Get Updates
Get notified of breaking news, exclusive insights, and must-see stories!

2023ರ ಚುನಾವಣೆಗೆ ಈಗಿನಿಂದಲೇ ರಾಜಕಾರಣಿಗಳ ತಯಾರಿ!

ಬೆಂಗಳೂರು, ಡಿಸೆಂಬರ್ 27: ಮುಂದಿನ ವಿಧಾನಸಭಾ ಚುನಾವಣೆಗೆ ಒಂದು ವರ್ಷವಷ್ಟೆ ಬಾಕಿಯಿದೆ. ಹೀಗಾಗಿ ಇನ್ನು ಮುಂದೆ ಯಾವುದೇ ರಾಜಕೀಯ ಪಕ್ಷವಾಗಲೀ, ನಾಯಕರಾಗಲೀ ಏನೇ ಕೆಲಸ ಮಾಡಿದರೂ ಅಥವಾ ಯಾವುದೇ ಹೇಳಿಕೆ ನೀಡಿದರೂ ಅದರ ಹಿಂದೆ ರಾಜಕೀಯದ ಲೆಕ್ಕಚಾರವಂತೂ ಇದ್ದೇ ಇರಲಿದೆ.

ರಾಜಕೀಯ ನಾಯಕರಿಗೆ ಒಂದು ವರ್ಷದ ಅವಧಿ ತುಂಬಾ ಕಡಿಮೆಯೇ. ಹೀಗಾಗಿ ಈ ಒಂದು ವರ್ಷದ ಅವಧಿಯಲ್ಲಿ ಗೆದ್ದು ಅಧಿಕಾರದಲ್ಲಿರುವವರು ಮರು ಆಯ್ಕೆಗೆ ಬೇಕಾದ ಕಸರತ್ತು ಮಾಡಿದರೆ, ಹಿಂದೆ ಸೋತವರು ಗೆಲುವಿಗೆ ಏನು ಮಾಡಬೇಕೆಂಬ ಆಲೋಚನೆ ಮಾಡುತ್ತಿರುತ್ತಾರೆ. ಇನ್ನು ಕೆಲವರು ಟಿಕೆಟ್‌ಗಾಗಿ ಈಗಿನಿಂದಲೇ ಗಾಡ್ ಫಾದರ್‌ಗಳ ಬೆನ್ನ ಹಿಂದೆ ಬೀಳಲಿದ್ದಾರೆ. ಹೀಗೆ ಹಲವು ರೀತಿಯ ರಾಜಕೀಯ ಚಟುವಟಿಕೆಗಳಿಗೆ ಚಾಲನೆ ದೊರೆಯಲಿದೆ.

ಮುನ್ನೆಲೆಗೆ ಬರಲಿದ್ದಾರೆ ರಾಜಕೀಯ ನಾಯಕರು

ಮುನ್ನೆಲೆಗೆ ಬರಲಿದ್ದಾರೆ ರಾಜಕೀಯ ನಾಯಕರು

ಇನ್ನು ಇದುವರೆಗೆ ಮೌನವಾಗಿದ್ದ ಸಣ್ಣಪುಟ್ಟ ಸಮುದಾಯದ ನಾಯಕರೆಲ್ಲರೂ ಮುನ್ನೆಲೆಗೆ ಬರಲಿದ್ದಾರೆ. ಆರೋಪ, ಪ್ರತ್ಯಾರೋಪಗಳು, ಪ್ರತಿಭಟನೆ, ಪಕ್ಷ ಸಂಘಟನಾ ಮೆರವಣಿಗೆಗಳು, ಚಳವಳಿಗಳು ಹೀಗೆ ಎಲ್ಲವೂ ಶುರುವಾಗಲಿದೆ. ಜತೆಗೆ ಎಲ್ಲರ ಬಾಯಿಯಲ್ಲಿಯೂ ಅಭಿವೃದ್ಧಿ ಮಂತ್ರಗಳು ಪಠಣವಾಗಲಿವೆ. ಚುನಾವಣೆ ನಂತರ ತಮ್ಮ ಕ್ಷೇತ್ರವನ್ನೇ ಮರೆತವರು ಮತ್ತೆ ಕ್ಷೇತ್ರದಲ್ಲಿ ಕಾಣಿಸಲಿದ್ದಾರೆ. ಸಣ್ಣಪುಟ್ಟ ಕಾರ್ಯಕ್ರಮಗಳಲ್ಲಿ ಉಪಸ್ಥಿತಿ ವಹಿಸುವ ಮೂಲಕ ನಾನು ಜನರ ಮಧ್ಯೆ ಇದ್ದೇನೆ ಎಂಬಂತೆ ಬಿಂಬಿಸುವುದರೊಂದಿಗೆ ಸಮುದಾಯ, ಜಾತಿ ಎಲ್ಲವೂ ನೆನಪಾಗಲಿದೆ.

ರಾಜಕೀಯದ ಅಂಗಳದಲ್ಲಿ ಸ್ವಘೋಷಿತ ನಾಯಕರು

ರಾಜಕೀಯದ ಅಂಗಳದಲ್ಲಿ ಸ್ವಘೋಷಿತ ನಾಯಕರು

ಇತರೆ ಚುನಾವಣೆಗಳಿಗೆ ಹೋಲಿಸಿದರೆ ವಿಧಾನಸಭಾ ಚುನಾವಣೆ ಭಿನ್ನವಾಗಿದೆ. ಹೀಗಾಗಿ ಸಣ್ಣಪುಟ್ಟ ನಾಯಕರೆಲ್ಲರೂ ಮಳೆಗಾಲದಲ್ಲಿ ಹುಟ್ಟಿಕೊಳ್ಳುವ ನಾಯಿಕೊಡೆಗಳಂತೆ ರಾಜಕೀಯದ ಅಂಗಳದಲ್ಲಿ ಸ್ವಘೋಷಿತ ನಾಯಕರಾಗಿ ಬಿಂಬಿಸಲಿದ್ದಾರೆ. ಜತೆಗೆ ಪಕ್ಷಾಂತರ ಪರ್ವಗಳು ಆರಂಭವಾಗಲಿದೆ. ಒಂದಷ್ಟು ಮಂದಿ ತಾವಿದ್ದ ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಪುಢಾರಿ ನಾಯಕರುಗಳ ಸಮ್ಮುಖದಲ್ಲಿ ಸೇರ್ಪಡೆಯಾಗಲಿದ್ದಾರೆ.

ಮೇಲ್ನೋಟಕ್ಕೆ ಪಕ್ಷದ ಸಿದ್ಧಾಂತವನ್ನು ಒಪ್ಪಿ ಬಂದಿರುವುದಾಗಿ ಹೇಳಿಕೆ ನೀಡಿದರೂ ಒಳ ಮರ್ಮ ಬೇರೆಯೇ ಆಗಿರುತ್ತದೆ. ಇದೆಲ್ಲದರ ನಡುವೆ ಆಡಳಿತದಲ್ಲಿರುವ ಪಕ್ಷ ಒಂದಷ್ಟು ಯೋಜನೆಯನ್ನು ಘೋಷಣೆ ಮಾಡಿ, ಜಾರಿ ಮಾಡದೆ ಮತದಾರರಿಗೆ ಆಕಾಶ ತೋರಿಸಿದರೂ ಅಚ್ಚರಿ ಪಡಬೇಕಾಗಿಲ್ಲ. ಇನ್ನೊಂದೆಡೆ ವಿರೋಧ ಪಕ್ಷಗಳು ಕೆಲವೊಂದು ವಿಚಾರಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ಮಾಡಿ, ಸರ್ಕಾರದ ವಿರುದ್ಧ ಹರಿಹಾಯಲು ತಯಾರಿ ನಡೆಸಬಹುದು.

ಕರಪತ್ರವಾಗಿ ಉಳಿದು ಹೋದ ಪ್ರಣಾಳಿಕೆಗಳು

ಕರಪತ್ರವಾಗಿ ಉಳಿದು ಹೋದ ಪ್ರಣಾಳಿಕೆಗಳು

ಕೆಲವು ನಾಯಕರಂತು ತಾವು ಜನಪ್ರತಿನಿಧಿಗಳು ಎಂಬುದನ್ನು ಮರೆತು ಬೀದಿ ನಾಯಿಗಳಂತೆ ಕಚ್ಚಾಡಲೂ ಹೇಸುವುದಿಲ್ಲ. ಮಾತಿನ ಬರದಲ್ಲಿ ಹಿಡಿತ ತಪ್ಪಿದ ಮಾತುಗಳನ್ನು ಆಡಿ ಜನರ ಮುಂದೆ ಸಣ್ಣವರಾಗಬಹುದು. ಪ್ರತಿಪಕ್ಷಗಳು ಜನರನ್ನು ಅರ್ಥಾತ್ ಮತದಾರರನ್ನು ಸೆಳೆಯಲು ಆಕರ್ಷಕವಾದ ಪ್ರಣಾಳಿಕೆಯ ತಯಾರಿಗೆ ಈಗಿನಿಂದಲೇ ಮುಂದಾಗಬಹುದು. ಆಡಳಿತ ಹಿಡಿದ ಬಳಿಕ ಪ್ರಣಾಳಿಕೆಯನ್ನು ಮರೆಯುವ ಪಕ್ಷಗಳು ಅದನ್ನು ತಿರುವಿ ನೋಡುವ ಗೋಜಿಗೂ ಹೋಗುವುದಿಲ್ಲ. ಜತೆಗೆ ತಾವು ನೀಡಿದ್ದನ್ನು ಎಷ್ಟರ ಮಟ್ಟಿಗೆ ಕಾರ್ಯಗತಗೊಳಿಸಿದ್ದೇವೆ ಎಂಬುದನ್ನು ಸಾರ್ವಜನಿಕರ ಮುಂದೆ ತೆರೆದಿಡುವ ಪ್ರಯತ್ನ ಮಾಡುವುದೇ ಇಲ್ಲ. ಜನ ಕೂಡ ಆ ಬಗ್ಗೆ ಸೊಲ್ಲೆತ್ತುವುದಿಲ್ಲ. ಹೀಗಾಗಿ ಪ್ರಣಾಳಿಕೆ ಎನ್ನುವುದು ಚುನಾವಣೆಗಳಲ್ಲಿ ಮತದಾರರಿಗೆ ಹಂಚುವ ಕರಪತ್ರವಾಗಿದೆ.

ಬಡ ವರ್ಗಗಳೇ ಓಟ್ ಬ್ಯಾಂಕ್

ಬಡ ವರ್ಗಗಳೇ ಓಟ್ ಬ್ಯಾಂಕ್

ಪ್ರತಿಯೊಂದು ಪಕ್ಷ ಮತ್ತು ನಾಯಕರಿಗೆ ರೈತರು ಮತ್ತು ಹಿಂದುಳಿದ, ಬಡ ವರ್ಗಗಳೇ ಓಟ್ ಬ್ಯಾಂಕ್ ಆಗಿರುವುದರಿಂದ ಅವರನ್ನು ಸುಲಭವಾಗಿ ಯಾಮಾರಿಸಿ ಅವರ ಮೂಗಿಗೆ ತುಪ್ಪ ಸವರಿ ಮತ ಗಿಟ್ಟಿಸಿಕೊಳ್ಳಬಹುದು ಎಂಬ ಆಲೋಚನೆಗಳು ರಾಜಕಾರಣಿಗಳಲ್ಲಿದೆ. ಅವರಿಗೆ ಒಂದಷ್ಟು ಭರವಸೆ, ಮತ್ತೊಂದಷ್ಟು ಆಮಿಷವೊಡ್ಡಿದರೆ ಮತ ಸುಲಭವಾಗಿ ದಕ್ಕುತ್ತದೆ ಎಂಬುದು ಗೊತ್ತಿದೆ. ಹೀಗಾಗಿಯೇ ರಾಜಕೀಯ ಪಕ್ಷಗಳು ನೀಡುವ ಪ್ರಣಾಳಿಕೆಗಳು ರೈತರಿಗೆ ಮತ್ತು ಬಡ ವರ್ಗದವರಿಗೆ ನೋಡಲು ಸುಂದರವಾಗಿರುವ ಮತ್ತು ತಿನ್ನಲು ಆಗದ ಪ್ಲಾಸ್ಟಿಕ್ ಹಣ್ಣಾಗಿದೆ.

ಚುನಾವಣೆ ವೇಳೆಯಷ್ಟೆ ಮತದಾರ ಪ್ರಭು

ಚುನಾವಣೆ ವೇಳೆಯಷ್ಟೆ ಮತದಾರ ಪ್ರಭು

ಮತ ಹಾಕುವ ತನಕವಷ್ಟೆ ಮತದಾರ ರಾಜಕಾರಣಿಗಳ ಪಾಲಿಗೆ ಪ್ರಭು. ಆ ನಂತರ ಆತನ ಗೋಳು ಕೇಳುವವರೇ ಇಲ್ಲದಾಗುತ್ತದೆ. ಹೀಗಾಗಿ ಗ್ರಾಮೀಣ ಪ್ರದೇಶದ ಮಂದಿ ಇನ್ನೂ ಕೂಡ ಮೂಲ ಸೌಕರ್ಯಗಳಿಂದ ವಂಚಿತರಾಗಿ, ಸ್ವಂತದ್ದೊಂದು ಸೂರಿಲ್ಲದೆ ಗುಡಿಸಲು ವಾಸಿಗಳಾಗಿ ಜೀವನ ಮಾಡುವಂತಾಗಿದೆ. ಕಳೆದ 2018ರ ವಿಧಾನಸಭಾ ಚುನಾವಣೆ ನಡೆದು ಆಗಲೇ ನಾಲ್ಕು ವರ್ಷಗಳಾಗುತ್ತಾ ಬಂದಿದೆ. ಸಮ್ಮಿಶ್ರ ಸರ್ಕಾರ ರಚನೆಯಾಗಿ, ಸರ್ಕಾರ ಉಳಿಸಿಕೊಳ್ಳುವ ಹೋರಾಟದಲ್ಲಿಯೇ ಕಾಲ ಕಳೆದು ಹೋಯಿತು. ಕೊನೆಗೂ ಬಿಜೆಪಿ ಸಮ್ಮಿಶ್ರ ಸರ್ಕಾರವನ್ನು ಕೆಡವಿ ಅಧಿಕಾರಕ್ಕೆ ಬಂತು. ಬಿಜೆಪಿ ಅಧಿಕಾರ ವಹಿಸಿಕೊಂಡ ಬಳಿಕವಂತು ಬರೀ ಗಂಡಾಂತರಗಳಲ್ಲಿಯೇ ದಿನ ಕಳೆದು ಹೋಗಿದೆ.

ಕೊರೊನಾ ಕಾರಣದಿಂದಾಗಿ ಜನ ಸಾಮಾನ್ಯರ ಬದುಕು ಮೂರಾಬಟ್ಟೆಯಾಗಿದೆ. ಆದರೆ ಇಂತಹ ಸಂಕಷ್ಟಗಳ ನಡುವೆ ಉಪ ಚುನಾವಣೆ, ಸ್ಥಳೀಯ ಸಂಸ್ಥೆ ಮತ್ತು ವಿಧಾನ ಪರಿಷತ್ ಚುನಾವಣೆಗಳು ಯಾವುದೇ ರೀತಿಯ ಅಡೆತಡೆಯಿಲ್ಲದೆ ನಡೆದಿದೆ. ಇದೀಗ ಎಲ್ಲ ರಾಜಕೀಯ ಪಕ್ಷಗಳ ನಾಯಕರು ಕೊರೊನಾ, ಓಮಿಕ್ರಾನ್ ನಡುವೆಯೂ ಮೈಕೊಡವಿಕೊಂಡು ಮೇಲೆದ್ದಿದ್ದಾರೆ. ಮುಂದಿನ 2023ರ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ತಯಾರಿ ಆರಂಭಿಸಿದ್ದಾರೆ. ಇನ್ನೇನಿದ್ದರೂ ರಾಜಕಾರಣಿಗಳದ್ದೇ ಹವಾ...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+