Prajwal Revanna Case: ಮೈತ್ರಿಗೆ ಮುಳುವಾಯ್ತಾ ಪ್ರಜ್ವಲ್ ರೇವಣ್ಣ ರಾಸಲೀಲೆ ಪ್ರಕರಣ: ಈ ಬಗ್ಗೆ ಬಿಜೆಪಿ ನಾಯಕರ ಉತ್ತರವೇನು?
ಬೆಂಗಳೂರು, ಏಪ್ರಿಲ್ 29: ಹಾಸನದಲ್ಲಿ ಭಾರೀ ಸದ್ದು ಮಾಡಿರುವ ಲೈಂಗಿಕ ದೌರ್ಜನ್ಯಗಳ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಈಗಾಗಲೇ ಲೋಕಸಭಾ ಚುನಾವಣೆ ಹಿನ್ನೆಲೆ ಮೈತ್ರಿಯಾಗಿರುವ ಬಿಜೆಪಿ ನಾಯಕರಿಗೆ ಮಗ್ಗುಲ ಮುಳ್ಳಾಗುವಂತೆ ಕಾಣುತ್ತಿದೆ.
ಮೇ 7ರಂದು 14 ಕ್ಷೇತ್ರಗಳಿಗೆ ಚುನಾವಣೆ ನಡೆಯುವುದು ಬಾಕಿ ಇರುವುದರಿಂದ ಜೆಡಿಎಸ್ ಮಿತ್ರ ಪಕ್ಷವಾದ ಬಿಜೆಪಿ ನಾಯಕರು ಕೆಲ ದಿನಗಳಿಂದ ಮೌನವಾಗಿದ್ದು, ಕಾಂಗ್ರೆಸ್ ನಾಯಕರ ಟೀಕೆ ಟಿಪ್ಪಣಿ ಹೆಚ್ಚಾದ ಹಿನ್ನಲೆ ಬಿಜೆಪಿ ನಾಯಕರು ಮೌನ ಮುರಿದಿದ್ದಾರೆ.

ಪ್ರಜ್ವಲ್ ರೇವಣ್ಣ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಮಾತನಾಡಿ, ತಪ್ಪಿತಸ್ಥರು ಯಾರೇ ಆದರೂ ಪಕ್ಷದಿಂದ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದರು. ಈ ಪ್ರಕರಣಕ್ಕೆ ಕುರಿತು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಮಾತನಾಡಿದ ಅವರು, ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ. ಎಲ್ಲರೂ ಸಮಾನರು ಈ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ. ಸರ್ಕಾರ ಎಸ್ಐಟಿ ರಚಿಸಿದೆ. ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿ ಎಂದು ಅಶೋಕ್ ಹೇಳಿದ್ದಾರೆ.
ಇನ್ನು, ಪೆನ್ ಡ್ರೈವ್ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಂತ್ರಸ್ತೆಯರಿಗೆ ರಕ್ಷಣೆ ಇಲ್ಲ ಎನ್ನುವ ಡಿ.ಕೆ. ಸುರೇಶ್ ಹೇಳಿಕೆಗೆ ಪ್ರತಿಕ್ರಿಯಿಸಿದ ಆರ್ ಅಶೋಕ್, ಈಗ ರಾಜ್ಯದಲ್ಲಿ ಅವರದ್ದೇ ಸರ್ಕಾರ ಇದೆಯಲ್ಲ, ರಕ್ಷಣೆ ಕೊಡಲಿ ಎಂದು ಆಗ್ರಹಿಸಿದ್ದಾರೆ. ಈ ಪ್ರಕರಣದ ಕುರಿತು ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ಅವರು ಮಾತನಾಡಿ, ಎಸ್ಐಟಿ ತನಿಖೆ ನಡೆದು ಸತ್ಯಾಸತ್ಯತೆ ಹೊರಬರಲಿ ಎಂದು ಹೇಳಿದ್ದಾರೆ.
ಇನ್ನೂ ಮಾಜಿ ಸಚಿವ ಸಿ ಟಿ ರವಿ ಅವರು ಮಾತನಾಡಿ, ಕಾನೂನು ಎಲ್ಲರಿಗೂ ಒಂದೇ ಇರುತ್ತದೆ ಎಂದಿದ್ದಾರೆ. ಕಾನೂನು ತಮಗೆ ಅನ್ವಯ ಆಗಬಾರದು ಎಂದು ಕಾಂಗ್ರೆಸ್ ಭಾವಿಸುತ್ತದೆ. ಕಾನೂನು ಎಲ್ಲರಿಗೂ ಒಂದೇ ಎಂಬುದು ತಮ್ಮ ಭಾವನೆ. ಈ ಪ್ರಕರಣ ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತೆ ಎಂದು ಹೇಳಲು ಆಗಲ್ಲ. ಹಾಗೆಯೇ ಪರಿಣಾಮ ಬೀರುವುದಿಲ್ಲ ಎಂದಲೂ ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.












Click it and Unblock the Notifications