POSCO case: ಪೋಕ್ಸೊ ಪ್ರಕರಣದಲ್ಲಿ ಮತ್ತೆ ಬಿಎಸ್ ಯಡಿಯೂರಪ್ಪಗೆ ಸಂಕಷ್ಟ: ಸಮನ್ಸ್ ಜಾರಿ
ಬೆಂಗಳೂರು, ಜುಲೈ. 05: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದ ಪೋಕ್ಸೊ ಪ್ರಕರಣದ ಆರೋಪ ಎದುರಿಸುತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಂಧನ ಭೀತಿಯಿಂದ ಪಾರಾಗಿದ್ದ ಅವರು ಇದೀಗ ಅಧೀನ ನ್ಯಾಯಾಲಯದಿಂದ ಸಮನ್ಸ್ ಎದುರಿಸುವಂತಾಗಿದೆ.
ಬಿಎಸ್ ಯಡಿಯೂರಪ್ಪ ಮತ್ತು ಇತರ ಮೂವರು ಆರೋಪಿಗಳಿಗೆ ನಗರದ ವಿಶೇಷ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿದೆ. ಈ ಕುರಿತ ಅರ್ಜಿಯನ್ನು ನಗರದ 51ನೇ ಸಿವಿಲ್ ಮತ್ತು ಹೆಚ್ಚುವರಿ ಸೆಷನ್ಸ್ ಹಾಗೂ ಪೋಕ್ಸೊ ಪ್ರಕರಣಗಳ ವಿಚಾರಣೆ ನಡೆಸುವ ತ್ವರಿತಗತಿಯ ವಿಶೇಷ ನ್ಯಾಯಾಲಯ-1ರ ನ್ಯಾಯಾಧೀಶ ಎನ್.ಎಂ.ರಮೇಶ್ ಗುರುವಾರ ವಿಚಾರಣೆ ನಡೆಸಿ ಸಮನ್ಸ್ ಜಾರಿಗೊಳಿಸಲು ಆದೇಶಿಸಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ಸಲ್ಲಿಸಿರುವ ದೋಷಾರೋಪಣೆ ಪಟ್ಟಿಯನ್ನು ಪರಿಗಣಿಸಿದ ನ್ಯಾಯಾಲಯ ಬಿ.ಎಸ್.ಯಡಿಯೂರಪ್ಪ, ಅವರ ಸಹಚರರಾದ ವೈ.ಎಂ.ಅರುಣ್, ಎಂ.ರುದ್ರೇಶ್ ಮತ್ತು ವೈ.ಮರಿಸ್ವಾಮಿ ಅವರು ಇದೇ 15 ರಂದು ನ್ಯಾಯಾಲಯಕ್ಕೆ ಖುದ್ದು ಹಾಜರಾಗುವಂತೆ ಆದೇಶಿಸಿದೆ.
750 ಪುಟಗಳ ಆರೋಪಪಟ್ಟಿ
'ಯಡಿಯೂರಪ್ಪ ಅವರು ತಮ್ಮ ಧವಳಗಿರಿ ನಿವಾಸದಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ' ಎಂದು ಆರೋಪಕ್ಕೆ ಸಂಬಂಧಿಸಿದಂತೆ ಪ್ರಕರಣದ ತನಿಖೆ ನಡೆಸಿದ್ದ ಸಿಐಡಿ ಕಳೆದ ವಾರವಷ್ಟೇ 750 ಪುಟಗಳಷ್ಟು ಸುದೀರ್ಘವಾದ ದೋಷಾರೋಪಣೆ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿತ್ತು.
ಪೋಕ್ಸೊ ಪ್ರಕರಣದ ಹಿನ್ನೆಲೆಯೇನು?
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯ್ದೆ-2012ರ ಕಲಂ 8ರ ಅಡಿಯಲ್ಲಿ ಲೈಂಗಿಕ ದೌರ್ಜನ್ಯ, ಭಾರತೀಯ ದಂಡ ಸಂಹಿತೆ-1860ರ (ಐಪಿಸಿ) ಕಲಂ 354 (ಎ)ರ ಅಡಿಯಲ್ಲಿ ಲೈಂಗಿಕ ಕಿರುಕುಳದ ಆರೋಪ ಹೊರಿಸಲಾಗಿದೆ. ಅವರ ಸಹಚರರಾದ ಇತರ ಮೂವರ ವಿರುದ್ಧ ಐಪಿಸಿ ಕಲಂ 204 ಮತ್ತು 214ರ ಅಡಿಯಲ್ಲಿ ಕ್ರಮವಾಗಿ ಸಾಕ್ಷ್ಯ ನಾಶಪಡಿಸಲು ಮತ್ತು ಉಡುಗೊರೆಗಳನ್ನು ನೀಡಲು ಮುಂದಾದ ಅಪರಾಧಗಳಡಿ ಪ್ರಕರಣ ದಾಖಲಿಸಲಾಗಿದೆ.
ಪೋಕ್ಸೊ ಪ್ರಕರಣದ ಎಫ್‌ಐಆರ್ ರದ್ದುಕೋರಿ ಬಿ.ಎಸ್.ಯಡಿಯೂರಪ್ಪ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಬೇಕು' ಎಂಬ ಪ್ರಾಸಿಕ್ಯೂಷನ್ ಮನವಿಯನ್ನು ಕಳೆದ ವಾರವಷ್ಟೇ ಪರಿಗಣಿಸಿದ್ದ ಹೈಕೋರ್ಟ್‌ನ, 'ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ'ಯ ವಿಶೇಷ ನ್ಯಾಯಾಲಯದ ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರು ಮುಂದಿನ ವಿಚಾರಣೆವರೆಗೆ ಯಡಿಯೂರಪ್ಪ ಅವರನ್ನು ಬಂಧಿಸದಂತೆ ನಿರ್ದೇಶಿಸಿದ್ದರು. ಹಾಗಾಗಿ ಅವರು ಸದ್ಯ ಬಂಧನ ಭೀತಿಯಿಂದ ಪಾರಾಗಿದ್ದಾರೆ.












Click it and Unblock the Notifications