ಕರ್ನಾಟಕದಲ್ಲಿ ರಾಜಕೀಯ ಬೃಹನ್ನಾಟಕ, ಯಡಿಯೂರಪ್ಪ ನಡೆ ಏನು?
ಬೆಂಗಳೂರು, ಜುಲೈ 06 : ಕರ್ನಾಟಕದಲ್ಲಿ ಶನಿವಾರ ರಾಜೀನಾಮೆ ಪರ್ವ ಆರಂಭವಾಗುತ್ತಿದ್ದಂತೆ, ಬೆಳವಣಿಗೆಯ ಲಾಭ ಪಡೆಯುವ ಉದ್ದೇಶದಿಂದ ರಾಜ್ಯಪಾಲರ ಬಳಿ ಧಾವಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರ ಮುಂದಿನ ನಡೆ ಏನಿರಲಿದೆ? ಇದು ಭಾರೀ ಕುತೂಹಲಕರವಾಗಿದೆ.
ಹಿಂದೆ ಮೂರ್ನಾಲ್ಕು ಬಾರಿ ಆಪರೇಷನ್ ಕಮಲ ನಡೆಸಿ ಯಡಿಯೂರಪ್ಪ ಅವರು ಎಚ್ ಡಿ ಕುಮಾರಸ್ವಾಮಿ ಅವರ ನೇತೃತ್ವದ ಮೈತ್ರಿ ಸರಕಾರವನ್ನು ಬೀಳಿಸಲು ಪ್ರಯತ್ನ ನಡೆಸಿದ್ದರು. ಆದರೆ, ಆ ಎಲ್ಲ ಸಲವೂ ಅವರು ಸೋತಿದ್ದರು. ಡಿಕೆ ಶಿವಕುಮಾರ್ ಅವರ ಕೈವಾಡದಿಂದಾಗಿ ಪ್ರತಿಬಾರಿ ಆಪರೇಷನ್ ಕಮಲ ವಿಫಲವಾಗಿತ್ತು.
ಆದರೆ, ಈ ಬಾರಿ ಬಿಜೆಪಿ ಹೈಕಮಾಂಡ್ ಆದೇಶದ ಮೇರೆಗೆ ಯಡಿಯೂರಪ್ಪ ಅವರು ಪ್ರತ್ಯಕ್ಷವಾಗಿ ಆಪರೇಷನ್ ಕಮಲಕ್ಕೂ ಇಳಿಯದೆ, ಸರಕಾರವನ್ನು ಬೀಳಿಸಲು ಯತ್ನ ನಡೆಸದೆ, ಪರೋಕ್ಷವಾಗಿ ಮೈತ್ರಿ ಸರಕಾರವನ್ನು ಶಿಥಿಲಗೊಳಿಸಲು ಯತ್ನಿಸಿದ್ದು ಸ್ಪಷ್ಟ. ಈಗಿನ ಬೆಳವಣಿಗೆಗಳು ಮಾತ್ರ ಭಾರತೀಯ ಜನತಾ ಪಕ್ಷಕ್ಕೆ ಪೂರಕವಾಗಿವೆ.

ರಾಜ್ಯಪಾಲ ವಜುಭಾಯಿ ವಾಲಾ ಅವರನ್ನು ಭೇಟಿಯಾಗಿ, ಮೈತ್ರಿ ಸರಕಾರ ಅಲ್ಪಮತಕ್ಕೆ ಇಳಿದಿದ್ದು, ಸರಕಾರ ರಚಿಸಲು ಬಿಜೆಪಿಗೆ ಅವಕಾಶ ನೀಡಬೇಕೆಂದು ಯಡಿಯೂರಪ್ಪ ಕೋರುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಆದರೆ, ಹೈಕಮಾಂಡ್ ಅಣತಿಯಂತೆ ಯಡಿಯೂರಪ್ಪನವರು ಕಾದು ನೋಡುವ ತಂತ್ರ ಅನುಸರಿಸಲಿದ್ದಾರೆ.
ಈಗ ನಡೆಯುತ್ತಿರುವ ಬೆಳವಣಿಗೆಯನ್ನು ಕಾದು ನೋಡುವ ತಂತ್ರ ಅನುಸರಿಸುತ್ತೇವೆ. ರಾಜ್ಯಪಾಲರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೋ ನೋಡುತ್ತೇವೆ ಎಂದು ಮಾಧ್ಯಮಗಳಿಗೆ ಯಡಿಯೂರಪ್ಪನವರು ಹೇಳಿದ್ದು, ಸರಕಾರ ರಚಿಸುವ ಯಾವುದೇ ಪ್ರಯತ್ನಕ್ಕೆ ತಾವಾಗಿಯೇ ಕೈಹಾಕದಿರಲು ನಿರ್ಧರಿಸಿದ್ದಾರೆ.
ಇಬ್ಬರು ಶಾಸಕರು ಈಗಾಗಲೆ ರಾಜೀನಾಮೆ ಸಲ್ಲಿಸಿರುವುದರಿಂದ ಶಾಸಕರ ಸಂಖ್ಯೆ 222ಕ್ಕೆ ಇಳಿದಿದೆ. ಬಿಜೆಪಿಯ ಬಳಿ 105 ಶಾಸಕರಿದ್ದಾರೆ. ಹನ್ನೆರಡು ಶಾಸಕರು ಸಲ್ಲಿಸಿರುವ ರಾಜೀನಾಮೆ ಅಂಗೀಕಾರವಾದರೆ ಸದನದ ಸಂಖ್ಯೆ 210ಕ್ಕೆ ಕುಸಿಯಲಿದೆ. ಆಗ, ಒಂದು ವೇಳೆ ರಾಜ್ಯಪಾಲರು ಯಡಿಯೂರಪ್ಪನವರಿಗೆ ಸರಕಾರ ರಚಿಸಲು ಆಹ್ವಾನಿಸಿದರೆ, ಬಹುಮತ ಸಾಬೀತುಪಡಿಸಲು 106 ಶಾಸಕರ ಅಗತ್ಯ ಯಡಿಯೂರಪ್ಪನವರಿಗೆ ಬೀಳಲಿದೆ.
ಈ ಕಂತ್ರಾಟವೇ ಬೇಡ, ಮತ್ತೆ ಸರಕಾರ ರಚಿಸಿ ಕೆಲದಿನಗಳಲ್ಲಿ ಮತ್ತೆ ಬಿದ್ದು ಹೋಗುವ ಸಾಧ್ಯತೆ ಇರುವುದರಿಂದ, ಮತ್ತೆ ವಿಧಾನಸಭೆ ಚುನಾವಣೆಗೆ ಸಿದ್ಧರಾಗುವುದು ಒಳ್ಳೆಯದು ಎಂಬ ನಿರ್ಧಾರಕ್ಕೂ ಬರುವ ಸಂಭಾವ್ಯತೆಯನ್ನು ತಳ್ಳಿಹಾಕುವಂತಿಲ್ಲ. ಹೀಗಾದರೆ, ರಾಜ್ಯಪಾಲರು ಪರಿಸ್ಥಿತಿಯ ಪರಾಮರ್ಶೆ ಮಾಡಿ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಿದರೂ ಅಚ್ಚರಿಯಿಲ್ಲ.












Click it and Unblock the Notifications