ಕನ್ನಡ ಕಲಿಯುವುದು ಹೇಗೆ?; ನರೇಂದ್ರ ಮೋದಿ ಟ್ವೀಟ್
ಪ್ರಧಾನಿ ನರೇಂದ್ರ ಮೋದಿ ಸೃಜನಾತ್ಮಕ ಮಾರ್ಗದ ಮೂಲಕ ಕನ್ನಡ ಕಲಿಯುವುದು ಹೇಗೆ? ಎಂದು ಟ್ವೀಟ್ ಮಾಡಿದ್ದಾರೆ.
ಬೆಂಗಳೂರು, ಫೆಬ್ರವರಿ 07; ಭಾರತದ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಕರ್ನಾಟಕ ಭೇಟಿ ಕೈಗೊಂಡಿದ್ದರು. ವಿವಿಧ ಕಾರ್ಯಕ್ರಮಗಳಲ್ಲಿ ಅವರು ಪಾಲ್ಗೊಂಡಿದ್ದರು. ರಾಜ್ಯಕ್ಕೆ ಆಗಮಿಸಿದಾಗ ಹಲವು ಬಾರಿ ಕನ್ನಡದಲ್ಲಿಯೇ ಅವರು ಭಾಷಣ ಆರಂಭಿಸಿದ್ದಾರೆ.
ಸೋಮವಾರ ಬೆಂಗಳೂರು ಮತ್ತು ತುಮಕೂರಿನಲ್ಲಿ ನಿಗದಿಯಾಗಿದ್ದ ಕಾರ್ಯಕ್ರಮ ಮುಗಿಸಿ ವಾಪಸ್ ಆದ ನರೇಂದ್ರ ಮೋದಿ ಟ್ವೀಟ್ ಒಂದನ್ನು ಮಾಡಿದ್ದಾರೆ. ಕೇಂದ್ರ ಸರ್ಕಾರ ಕನ್ನಡವನ್ನು ಕಡೆಗಣಿಸುತ್ತಿದೆ, ಹಿಂದಿ ಹೇರಿಕೆ ಮಾಡುತ್ತಿದೆ ಎಂಬ ಆರೋಪಗಳ ನಡುವೆಯೇ ಈ ಟ್ವೀಟ್ ಗಮನ ಸೆಳೆಯುತ್ತಿದೆ.
ನರೇಂದ್ರ ಮೋದಿ ತಮ್ಮ ಟ್ವೀಟ್‌ನಲ್ಲಿ, 'ಸೃಜನಾತ್ಮಕ ಮಾರ್ಗದ ಮೂಲಕ ಭಾಷೆ ಕಲಿಯುವುದು ಒಂದು ಸಂತಸದ ಚಟುವಟಿಕೆ, ಇದು ಸುಂದರವಾದ ಕನ್ನಡ ಭಾಷೆಯ ಬಗ್ಗೆ' ಎಂದು ಹೇಳಿದ್ದು, ಫೆಬ್ರವರಿ 5ರಂದು ಕಿರಣ್ ಕುಮಾರ್ ಎಸ್ ಎನ್ನುವವರು ಮಾಡಿರುವ ಟ್ವೀಟ್ ಉಲ್ಲೇಖಿಸಿದ್ದಾರೆ.

ಕಿರಣ್ ಕುಮಾರ್ ಎಸ್ ತಮ್ಮ ಟ್ವೀಟ್‌ನಲ್ಲಿ ಅ-ಅಳಿಲು, ಆ-ಆನೆ, ಇ-ಇಲಿ, ಈ-ಈರುಳ್ಳಿ, ಉ-ಉಂಗುರ, ಎ-ಎಲೆ, ಏ-ಏಣಿ, ಒ-ಒಂಟೆ, ಕ-ಕಣ್ಣು, ಖ-ಖಡ್ಗ, ಗ-ಗಡಿಯಾರ, ಘ-ಘಂಟೆ, ಚ-ಚರಕ, ತ-ತಬಲ, ದ-ದಂತ, ಹ-ಹಣತೆ ಈ ಮಾದರಿಯಲ್ಲಿ ಕನ್ನಡ ಭಾಷೆ ಕಲಿಯಬಹುದು ಎಂದು ಚಿತ್ರದ ಸಹಿತ ವಿವರಿಸಿದ್ದರು.
ಪ್ರಧಾನಿ ನರೇಂದ್ರ ಮೋದಿ ಈ ಟ್ವೀಟ್ ಮೆಚ್ಚಿ ಸೃಜನಾತ್ಮಕ ಮಾರ್ಗದ ಮೂಲಕ ಭಾಷೆ ಕಲಿಯುವುದುದ ಹೇಗೆ? ಎಂದು ತಮ್ಮ ಖಾತೆಯಿಂದ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಅನ್ನು 942.7ಕೆ ಜನರು ವೀಕ್ಷಣೆ ಮಾಡಿದ್ದಾರೆ, 2337 ಜನರು ರಿಟ್ವೀಟ್ ಮಾಡಿದ್ದಾರೆ. 12.9ಕೆ ಜನರು ಲೈಕ್ ಮಾಡಿದ್ದಾರೆ.
ಬಾದಲ್ ನಂಜುಡಸ್ವಾಮಿ ಪ್ರತಿಕ್ರಿಯೆ; ಕನ್ನಡ ಕಲಿಯುವ ಇಂತಹ ಚಿತ್ರವನ್ನು ಬಿಡಿಸಿದ್ದು ಕರ್ನಾಟಕದ ಕಲಾವಿದ ಬಾದಲ್ ನಂಜುಡ ಸ್ವಾಮಿ, ಅವರು ನರೇಂದ್ರ ಮೋದಿ ಟ್ವೀಟ್ ಸ್ಕ್ರೀನ್ ಶಾಟ್ ಶೇರ್ ಮಾಡಿದ್ದಾರೆ. 'Omg!! My work thank you so much @narendramodi ಜೈ ಕರ್ನಾಟಕ' ಎಂದು ಹೇಳಿದ್ದಾರೆ.
Omg!! My work🤩🤩 thank you so much @narendramodi 💐💐 ಜೈ ಕರ್ನಾಟಕ💪 pic.twitter.com/pAnhwH7XkV
— baadal nanjundaswamy (@baadalvirus) February 6, 2023
ಮೋದಿ ಟ್ವೀಟ್‌ಗೆ ಹಲವಾರು ಪ್ರತಿಕ್ರಿಯೆಗಳು; ನರೇಂದ್ರ ಮೋದಿ ಟ್ವೀಟ್‌ಗೆ ಹಲವಾರು ಜನರು ಅಲ್ಲಿಯೇ ಪ್ರತಿಕ್ರಿಯೆ ನೀಡಿದ್ದಾರೆ. @santoshagudi ಎಂಬುವವರು, 'ನೋಡಿ ಮೋದಿ ಅವರೇ, ಇಷ್ಟು ಚೆಂದದ ಭಾಷೆ ಮೇಲೆ ಹಿಂದಿ ಹೇರಿಕೆ ಮಾಡ್ತಿದ್ದೀರಿ. ಹಿಂದಿ ಹೇರಿಕೆ ನಿಲ್ಲಿಸಿ, ಕನ್ನಡ ಬೆಳೆಸುವಂತೆ ಮಾಡಿ' ಎಂದು ಕಮೆಂಟ್ ಮಾಡಿದ್ದಾರೆ.

@prabuddhaindia ಎಂಬುವವರು, 'ಹಿಂದಿಯಲ್ಲಿ ಕನ್ನಡವನ್ನು ಬರೆದು ಕೊಟ್ಟು teleprompter ನಲ್ಲಿ ಓದಿದರೆ, ಮಹಾ ಕನ್ನಡ ಪಂಡಿತ ಅಂತ ಪಾಪ ನಮ್ಮ ಕರ್ನಾಟಕ ಜನ ನಂಬದೇ ಇರಲ್ಲಪ್ಪ ದೆವ್ರೇ' ಎಂದು ಹೇಳಿದ್ದಾರೆ.
ಹರೀಶ್ ಗೌಡ ಎಂಬುವವರು ಪ್ರತಿಕ್ರಿಯೆ ನೀಡಿ, "ಈ ಬ್ಯೂಟಿಫುಲ್ ಲ್ಯಾಂಗ್ವೇಜ್ ಮಾತಾಡೊ ಜನಗಳಿಗೆ ನಿಮ್ಮಿಂದ ಅಷ್ಟೇ ಬ್ಯೂಟಿಫುಲ್ ಆಗಿ ಮೋಸ ಆಗ್ತಿದೆ, 2014 ರಿಂದ ನಿಮ್ಮನ್ನ ನಂಬಿ ಕನ್ನಡಿಗರು (ನನ್ನು ಸೇರಿ) ಓಟ್ ಹಾಕಿದ್ರು ಅದ್ರೆ ನಿಮ್ಮ ಸರ್ಕಾರದಿಂದ ಕನ್ನಡಿಗರಿಗೆ ಮತ್ತು ಕನ್ನಡಕ್ಕೆ ಉಪಯೋಗಕ್ಕಿಂತ ತೊಂದರೆಯೇ ಹೆಚ್ಚು. ಇನ್ನು ನಿಮ್ಮನ್ನ ನಿಮ್ಮ ಪಕ್ಷದವರನ್ನ ಯಾರೂ ನಂಬಲ್ಲ' ಎಂದು ತಿಳಿಸಿದ್ದಾರೆ.
ರಾಮ ಗಂಡುಗಲಿ ರಾಮ ಎಂಬುವವರು ಪ್ರತಿಕ್ರಿಯೆ ನೀಡಿ, 'ನಮಸ್ ಕಾರಗಳು ಕರ್ ನಾಟಕ ಅಲ್ಲಲ್ಲಲ್ಲಲೇ ಅಲ್ನೊಡ್ರೊ ವಿಶ್ವಗುರು ಮೋದಿ ಕನ್ನಡದಲ್ಲಿ ಮಾತಾಡ್ಬುಟ್ರು! ಒತ್ರೊ ಓಟು! ಏಯ್! ಟ್ಯಾಕ್ಸ್ ಜಾಸ್ತಿ ಆದ್ರು ಬಾಯ್ ಮುಚ್ಕೊಂಡ್ ಇರ್ಬೇಕು, ರಸ್ತೆ ಹಾಳಾಗ್ಲಿ, ಪ್ರವಾಹ ಉಕ್ಕಿ ಕೊಚ್ಕೊಂಡ್ ಹೋಗಿ ಪರಿಹಾರ ಕೇಳ್ಕೂಡ್ದು, ಮೋದಿ ವಿರುದ್ದ ಮಾತಾಡ್ಕೂಡ್ದು! ಯಾಕಂದ್ರೆ ಮೋದಿ ಕನ್ನಡದಲ್ಲಿ ಮಾತಾಡ್ಬುಟ್ರು' ಎಂದು ಹೇಳಿದ್ದಾರೆ.
@Ravikumarmsk ನರೇಂದ್ರ ಮೋದಿ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿ, '@narendramodi ಮಣಿತ🙏 ಸರ್, ಕನ್ನಡನಾಡಲ್ಲಿ #HindiImposition ಯಾವಾಗ ನಿಲ್ಲಬಹುದು?. We need all govt services in ಕನ್ನಡ. We need 2language policy education -Kannada & English only, We need exams for all govt jobs compulsaryly in kannada' ಎಂದು ತಿಳಿಸಿದ್ದಾರೆ.












Click it and Unblock the Notifications