Political Row: ಕುಮಾರಸ್ವಾಮಿ ಮಾಡಿದರೆ ಮೃಷ್ಟಾನ್ನ, ಬೇರೆಯವರು ಮಾಡಿದರೆ ಚಿತ್ರಾನ್ನವೇ: ಪ್ರಿಯಾಂಕ್ ಖರ್ಗೆ ಪ್ರಶ್ನೆ

ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಕೇಂದ್ರ ಸಚಿವ ಎಚ್‌.ಡಿ ಕುಮಾರಸ್ವಾಮಿ ಅವರ ನಡುವೆ ವಾಕ್ಸಮರ ಮುಂದುವರಿದಿದೆ. ಇದೀಗ ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಪ್ರಿಯಾಂಕ್ ಖರ್ಗೆ ಅವರು, ಸನ್ಮಾನ್ಯ ಕುಮಾರಣ್ಣನವರೇ, ತಾವೊಬ್ಬ ಕೇಂದ್ರ ಸಚಿವರು, ತೂಕವಿಲ್ಲದ ಮಾತುಗಳನ್ನಾಡಿ ತೂಕ ಕಳೆದುಕೊಳ್ಳಬೇಡಿ, ಕೆಪಿಎಸ್ಸಿ ವಿಷಯವಾಗಿ ತಮ್ಮ ವಿರುದ್ದದ ಆರೋಪಗಳಿಗೆ ತಾರ್ಕಿಕ ಉತ್ತರಗಳನ್ನು ನೀಡುವ ಬದಲಾಗಿ ಪಲಾಯನದ ಪತ್ರಿಕಾಗೋಷ್ಠಿ ನಡೆಸಿದ್ದೀರಿ. 2011ನೇ ಸಾಲಿನ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ಆಯ್ಕೆಯಲ್ಲಿ ವ್ಯಾಪಕ ಅಕ್ರಮ ನಡೆದಿದೆ ಎಂದು ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ನೇಮಕಾತಿ ರದ್ದುಗೊಳಿಸಿ ತೀರ್ಪು ನೀಡಿದ್ದರೂ, ಕರ್ನಾಟಕ ಸರ್ಕಾರದ ಮೇಲ್ಮನವಿಯನ್ನು ವಜಾಗೊಳಿಸಿದ್ದರೂ ಸಹ ಎಚ್.ಡಿ ದೇವೇಗೌಡರು ಹಾಗೂ ಕುಮಾರಸ್ವಾಮಿಯವರು ಸದರಿ ಅಭ್ಯರ್ಥಿಗಳನ್ನು ನೇಮಕ ಮಾಡುವಂತೆ ಅಂದಿನ ಮುಖ್ಯಮಂತ್ರಿಗಳಿಗೆ ಶಿಫಾರಸ್ಸು ಪತ್ರ ನೀಡಿರುತ್ತಾರೆ ಎಂದಿದ್ದಾರೆ.

ಶಿಫಾರಸು ಲಾಬಿ ಮಾಡುವುದರ ಹಿಂದೆ ಕುಮಾರಸ್ವಾಮಿಯವರ ಹಿತಾಸಕ್ತಿ ಏನಿತ್ತು? ಉಚ್ಛ ನ್ಯಾಯಾಲಯವೇ ಈ ಆಯ್ಕೆಯಲ್ಲಿ ಅಕ್ರಮವನ್ನು ಕಂಡಿರುವಾಗ ಕುಮಾರಸ್ವಾಮಿಯವರು ಮತ್ತು ದೇವೇಗೌಡರು ಕ್ಲೀನ್ ಚಿಟ್ ನೀಡಿ ಶಿಫಾರಸು ಮಾಡಿದ್ದೇಕೆ. ಕುಮಾರಸ್ವಾಮಿಯವರು ಮಾಡಿದರೆ ಮೃಷ್ಟಾನ್ನ,
ಬೇರೆಯವರು ಮಾಡಿದರೆ ಚಿತ್ರಾನ್ನವೇ?! ಶ್ರೀ ಕುಮಾರಸ್ವಾಮಿರವರೇ, ತಮ್ಮ ಸಂಬಂಧಿಕ ಅಧಿಕಾರಿಗಳ ನೇಮಕಾತಿಯನ್ನು ರದ್ದುಪಡಿಸಿದ್ದರೂ, CAT ಯಿಂದ ತಡೆಯಾಜ್ಞೆ ತಂದು IAS ಗೆ ಬಡ್ತಿ ಕೊಡಿಸಿ ಮುಂದುವರೆಸಿರುವುದು ಯಾರ ಚಿತಾವಣೆಯಿಂದ ಎಂಬುದು ಎಲ್ಲರಿಗೂ ತಿಳಿದಿದೆ. ಇದರ ಬಗ್ಗೆ ತಾವು ಮಾತನಾಡುವುದಿಲ್ಲವೇಕೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರಶ್ನೆ ಮಾಡಿದ್ದಾರೆ.

Political-Row

ಮುಂದುವರಿದು ಅಕ್ರಮದಲ್ಲಿ ಜೈಲಿಗೆ ಹೋಗಿದ್ದ ಹಿಂದಿನ ಕೆಪಿಎಸ್ಸಿ ಅಧ್ಯಕ್ಷರೊಬ್ಬರನ್ನು ಭೇಟಿಯಾಗಲು ಕುಮಾರಸ್ವಾಮಿಯವರು ಪರಪ್ಪನ ಅಗ್ರಹಾರ ಜೈಲಿಗೆ ಹೋಗಿದ್ದು ಜಗತ್ತಿಗೆ ತಿಳಿದಿಲ್ಲ ಎಂದುಕೊಂಡಿದ್ದಾರಾ, ಜೈಲಿಗೆ ಹೋಗಿ ಭೇಟಿಯಾಗುವಂತಹದ್ದೇನಿತ್ತು? ತಮ್ಮ ಹೆಸರು ಹೊರಬರದಂತೆ ಮನವಿ ಮಾಡುವುದಕ್ಕಾ, ಬೆದರಿಕೆ ಹಾಕುವುದಕ್ಕಾ, ಕುಮಾರಸ್ವಾಮಿಯವರೇ, ಕೆಪಿಎಸ್ಸಿಯ ಅಕ್ರಮದ ಜಾತಕವನ್ನು ಜಾಲಾಡಿದರೆ ಎಲ್ಲೆಲ್ಲೂ ನಿಮ್ಮ ಕುಂಡಲಿ, ನಕ್ಷತ್ರಗಳೇ ಕಾಣಸಿಗುತ್ತವೆ. ಉಚ್ಛ ನ್ಯಾಯಾಲಯದ ಅದೇಶವನ್ನೇ ಧಿಕ್ಕರಿಸಿ ನೇಮಕಾತಿ ಶಿಫಾರಸು ಮಾಡಿದ್ದವರು, RDPR ಇಲಾಖೆಯ ನೇಮಕಾತಿಯನ್ನು ಪ್ರಶ್ನಿಸುತ್ತಿರುವುದು ಹಾಸ್ಯವಲ್ಲವೇ ಎಂದೂ ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರಶ್ನಿಸಿದ್ದಾರೆ.

ಇನ್ನು ಈಚೆಗೂ ಸಹ ಪ್ರಿಯಾಂಕ್ ಖರ್ಗೆ ಅವರು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದರು. "ಪ್ರಿಯಾಂಕ್ ಖರ್ಗೆ" ಎಂಬ ಹೆಸರು ಇಷ್ಟು ದಿನ ಬಿಜೆಪಿಯವರಿಗೆ ಉದ್ಯೋಗ ನೀಡುತ್ತಿತ್ತು, ಸುದ್ದಿಯಲ್ಲಿರಲು ವಸ್ತುವಾಗುತ್ತಿತ್ತು.. ಈಗ ಜೆಡಿಎಸ್ ನವರಿಗೂ ಪ್ರಿಯಾಂಕ್ ಹೆಸರು ಪ್ರಿಯವಾಗುತ್ತಿದೆ!

ಕೇಂದ್ರ ಸಚಿವರಾದ ಕುಮಾರಸ್ವಾಮಿಯವರಿಗೆ ನನ್ನ ವಿರುದ್ಧ ಮುಗಿಬೀಳಲು ಅಮಿತ್ ಶಾ ಟಾಸ್ಕ್ ಕೊಟ್ಟಿರಬಹುದು ಅಥವಾ ಕೆಪಿಎಸ್ಸಿ ಅಕ್ರಮಗಳ ಬಗ್ಗೆ ಮಾತನಾಡಲು ಬಿಜೆಪಿಗರಿಗೆ ಸಾಧ್ಯವಾಗದ ಕಾರಣ ಕುಮಾರಣ್ಣರನ್ನು ವೇದಿಕೆಗೆ ತಂದು ಕೂರಿಸಿರಬಹುದು! ಕೆಪಿಎಸ್ಸಿ ಅಧ್ಯಕ್ಷರ ಅಕ್ರಮಗಳ ಬಗ್ಗೆ ಕುಮಾರಸ್ವಾಮಿಯವರು ತಮ್ಮ ಕೇಸರಿ ಮಿತ್ರರನ್ನೇ ಕೇಳಿದ್ದಿದ್ದರೆ ಉತ್ತರ ಸಿಗುತ್ತಿತ್ತು, ಕೇಳಲು ಅಡ್ಜಸ್ಟ್ಮೆಂಟ್ ಮಿತ್ರತ್ವ ಅಡ್ಡ ಬರುತ್ತದೆಯೇ? ಕನಿಷ್ಠ ಪಕ್ಷ ರೆಬಲ್ ಬಿಜೆಪಿಗರಾದ ಶ್ರೀ ಯತ್ನಾಳ್ ಅವರನ್ನಾದರೂ ಕೇಳಬಹುದಿತ್ತು, ಪೂರ್ಣ ಉತ್ತರ ಸಿಗುತ್ತಿತ್ತು.. ಕೆಪಿಎಸ್ಸಿ ಅಧ್ಯಕ್ಷರನ್ನು ನೇಮಿಸಿದ್ದು ಯಾರು, ಯಾರ ಸಂಬಂಧಿ? ಎಷ್ಟು ಕೋಟಿಗೆ ಆ ಹುದ್ದೆ ಸೇಲ್ ಆಗಿತ್ತು? ಎಷ್ಟು ಅಕ್ರಮಗಳು ನಡೆದಿವೆ ಎಲ್ಲವಕ್ಕೂ ಜಗನ್ನಾಥ ಭವನದಲ್ಲೇ ಉತ್ತರವಿದೆ, ಕುಮಾರಣ್ಣ...

ಕುಮಾರಣ್ಣ, ಕೆಪಿಎಸ್ಸಿಯಲ್ಲಿ ನೀವು ನಡೆಸಿದ ಅಕ್ರಮಗಳ ವಿಷಯ ಬಾಯಿ ತಪ್ಪಿ ನಿಮ್ಮ ಬಾಯಿಯಲ್ಲೇ ಹೊರಬಿದ್ದಿತ್ತು, ನೆನಪಿದೆಯೇ? ಕೆಲವು ವರ್ಷಗಳ ಹಿಂದೆ ನಿಮ್ಮ ಪಕ್ಷ ತೊರೆದು ನಮ್ಮ ಪಕ್ಷ ಸೇರಿದವರೊಬ್ಬರ ವಿರುದ್ಧ ಆರೋಪ ಮಾಡುವಾಗ, "ಅವರ ಹಲವು ಸಂಬಂಧಿಗಳಿಗೆ ಕ್ಲಾಸ್ ಒನ್ ಹುದ್ದೆಗಳನ್ನು ಕೊಡಿಸಿದ್ದೆ" ಎಂದು ಹೇಳಿದ್ದಿರಿ, ಕೆಪಿಎಸ್ಸಿಯಲ್ಲಿ ನೀವೂ ಪ್ರಭಾವ ಬೀರಿದ್ದೀರಿ ಎಂದಾಯಿತಲ್ಲವೇ? ಅಕ್ರಮಗಳಲ್ಲಿ ನಿಮ್ಮ ಲೆಕ್ಕವೂ ಸೇರಿದೆಯಲ್ಲವೇ? ನಿಮ್ಮ ಮೈತ್ರಿ ಸರ್ಕಾರದ ಅವಧಿಯಲ್ಲಿ ನೀವೇ ನೇಮಿಸಿದ್ದ ಹಿಂದಿನ ಕೆಪಿಎಸ್ಸಿ ಅಧ್ಯಕ್ಷರ ಅವಧಿಯಲ್ಲಿ ನಡೆದಿದ್ದ ಹಗರಣಗಳನ್ನು ಮರೆತಿರುವಿರಾ?

ನೀವು ನೇಮಿಸಿದ್ದ ಅಧ್ಯಕ್ಷರ ಅವಧಿಯಲ್ಲಿ, 1998ರಲ್ಲಿ ಕೆಎಎಸ್ ಅಧಿಕಾರಿಗಳ ನೇಮಕಾತಿಯಲ್ಲಿ ನಡೆದ ಬೃಹತ್ ಅಕ್ರಮವನ್ನು ನೀವು ಮರೆತಿದ್ದರೂ ರಾಜ್ಯ ಮರೆತಿಲ್ಲ.. ಕುಮಾರಸ್ವಾಮಿಯವರೇ, ನನ್ನ ಮೈಗೆ ಕೆಸರು ಅಂಟಿಸುವ ನಿಮ್ಮ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ, ನಿಮ್ಮೆಲ್ಲಾ ಆರೋಪಗಳಿಗೂ ನಾನು ವಾಸ್ತವಾಂಶ ತೆರೆದಿಡುತ್ತೇನೆ.. ಆದರೆ, ಕೆಪಿಎಸ್ಸಿ ನೇಮಕಾತಿಯಲ್ಲಿ ನಿಮ್ಮ ಅವಧಿಯಲ್ಲಿ ನಡೆದ ಅಕ್ರಮಗಳ ಬಗ್ಗೆ ಉತ್ತರಿಸಬೇಕಾದ ಪ್ರಶ್ನೆಗಳು ಹೆಚ್ಚಿವೆ ಎಂದೂ ಈಚೆಗೆ ಪ್ರಿಯಾಂಕ್ ಖರ್ಗೆ ಅವರು ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+