ಒಂದು ತಿಂಗಳಾದ್ರೂ ಶಾಲೆಗಳು ಓಪನ್ ಆಗಿಲ್ಲ: ಸರ್ಕಾರದ ವಿರುದ್ದ ಆರ್ ಅಶೋಕ್ ಆಕ್ರೋಶ
ಬೆಂಗಳೂರು, ಅಕ್ಟೋಬರ್ 13: ಖಾಸಗಿ ಶಾಲೆಯ ಮಕ್ಕಳು ದಸರಾ ರಜೆ ನಂತರ ಶಾಲೆಗೆ ಮರಳಿ ಪಾಠ, ಕಲಿಕೆಯಲ್ಲಿ ತೊಡಗಿದ್ದರೆ ಸರ್ಕಾರಿ ಶಾಲೆಯ ಮಕ್ಕಳು ಪಾಠವಿಲ್ಲದೆ ಸೊರಗುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ವಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ತಮ್ಮ ರಾಜಕೀಯ ತೆವಲಿಗೆ ಪಾಪ ಸರ್ಕಾರಿ ಶಾಲೆಯ ಬಡ ಮಕ್ಕಳು ಶಿಕ್ಷೆ ಅನುಭವಿಸುವಂತಾಗಿದೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಆರ್ ಅಶೋಕ್ ಅವರು, ಎಸೆಸೆಲ್ಸಿಯಂತಹ ನಿರ್ಣಾಯಕ ಘಟ್ಟದಲ್ಲಿರುವ ವಿದ್ಯಾರ್ಥಿಗಳು ಒಂದು ತಿಂಗಳು ಶಾಲೆಯಿಂದ ಹೊರಗೆ ಉಳಿದರೆ ಅವರ ಕಲಿಕಾ ಮಟ್ಟದ ಮೇಲೆ ದುಷ್ಪರಿಣಾಮ ಬೀರುವುದಿಲ್ಲವೇ? ಇದು ಅವರ ಫಲಿತಾಂಶದ ಮೇಲೆ ಪರಿಣಾಮ ಬೀರಿದರೆ ಅವರ ಭವಿಷ್ಯಕ್ಕೆ ಪೆಟ್ಟು ಬೀಳುವುದಿಲ್ಲವೇ? ಎಂದು ಪ್ರಶ್ನಿಸಿದರು. ನಿಮ್ಮ ರಾಜಕೀಯ ತೆವಲಿಗೆ ಮಕ್ಕಳ ಭವಿಷ್ಯ ಹಾಳು ಮಾಡಬೇಡಿ. ಎಸೆಸೆಲ್ಸಿ ಶಿಕ್ಷಕರಿಗೆ ಸಮೀಕ್ಷೆಯಿಂದ ವಿನಾಯಿತಿ ನೀಡಿ ಈ ಕೂಡಲೇ ಶಾಲೆ ಪುನರಾರಂಭಿಸಿ. ನಿಮ್ಮ ಕುರ್ಚಿ ಉಳಿಸಿಕೊಳ್ಳಲು ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡಬೇಡಿ ಎಂದು ಸರ್ಕಾರದ ವಿರುದ್ಧ ಚಾಟಿ ಬೀಸಿದರು.

ಯಾವುದೇ ಪೂರ್ವಸಿದ್ಧತೆ ಇಲ್ಲದ ತರಾತುರಿಯ "ಕುರ್ಚಿ ಬಚಾವೋ" ಜಾತಿಗಣತಿ ಸಮೀಕ್ಷೆಗೆ ಸರ್ಕಾರಿ ಶಾಲಾ ಶಿಕ್ಷಕರನ್ನು ನಿಯೋಜನೆ ಮಾಡಿ ಒಂದು ತಿಂಗಳು ಸರ್ಕಾರಿ ಶಾಲೆಗಳಿಗೆ ಬೀಗ ಜಡಿದು ವಿದ್ಯಾರ್ಥಿಗಳ ಭವಿಷ್ಯ ಹಾಳು ಮಾಡಿದ್ದಾಯ್ತು, ಈಗ ಅಂಗನವಾಡಿ ಕಾರ್ಯಕತೆಯರನ್ನೂ ಸಮೀಕ್ಷೆ ಕಾರ್ಯಕ್ಕೆ ನಿಯೋಜನೆ ಮಾಡಿ ಹಳ್ಳಿಗಾಡಿನ ಬಡ ಮಕ್ಕಳ ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕಿದೆ ಈ ನಾಲಾಯಕ್ ಕಾಂಗ್ರೆಸ್ ಸರ್ಕಾರ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಕಿಡಿಕಾರಿದರು.
ಸ್ವಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ನಿಮ್ಮ ಜಾತಿಗಣತಿ ನಾಟಕದಿಂದ ಸಾರ್ವಜನಿಕರಿಗೆ ಎಷ್ಟು ತಿಂದರೆ ಆಗುತ್ತಿದೆ ಎನ್ನುವ ಬಗ್ಗೆ ನಿಮಗೆ ಅರಿವೇ ಇಲ್ಲ. ನಿಮಗೆ ಕುರ್ಚಿ ಉಳಿಸಿಕೊಳ್ಳುವ ಹಠ, ಕನ್ನಡಿಗರಿಗೆ ಪರದಾಟ. ನಿಮ್ಮ ನಾಲಾಯಕ್ ಸರ್ಕಾರ ಯಾವಾಗ ತೊಲಗುತ್ತೋ ಎಂದು ಕನ್ನಡಿಗರು ಎದುರು ನೋಡುತ್ತಿದ್ದಾರೆ. ಬಸ್ಸುಗಳ ನಿರ್ವಹಣೆಗೂ ದುಡ್ಡಿಲ್ಲ. ಸಾರಿಗೆ ನೌಕರರ ಸಂಬಳ, ಹಿಂಬಾಕಿ ಪಾವತಿಗೂ ದುಡ್ಡಿಲ್ಲ, ಬಸ್ ನಿಲ್ದಾಣಗಳ ನಿರ್ವಹಣೆಗೂ ದುಡ್ಡಿಲ್ಲ. ಒಟ್ಟಿನಲ್ಲಿ ಪಾಪರ್ ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ಸಾರಿಗೆ ನಿಗಮಗಳ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, ಯಾವುದಕ್ಕೂ ದುಡ್ಡಿಲ್ಲ ಎನ್ನುವ ದುಸ್ಥಿತಿ ಎದುರಾಗಿದೆ ಎಂದರು.
ಉತ್ತರ ಕರ್ನಾಟಕದಲ್ಲಿ ನೆರೆಬಾಧಿತ ರೈತರ ಹೇಳತೀರದ ಗೋಳು; ಇಲ್ಲಿ ಮರಿ ಖರ್ಗೆ ಅವರಿಗೆ RSS ನಿಷೇಧ ಮಾಡುವ ಗೀಳು! ಕಲಬುರಗಿ ಸೇರಿದಂತೆ ಉತ್ತರ ಕರ್ನಾಟಕದ ರೈತರು ನೆರೆಯಿಂದ ಕಂಗಾಲಾಗಿದ್ದಾರೆ. ಹಸಿರು ಬರ ಘೋಷಣೆ ಮಾಡಿ, ಎಕರೆಗೆ 25,000 ರೂಪಾಯಿ ಪರಿಹಾರ ಕೊಡಿ, ಸಾಲ ಮನ್ನಾ ಮಾಡಿ ಎಂದು ಅನ್ನದಾತರು ಬೀದಿಗಿಳಿದು ಪ್ರತಿಭಟನೆ, ಬಂದ್ ಮಾಡುತ್ತಿದ್ದಾರೆ. ಆದರೆ ಇಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರು ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಆರ್ ಎಸ್ಎಸ್ ಬಗ್ಗೆ ಸಿಎಂಗೆ ಪತ್ರ ಬರೆದು ಕಾಲಹರಣ ಮಾಡುತ್ತಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ಅವರೇ, ಆರ್ ಎಸ್ಎಸ್ ನಿಷೇಧ ಮಾಡುವ ನಿಮ್ಮ ಗೀಳು ಬಿಡಿ. ಈ ಕೂಡಲೇ ಮುಖ್ಯಮಂತ್ರಿಗಳ ಮನವೊಲಿಸಿ ನೆರೆ ಪೀಡಿತ ಪ್ರದೇಶಗಳಲ್ಲಿ ಹಸಿರು ಬರ ಘೋಷಣೆ ಮಾಡಿಸಿ ರೈತರ ಸಂಕಷ್ಟಕ್ಕೆ ಸ್ಪಂದಿಸಿ. ಜನ ನಿಮಗೆ ಅಧಿಕಾರ ಕೊಟ್ಟಿರೋದು ಬರೀ ರಾಜಕಾರಣ ಮಾಡೋದಕ್ಕೆ ಅಲ್ಲ. ಆರ್ ಎಸ್ಎಸ್ ಬಗ್ಗೆ ನಿಮ್ಮ ಖಯಾಲಿ ಬಿಟ್ಟು ನಿಮ್ಮ ಜವಾಬ್ದಾರಿ ನಿರ್ವಹಿಸಿ ಎಂದು ಆರ್ ಅಶೋಕ್ ಹೇಳಿದರು.












Click it and Unblock the Notifications