಭ್ಯಗಳು ಇಲ್ಲ. ಇದರಿಂದ ಕ್ಷೇತದ್ರ ಅಡಿಕೆ ಬೆಳಗಾರರಿಗೆ ಅನ್ಯಾಯವಾಗುತ್ತಿದೆ. ಬಯಲು ಸೀಮೆಯ ಚೆನ್ನಗಿರಿ ಹಾಗೂ ಶಿಗ್ಗಾಂವ ತಾಲ್ಲೂಕುಗಳ ರೈತರಿಗೆ ಈ ಯೋಜನೆಗಳ ಸರ್ಕಾರ ವಿಸ್ತರಿಸಿದೆ. ಅಡಿಕೆ ಬೆಳೆಯುವ ರೈತರು ಇದರ ಲಾಭ ಪಡೆಯುತ್ತಿದ್ದಾರೆ. ಹಾವೇರಿ, ರಾಣೇಬೆನ್ನೂರು ಸೇರಿದಂತೆ ಪ್ರಮುಖವಾಗಿ ಅಡಿಕೆ ಬೆಳೆಯುವ ರಾಜ್ಯದ ಎಲ್ಲಾ ತಾಲ್ಲೂಕುಗಳಿಗೂ ಯೋಜನೆಯನ್ನು ವಿಸ್ತರಿಸುವಂತೆ ಸರ್ಕಾರಕ್ಕೆ ಕೋರಿದರು.
ಶಾಸಕ ಪ್ರಕಾಶ್ ಕೋಳಿವಾಡ ಅವರ ಪ್ರಶ್ನೆಗೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿಯವರು ಸಹ ಧ್ವನಿ ಗೂಡಿಸಿದರು. ತೋಟಗಾರಿಕೆ ಇಲಾಖೆ ಸಚಿವರಿಗೆ ಪರವಾಗಿ ಉತ್ತರಿಸಿದ ಉತನ್ನ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಸಾಂಪ್ರದಾಯಕವಾಗಿ ಅಡಿಕೆ ಬೆಳೆಯುವ ಮಲೆನಾಡು ಹಾಗೂ ಕರಾವಳಿ ಪ್ರದೇಶದಲ್ಲಿ ಸರ್ಕಾರ ಪ್ರೋತ್ಸಾಹ ಕ್ರಮಗಳನ್ನು ಕೈಗೊಳ್ಳುತ್ತಿದೆ. ಮೈದಾನ ಪ್ರದೇಶಗಳಲ್ಲಿ ನೀರಿನ ಕೊರತೆ ಇರುವುದರಿಂದ ಅಡಿಕೆ ಬೆಳೆಯುವುದು ಸೂಕ್ತವಲ್ಲ.
ಈ ಹಿನ್ನಲೆಯಲ್ಲಿ ಬಯಲು ಸೀಮೆ ಭಾಗದಲ್ಲಿ ತೋಟಗಾರಿಕೆ ಇಲಾಖೆ ಅಡಿಕೆ ಬದಲಿಗೆ ಪರ್ಯಾಯ ಬೆಳೆಗೆ ಪ್ರೋತ್ಸಾಹ ನೀಡುತ್ತಿದೆ. ಇದರ ಹೊರತಾಗಿಯೂ ಬಯಲು ಸೀಮೆಯಲ್ಲಿ ರೈತರು ಸ್ವ ಇಚ್ಛೇಯಿಂದ ಅಡಕೆ ಬೆಳೆಯುತ್ತಿದ್ದಾರೆ. ಶಾಸಕರ ಮನವಿಯನ್ನು ತೋಟಗಾರಿಕೆ ಇಲಾಖೆ ಸಚಿವರ ಗಮನಕ್ಕೆ ತರುವುದಾಗಿ ತಿಳಿಸಿದರು.












Click it and Unblock the Notifications