Karnataka: ಅಧಿಕಾರದ ಕಿತ್ತಾಟದಲ್ಲಿ ಜನಹಿತ ಮರೆತ ನಾಯಕರು: ಜನರ ಗೋಳು ಕೇಳೋರಿಲ್ಲ!
ಬೆಂಗಳೂರು, ಜನವರಿ 31: ರಾಜಕೀಯ ನಾಯಕರು ಏನೇ ಮಾಡಿದರೂ ಅದರ ಹಿಂದೆ ಅಧಿಕಾರದ ದಾಹವಂತು ಇದ್ದೇ ಇರುತ್ತದೆ. ಅಧಿಕಾರದಲ್ಲಿದ್ದಷ್ಟು ದಿನ ಅವರ ನಿಯತ್ತು, ನಿಷ್ಠೆ ಆ ಪಕ್ಷದ ಮೇಲಿರುತ್ತದೆಯಾದರೂ ಅಧಿಕಾರ ಕಳೆದುಕೊಂಡ ಕ್ಷಣದಿಂದಲೇ ಅವರ ವರಸೆಗಳೆಲ್ಲವೂ ಬದಲಾಗಿ ಬಿಡುತ್ತದೆ. ಇದು ರಾಷ್ಟ್ರ ಮತ್ತು ರಾಜ್ಯದ ರಾಜಕೀಯ ಪಕ್ಷಗಳ ನಾಯಕರ ಪರಿಸ್ಥಿತಿಯಾಗಿದ್ದು, ಅದನ್ನು ಎಲ್ಲರೂ ಹತ್ತಿರದಿಂದ ನೋಡಿದ್ದಾರೆ. ಹೀಗಾಗಿ ರಾಜಕೀಯದಲ್ಲಿ ಸ್ವಾರ್ಥ, ಅಧಿಕಾರದ ಹಪಾಹಪಿ ಇಲ್ಲದೆ ಹೋದರೆ ಆತ ಪಕ್ಷಗಳಲ್ಲಿ ಬ್ಯಾನರ್ ಕಟ್ಟುತ್ತಾ, ಜೈಕಾರ ಕೂಗುವುದಕ್ಕಷ್ಟೆ ಸೀಮಿತನಾಗಬೇಕಾಗುತ್ತದೆ.
ಇವತ್ತು ಯಾವುದೇ ಪಕ್ಷವಾಗಿರಲಿ ಮತ್ತು ಅದರ ನಾಯಕರಾಗಿರಲಿ ಅಧಿಕಾರ ಅನುಭವಿಸುತ್ತಿದ್ದಾರೆ ಎನ್ನುವುದಾದರೆ ಅದಕ್ಕೆ ಕಾರಣಕರ್ತರು ತಳಮಟ್ಟದಿಂದ ಪಕ್ಷವನ್ನು ಕಟ್ಟಿಬೆಳೆಸುತ್ತಿರುವ ಕಾರ್ಯಕರ್ತರು ಮತ್ತು ತಳಮಟ್ಟದ ನಾಯಕರಾಗಿದ್ದಾರೆ. ಇವರ ಶ್ರಮದಿಂದಲೇ ಮೇಲ್ವರ್ಗದ ನಾಯಕರು ಅಧಿಕಾರದಲ್ಲಿ ಮೆರೆಯುವಂತಾಗಿದೆ. ಯಾವುದೇ ಊರಿಗೆ ಹೋದಾಗಲೂ ಅವರ ಹಿಂದೆ ಮುಂದೆ ನಿಂತು ನಾಯಕರನ್ನಾಗಿ ಬಿಂಬಿಸುವವರು ಇದೇ ಕಾರ್ಯಕರ್ತರಾಗಿರುತ್ತಾರೆ. ಪಕ್ಷಕ್ಕೆ ನಿಯತ್ತಾಗಿ ದುಡಿಯುವ ಕಾರ್ಯಕರ್ತರು ಇಲ್ಲದೆ ಹೋಗಿದ್ದರೆ ಯಾವುದೇ ನಾಯಕನೂ ನಾನೇ ನಾಯಕ ಎಂದು ಎದೆಯುಬ್ಬಿಸಿ ನಡೆಯಲು ಸಾಧ್ಯವೇ ಆಗುತ್ತಿರಲಿಲ್ಲ.

ಅಧಿಕಾರ ಪಡೆಯುವ ಮತ್ತು ಪ್ರಾಬಲ್ಯ ಮೆರೆಯುವ ಸಲುವಾಗಿ ಜನಪ್ರತಿನಿಧಿಯಾಗಿ, ಜನಸೇವಕನಾಗಿ ಗುರುತಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ ಜಾತಿವಾರು ನಾಯಕರು ಗುರುತಿಸಿಕೊಳ್ಳುತ್ತಿದ್ದಾರೆ. ಜಾತಿ, ಸಮುದಾಯದ ಉದ್ಧಾರಕ ಎಂದು ಬಿಂಬಿಸಿಕೊಳ್ಳುವವರು ಅದೆಷ್ಟು ಮಟ್ಟಕ್ಕೆ ತಮ್ಮ ಸಮುದಾಯದ ಅಭಿವೃದ್ಧಿ ಮಾಡಿದ್ದಾರೆ ಎನ್ನುವುದು ಗೊತ್ತಿರುವ ವಿಚಾರವೇ.. ಇದು ತಾವು ಅಧಿಕಾರ ಪಡೆಯುವ ಸಲುವಾಗಿ ಮಾಡಿಕೊಂಡ ಒಂದು ಗಿಮಿಕ್ ಅಷ್ಟೆ. ನಿಜವಾದ ನಾಯಕ ಜಾತಿ, ಧರ್ಮ, ಸಮುದಾಯವನ್ನು ಮೀರಿ ಬೆಳೆದಿರುತ್ತಾನೆ. ಆತ ಯಾವತ್ತೂ ಒಂದೇ ಜಾತಿ ಧರ್ಮಕ್ಕೆ ಸೀಮಿತನಾಗಿರುವುದಿಲ್ಲ.
ರಾತ್ರಿ ಬೆಳಗಾಗುವುದರಲ್ಲಿ ನಾಯಕರಾಗುತ್ತಾರೆ
ಇವತ್ತು ಅಧಿಕಾರ ಅನುಭವಿಸುತ್ತಿರುವ ಹಿರಿಯ ರಾಜಕಾರಣಿಗಳು ತಮ್ಮ ಮಕ್ಕಳನ್ನು ರಾಜಕೀಯಕ್ಕೆ ಎಳೆದು ತಂದು ಅವರಿಗೆ ಅಧಿಕಾರ ದಕ್ಕುವಂತೆ ಮಾಡಿದ್ದಾರೆ. ಅವರು ಒಂದು ದಿನವೂ ಹೋರಾಟ ಮಾಡಿಲ್ಲ, ಪಕ್ಷಕ್ಕಾಗಿ ಬಾವುಟ ಕಟ್ಟಿಲ್ಲ. ಸಂಘಟನೆಯಂತು ಮಾಡಿಯೇ ಇಲ್ಲ. ಇಂತಹವರೆಲ್ಲರೂ ರಾತ್ರಿ ಬೆಳಗಾಗುವುದರಲ್ಲಿ ನಾಯಕರಾಗಿ ಹೊಮ್ಮಿರುತ್ತಾರೆ. ಅವರಿಗೆ ಅವರ ಅಪ್ಪಂದಿರು ಪಕ್ಷದಲ್ಲಿದ್ದಾರೆ ಎನ್ನುವುದಷ್ಟೇ ಅವರ ಅರ್ಹತೆಯಾಗಿರುತ್ತದೆ. ಆದರೆ ಇಂತಹ ರಾಜಕಾರಣಗಳು ಇಂದಿಗೂ ಮುಂದುವರೆಯುತ್ತಾ ಬರುತ್ತಿರುವುದು ಮಾತ್ರ ಬೇಸರದ ಸಂಗತಿಯಾಗಿದೆ.
ಆಯಾಯ ಪಕ್ಷದ ನಾಯಕರು ಅದನ್ನು ಅನ್ಯ ಮಾರ್ಗವಿಲ್ಲದೆ ಒಪ್ಪಿಕೊಳ್ಳಬೇಕಾಗಿ ಬರಬಹುದು. ಆದರೆ ಕುಟುಂಬ ರಾಜಕಾರಣವನ್ನು ದ್ವೇಷಿಸುತ್ತಾ ಅದನ್ನೇ ಎಲ್ಲ ಪಕ್ಷದವರು ಪೋಷಿಸುತ್ತಾ ಬರುತ್ತಿದ್ದಾರೆ. ಕಾರಣ ಅದನ್ನು ಪ್ರಶ್ನೆ ಮಾಡಿದರೆ ನಮ್ಮ ಅಸ್ತಿತ್ವಕ್ಕೆ ಎಲ್ಲಿ ಧಕ್ಕೆ ಬಂದು ಬಿಡುತ್ತದೆಯೇನೋ ಎಂಬ ಭಯವೂ ಇಲ್ಲದಿಲ್ಲ. ಒಂದಂತು ನಿಜ ಅಪ್ಪಂದಿರ ನೆರಳಲ್ಲಿ ಮಕ್ಕಳು ರಾಜಕಾರಣ ಮಾಡಬಹುದು ಆದರೆ ಅಪ್ಪಂದಿರು ಹೋದ ಮಾರನೆ ದಿನವೇ ಅವರು ಕೂಡ ತೆರೆಮರೆಗೆ ಸರಿಯಲೇ ಬೇಕಾಗುತ್ತದೆ.

ಪ್ರಾಮಾಣಿಕರಿಗೆ ರಾಜಕೀಯದಲ್ಲಿ ಜಾಗವಿಲ್ಲ
ಇಲ್ಲಿ ರಾಜಕಾರಣಿಗಳು ಎಂದಾಕ್ಷಣ ಒಂದೇ ತಟ್ಟೆಯಲ್ಲಿಟ್ಟು ಅಳೆಯುವುದು ತಪ್ಪಾಗುತ್ತದೆ. ಇಲ್ಲಿಯೂ ಪ್ರಾಮಾಣಿಕರು, ಸ್ವಾರ್ಥರಹಿತರು, ಸಮಾಜಸೇವಕರು, ಹೀಗೆ ಎಲ್ಲ ರೀತಿಯವರೂ ಇದ್ದಾರೆ. ಪ್ರಾಮಾಣಿಕರೆನಿಸಿಕೊಂಡವರು ಆಸ್ತಿ, ಅಂತಸ್ತು ಮಾಡಿಕೊಳ್ಳದೆ ನಿಯತ್ತಾಗಿ ಬದುಕನ್ನು ಮುಗಿಸಿ ಹೋಗಿದ್ದಾರೆ. ಮತ್ತೆ ಕೆಲವು ಪ್ರಾಮಾಣಿಕರು ಇವತ್ತು ಮೂಲೆಗುಂಪಾಗಿದ್ದಾರೆ. ಇವರೆಲ್ಲರ ನಡುವೆ ಪ್ರಾಮಾಣಿಕರೆನ್ನುವ ಬೋರ್ಡ್ ತಗಲಿಸಿಕೊಂಡು ಓಡಾಡುತ್ತಿದ್ದವರ ಬಣ್ಣಗಳು ಬಯಲಾಗಿದ್ದನ್ನು ನಾವೆಲ್ಲರೂ ನೋಡಿದ್ದೇವೆ ಮತ್ತು ನೋಡುತ್ತಿದ್ದೇವೆ. ಸದ್ಯದ ರಾಜಕಾರಣದಲ್ಲಿ ಎಲ್ಲರಿಗೂ ಅಧಿಕಾರ, ಅಂತಸ್ತು ಬೇಕು ಇದಕ್ಕಾಗಿ ಏನು ಬೇಕಾದರೂ ಮಾಡುತ್ತೇವೆ ಎಂಬ ತೀರ್ಮಾನಕ್ಕೆ ಬಂದಂತೆ ಕಾಣಿಸುತ್ತಿದೆ.
ರಾಜ್ಯ ರಾಜಕೀಯವನ್ನೇ ನೋಡಿದರೆ ಸಾಕು.. ಇಲ್ಲಿನ ರಾಜಕಾರಣಿಗಳು ರಾಜ್ಯದ ಹಿತ ಮರೆತಂತೆ ಕಾಣುತ್ತಿದೆ. ಬೆಳಗ್ಗೆ ಎದ್ದರೆ ಕುರ್ಚಿಯ ವಿಚಾರಕ್ಕೆ ಆರೋಪ, ಪ್ರತ್ಯಾರೋಪ ಮಾಡಿಕೊಂಡು ತಿರುಗಾಡುತ್ತಿದ್ದಾರೆ. ಆಡಳಿತ ಮತ್ತು ವಿಪಕ್ಷಗಳು ಒಬ್ಬರನೊಬ್ಬರು ಆಡಳಿತಕ್ಕೆ ಸಂಬಂಧಿಸಿದಂತೆ ಟೀಕೆ, ಟಿಪ್ಪಣಿ, ಪ್ರತಿಭಟನೆಗಳನ್ನು ಮಾಡಬೇಕಾಗಿತ್ತು. ಆದರೆ ನಮ್ಮ ರಾಜ್ಯದ ದುರಂತವೆಂದರೆ ಸ್ವಪಕ್ಷಗಳಲ್ಲಿಯೇ ಆರೋಪ, ಪ್ರತ್ಯಾರೋಪ ಮಾಡುತ್ತಿದ್ದಾರೆ. ಇದನ್ನು ಇವರು ರಾಜ್ಯದ ಹಿತಕ್ಕಾಗಿ ಮಾಡಿದ್ದರೆ ಭೇಷ್ ಎನ್ನಬಹುದಿತ್ತು. ಆದರೆ ಸ್ವಾರ್ಥ ಮತ್ತು ಅಧಿಕಾರಕ್ಕಾಗಿ ಮಾಡುತ್ತಿದ್ದಾರೆ.
ಊರು ಬಾಗಿಲಾಗಿರುವ ರಾಜ್ಯ ಬಿಜೆಪಿ
ಸದ್ಯದ ರಾಜ್ಯದ ರಾಜಕೀಯ ಪರಿಸ್ಥಿತಿಯನ್ನು ನೋಡಿದರೆ ಮತಹಾಕಿದ ಪ್ರತಿಯೊಬ್ಬರೂ ಅಸಹ್ಯ ಪಟ್ಟುಕೊಳ್ಳಬೇಕಾಗಿದೆ. ಆಡಳಿತ ಪಕ್ಷದವರು ಬಸ್, ಕರೆಂಟ್ ಫ್ರೀ ಕೊಟ್ಟಿದ್ದೇವೆ. ಮಹಿಳೆಯರ ಖಾತೆಗೆ 2ಸಾವಿರ ಹಾಕುತ್ತಿದ್ದೇವೆ. ಇದಕ್ಕಿಂತ ಇನ್ನೇನು ಮಾಡಬೇಕು ಎಂಬ ಧೋರಣೆ ತಾಳಿದ್ದರೆ, ವಿಪಕ್ಷವಾಗಿ ಆಡಳಿತ ಪಕ್ಷವನ್ನು ಎಚ್ಚರಿಸಬೇಕಾದವರು ಬಣಗಳಾಗಿ ಒಡೆದು ಹೋಗಿದ್ದು, ಅವರಿಗೆ ಪಕ್ಷದಲ್ಲಿನ ನಾಯಕರನ್ನೇ ಸರಿದಾರಿಗೆ ತಂದುಕೊಳ್ಳುವುದೇ ಸವಾಲ್ ಆಗಿ ಪರಿಣಮಿಸಿದೆ. ರಾಜ್ಯಾಧ್ಯಕ್ಷ ಸ್ಥಾನಕ್ಕಾಗಿ ಹೊಡೆದಾಡಿಕೊಂಡು ತಮ್ಮ ಮಾನವನ್ನು ತಾವೇ ಹರಾಜು ಹಾಕಿಕೊಳ್ಳುತ್ತಿದ್ದಾರೆ.

ಒಟ್ಟಾರೆಯಾಗಿ ಹೇಳಬೇಕೆಂದರೆ ರಾಜ್ಯದಲ್ಲಿ ಸಿಎಂ ಕುರ್ಚಿ ಖಾಲಿಯಿಲ್ಲ ಎನ್ನುತ್ತಲೇ ಸಿಎಂ ಕುರ್ಚಿ ಬಗ್ಗೆ ಮಾತನಾಡುತ್ತಿದ್ದಾರೆ. ಇದು ಎಲ್ಲೊ ಒಂದು ಕಡೆ ಮುಂದಿನ ದಿನಗಳಲ್ಲಿ ರಾಜ್ಯ ಸಿಎಂ ಕುರ್ಚಿ ಕದನವನ್ನು ನೋಡಬೇಕಾದ ಸನ್ನಿವೇಶ ಬಂದರೂ ಅಚ್ಚರಿಯಿಲ್ಲ. ಇದರ ನಡುವೆ ರಾಜ್ಯ ಬಿಜೆಪಿ ಊರು ಬಾಗಿಲಾಗಿದೆ. ಇಲ್ಲಿ ಯಾರನ್ನು ಯಾರಿಗೂ ನಿಯಂತ್ರಿಸಲು ಸಾಧ್ಯವಾಗದ ಮಟ್ಟಕ್ಕೆ ಬಂದಾಗಿದೆ. ಗಾಜಿನ ಮನೆಯಲ್ಲಿ ಕುಳಿತು ಕಲ್ಲು ಹೊಡೆದುಕೊಳ್ಳುತ್ತಿದ್ದಾರೆ. ಎಲ್ಲವನ್ನು ನಿಯಂತ್ರಿಸಬೇಕಾದ ಶಿಸ್ತಿನ ಪಕ್ಷದ ನಾಯಕರು ಗಡದ್ದಾಗಿ ನಿದ್ದೆ ಮಾಡುತ್ತಿದ್ದಾರೆ. ಇದೆಲ್ಲವನ್ನು ಅನುಭವಿಸಬೇಕಾದ ಕರ್ಮ ಮಾತ್ರ ರಾಜ್ಯದ ಜನರದ್ದಾಗಿದೆ.












Click it and Unblock the Notifications