ಆಡಳಿತ, ವಿಪಕ್ಷಗಳಲ್ಲಿ ಅಧಿಕಾರದ ಕಿತ್ತಾಟ..ಕೇಳೋರಿಲ್ಲ ಜನರ ಸಂಕಟ!
ಬೆಂಗಳೂರು, ಜನವರಿ 16: ಇವತ್ತಿನ ರಾಜಕೀಯ ಸ್ಥಿತಿಗತಿಯನ್ನು ಗಮನಿಸಿದರೆ ಯಾವ ನಾಯಕನಿಗೂ ಪಕ್ಷ ನಿಷ್ಠೆಯಾಗಲೀ, ರಾಜ್ಯದ ಜನರ ಬಗೆಗಿನ ಕಾಳಜಿಯಾಗಲೀ ಕಾಣಿಸುತ್ತಿಲ್ಲ. ಎಲ್ಲರಿಗೂ ಅಧಿಕಾರ ಹಪಾಹಪಿ ಬಿಟ್ಟರೆ ಬೇರೇನು ಇಲ್ಲ. ಅಧಿಕಾರದಲ್ಲಿದ್ದವರಿಗೆ ಅದನ್ನು ಉಳಿಸಿಕೊಳ್ಳುವ ಚಿಂತೆಯಾದರೆ, ಅಧಿಕಾರದಲ್ಲಿಲ್ಲದವರಿಗೆ ಹೇಗಾದರೂ ಮಾಡಿ ಅಧಿಕಾರ ಪಡೆಯುವ ಹಠ. ಇದೆಲ್ಲದರ ಪರಿಣಾಮವಾಗಿ ಜನಸಾಮಾನ್ಯರು ಸಂಕಷ್ಟ ಅನುಭವಿಸುವಂತಾಗಿದೆ.
ರಾಜ್ಯ ರಾಜಕೀಯವನ್ನೊಮ್ಮೆ ಅವಲೋಕಿಸಿ ನೋಡಿದರೆ, ಕುರ್ಚಿ ಕದನ ಕೇವಲ ಆಡಳಿತ ಪಕ್ಷದಲ್ಲಿ ಮಾತ್ರವಲ್ಲ ವಿಪಕ್ಷಗಳಲ್ಲೂ ಇದ್ದು, ಪಕ್ಷದೊಳಗಿನ ಭಿನ್ನಾಭಿಪ್ರಾಯಗಳು ಪಕ್ಷ ಸಂಘಟನೆಗಷ್ಟೇ ಅಲ್ಲದೆ, ಆಡಳಿತ ಯಂತ್ರದ ಮೇಲೆಯೂ ಪರಿಣಾಮವನ್ನು ಬೀರುತ್ತಿದೆ. ಎರಡು ಕಡೆಯಲ್ಲೂ ಅಂದರೆ ಆಡಳಿತ ಮತ್ತು ವಿಪಕ್ಷಗಳಲ್ಲಿನ ಬಣಬಡಿದಾಟದಿಂದ ಪಕ್ಷವನ್ನು ಕಟ್ಟಿ ಬೆಳೆಸಿದ ತಳಮಟ್ಟದ ನಾಯಕರು ಮತ್ತು ಕಾರ್ಯಕರ್ತರು ಕಂಗಾಲಾಗಿದ್ದಾರೆ. ತಾವೇನು ಮಾಡಬೇಕು ಎಂಬ ಚಿಂತೆಯಲ್ಲಿದ್ದಾರೆ.

ಮೇಲ್ಮಟ್ಟದಲ್ಲಿ ಅಧಿಕಾರಕ್ಕಾಗಿ ಕಚ್ಚಾಡುವ ನಾಯಕರಿಂದಾಗಿ ಸಮುದಾಯ ಮತ್ತು ಪಕ್ಷದೊಳಗೆ ಬಿರುಕುಗಳು ಕಾಣಿಸಿಕೊಳ್ಳಲಾರಂಭಿಸಿವೆ. ನಾಯಕರ ಹೇಳಿಕೆಗಳು ಸ್ವಪಕ್ಷಗಳಲ್ಲಿಯೇ ಒಗ್ಗಟ್ಟನ್ನು ಹಾಳು ಮಾಡುತ್ತಿವೆ. ಇದರ ಪರಿಣಾಮ ಹಿರಿಯರು ಕಟ್ಟಿ ಬೆಳೆಸಿದ ಪಕ್ಷಗಳು ನಾಯಕರಿಗೊಂದು ಬಣವಾಗಿ ಮಾರ್ಪಾಡಾಗುತ್ತಿವೆ. ಇದರಿಂದ ಪಕ್ಷ ಸಂಘಟನೆಗೆ ತೊಡಕಾಗುತ್ತಿದೆ. ಅಷ್ಟೇ ಅಲ್ಲದೆ ಪ್ರಾಬಲ್ಯ ಸಾಧಿಸುವ ನಾಯಕರು ಉನ್ನತ ಅಧಿಕಾರ ಹೊಂದಿ, ಪಕ್ಷ ನಿಷ್ಠೆ ಹೊಂದಿ ಪಕ್ಷಕ್ಕಾಗಿ ಹಗಲಿರುಳು ದುಡಿದವರು ಯಾವುದೇ ಅಧಿಕಾರವಿಲ್ಲದೆ ಕೇವಲ ಪಕ್ಷದ ಮುಖಂಡ ಹೆಸರಿಗಷ್ಟೆ ಸೀಮಿತರಾಗುತ್ತಿದ್ದಾರೆ.
ಅಧಿಕಾರ ನಡೆಸುವುದೇ ಸಿಎಂಗೆ ಸವಾಲ್
ಈ ಬಾರಿ ಕಾಂಗ್ರೆಸ್ ಬಹುಮತದಿಂದ ಅಧಿಕಾರ ಹಿಡಿದಿದ್ದರೂ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರಿಗೆ ಈ ಹಿಂದೆ ಐದು ವರ್ಷ ಅಧಿಕಾರ ನಡೆಸಿದಷ್ಟು ಸುಲಭ ಈ ಬಾರಿಯಿಲ್ಲ. ಆರಂಭದಿಂದಲೂ ಕಲ್ಲು ಮುಳ್ಳಿನ ಮೇಲಿನ ಹೆಜ್ಜೆ ಎಂಬಂತೆ ಅವರ ಆಡಳಿತವಾಗಿದೆ. ಒಂಥರಾ ತೊಯ್ದಾಟದಲ್ಲಿಯೇ ಅಧಿಕಾರ ನಡೆಸುವಂತಾಗಿದೆ. ಒಬ್ಬ ಸಿಎಂ ಆಡಳಿತದಲ್ಲಿದ್ದಾಗಲೇ ಸಿಎಂ ಬದಲಾವಣೆ ವಿಚಾರ ಮುನ್ನಲೆಗೆ ಬರುತ್ತದೆ ಎಂದರೆ ಪ್ರಭಾವಿ ನಾಯಕರಾಗಿರುವ ಸಿದ್ದರಾಮಯ್ಯ ಅವರಿಗೆ ಇದೊಂದು ಮುಜುಗರದ ಸಂಗತಿಯೇ.

ಇನ್ನು ಅವರ ಮೇಲಿರುವ ಮೂಡ ಹಗರಣದ ಆರೋಪಗಳು, ಸಂಪುಟದ ಸಚಿವರೊಬ್ಬರು ಹಗರಣದ ಆರೋಪದಲ್ಲಿ ಜೈಲ್ ಹೋಗಿ ಬಂದಿರುವುದು, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿನ ಪರ್ಸೆಂಟೇಜ್ ಆರೋಪ ಈ ಸರ್ಕಾರದ ಅವಧಿಯಲ್ಲೂ ಮುಂದುವರೆದಿರುವುದು, ಬೆಲೆ ಏರಿಕೆಯ ಅಸಮಾಧಾನಗಳು, ಗ್ಯಾರಂಟಿ ಯೋಜನೆ ಕೊಟ್ಟ ಮೇಲೂ ಅದನ್ನು ಪಡೆದು ಸಂತಸ ಪಡುವವರಿಗಿಂತ ಇನ್ನೂ ತಲುಪುತ್ತಿಲ್ಲ ಎಂಬ ಅಸಮಾಧಾನಗಳು, ಚುನಾವಣೆ ಸಂದರ್ಭ ನೀಡಿದ ಇನ್ನಷ್ಟು ಭರವಸೆಗಳನ್ನು ಈಡೇರಿಸಿಲ್ಲ ಎಂಬ ಆಕ್ರೋಶದ ಜತೆಗೆ ಬೆಲೆ ಏರಿಕೆಯ ಶಾಕ್ ಎಲ್ಲವೂ ಎದ್ದು ಕಾಣಿಸುತ್ತಿವೆ.
ಕಾಂಗ್ರೆಸ್ ಬಿಜೆಪಿಯಲ್ಲಿ ಬಣ ಬಡಿದಾಟ
ಇದೆಲ್ಲವೂ ಆಡಳಿತಾತ್ಮಕವಾಗಿರುವ ಸಮಸ್ಯೆಗಳಾದರೆ, ಪಕ್ಷದಲ್ಲಿ ಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನ ಹಸ್ತಾಂತರ ಕುರಿತಂತೆ ನಡೆಯುತ್ತಿರುವ ಬಡಿದಾಟಗಳು, ಹೈಕಮಾಂಡ್ ಎಚ್ಚರಿಕೆಗೆ ಮಣಿಯದೆ ತಾವು ನಡೆದದ್ದೇ ಹಾದಿ ಎಂಬಂತೆ ವರ್ತಿಸುತ್ತಿರುವ ಮತ್ತು ತಮ್ಮ ಪ್ರಾಬಲ್ಯ ಉಳಿಸಿಕೊಳ್ಳಲು ಹೆಣಗಾಡುತ್ತಿರುವ ನಾಯಕರು, ತಮ್ಮ ಕ್ಷೇತ್ರದ ಮೇಲೆ ಮತ್ಯಾರೋ ಎಂಟ್ರಿ ಕೊಟ್ಟು ತಮ್ಮ ಸ್ಥಾನಮಾನಕ್ಕೆ ಧಕ್ಕೆ ತರುತ್ತಿದ್ದಾರೆ ಎಂಬ ಆಕ್ರೋಶಗಳೀಗ ಕಾಂಗ್ರೆಸ್ ನಲ್ಲಿ ಮನೆ ಮಾಡಿದೆ.

ಬೆಳಗಾವಿ ಸಾಹುಕಾರರು ಎಂದೇ ಕರೆಯಲ್ಪಡುವ ಜಾರಕಿಹೊಳಿ ಸಹೋದರರು ಸೆಟೆದು ನಿಂತಿದ್ದು ತಮ್ಮದೇ ಪಕ್ಷದ ರಾಜ್ಯಾಧ್ಯಕ್ಷ ಮೇಲೆ ಸಮರ ಸಾರಿದ್ದಾರೆ. ಅತ್ತ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಸಚಿವ ಸತೀಶ್ ಜಾರಕಿಹೊಳಿ ಸೆಟೆದು ನಿಂತಿದ್ದರೆ, ಇತ್ತ ಬಿಜೆಪಿಯಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧವೇ ಹೇಳಿಕೆಗಳನ್ನು ನೀಡಿ ಅವರು ಕೆರಳುವಂತೆ ಮಾಡಿದ್ದಾರೆ. ಇಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ಪರಿಸ್ಥಿತಿ ನೆಟ್ಟಗಿಲ್ಲ. ಎರಡು ಪಕ್ಷದಲ್ಲಿಯೂ ಹೈಕಮಾಂಡ್ ಆದೇಶಕ್ಕೆ ಕಿಮ್ಮತ್ತು ಇಲ್ಲದಂತಾಗಿರುವುದು ಮಾತ್ರ ದುರಂತವೇ ಸರಿ.
ಪಕ್ಷದೊಳಗಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಿ
ಇನ್ನು ಜೆಡಿಎಸ್ ನ ಪರಿಸ್ಥಿತಿಯೂ ಬಿಜೆಪಿ, ಕಾಂಗ್ರೆಸ್‌ಗೆ ಹೊರತಾಗಿಲ್ಲ. ಇಲ್ಲಿಯೂ ಭಿನ್ನಮತ ಜಗಜ್ಜಾಹೀರಾಗಿದೆ. ಈಗಾಗಲೇ ಜಿ.ಟಿ.ದೇವೇಗೌಡರು ಒಂದು ಕಾಲು ಹೊರಗಿಟ್ಟಿದ್ದಾರೆ. ಹೆಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಮಂತ್ರಿಯಾದ ಬಳಿಕ ರಾಜ್ಯಾಧ್ಯಕ್ಷರು ಯಾರು ಎಂಬ ಗೊಂದಲ ಪಕ್ಷದಲ್ಲಿದೆ. ಪಕ್ಷ ಸಂಘಟನೆ ಸಂಪೂರ್ಣ ನಿಂತು ಹೋಗಿದೆ. ಇನ್ನೊಂದೆಡೆ ಇರುವ ಶಾಸಕರಿಗೆ ಕಾಂಗ್ರೆಸ್ ಗಾಳ ಹಾಕುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಹೀಗಾಗಿ ಪಕ್ಷದಲ್ಲಿ ಶಾಸಕರನ್ನು ಉಳಿಸಿಕೊಂಡು ಭಿನ್ನಮತವನ್ನು ಶಮನ ಮಾಡುವುದು ಜೆಡಿಎಸ್ ಮುಂದಿರುವ ದೊಡ್ಡದೊಂದು ಸವಾಲ್ ಆಗಿದೆ.
ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಮೂರು ಪಕ್ಷಗಳಿಗೆ ತಮ್ಮ ಪಕ್ಷದಲ್ಲಿರುವ ಒಡಕನ್ನೇ ಸರಿಪಡಿಸಲಾಗದೆ ಒದ್ದಾಡುತ್ತಿರುವಾಗ ರಾಜ್ಯದ ಸಮಸ್ಯೆಗಳನ್ನು ಹೇಗೆ ಪರಿಹರಿಸುತ್ತಾರೆ ಎಂಬ ಪ್ರಶ್ನೆಗಳು ಜನಸಾಮಾನ್ಯರಲ್ಲಿ ಮನೆ ಮಾಡುತ್ತಿದೆ. ಈಗಾಗಲೇ ಜನ ಸಂಕಷ್ಟಕ್ಕೀಡಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಜನ ಸಾಮಾನ್ಯರ ಸಂಕಷ್ಟಗಳಿಗೆ ಸರ್ಕಾರ ಸ್ಪಂದಿಸಬೇಕಿದೆ. ಹಾಗೆಯೇ ಸರ್ಕಾರ ಮಾಡುವ ತಪ್ಪನ್ನು ಕಂಡು ಹಿಡಿದು ಸರಿಪಡಿಸುವ ಕೆಲಸವನ್ನು ವಿಪಕ್ಷಗಳು ಮಾಡಬೇಕಿವೆ. ಆದರೆ ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಮೂರು ಪಕ್ಷಗಳಲ್ಲಿನ ಗೊಂದಲಕ್ಕೆ ಪರಿಹಾರ ಕಂಡುಕೊಂಡರೆ ಅಷ್ಟೇ ಸಾಕಾಗಿದೆ.












Click it and Unblock the Notifications