ಕರ್ನಾಟಕ ಗೆಲ್ಲಲು ಮಾಸ್ಟರ್ ಪ್ಲಾನ್: ಖರ್ಗೆ ಕೋಟೆಯಿಂದಲೇ ರಣಕಹಳೆ- ಕನ್ನಡದಲ್ಲೇ ಮಾತು ಆರಂಭಿಸಿದ ಮೋದಿ
ಕಲಬುರಗಿ, ಮಾರ್ಚ್ 16: 2024ರ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು ರಾಜ್ಯದಲ್ಲಿ ಬಿಜೆಪಿ ಗೆಲ್ಲಲು ಮಹಾ ರಣತಂತ್ರ ರೆಡಿಯಾಗಿದೆ. ಈಗಾಗಲೇ ರಾಜ್ಯದ 28 ಕ್ಷೇತ್ರಗಳ ಫೈಕಿ 20 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿದೆ. ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ಕೋಟೆಯಿಂದಲೇ ಪ್ರಧಾನಿ ನರೇಂದ್ರ ಮೋದಿಯವರು ಚುನಾವಣೆ ರಣಕಹಳೆ ಮೊಳಗಿಸಲಿದ್ದಾರೆ.
ಕಲಬುರ್ಗಿಯ ಎನ್.ವಿ ಆಟದ ಮೈದಾನದಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಪ್ರಧಾನಿ ಮೋದಿ ಕನ್ನಡದಲ್ಲೇ ಭಾಷಣ ಆರಂಭಿಸಿದ್ದಾರೆ. ಜಗದ್ಗುರು ಬಸವೇಶ್ವರ ಅವರ ನಾಡು, ಶಿವಶರಣರ ಬೀಡು, ಕಲಬುರ್ಗಿಯ ಜನತೆಗೆ ನಮಸ್ಕಾರಗಳು ಎಂದು ಕನ್ನಡದಲ್ಲೇ ಮಾತನ್ನು ಆರಂಭಿಸಿದರು. ಕರ್ನಾಟಕವು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ದಾಖಲೆ ಸೀಟು ನೀಡುವ ವಿಶ್ವಾಸ ನನಗಿದೆ ಎಂದು ತಿಳಿಸಿದರು.

ಕರ್ನಾಟಕವನ್ನು ಕಾಂಗ್ರೆಸ್ ಲೂಟಿಯಿಂದ ದೂರವಿಡಲು ಗರಿಷ್ಠ ಬಿಜೆಪಿ ಸಂಸದರನ್ನು ಇಲ್ಲಿಂದ ಆಯ್ಕೆ ಮಾಡಿ. ನನಗೆ ಕರ್ನಾಟಕದ ಬಿಜೆಪಿಯ ಪ್ರತಿಯೊಬ್ಬ ಅಭ್ಯರ್ಥಿಯನ್ನು ಗೆಲ್ಲಿಸಿಕೊಡುವ ಮತ್ತು ಕಾಂಗ್ರೆಸ್ ಖಾತೆ ತೆರೆಯಲು ಅವಕಾಶ ಕೊಡುವುದಿಲ್ಲ ಎಂಬ ಗ್ಯಾರಂಟಿ ಕೊಡಿ. ಕಮಲದ ಚಿಹ್ನೆಗೆ ಮತ ಕೊಡಿ ಎಂದು ತಿಳಿಸಿದರು.
ಕರ್ನಾಟಕವನ್ನು ಕಾಂಗ್ರೆಸ್ ಕುಟುಂಬದ ಎಟಿಎಂ ಮಾಡಿಕೊಂಡಿದ್ದಾರೆ. ಇಂಡಿ ಒಕ್ಕೂಟ ಮತ್ತು ಕಾಂಗ್ರೆಸ್‍ನ ಮುಖಂಡರು ಕೂಡ ಅಬ್ ಕೀ ಬಾರ್ ಮೋದಿ ಸರಕಾರ್ ಎಂದು ಹೇಳುತ್ತಿದ್ದಾರೆ. ಈ ಬಾರಿ ಜನಾದೇಶ ಬಿಜೆಪಿ ಪರವಾಗಿ ಇರಲಿ ಎಂದು ಅವರು ವಿನಂತಿಸಿದರು. ರಾಜ್ಯದ ಎಲ್ಲ ಸೀಟುಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಿ ಎಂದು ಜನರಲ್ಲಿ ಕೋರಿದರು. ಬಿಜೆಪಿಯ ಕೇಂದ್ರ ಸರಕಾರವು ಕರ್ನಾಟಕದ ಅಭಿವೃದ್ಧಿಗೆ ಸದಾ ಶ್ರಮಿಸಿದೆ. ನಾವು ಅನುಭವ ಮಂಟಪದ ಪ್ರೇರಣೆ ಪಡೆದಿದ್ದೇವೆ ಎಂದ ಅವರು, ಕರ್ನಾಟಕದ ಗೌರವ ಮತ್ತು ಹೆಮ್ಮೆ ಹೆಚ್ಚಿಸಲು ಶ್ರಮಿಸಿದ್ದೇವೆ ಎಂದು ತಿಳಿಸಿದರು. ಕಾಂಗ್ರೆಸ್ಸಿಗರು ಈ ದೇಶದ ಪರಂಪರೆಗೆ ಅಗೌರವ ಸೂಚಿಸುತ್ತಾರೆ.
ಕಾಂಗ್ರೆಸ್ ಮತ್ತು ಅದರ ಮುಖಂಡರು ಎಷ್ಟೇ ಉಡುಪು ಬದಲಿಸಿದರೂ ಅದರ ಮೂಲಗುಣ ಬದಲಾಗುವುದಿಲ್ಲ. ಕರ್ನಾಟಕದ ಜನರಲ್ಲಿ ಕಾಂಗ್ರೆಸ್ ಬಗ್ಗೆ ಆಕ್ರೋಶವಿದೆ. ಕಾಂಗ್ರೆಸ್ಸಿನ ಬಗ್ಗೆ ಇಷ್ಟು ಕಡಿಮೆ ಸಮಯದಲ್ಲಿ ಜನರು ವಿಶ್ವಾಸ ಕಳಕೊಂಡಿದ್ದಾರೆ.ಎಷ್ಟೇ ಅವಕಾಶ ಕೊಟ್ಟರೂ ಕಾಂಗ್ರೆಸ್ ಬದಲಾಗುವುದಿಲ್ಲ. ಕರ್ನಾಟಕದಲ್ಲಿ ಕಾನೂನು- ಸುವ್ಯವಸ್ಥೆ ಕುಸಿದಿದೆ. ಜನರ ಮನಸ್ಸಿನಲ್ಲಿ ಆಕ್ರೋಶ ಹೆಚ್ಚಾಗಿದೆ. ಆತಂಕದಿಂದ ಜನತೆ ಜೀವಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಮತ್ತು ಅದರ ಕುಟುಂಬವಾದಿಗಳಿಗೆ ಭ್ರಷ್ಟಾಚಾರವೇ ಆಮ್ಲಜನಕ ಎಂದು ಟೀಕಿಸಿದರು.

ಭ್ರಷ್ಟಾಚಾರ ಇಲ್ಲದೆ ಕಾಂಗ್ರೆಸ್ಸಿಗರು ಶ್ವಾಸೋಚ್ವಾಸ ಮಾಡುವುದಿಲ್ಲ. ಇಲ್ಲಿ ಅರಾಜಕತೆ ಹೆಚ್ಚಾಗಿದೆ. ಕಾಂಗ್ರೆಸ್ ಚುನಾವಣೆಯಲ್ಲಿ ನೀಡಿದ ಆಶ್ವಾಸನೆಗಳನ್ನು ಈಡೇರಿಸುತ್ತಿಲ್ಲ ಎಂದು ಆಕ್ಷೇಪಿಸಿದ ಅವರು, ಉಚಿತ ವಿದ್ಯುತ್ ಬದಲು ಕತ್ತಲೆಯ ಬದುಕು ಜನರದಾಗಿದೆ. ಪಂಪ್ ಚಾಲೂ ಆಗುತ್ತಿಲ್ಲ. ಮೋದಿ ಸರಕಾರವು 50 ಲಕ್ಷಕ್ಕೂ ಹೆಚ್ಚು ಜನರಿಗೆ ಕಿಸಾನ್ ಸಮ್ಮಾನ್ ಮೂಲಕ ವರದಾನವಾಗಿದೆ. ಮೊದಲು ಬಿಜೆಪಿ ಸರಕಾರ 4 ಸಾವಿರ ಸೇರಿಸಿ ಕೊಡುತ್ತಿತ್ತು. ಆದರೆ, ಅದನ್ನು ಕಾಂಗ್ರೆಸ್ ಸರಕಾರ ನಿಲ್ಲಿಸಿದೆ ಎಂದು ಆರೋಪಿಸಿದರು.
ಯುವಜನರಿಗೆ ನೀಡಿದ ಆಶ್ವಾಸನೆ ಈಡೇರಿಸಿಲ್ಲ. ವಿದ್ಯಾರ್ಥಿಗಳ ಸ್ಕಾಲರ್‍ಶಿಪ್ ಸ್ಥಗಿತಗೊಂಡಿದೆ. ಚಿಕ್ಕ ಚಿಕ್ಕ ಅಭಿವೃದ್ಧಿ ಕಾರ್ಯಕ್ಕೂ ಹಣ ಇಲ್ಲ. ಶಾಸಕರಲ್ಲಿ ಅಭಿವೃದ್ಧಿಗೆ ಹಣ ಇಲ್ಲ ಎಂದು ತಿಳಿಸಿದ್ದಾರೆ ಎಂದು ವಿವರಿಸಿದರು. ಕಾಂಗ್ರೆಸ್ಸಿಗರಿಗೆ ಮತ್ತೆ ಅಧಿಕಾರ ಪಡೆಯುವ ಧೈರ್ಯ ಇಲ್ಲ. ಅದಕ್ಕಾಗಿ ಲೂಟಿ ಮುಂದುವರೆಸಿದ್ದಾರೆ ಎಂದರು.
ಆಯುಷ್ಮಾನ್ ಯೋಜನೆ ಮೂಲಕ ಕೋಟಿಗಟ್ಟಲೆ ಜನರಿಗೆ ಆರೋಗ್ಯ ಸುರಕ್ಷೆ ನೀಡಿದ್ದೇವೆ. ಉಚಿತ ಆರೋಗ್ಯ ವಿಮೆ ಮೋದಿ ಗ್ಯಾರಂಟಿಯಾಗಿದೆ. ಕರ್ನಾಟಕದ 75 ಲಕ್ಷಕ್ಕೂ ಹೆಚ್ಚು ಕುಟುಂಬಕ್ಕೆ ನಳ್ಳಿ ಮೂಲಕ ನೀರು ವ್ಯವಸ್ಥೆ ಮಾಡಿದ್ದೇವೆ. ಇದೆಲ್ಲ ಮೋದಿ ಗ್ಯಾರಂಟಿಯಾಗಿದೆ. ಹಿಂದೆ ಎಲ್‍ಪಿಜಿ ಸಿಲಿಂಡರ್ ಸಂಪರ್ಕ ಇರಲಿಲ್ಲ. ರಾಜ್ಯದ 40 ಲಕ್ಷಕ್ಕೂ ಹೆಚ್ಚು ಮನೆಗೆ ಎಲ್‍ಪಿಜಿ ಸಿಲಿಂಡರ್ ಸಂಪರ್ಕ ನೀಡಿ, ತಾಯಂದಿರನ್ನು ಕಟ್ಟಿಗೆಯ ಹೊಗೆಯಿಂದ ದೂರವಿಡುವ ಕೆಲಸ ಮಾಡಿದ್ದೇವೆ. ರಾಜ್ಯದಲ್ಲಿ 8 ಲಕ್ಷಕ್ಕೂ ಹೆಚ್ಚು ಮನೆ ಕೊಟ್ಟಿದ್ದೇವೆ ಎಂದು ವಿವರಿಸಿದರು.
ಅತ್ಯುತ್ತಮ ರೈಲ್ವೆ ಸಂಪರ್ಕ ನೀಡಿದ್ದು, ವಂದೇ ಭಾರತ್, ಪ್ಯಾಸೆಂಜರ್ ರೈಲು ಆರಂಭಿಸಿದ್ದನ್ನು ವಿವರಿಸಿದ ಅವರು, ಕಾಂಗ್ರೆಸ್ ಸರಕಾರಗಳು ರೈಲ್ವೆ ಸೇರಿ ಮೂಲಸೌಕರ್ಯವನ್ನು ಕಡೆಗಣಿಸಿದ್ದವು ಎಂದು ವಿವರಿಸಿದರು. ಮೆಗಾ ಟೆಕ್ಸ್‍ಟೈಲ್ ಪಾರ್ಕ್ ಮೂಲಕ ಹೆಚ್ಚು ಉದ್ಯೋಗ ಲಭಿಸಲಿದೆ ಎಂದು ತಿಳಿಸಿದರು.












Click it and Unblock the Notifications