ಪೊಲೀಸರ ಕಿರುಕುಳ; ಕಾರ್ಯಕರ್ತರಿಗೆ ಅಭಯ ಕೊಟ್ಟ ವಿಜಯೇಂದ್ರ
ಬೆಂಗಳೂರು, ನವೆಂಬರ್ 26; ಪೊಲೀಸರು ಕರ್ನಾಟಕದ ಬಿಜೆಪಿ ಕಾರ್ಯಕರ್ತರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಬಿಜೆಪಿಯ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಆರೋಪ ಮಾಡಿದ್ದಾರೆ. ಪಕ್ಷ ನಿಮ್ಮ ನೆರವಿಗೆ ತಕ್ಷಣ ಬರಲಿದೆ ಎಂದು ಅವರು ಕಾರ್ಯಕರ್ತರಿಗೆ ಅಭಯ ನೀಡಿದ್ದಾರೆ.
ಭಾನುವಾರ ಈ ಕುರಿತು ಶಿಕಾರಿಪುರದ ಬಿಜೆಪಿ ಶಾಸಕರೂ ಆಗಿರುವ ಬಿ. ವೈ. ವಿಜಯೇಂದ್ರ ಟ್ವೀಟ್ ಮಾಡಿದ್ದಾರೆ. 'ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ನಮ್ಮ ಬಿಜೆಪಿ ಕಾರ್ಯಕರ್ತರನ್ನು ಗುರಿಯಾಗಿಟ್ಟುಕೊಂಡು ಪೊಲೀಸ್ ಕಿರುಕುಳ ನೀಡುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿವೆ' ಎಂದು ಹೇಳಿದ್ದಾರೆ.

'ಸಾಮಾಜಿಕ ಜಾಲತಾಣ ಸೇರಿದಂತೆ ಯಾವುದೇ ವೇದಿಕೆಗಳಲ್ಲಿ ಕಾಂಗ್ರೆಸ್ ಸರ್ಕಾರದ ಜನವಿರೋಧಿ ಧೋರಣೆಯ ವಿರುದ್ಧ ಹಾಗೂ ಸರ್ಕಾರದ ವೈಫಲ್ಯಗಳ ವಿರುದ್ಧ ದನಿ ಎತ್ತಲು ಕಾರ್ಯಕರ್ತರು ಯಾವುದಕ್ಕೂ ಅಂಜ ಬೇಕಿಲ್ಲ, ಎದೆಗುಂದ ಬೇಕಿಲ್ಲ' ಎಂದು ವಿಜಯೇಂದ್ರ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಕಂಟ್ರೋಲ್ ರೂಂ ಸ್ಥಾಪನೆ; ಬಿ. ವೈ. ವಿಜಯೇಂದ್ರ ತಮ್ಮ ಟ್ವೀಟ್‌ನಲ್ಲಿ, 'ಸಂವಿಧಾನ ನಮಗೆ ಕೊಡಮಾಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲು, ಕಾನೂನು ಪೋಲಿಸರಿಗೆ ಅಧಿಕಾರ ನೀಡಿಲ್ಲ, ಈ ನಿಟ್ಟಿನಲ್ಲಿ ರಾಜ್ಯದ ಯಾವುದೇ ಮೂಲೆಯಲ್ಲೂ ನಮ್ಮ ಕಾರ್ಯಕರ್ತ ಬಂಧುಗಳಿಗೆ ತೊಂದರೆ, ಬೆದರಿಕೆ, ಕಿರುಕುಳಗಳು ಎದುರಾದರೆ ಅವರ ನೆರವಿಗೆ ಪಕ್ಷ ತಕ್ಷಣ ಬರಲಿದೆ' ಎಂದು ಭರವಸೆ ನೀಡಿದ್ದಾರೆ.
'ಇಷ್ಟರಲ್ಲೇ ರಾಜ್ಯ ಹಾಗೂ ಜಿಲ್ಲೆಯ ಪಕ್ಷದ ಕಛೇರಿಗಳಲ್ಲಿ ಕಾನೂನು ನೆರವಿಗಾಗಿ ದಿನದ 24 ಗಂಟೆಯೂ ಕಾರ್ಯ ನಿರ್ವಹಿಸಲು ಕಂಟ್ರೋಲ್ ರೂಂ ತೆರೆಯುವ ಬಗ್ಗೆ ನಿರ್ಧರಿಸಲಾಗುವುದು' ಎಂದು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಹೇಳಿದ್ದಾರೆ.
ಕರ್ನಾಟಕ ಬಿಜೆಪಿ ಅಧ್ಯಕ್ಷರಾಗಿ ನವೆಂಬರ್ 15ರಂದು ಮಲ್ಲೇಶ್ವರದ ಬಿಜೆಪಿ ಕಛೇರಿಯಲ್ಲಿ ಬಿ. ವೈ. ವಿಜಯೇಂದ್ರ ಅಧಿಕಾರ ಸ್ವೀಕಾರ ಮಾಡಿದ್ದರು. ಬಳಿಕ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ಅವರು, 'ವಹಿಸಿರುವುದು ಅಧಿಕಾರವಲ್ಲ ಹೊಣೆಗಾರಿಕೆ ಎಂದರಿತು ಕಾರ್ಯಕರ್ತನಾಗಿ ಹೆಜ್ಜೆ ಇಡಲಿದ್ದೇನೆ' ಎಂದು ಭರವಸೆ ಕೊಟ್ಟಿದ್ದರು.
'ದಿಗ್ಗಜರು, ಪುಣ್ಯವಂತರು ಸೇವೆ ಸಲ್ಲಿಸಿದ ಸಾಲಿನಲ್ಲಿ ನಾನೂ ಸೇರ್ಪಡೆಯಾಗುವ ಸುಯೋಗ ಕಲ್ಪಿಸಿದ ಪಕ್ಷದ ವರಿಷ್ಠರ ತೀರ್ಮಾನ ನೆನೆದು ಭಾವುಕನಾದೆನು, ಒಬ್ಬ ಕಾರ್ಯಕರ್ತನಾಗಿ ಹೆಮ್ಮೆ ಎನಿಸಿತು, ಜವಾಬ್ದಾರಿ ಎಚ್ಚರಿಸಿತು. ವರಿಷ್ಠರ ನಿರೀಕ್ಷೆ, ಕಾರ್ಯಕರ್ತರ ಅಪೇಕ್ಷೆ ಗುರಿ ತಲುಪುವ ನಿಟ್ಟಿನಲ್ಲಿ 'ವಹಿಸಿರುವುದು ಅಧಿಕಾರವಲ್ಲ ಹೊಣೆಗಾರಿಕೆ' ಎಂದರಿತು ಕಾರ್ಯಕರ್ತನಾಗಿ ಹೆಜ್ಜೆ ಇಡಲಿದ್ದೇನೆ' ಎಂದು ಹೇಳಿದ್ದರು.
'ಪಕ್ಷ ಸದೃಢಗೊಳಿಸಲು ಪಕ್ಷದ ಪ್ರತಿಯೊಬ್ಬ ಪ್ರಮುಖರೂ ನನ್ನೊಂದಿಗೆ ಹೆಗಲು ಕೊಡಲು ಮುಂದಾಗಿರುವುದು ನನ್ನಲ್ಲಿ ಅಮಿತೋತ್ಸಾಹ ತುಂಬಿದೆ. 2024ರ ಲೋಕಸಭಾ ಚುನಾವಣೆಯಲ್ಲಿ 2019ರ ಚುನಾವಣೆಯ ಫಲಿತಾಂಶ ಮತ್ತೆ ಮರುಕಳಿಸಿ ಮಗದೊಮ್ಮೆ ಮೋದಿ ಜೀ ಪ್ರಧಾನಿಯಾಗಿ ಭಾರತ ಪ್ರಜ್ವಲಿಸಲು 'ಕರುನಾಡ ಜಯದ ಕಿರೀಟ' ಸಮರ್ಪಿಸಬೇಕೆಂದು ಛಲ ಹೊತ್ತ ಕಾರ್ಯಕರ್ತರ ಪಡೆಯೊಂದಿಗೆ ಸಂಕಲ್ಪ ತೊಟ್ಟಿರುವೆ' ಎಂದು ಪೋಸ್ಟ್‌ನಲ್ಲಿ ಬರೆದಿದ್ದರು.
ಬಿಜೆಪಿ ರಾಜ್ಯಾಧ್ಯಕ್ಷರಾದ ಬಳಿಕ ಬಿ. ವೈ. ವಿಜಯೇಂದ್ರ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ವಿರುದ್ಧ ಹಲವು ಟೀಕೆಗಳನ್ನು ಮಾಡುತ್ತಿದ್ದಾರೆ. 'ಒಂದು ಕಡೆ ಉಚಿತ ಕರೆಂಟ್ ಕೊಡುತ್ತೇವೆಂದು, ಬೆನ್ನಲ್ಲೇ ಕರೆಂಟ್ ಬಿಲ್ ಕರೆಂಟ್ ಹೊಡೆಸುತ್ತಿರುವ ಕಾಂಗ್ರೆಸ್ ಸರ್ಕಾರ, ಇದೀಗ ತನ್ನ ಹಳಿತಪ್ಪಿದ ಆಡಳಿತ ವ್ಯವ್ಯಸ್ಥೆಯ ಭಾಗವಾಗಿ ಅರಾಜಕತೆ ತಾಂಡವವಾಡುತ್ತಿರುವ ಇಂಧನ ಇಲಾಖೆಯ ಬೇಜವಾಬ್ದಾರಿಯಿಂದ ರಸ್ತೆಗೆ ಬೀಳುತ್ತಿರುವ ವಿದ್ಯುತ್ ತಂತಿಗಳ ಮೂಲಕ, ನಿರ್ವಹಣೆ ಇಲ್ಲದ ಟ್ರಾನ್ಸ್ ಫಾರಂಗಳ ಮೂಲಕ ಅಮಾನುಷವಾಗಿ ಜನರ ಪ್ರಾಣಗಳನ್ನು ಬಲಿ ಪಡೆಯುತ್ತಿದೆ. ಮೊನ್ನೆ ಕಂಕುಳಲ್ಲಿದ್ದ ಹಸುಗೂಸು-ತಾಯಿ ಭಸ್ಮವಾದರೆ, ಇಂದು ಅಮಾಯಕ ರೈತ ರವಿಕುಮಾರ್ ಎಂಬುವವರು ದುರ್ಮರಣಕ್ಕೀಡಾಗಿದ್ದಾರೆ. ದಪ್ಪ ಚರ್ಮದ ಸರ್ಕಾರದ ವಿರುದ್ಧ ಜನರೇ ದಂಗೆ ಹೇಳುವ ಕಾಲ ದೂರವಿಲ್ಲ' ಎಂದು ಪೋಸ್ಟ್ ಹಾಕಿದ್ದರು.












Click it and Unblock the Notifications