ನಾನು ದೀಪ ಹಚ್ಚುತ್ತೇನೆ. ಅವರು ಭ್ರಷ್ಟಾಚಾರ ನಡೆದಿಲ್ಲ ಎಂದು ದೀಪ ಹಚ್ಚಲಿ; ಸುಧಾಕರ್ ಗೆ ಸವಾಲು ಹಾಕಿದ ಪ್ರದೀಪ್ ಈಶ್ವರ್
ಚಿಕ್ಕಬಳ್ಳಾಪುರ,ಜುಲೈ 08: ನಾನು ದೀಪ ಹಚ್ಚುತ್ತೇನೆ. ಅವರೂ ಸಹ ಕರೋನಾ ವೇಳೆ ಭ್ರಷ್ಟಾಚಾರ ನಡೆದಿಲ್ಲ ಎಂದು ದೀಪ ಹಚ್ಚಲಿ. ದೀಪದಿಂದ ದೀಪವ ಹಚ್ಚಬೇಕು ಮಾನವ ಎಂಬ ಹಾಡು ಹಾಕ್ಕೊಂಡು ದೀಪ ಹಚ್ಚೋಣ ಎಂದು ಮಾಜಿ ಸಚಿವ ಡಾ. ಕೆ ಸುಧಾಕರ್ ವಿರುದ್ದ ಶಾಸಕ ಪ್ರದೀಪ್ ಈಶ್ವರ್ ಸವಾಲು ಹಾಕಿದ್ದಾರೆ.
ಮಾಜಿ ಸಚಿವ ಡಾ.ಕೆ.ಸುಧಾಕರ್ ನಿವೇಶನ ಹಂಚಿಕೆಯಲ್ಲಿ ಅವ್ಯವಹಾರ ನಡೆದಿಲ್ಲ. ಶಾಸಕ ಪ್ರದೀಪ್ ಈಶ್ವರ್ ಭೋಗನಂದೀಶ್ವರ ದೇವಸ್ಥಾನದಲ್ಲಿ ಬಂದು ದೀಪ ಹಚ್ಚಲಿ ಎಂದಿದ್ದರು. ನನ್ನ ಮೇಲೆ ಮಾಡಿರುವ ಆರೋಪ ಸಾಬೀತುಪಡಿಸಿ ದೀಪ ಹಚ್ಚಲಿ ಎಂದಿದ್ದರು. ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಡಾ.ಕೆ.ಸುಧಾಕರ್ ಕೊರೊನಾ ಸಮಯದಲ್ಲಿ ಅವ್ಯವಹಾರ ನಡೆದಿಲ್ಲ ಎಂದು ದೀಪ ಹಚ್ಚಲಿ. ಸಾವಿರಾರು ಕೋಟಿ ಅವ್ಯವಹಾರ ನಡೆಸಿದ್ದಾರೆ. ಎಲ್ಲಾ ದಾಖಲೆ ಸಮೇತ ಬಂದು ನಂದಿ ದೇವಸ್ಥಾನದ ಮುಂದೆ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದರು.

ಮಾಜಿ ಸಚಿವ ಡಾ.ಕೆ.ಸುಧಾಕರ್ ಅವರು ಕೊರೊನಾ ಸಮಯದಲ್ಲಿ ಯಾವುದೇ ಭ್ರಷ್ಟಾಚಾರ ಮಾಡಿಲ್ಲ ಎಂದು ಪ್ರಮಾಣ ಮಾಡಲಿ. ನಾನು ದಾಖಲೆ ಸಮೇತ ಬಂದು 22 ಸಾವಿರ ಸೈಟ್‌ಗಳ ಕುರಿತು ನಂದಿ ದೇಗುಲದಲ್ಲಿ ದೀಪ ಹಚ್ಚುತ್ತೇನೆ ಎಂದು ಹೇಳಿದ ಅವರು, ಸಾಧ್ಯವಾದರೆ ಎಸ್.ಐ.ಟಿ. ತನಿಖೆಗೆ ನಮ್ಮ ಸರ್ಕಾರ ಚಿಂತನೆ ನಡೆಸಿದೆ ಎಂದರು.
ಇನ್ನೂ ಸಿನಿಮಾ ಡೈಲಾಗ್ ಹೊಡ್ಕೊಂಡು ರಾಜಕೀಯ ಮಾಡೋಕಾಗಲ್ಲ ಎಂಬ ಸುಧಾಕರ್ ಹೇಳಿಕೆ ಉತ್ತರ ನೀಡಿದ ಶಾಸಕ ಪ್ರದೀಪ್ ಈಶ್ವರ್, ಅಭಿವೃದ್ಧಿ ಕೆಲಸಗಳ ಮೂಲಕ ಜನರನ್ನ ತಲುಪುವುದು ಹೇಗೆ ಎಂಬುದನ್ನು ತೋರಿಸುತ್ತೇನೆ. ಈ ಹಿಂದೆ ಡಾ.ಕೆ.ಸುಧಾಕರ್ ಚೆನ್ನಾಗಿ ರಾಜಕೀಯ ಮಾಡುವವರು ಚುನಾವಣೆಯಲ್ಲಿ ಏಕೆ ಸೋತರು ಎಂದು ಪ್ರಶ್ನಿಸಿದರು.
ಈ ಚುನಾವಣೆಯಲ್ಲಿ ನನ್ನ ಕ್ಷೇತ್ರದ ಜನತೆ ನನಗೆ 90 ಸಾವಿರ ಜನ ಓಟು ಹಾಕಿದ್ದಾರೆ, ಗೆದ್ದಿದ್ದೇನೆ. ಜನರೇನು ದಡ್ಡತನದಿಂದ ಮತ ಹಾಕಿದ್ದಾರಾ.? ಎಂದು ಪ್ರಶ್ನಿಸಿದ ಅವರು, ಸುಧಾಕರ್ ಬಳಿ ದೊಡ್ಡ ದೊಡ್ಡ ನಾಯಕರಿದ್ದರೂ ಸಿಕ್ಕಾಪಟ್ಟೆ ದುಡ್ಡಿತ್ತು ಮತ್ತೇಕೆ ಸುಧಾಕರ್ ಚುನಾವಣೆಯಲ್ಲಿ ಗೆಲ್ಲಲಿಲ್ಲ. ಏಕೆ ಮಾಜಿ ಸಚಿವರ ರಾಜಕೀಯ ಜನರ ಮುಂದೆ ನಡೆಯಲಿಲ್ಲ. ಜನರನ್ನು ಒಳ್ಳೆಯ ಕೆಲಸಗಳ ಮೂಲಕ ತಲುಪಬೇಕು ಅದಷ್ಟೆ ಮುಖ್ಯ ಎಂದು ಹೇಳಿದರು.
ಇನ್ನೂ ನಮ್ಮ ಕ್ಷೇತ್ರದಲ್ಲಿ ಜನರನ್ನು ತಲುಪಲು ಹಲವು ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದೇನೆ. ಜನರ ಎಲ್ಲ ಸಮಸ್ಯೆಗಳಿಗೂ ಸ್ಪಂದಿಸಬೇಕೆಂಬ ಉದ್ದೇಶದಿಂದ ನನ್ನ ಹೆಸರಿನ ವೆಬ್‌ಸೈಟ್‌ನ್ನು ತೆರೆದಿದ್ದೇನೆ. ಯಾರು ಏನೇ ಸಮಸ್ಯೆ ಇದ್ದರೂ ವೆಬ್‌ಸೈಟ್ ಮೂಲಕ ಮಾಹಿತಿ ನೀಡಿದರೆ ತಕ್ಷಣ ಸ್ಪಂದಿಸುವ ಕೆಲಸವನ್ನು ನಮ್ಮ ತಂಡ ಮಾಡಲಿದೆ ಎಂದು ಪ್ರದೀಪ್ ಈಶ್ವರ್ ತಿಳಿಸಿದರು.











Click it and Unblock the Notifications