ಉತ್ತರ ಕರ್ನಾಟಕದ ಸಮಸ್ಯೆ ತಿಳಿಸಲಿದೆ 'ಮಹಾಮರಣ' ಸಾಕ್ಷ್ಯಚಿತ್ರ
ಗದಗ, ಅಕ್ಟೋಬರ್ 19 : 'ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳಿಗೆ ಸಿಗಬೇಕಾದ ಸೌಲಭ್ಯಗಳು ದೊರೆಯುತ್ತಿಲ್ಲ. ಕುಡಿಯುವ ನೀರಿಗಾಗಿ ಬೀದಿಗಿಳಿಯುವ ಪರಿಸ್ಥಿತಿ ಎದುರಾಗಿದ್ದು, ಈ ಭಾಗದ ಜನರ ಸಮಸ್ಯೆಯ ಕುರಿತು ದೇಶದ ಜನರಿಗೆ ತಿಳಿಸಲು 'ಮಹಾಮರಣ' ಎಂಬ ಸಾಕ್ಷ್ಯ ನಿರ್ಮಾಣ ಮಾಡುತ್ತಿರುವುದಾಗಿ' ನಟಿ ಪೂಜಾಗಾಂಧಿ ಹೇಳಿದ್ದಾರೆ.
ಗದಗದಲ್ಲಿ ಶನಿವಾರ ಹಿರಿಯ ಕವಿ ಹುಯಿಲಗೋಳ ನಾರಾಯಣರಾವ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಮಾತನಾಡಿದ ಪೂಜಾಗಾಂಧಿ ಅವರು, 'ರೈತರು ಮತ್ತು ಈ ಭಾಗದ ಜನರು ಸಾಕ್ಷ್ಯಚಿತ್ರ ನಿರ್ಮಾಣಕ್ಕೆ ಅಗತ್ಯ ಸಹಕಾರ ನೀಡಬೇಕು' ಎಂದು ಮನವಿ ಮಾಡಿದರು. [ಏನಿದು ಕಳಸಾ ಬಂಡೂರಿ ಯೋಜನೆ?]

'1980ರಲ್ಲಿ ನರಂಗುಂದದಲ್ಲಿ ನಡೆದ ರೈತ ಬಂಡಾಯದ ಹೋರಾಟ ಮತ್ತೆ 35 ವರ್ಷಗಳ ಬಳಿಕ ಸ್ಫೋಟಿಸುವ ಲಕ್ಷಣಗಳು ಗೋಚರಿಸುತ್ತಿವೆ. ಕುಡಿಯುವ ನೀರಿಗಾಗಿ ಉತ್ತರ ಕರ್ನಾಟಕದ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ಬೆಳೆಹಾನಿ, ಬರಗಾಲದಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ' ಎಂದರು. [ಕಳಸಾ-ಬಂಡೂರಿಗಾಗಿ ಕರ್ನಾಟಕ ಬಂದ್]
'ನಾಡಿಗೆ ಆಹಾರ ಧಾನ್ಯವನ್ನು ಬೆಳೆದುಕೊಡುವ ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ. ಉತ್ತರ ಕರ್ನಾಟಕ ಭಾಗದ ರೈತರ ಸಂಕಷ್ಟಗಳ ಕುರಿತು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯಲು ಹಾಗೂ ಇಡೀ ದೇಶದ ಜನತೆಗೆ ಉತ್ತರ ಕರ್ನಾಟಕದ ಸ್ಥಿತಿಯ ಕುರಿತು ಮನವರಿಕೆ ಮಾಡುವ ಉದ್ದೇಶದಿಂದ ಸಾಕ್ಷ್ಯಚಿತ್ರ ನಿರ್ಮಾಣ ಮಾಡುತ್ತಿದ್ದೇನೆ' ಎಂದು ಪೂಜಾಗಾಂಧಿ ತಿಳಿಸಿದರು. [ಕುಡಿಯುವ ನೀರಿಗಾಗಿ ಕಳಸಾ-ಬಂಡೂರಿ ಯೋಜನೆ]
'ಕಳಸಾ-ಬಂಡೂರಿ ಯೋಜನೆಯಿಂದ ಈ ಭಾಗದ ರೈತರಿಗೆ ಆಗುವ ಅನುಕೂಲ ಹಾಗೂ ಗೋವಾ ಸರ್ಕಾರಕ್ಕೆ ಇದರಿಂದಾಗುವ ಅನುಕೂಲತೆಗಳ ಕುರಿತು ಸಾಕ್ಷ್ಯಚಿತ್ರದಲ್ಲಿ ವಿವರ ನೀಡಲಾಗುತ್ತದೆ. ಧಾರವಾಡ, ಗದಗ, ಬೆಳಗಾವಿ ಜನರ ಕುಡಿಯುವ ನೀರಿನ ಸಮಸ್ಯೆಯನ್ನು ಸಾಕ್ಷ್ಯಚಿತ್ರದ ಮೂಲಕ ತೆರೆದಿಡುವುದಾಗಿ' ಪೂಜಾ ಗಾಂಧಿ ಹೇಳಿದರು.

'ನರಗುಂದ, ನವಲಗುಂದ ಹಾಗೂ ಅಣ್ಣಿಗೇರಿಯಲ್ಲಿ ನಡೆದಿರುವ ರೈತರ ಹೋರಾಟದ ಸ್ಥಳಗಳಿಗೂ ಭೇಟಿ ನೀಡಿದ್ದೇನೆ. ಗದಗ ಜಿಲ್ಲಾ ಕಳಸಾ ಬಂಡೂರಿ ಹೋರಾಟ ಸಮಿತಿ ಕೈಗೊಂಡಿರುವ ಲಕ್ಷಪತ್ರ ಚಳುವಳಿ ಅಭಿಯಾನಕ್ಕೆ ತಾವು ಬೆಂಬಲ ನೀಡುತ್ತಿರುವುದಾಗಿ' ಪೂಜಾಗಾಂಧಿ ಘೋಷಿಸಿದರು.












Click it and Unblock the Notifications