ಬೊಮ್ಮಾಯಿ ಹೆಸರನ್ನು ಒಂದು ಬಾರಿಯೂ ಉಲ್ಲೇಖಿಸದ ಪ್ರಧಾನಿ: ಮೊನ್ನೆ ಶಾ, ಇಂದು ಮೋದಿ- ಏನಿದು ಬೆಳವಣಿಗೆ?
ತಮ್ಮ ಭಾಷಣದ ವೇಳೆ, ಪ್ರಧಾನಿ ನರೇಂದ್ರ ಮೋದಿ ಅವರು, BSY ಹಾಗೂ BJPಯನ್ನು ಹಲವಾರು ಭಾರಿ ಉಲ್ಲೇಖಿಸಿದರು. ಆದರೆ, ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಪ್ರಧಾನಿ ಮೋದಿ ಉಲ್ಲೇಖಿಸಿಲ್ಲ ಎಂಬುದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಶಿವಮೊಗ್ಗ, ಫೆಬ್ರವರಿ 27: ಪ್ರಧಾನಿ ನರೇಂದ್ರ ಮೋದಿ ಸೋಮವಾರ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದರು. ಸುಮಾರು ₹450 ಕೋಟಿ ವೆಚ್ಚದಲ್ಲಿ ನೂತನ ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸಲಾಗಿದೆ. ಇಂದು ತಮ್ಮ 80ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕೂಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಯಡಿಯೂರಪ್ಪನವರನ್ನು ಶ್ಲಾಘಿಸಿದ ಪ್ರಧಾನಿ ಮೋದಿ, 'ಇಂದು ಇನ್ನೊಂದು ಕಾರಣಕ್ಕಾಗಿ ವಿಶೇಷವಾಗಿದೆ. ಇದು ಕರ್ನಾಟಕದ ಜನಪ್ರಿಯ ನಾಯಕ ಬಿಎಸ್ ಯಡಿಯೂರಪ್ಪ ಅವರ ಜನ್ಮದಿನ. ನಾನು ಅವರ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತೇನೆ. ಅವರು ತಮ್ಮ ಜೀವನವನ್ನು ಬಡ ಜನರು ಮತ್ತು ರೈತರ ಕಲ್ಯಾಣಕ್ಕಾಗಿ ಮುಡಿಪಾಗಿಟ್ಟಿದ್ದಾರೆ. ಕಳೆದ ವಾರ ಕರ್ನಾಟಕ ವಿಧಾನಸಭೆಯಲ್ಲಿ ಅವರು ಮಾಡಿದ ಭಾಷಣ ಸಾರ್ವಜನಿಕ ಜೀವನದಲ್ಲಿರುವ ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಿದೆ' ಎಂದು ಹೇಳಿದರು.

'ಯಶಸ್ಸಿನ ಉತ್ತುಂಗವನ್ನು ತಲುಪಿದ ನಂತರವೂ ನಮ್ಮ ನಡವಳಿಕೆಯಲ್ಲಿ ಹೇಗೆ ನಮ್ರತೆ ಇರಬೇಕು ಎಂಬುದನ್ನು ಬಿಎಸ್‌ವೈ ಹೇಳಿಕೊಟ್ಟಿದ್ದಾರೆ. ಬಿಎಸ್ ಯಡಿಯೂರಪ್ಪ ಅವರ ಮಾತು ಮತ್ತು ಜೀವನವು ನಮ್ಮಂತಹವರಿಗೆ ಹಾಗೂ ಮುಂದಿನ ಪೀಳಿಗೆಗೆ ಯಾವಾಗಲೂ ಸ್ಫೂರ್ತಿದಾಯಕವಾಗಿದೆ' ಎಂದು ಅವರು ಹೇಳಿದರು.
ಇದೇ ವೇಳೆ, ಎಚ್‌ಎಎಲ್ ಬಗ್ಗೆ ಉಲ್ಲೇಖಿಸಿರುವ ಪ್ರಧಾನಿ ಮೋದಿ, 'ಹಿಂದಿನ ಆಡಳಿತದಲ್ಲಿ ವಿಮಾನಯಾನ ಸಂಸ್ಥೆಯು ಋಣಾತ್ಮಕ ಸುದ್ದಿಗಳಿಗಾಗಿ ಹೆಚ್ಚಾಗಿ ಚರ್ಚಿಸಲ್ಪಟ್ಟಿದೆ. ಆದರೆ ಇಂದು ಅದು, ಭಾರತದ ಹೊಸ ಸಾಮರ್ಥ್ಯದ ರೂಪದಲ್ಲಿ ಪ್ರಪಂಚದ ಮುಂದೆ ಹೊಸ ಹಾರಾಟವನ್ನು ನಡೆಸುತ್ತಿದೆ' ಎಂದು ತಿಳಿಸಿದರು.

ತಮ್ಮ ಭಾಷಣದ ವೇಳೆ, ಪ್ರಧಾನಿ ನರೇಂದ್ರ ಮೋದಿ ಅವರು, ಬಿಎಸ್‌ವೈ ಹಾಗೂ ಬಿಜೆಪಿಯನ್ನು ಹಲವಾರು ಭಾರಿ ಉಲ್ಲೇಖಿಸಿದರು. ಆದರೆ, ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಪ್ರಧಾನಿ ಮೋದಿ ಉಲ್ಲೇಖಿಸಿಲ್ಲ ಎಂಬುದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಕಳೆದ ವಾರ ಕರ್ನಾಟಕಕ್ಕೆ ಆಗಮಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೂ ಸಹ ಬೊಮ್ಮಾಯಿ ಅವರ ಹೆಸರನ್ನು ಹೆಸರಿಸದಿರುವುದು ಹಲವು ಸಂಶಗಳಿಗೆ ಎಡೆಮಾಡಿಕೊಟ್ಟಿದೆ. ಪ್ರಸ್ತುತ ಕರ್ನಾಟಕ ಬಿಜೆಪಿಯ ನಾಯಕರಾಗಿರುವ ಬಸವರಾಜ ಬೊಮ್ಮಾಯಿ ಅವರನ್ನು ಬಿಜೆಪಿಯ ಕೇಂದ್ರ ನಾಯಕತ್ವವು ನಿರಾಕರಿಸುತ್ತಿದೆ ಎಂಬ ಮಾತುಗಳೂ ಕೇಳಿಬಂದಿವೆ.
ಹಲವು ಯೋಜನೆಗಳಿಗೆ ಮೋದಿ ಶಂಕುಸ್ಥಾಪನೆ
ಶಿವಮೊಗ್ಗ - ಶಿಕಾರಿಪುರ - ರಾಣೆಬೆನ್ನೂರು ಹೊಸ ರೈಲು ಮಾರ್ಗ ಮತ್ತು ಕೋಟೆಗಂಗೂರು ರೈಲ್ವೇ ಕೋಚಿಂಗ್ ಡಿಪೋ ಸೇರಿದಂತೆ ಎರಡು ರೈಲ್ವೆ ಯೋಜನೆಗಳಿಗೆ ಮೋದಿ ಶಿವಮೊಗ್ಗದಲ್ಲಿ ಶಂಕುಸ್ಥಾಪನೆ ಮಾಡಿದರು. ಬೆಂಗಳೂರು-ಮುಂಬೈ ಮುಖ್ಯ ಮಾರ್ಗದೊಂದಿಗೆ ಮಲೆನಾಡು ಪ್ರದೇಶದ ಸಂಪರ್ಕವನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಹೊಸ ರೈಲು ಮಾರ್ಗವನ್ನು ₹ 990 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಅಂದಾಜಿಸಲಾಗಿದೆ.
ಶಿವಮೊಗ್ಗದ ಹೊಸ ಕೋಚಿಂಗ್ ಡಿಪೋ ಶಿವಮೊಗ್ಗದಿಂದ ಹೊಸ ರೈಲುಗಳನ್ನು ಪ್ರಾರಂಭಿಸಲು ಸಹಾಯಕವಾಗಲಿದೆ. ಬೆಂಗಳೂರು ಮತ್ತು ಮೈಸೂರಿನಲ್ಲಿ ನಿರ್ವಹಣಾ ಸೌಲಭ್ಯಗಳನ್ನು ಕಡಿಮೆ ಮಾಡಲಿದೆ ಎಂದು ಭಾರತೀಯ ರೈಲ್ವೆ ತಿಳಿಸಿದೆ.
ಬೆಳಗಾವಿಯಲ್ಲಿ, ಪ್ರಧಾನಿ ಮೋದಿ ವಿಶ್ವದರ್ಜೆಯ ಸೌಕರ್ಯಗಳೊಂದಿಗೆ ಮರು ಅಭಿವೃದ್ಧಿಪಡಿಸಿದ ರೈಲು ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ. ಬೆಳಗಾವಿಯಲ್ಲಿ 10-ಕಿಮೀ ರೋಡ್‌ಶೋದಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ. ಇನ್ನೆರಡು ತಿಂಗಳಲ್ಲಿ ನಡೆಯುವ ರಾಜ್ಯ ವಿಧಾನಸಭೆ ಚುನಾವಣೆಗೆ ಬಿಜೆಪಿ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ.
ಇಂದು ಹುಟ್ಟಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಯಡಿಯೂರಪ್ಪನವರು ಚುನಾವಣಾ ರಾಜಕಾರಣದಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ. ಆದರೆ, ಸಕ್ರಿಯ ರಾಜಕಾರಣದಲ್ಲಿ ಮುಂದುವರಿತ್ತೇನೆ ಎಂದು ಹೇಳಿದ್ದಾರೆ. ಯಡಿಯೂರಪ್ಪನವರು ರಾಜ್ಯದಾದ್ಯಂತ ಸಂಚರಿಸಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲಿದ್ದೇನೆ ಎಂದು ಘೋಷಿಸಿದ್ದಾರೆ. ಶಿಕಾರಿಪುರ ವಿಧಾನಸಭೆ ಕ್ಷೇತ್ರದಿಂದ ಅವರ ದ್ವಿತಿಯ ಪುತ್ರ ಬಿವೈ ವಿಜಯೇಂದ್ರ ಅವರಿಗೆ ಟಿಕೆಟ್ ನೀಡುವ ಸಾಧ್ಯತೆ ಹೆಚ್ಚಿದೆ.












Click it and Unblock the Notifications