ಬೊಮ್ಮಾಯಿ ಹೆಸರು ಉಲ್ಲೇಖಿಸದ ಮೋದಿ ಬಿಎಸ್‌ವೈರನ್ನೂ ಅವಮಾನಿಸಿದ್ದರು: 'ಸೈಕಲಾಜಿಕಲ್ ವಾರ್' ಆರಂಭಿಸಿದ ಸಿದ್ದರಾಮಯ್ಯ
ಬೊಮ್ಮಾಯಿ ಹೆಸರನ್ನು ಉಲ್ಲೇಖಿಸದ ಪ್ರಧಾನಿ ನರೇಂದ್ರ ಮೋದಿ ಈ ಹಿಂದೆ ಬಿಎಸ್ ಯಡಿಯೂರಪ್ಪನವರನ್ನೂ ಅವಮಾನಿಸಿದ್ದರು ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಈ ಮೂಲಕ ಸೈಕಲಾಜಿಲ್ ವಾರ್ ಆರಂಭಿಸಿದ್ದಾರೆ.
ಬೆಂಗಳೂರು, ಫೆಬ್ರವರಿ 28: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೆಸರನ್ನು ಉಲ್ಲೇಖಿಸದ ಪ್ರಧಾನಿ ನರೇಂದ್ರ ಮೋದಿ ಈ ಹಿಂದೆ ಬಿಎಸ್ ಯಡಿಯೂರಪ್ಪನವರನ್ನೂ ಅವಮಾನಿಸಿದ್ದರು ಎಂದು ವಿಧಾನಸಭೆ ವಿರೋಧ ಸಭೆ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಈ ಮೂಲಕ ಸೈಕಲಾಜಿಲ್ ವಾರ್ ಆರಂಭಿಸಿದ್ದಾರೆ. ಅವರು ತಮ್ಮ ಟ್ವೀಟರ್‌ನಲ್ಲಿ ಏನು ಹೇಳಿದ್ದಾರೆಂದು ತಿಳಿಯಿರಿ.

ಅನುಕಂಪಗಿಟ್ಟಿಸಿಕೊಳ್ಳಲು ಹೊರಟಿರುವ ಮೋದಿ
'ರಾಜ್ಯಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿಯವರು, ನನ್ನನ್ನು ಹೊಡೆದುಹಾಕಬೇಕು ಎಂದು ಹತ್ಯೆಗೆ ಪ್ರಚೋದಿಸಿದ್ದ ಸಚಿವ ಡಾ.ಅಶ್ವಥ್ ನಾರಾಯಣ್ ಅವರಿಗೆ ತಲೆಗೆ ಕುಟ್ಟಿ ಬುದ್ದಿ ಹೇಳಬಹುದು ಎಂದು ಅಂದ್ಕೊಂಡಿದ್ದೆ. ಸಾಹೇಬರು ಕಲ್ಪಿತ ಬೆದರಿಕೆಯನ್ನು ಮುಂದೊಡ್ಡಿ ತಾವೇ ಅನುಕಂಪಗಿಟ್ಟಿಸಿಕೊಳ್ಳಲು ಹೊರಟಿದ್ದಾರೆ. ಇದ್ಯಾವ ಗಿಮಿಕ್?' ಎಂದು ಸಿದ್ದರಾಮಯ್ಯ ಕೇಳಿದ್ದಾರೆ.

ಘೋಷಣೆ ಕೂಗಿದವರು ಯಾರು?
'ಮರ್ ಜಾ ಮೋದಿ ಎಂದು ರಾಜ್ಯದಲ್ಲಿ ಘೋಷಣೆ ಕೂಗಿದವರು ಯಾರು? ಮೇಲೆ-ಕೆಳಗೆ ನಿಮ್ಮದೇ ಸರ್ಕಾರ ಇದೆಯಲ್ಲವೇ? ಆ ರೀತಿ ಘೋಷಣೆ ಕೂಗಿದವರನ್ನು ಎಳೆದು ತಂದು ದೇಶದ ಮುಂದೆ ನಿಲ್ಲಿಸಿ. ನನ್ನ ಹತ್ಯೆಗೆ ಪ್ರಚೋದಿಸಿದವರನ್ನು ಹುಡುಕಲು ಕಷ್ಟ ಏನಿಲ್ಲ, ಆತ ನಿಮ್ಮ ಪಕ್ಕದಲ್ಲಿಯೇ ಇದ್ದಾನೆ' ಎಂದು ಟ್ವೀಟ್ ಮಾಡಿದ್ದಾರೆ.

ಮೋದಿಯಿಂದ ಆತ್ಮರತಿಯ ಮಾತುಗಳು
'ನಾನು ಬದುಕಿರುವ ವರೆಗೆ ಕಾಂಗ್ರೆಸ್ ಏನೂ ಮಾಡಲು ಸಾಧ್ಯವಿಲ್ಲ' ಎಂಬ ನಿಮ್ಮ ಆತ್ಮರತಿಯ ಮಾತುಗಳನ್ನು ಕೇಳಿ ನಗುಬರುತ್ತಿದೆ ಮೋದಿಯವರೇ? ನೀವಿದ್ದರೂ ರಾಜ್ಯದಲ್ಲಿ ಬಿಜೆಪಿಗೆ ಬಹುಮತ ಬಂದಿರಲಿಲ್ಲ, ಮುಂದೆಯೂ ಬರುವುದಿಲ್ಲ. ನಾಲ್ಕು ದಿನಕ್ಕೊಮ್ಮೆ ರಾಜ್ಯಕ್ಕೆ ಹಾರಿ ಬರುತ್ತಿರುವ ನಿಮ್ಮ ಹತಾಶೆಯಲ್ಲಿಯೇ ಸೋಲಿನ ಸೂಚನೆ ಇದೆ ಎಂದು ಟೀಕಿಸಿದ್ದಾರೆ.

ಇವರಿಗೇನಾದರೂ ಆತ್ಮಸಾಕ್ಷಿ ಇದೆಯೇ?
'ಕರ್ನಾಟಕದ ನಾಯಕರಿಗೆ ಕಾಂಗ್ರೆಸ್ ಅವಮಾನಿಸುತ್ತಿದೆ ಎಂದು ಕಣ್ಣೀರು ಹಾಕಿದ ಪ್ರಧಾನಿ ಮೋದಿಯವರನ್ನು ಕಂಡು ಚಕಿತನಾದೆ. ಇವರಿಗೇನಾದರೂ ಆತ್ಮಸಾಕ್ಷಿ ಇದೆಯೇ? ರಾಜಕೀಯವಾಗಿ ತನಗೆ ಜೀವದಾನ ಮಾಡಿದ ಹಿರಿಯ ನಾಯಕ ಎಲ್.ಕೆ.ಅಡ್ವಾಣಿಯವರನ್ನು ಅವಮಾನಿಸಿ ಮಾರ್ಗದರ್ಶಕ ಮಂಡಳಿಗೆ ತಳ್ಳಿದ್ದು ಯಾರು ಮೋದಿಯವರೇ?' ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ನೀವು ಮಾಡಿದ ಅವಮಾನ ಏನು ಕಡಿಮೆಯೇ?
'ಬಿಜೆಪಿಯಲ್ಲಿಯೇ ನೀವು ಕಡೆಗಣಿಸಿದ ನಾಯಕರು ಒಬ್ಬರು, ಇಬ್ಬರೇ? ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ.ಅಡ್ವಾಣಿ. ಮುರಳಿ ಮನೋಹರ ಜೋಷಿ, ಜಸ್ವಂತ್ ಸಿಂಗ್ ಮೊದಲಾದ ಹಿರಿಯರನ್ನು ಹೇಗೆ ನಡೆಸಿಕೊಂಡಿದ್ದೀರಿ ಎನ್ನುವುದನ್ನು ಇಡೀ ದೇಶ ನೋಡಿದೆ. ನಿಮ್ಮದೇ ರಾಜ್ಯದ ಕೇಶುಭಾಯಿ ಪಟೇಲ್ ಅವರಿಗೆ ನೀವು ಮಾಡಿದ್ದ ಅವಮಾನ ಏನು ಕಡಿಮೆಯೇ?' ಎಂದು ಮಾಜಿ ಸಿಎಂ ಕೇಳಿದ್ದಾರೆ.

ಯಡಿಯೂರಪ್ಪ ಜೈಲಿಗೆ ಹೋಗಿದ್ದು ನೆನಪಿರಲಿ
'ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗಲೇ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪನವರು ಜೈಲಿಗೆ ಹೋಗಿದ್ದು ಎನ್ನುವುದು ನೆನಪಿರಲಿ. ಕೊನೆಗೆ ಅವರು ಪಕ್ಷವನ್ನೇ ಬಿಟ್ಟುಹೋಗುವಂತೆ ಮಾಡಿದ್ದು ಯಾರು ? ಪಕ್ಷ ತೊರೆದು ಹೋದ ಅವರನ್ನು ತುಚ್ಚೀಕರಿಸಿ ಹಿಂಸಿಸಿದ್ದು ಯಾರು? ನಿಮ್ಮದೇ ಶಿಷ್ಯರಲ್ಲವೇ ಮೋದಿಯವರೇ?' ಎಂದು ಎಂದು ಕೇಳಿದ್ದಾರೆ.

ಬಿಎಸ್‌ವೈಗೂ ಅವಮಾನ
ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪನವರನ್ನು ಬಲಾತ್ಕಾರವಾಗಿ ಕಿತ್ತು ಹಾಕಿ ಅವರು ಸಾರ್ವಜನಿಕವಾಗಿ ಕಣ್ಣೀರು ಹಾಕುವಂತೆ ಮಾಡಿದ್ದು ಯಾರು? ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಅವರು ಹೇಳಿದ ಮೇಲೆ ಓಡಿಬಂದು ಅವರನ್ನು ಹಾಡಿ ಹೊಗಳುತ್ತಿರುವ ಮೋದಿಯವರೇ, ಅವರು ಕಣ್ಣೀರು ಹಾಕಿದಾಗ ಎಲ್ಲಿ ಅಡಗಿ ಕೂತಿದ್ದೀರಿ? ಎಂದು ತಿಳಿಸಿದ್ದಾರೆ.

ಬಸವರಾಜ ಬೊಮ್ಮಾಯಿಗೂ ಅವಮಾನ
'ಕರ್ನಾಟಕದ ನಾಯಕರನ್ನು ಕಾಂಗ್ರೆಸ್ ಅವಮಾನಿಸುತ್ತಿದೆ ಎಂದು ಗೋಳಾಡುತ್ತಿರುವ ನರೇಂದ್ರ ಮೋದಿಯವರೇ? ಬಸವರಾಜ ಬೊಮ್ಮಾಯಿಯವರು ಬಿಜೆಪಿಗೆ ಸೇರಿರಬಹುದು, ಆದರೆ ಅವರು ರಾಜ್ಯದ ಮುಖ್ಯಮಂತ್ರಿ. ಸಾರ್ವಜನಿಕ ಸಭೆಯಲ್ಲಿ ಅವರ ಹೆಸರನ್ನೇ ಹೇಳದೆ ಅವಮಾನಿಸುವುದು ಸರಿಯೇ?' ಎಂದು ಕೇಳಿದ್ದಾರೆ.

ಮೋದಿ ಬೆತ್ತ ಹಿಡಿದ ಶಿಕ್ಷಕ
'ರಾಜ್ಯದಿಂದ ಆರಿಸಿಹೋಗಿರುವ ಬಿಜೆಪಿಯ 25 ಸಂಸದರು ಕರ್ನಾಟಕದವರಲ್ಲವೇ? ಅವರನ್ನು ಎಂದಾದರೂ ನಿಮ್ಮೆದುರು ತಲೆ ಎತ್ತಿ ಮಾತನಾಡಲು ಬಿಟ್ಟಿದ್ದೀರಾ? ಬೆತ್ತ ಹಿಡಿದ ಶಿಕ್ಷಕನ ಎದುರು ಗಡಗಡನೆ ನಡುಗುತ್ತಿರುವ ವಿದ್ಯಾರ್ಥಿಗಳಂತೆ ಅವರನ್ನು ನಡೆಸಿಕೊಂಡದ್ದನ್ನು ದೇಶ ಕಂಡಿದೆ' ಎಂದೂ ಸಿದ್ದು ಗುಡುಗಿದ್ದಾರೆ.

ಸುಳ್ಳಿನ ಸ್ಪರ್ಧೆಯಲ್ಲಿ ಮೋದಿ ಪೈಪೋಟಿ
ಪ್ರಧಾನಿ ನರೇಂದ್ರ ಮೋದಿಯವರೇ ನೀವು ಮತ್ತೆ ಮತ್ತೆ ಕರ್ನಾಟಕಕ್ಕೆ ಬರುತ್ತಿರುವುದು ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆಗೋ? ಚುನಾವಣಾ ಪ್ರಚಾರಕ್ಕೋ? ಇಲ್ಲವೇ ಸುಳ್ಳು ಹೇಳುವ ಸ್ಪರ್ಧೆಯಲ್ಲಿ ರಾಜ್ಯದ ನಾಯಕರ ಜೊತೆ ಪೈಪೋಟಿ ನಡೆಸುವುದಕ್ಕೋ? ನೆನಪಿರಲಿ, ಅರಸನ ಮೈ ಮೇಲಿನ ಬಟ್ಟೆ ಒಂದೊಂದೇ ಕಳಚಿ ಬೀಳುತ್ತಿದೆ.












Click it and Unblock the Notifications