Chikkodi : ಚಿಕ್ಕೋಡಿಯನ್ನು ಜಿಲ್ಲೆಯನ್ನಾಗಿ ಘೋಷಣೆ : ಪ್ರಕಾಶ್ ಹುಕ್ಕೇರಿ ಇಟ್ಟ ಬೇಡಿಕೆ ಏನು?
ಬೆಂಗಳೂರು, ಮಾರ್ಚ್ 22: ಮಾರ್ಚ್ 7ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ರಾಜಕೀಯ ಜೀವನದಲ್ಲಿ 16ನೇ ಬಾರಿ ರಾಜ್ಯ ಬಜೆಟ್ ಮಂಡನೆ ಮಾಡಿ ಇತಿಹಾಸ ಸೃಷ್ಟಿ ಮಾಡಲಿದ್ದಾರೆ. ಈ ಬಾರಿಯ ಆಯವ್ಯಯದಲ್ಲಿ ಹಲವು ಯೋಜನೆಗಳು ಘೋಷಣೆಗಳ ಜೊತೆಗೆ ಕೆಲವು ಜಿಲ್ಲೆಗಳ ರಚನೆ ಕುರಿತು ಶುಭ ಸುದ್ದಿ ಸಿಗಲಿದೆ ಎಂದು ಉತ್ತರ ಕರ್ನಾಟಕ ಭಾಗದ ಜನತೆ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಆ ನಿರೀಕ್ಷೆ ಹುಸಿಯಾಗಿದೆ. ಇತ್ತ ಬಜೆಟ್ ಅಧಿವೇಶನದಲ್ಲಿಯೇ ಉತ್ತರ ಕರ್ನಾಕಟ ಭಾಗದ ನಾಯಕರೊಬ್ಬರು ಚಿಕ್ಕೋಡಿ ಜಿಲ್ಲೆಯನ್ನಾಗಿ ಘೋಷಣೆ ಮಾಡಿ ಎಂದು ಬೇಡಿಕೆ ಇಟ್ಟಿದ್ದಾರೆ.
ಶುಕ್ರವಾರ ವಿಧಾನ ಪರಿಷತ್‍ನಲ್ಲಿ 2025-26ನೇ ಸಾಲಿನ ಆಯವ್ಯಯದ ಮೇಲೆ ಚರ್ಚೆಯ ವೇಳೆ ಪ್ರಕಾಶ್ ಬಾಬಣ್ಣ ಹುಕ್ಕೇರಿ ಅವರು ಮಾತನಾಡಿ, ಚಿಕ್ಕೋಡಿ ಗಡಿಭಾಗದ ಜನರು ತಮ್ಮ ಕೆಲಸ ಕಾರ್ಯಗಳಿಗೆ 190 ಕಿಲೋಮೀಟರ್ ದೂರದ ಜಿಲ್ಲಾ ಕೇಂದ್ರ ಬೆಳಗಾವಿಗೆ ಬರಬೇಕಾಗಿದೆ. ಪ್ರತಿನಿತ್ಯ ತಮ್ಮ ಸಣ್ಣ ಸಣ್ಣ ಕೆಲಸಗಳಿಗೂ ಇಷ್ಟು ದೂರ ಪ್ರಯಾಣ ಮಾಡುವುದು ಸಾಧ್ಯವಿಲ್ಲ. ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಆದ್ದರಿಂದ ಚಿಕ್ಕೋಡಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಣೆ ಮಾಡಲು ಸೂಕ್ತ ಪಟ್ಟಣವಾಗಿದ್ದು, ಚಿಕ್ಕೋಡಿ ಜಿಲ್ಲೆಯಾದಲ್ಲಿ ಎಲ್ಲಾ ಕಚೇರಿಗಳು ಆಭಾಗಕ್ಕೆ ಬರಲಿದ್ದು, ಜನರ ಅಲೆದಾಟ ತಪ್ಪುತ್ತದೆ. ಆ ಭಾಗದ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಹೇಳುತ್ತಾ, ಚಿಕ್ಕೋಡಿಯನ್ನು ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕೆಂದು ಆಗ್ರಹಿಸಿ ಆ ಭಾಗದ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ, ಕೂಡಲೇ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ಮಂಡಿಸಿರುವ 2025-26ನೇ ಸಾಲಿನ ಆಯವ್ಯಯವನ್ನು ಉತ್ತರ ಕರ್ನಾಟಕದ ಜನತೆ ಬಹಳ ವಿಶೇಷವಾಗಿ ಹೃದಯ ಪೂರ್ವಕವಾಗಿ ಸ್ವಾಗತಿಸಿದರು. ಆಯವ್ಯಯದ ಬಗ್ಗೆ ವಿರೋಧ ಪಕ್ಷಗಳ ನಾಯಕರು ಮಾಡುವ ಟೀಕೆ ಟಿಪ್ಪಣಿಗಳಿಗೆ ಯಾರೂ ತಲೆ ಕೆಡಿಸಿಕೊಳ್ಳಬಾರದು ವಿರೋಧ ಪಕ್ಷದವರು ಮಾಡುವ ಟೀಕೆಗಳಿಗೆ ಮಾನ್ಯ ಮುಖ್ಯಮಂತ್ರಿಗಳು ಸದನದಲ್ಲಿ ಎಲ್ಲಾ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರವನ್ನು ನೀಡಲಿದ್ದಾರೆ.
ಈಗಾಗಲೇ ಉತ್ತರ ಕರ್ನಾಟಕ ಜನತೆಯ ಬಹುದಿನಗಳ ಬೇಡಿಕೆಯಾದ ಮೆಡಿಕಲ್ ಕಾಲೇಜು ಸ್ಥಾಪನೆಗೆ ಸಂಬಂಧಿಸಿದಂತೆ ಮಾನ್ಯ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಹಾಗೂ ಸಚಿವರುಗಳು ಸಕಾರಾತ್ಮಕವಾಗಿ ಸ್ಪಂದಿಸಿ ಬೆಳಾವಿಯಲ್ಲಿ ಮೆಡಿಕಲ್ ಸ್ಥಾಪನೆಗೆ ಕ್ರಮವಹಿಸಿದ್ದಾರೆ. ಇದಕ್ಕೆ ನಾನು ಉತ್ತರ ಕರ್ನಾಟಕ ಜನತೆ ಹಾಗೂ ವಿದ್ಯಾರ್ಥಿಗಳ ಪರವಾಗಿ ಅಭಿನಂದನೆಯನ್ನು ಸಲ್ಲಿಸುತ್ತೇನೆ.
ಉತ್ತರ ಕರ್ನಾಟಕದ ಭಾಗದಲ್ಲಿ ಯಾವುದೇ ಕ್ಯಾನ್ಸರ್ ಆಸ್ಪತ್ರೆ ಇರುವುದಿಲ್ಲ. ಇಲ್ಲಿನ ಜನರು ಹಲವಾರು ಬಗೆಯ ಕಾಯಿಲೆಗಳಿಗೆ ಒಳಗಾಗುತ್ತಿದ್ದಾರೆ. ಅದರಲ್ಲಿ ಕ್ಯಾನ್ಸರ್ ಕಾಯಿಲೆಗೆ ಬಹಳಷ್ಟು ಜನ ತುತ್ತಾಗುತ್ತಿದ್ದಾರೆ. ಜನರ ಆರೋಗ್ಯದ ಹಿತದೃಷ್ಟಿಯಿಂದ ಉತ್ತರ ಕರ್ನಾಟಕ ಭಾಗದಲ್ಲಿ ಒಂದು ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ ಮಾಡಲು ಮುಂದಾಗಬೇಕು. ಆಸ್ಪತ್ರೆ ನಿರ್ಮಾಣಕ್ಕಾಗಿ 10 ಎಕರೆ ಜಮೀನನ್ನು ಸಹ ನಾವು ಸರ್ಕಾರಕ್ಕೆ ನೀಡಲು ಸಿದ್ದರಿದ್ದೇವೆ. ಈ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು ಆಸಕ್ತಿ ವಹಿಸಬೇಕು ಎಂದು ಮನವಿ ಮಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನಪರವಾದ ಬಜೆಟ್‍ನ್ನು ಮಂಡಿಸಿದ್ದಾರೆ. ಮುಖ್ಯಮಂತ್ರಿಗಳಿಗೆ ಹಾಗೂ ನಮ್ಮ ಉತ್ತರ ಕರ್ನಾಟಕ ಸಚಿವರು ಮತ್ತು ಶಾಸಕರಿಗೆ ರೈತರ ಮೇಲೆ ಅಪಾರ ಕಾಳಜಿ ಗೌರವವಿದೆ. ರೈತರಿಗಾಗಿ, ರೈತ ಪರ ಚಟುವಟಿಕೆಗಳಿಗಾಗಿ 2025-26ನೇ ಆಯವ್ಯಯದಲ್ಲಿ ಅನೇಕ ಯೋಜನೆಗಳನ್ನು ನೀಡಿದ್ದಾರೆ. ಇದಕ್ಕಾಗಿ ನಾನು ಉತ್ತರ ಕರ್ನಾಟಕ ರೈತ ಜನತೆಯ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಅದರೆ ಉತ್ತರಕರ್ನಾಟಕ ಭಾಗದ ರೈತರಿಗೆ ಅನುಕೂಲವಾಗುವಂತೆ ಮಹಾರಾಷ್ಟ್ರ ಮತ್ತು ಕರ್ನಾಟಕ ಸರ್ಕಾರಗಳ ಒಪ್ಪಂದದಂತೆ ಕಳ್ಳಂಬಾಡಿ ಡ್ಯಾಂ ನಿಂದ 4 ಟಿ.ಎಂ.ಸಿ ನೀರನ್ನು ವೇದ ಗಂಗಾ ಮತ್ತು ದೂದ್ ಗಂಗಾಗೆ ಹರಿಸಬೇಕಿತ್ತು. ಆದರೆ ಮಹಾರಾಷ್ಟ್ರ ಸರ್ಕಾರ ನೀರನ್ನು ಹರಿಸುತ್ತಿಲ್ಲ. ಆದ್ದರಿಂದ ಈ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮ ವಹಿಸಬೇಕು ಎಂದು ಮನವಿ ಮಾಡಿದರು.












Click it and Unblock the Notifications